ಸಾರ್ವಜನಿಕ ಕೆಲಸಗಳಲ್ಲಿ ವಿಳಂಬ ಧೋರಣೆ
-ಹೇಮಂತ್‌ಕುಮಾರ್
ಮಂಡ್ಯ: ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಪೂರಕವಾಗಿ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳನ್ನು ರಚಿಸಲಾಗಿದೆ. ಸಾರ್ವಜನಿಕರಿಗೆ ರಸ್ತೆ, ನೀರು ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸುವುದು, ಖಾತೆ, ವಾಸದ ಸ್ಥಳ ಖಾತ್ರಿ ಸೇರಿದಂತೆ ವಿವಿಧ ದೃಢೀಕರಣ ಪತ್ರಗಳನ್ನು ಪ್ರಮಾಣೀಕರಿಸುವುದು
ಮುಂತಾದ ಕಾರ್ಯಗಳು ಈ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಆದರೆ, ಜಿಲ್ಲೆಯ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಆಡಳಿತ ಮಂದಸ್ಥಾಯಿಯಾಗಿದೆ.
ಮಂಡ್ಯ ಜಿಲ್ಲೆಯಲ್ಲಿ 1 ನಗರಸಭೆ, 5 ಪುರಸಭೆಗಳು ಹಾಗೂ 1 ಪಟ್ಟಣ ಪಂಚಾಯಿತಿ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಇರುವ ಅನೇಕ ಹುದ್ದೆಗಳು ಭರ್ತಿಯಾಗದೆ ಕೆಲಸ ಕಾರ್ಯಗಳ ಒತ್ತಡವಿದೆ ಎಂಬ ದೂರು ಕೇಳಿಬಂದಿದೆ.
ಮಂಡ್ಯ ನಗರಸಭೆ: ನಗರ ಸುಮಾರು 17 ಚ.ಕಿ.ಮೀ.ವಿಸ್ತೀರ್ಣ ಹೊಂದಿದ್ದು, 35 ವಾರ್ಡ್‌ಗಳನ್ನು ಹೊಂದಿದೆ. 2011ರ ಗಣತಿ ಪ್ರಕಾರ 1.38 ಲಕ್ಷ ಜನಸಂಖ್ಯೆ ಹೊಂದಿರುವ ನಗರಸಭೆ 325 ಕಿ.ಮೀ.ಉದ್ದದ ರಸ್ತೆಯನ್ನು ಹೊಂದಿದೆ.
ಈ ನಗರಸಭೆಯಲ್ಲಿ ಒಟ್ಟು ಮಂಜೂರಾತಿಯಾಗಿರುವ ಹುದ್ದೆಗಳು 418. ಆದರೆ ಪ್ರಸ್ತುತ 256 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 152 ಹುದ್ದೆಗಳು ಖಾಲಿ ಇರುವುದು ನಗರಸಭೆಯಲ್ಲಿ ಇರುವ ನೌಕರರಿಗೆ ದೈನಂದಿನ ಕೆಲಸ ಕಾರ್ಯಗಳ ಒತ್ತಡ ಹೆಚ್ಚಾಗಿದೆ.
ಇಲ್ಲಿ ಡಿ ಗ್ರೂಪ್ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಆದರೆ, ಕ್ಲರಿಕಲ್ ವಿಭಾಗದ ಸಿ ಗ್ರೂಪ್‌ನ 5 ಹುದ್ದೆಗಳು ಹಾಗೂ 4 ಬಿಲ್ ಕಲೆಕ್ಟರ್‌ಗಳು, 2 ಸಹಾಯಕ ಇಂಜಿನಿಯರ‍್ಸ್ ಹಾಗೂ 7 ಚಾಲಕರ ಹುದ್ದೆಗಳು ಖಾಲಿ ಇದ್ದು, ಜರೂರಾಗಿ ಭರ್ತಿ ಮಾಡಬೇಕಾಗಿದೆ. ಪೌರಕಾರ್ಮಿಕರ 136
ಹುದ್ದೆಗಳೂ ಖಾಲಿ ಉಳಿದಿದ್ದು, 91 ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆಯಲಾಗಿದೆ. ಹೀಗಾಗಿ ಮಂಡ್ಯ ನಗರಸಭೆಯ ಆಡಳಿತ ವಿಭಾಗದಲ್ಲಿ ಒತ್ತಡದಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂಬುದು ಕಚೇರಿ ಅಧಿಕಾರಿಯೊಬ್ಬರ ಅಸಹಾಯಕ ನುಡಿ.
ಮದ್ದೂರು ಪುರಸಭೆ
ಸುಮಾರು 30 ಸಾವಿರ ಜನಸಂಖ್ಯೆವುಳ್ಳ ಮದ್ದೂರು ಪುರಸಭೆ 23 ವಾರ್ಡ್‌ಗಳನ್ನು ಹೊಂದಿದೆ. ಮಂಜೂರಾತಿಯಾದ ಹುದ್ದೆಗಳು 102. ಇದರಲ್ಲಿ 52 ಹುದ್ದೆಗಳಲ್ಲಿ ನೌಕರರು ಕಾರ್ಯನಿರ್ವಹಿಸುತ್ತಿದ್ದು, 50 ಹುದ್ದೆಗಳು ಖಾಲಿ ಉಳಿದಿವೆ. 43 ಪೌರಕಾರ್ಮಿಕರ ಹುದ್ದೆಗಳಿದ್ದು, ಅದರಲ್ಲಿ 30 ನೌಕರರಿದ್ದು ಇನ್ನೂ 13 ಪೌರಕಾರ್ಮಿರ ಕೊರತೆಯಿದೆ. ಮುಖ್ಯವಾಗಿ ಇಂಜಿನಿಯರ್, ಕ್ಲರಿಕಲ್ ಹುದ್ದೆಗಳಿಗೆ ನೇಮಕಾತಿ ಅತ್ಯಗತ್ಯವಾಗಿ ಬೇಕಾಗಿವೆ.
ಪಾಂಡವಪುರ ಪುರಸಭೆ
ಸುಮಾರು 23,500 ಜನಸಂಖ್ಯೆ ಹೊಂದಿರುವ ಪಾಂಡವಪುರ ಟೌನ್‌ನಲ್ಲಿ 23 ವಾರ್ಡ್‌ಗಳಿದ್ದು, ಪಟ್ಟಣ ಪಂಚಾಯಿತಿಯಿಂದ ಇತ್ತೀಚೆಗೆ ಪಾಂಡವಪುರ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಪುರಸಭೆಯಲ್ಲಿ ಮಂಜೂರಾತಿಯಾದ 93 ಹುದ್ದೆಗಳಲ್ಲಿ 48 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 45 ಹುದ್ದೆಗಳು ಖಾಲಿ ಉಳಿದಿವೆ. ಹಾಗಾಗಿ ಕಾರ್ಯದೊತ್ತಡ ಹೆಚ್ಚಾಗಿದ್ದು, ಸದ್ಯಕ್ಕೆ ಆರ್‌ಐ,ಆರ್‌ಒ, ಬಿಲ್ ಕಲೆಕ್ಟರ್, ಆರೋಗ್ಯ ನಿರೀಕ್ಷಕರು, ಎಫ್‌ಡಿಎ ಹುದ್ದೆಗಳು ಭರ್ತಿಯಾಗಬೇಕಾಗಿದೆ.
ನಾಗಮಂಗಲ ಪುರಸಭೆ
ಸುಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ನಾಗಮಂಗಲ ಪುರಸಭೆ 23 ವಾರ್ಡ್‌ಗಳನ್ನು ಹೊಂದಿದೆ. ಪುರಸಭೆ ಕಚೇರಿಗೆ ಮಂಜೂರಾತಿಯಾದ 98
ಹುದ್ದೆಗಳಲ್ಲಿ 46 ಹುದ್ದೆಗಳಲ್ಲಷ್ಟೇ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, 52 ಹುದ್ದೆಗಳು ಖಾಲಿ ಉಳಿದಿವೆ. ಇಲ್ಲಿ ಇಂಜಿನಿಯರ್, ಆರೋಗ್ಯ ನಿರೀಕ್ಷಕರು, ಅಕೌಂಟೆಂಟ್ ಹುದ್ದೆಗಳಿಗೆ ಸರ್ಕಾರ ತುರ್ತಾಗಿ ನೇಮಕ ಮಾಡುವುದು ಅತ್ಯಗತ್ಯ ಎಂದು ಮೂಲಗಳು ತಿಳಿಸಿವೆ.
ಮಳವಳ್ಳಿ ಪುರಸಭೆ
ಮಳವಳ್ಳಿ ಪಟ್ಟಣವು ಸುಮಾರು 38 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, 23 ವಾರ್ಡ್‌ಗಳ ವಿಸ್ತಾರವನ್ನು ಹೊಂದಿದೆ. ಮಳವಳ್ಳಿ ಪುರಸಭೆ
ಆಡಳಿತ ಕಚೇರಿಯಲ್ಲಿ ಮಂಜೂರಾತಿ ಯಾದ 117ಹುದ್ದೆಗಳಿದ್ದು, 93 ಹುದ್ದೆಗಳಲ್ಲಷ್ಟೇ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. 54 ಹುದ್ದೆಗಳು ಖಾಲಿ ಉಳಿದಿವೆ.
ಶ್ರೀರಂಗಪಟ್ಟಣ ಪುರಸಭೆ
ಐತಿಹಾಸಿಕ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿರುವ ಶ್ರೀರಂಗಪಟ್ಟಣ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, ಸುಮಾರು 30 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಪುರಸಭೆ ಕಚೇರಿಯಲ್ಲಿ ಮಂಜೂರಾತಿಯಾದ 99 ಹುದ್ದೆಗಳಿದ್ದು, ಇದರಲ್ಲಿ 42 ಹುದ್ದೆಗಳಲ್ಲಿ ಮಾತ್ರ ನೌಕರರಿದ್ದು, 52 ಹುದ್ದೆಗಳು ಖಾಲಿ ಉಳಿದಿವೆ. ಸದ್ಯ ಖಾಲಿಯಿರುವ 9 ಪೌರಕಾರ್ಮಿಕರ ಹುದ್ದೆಗಳು, ಇಂಜಿನಿಯರ್ ಹಾಗೂ ಕ್ಲರಿಕಲ್ ಹುದ್ದೆಗಳಿಗೆ ನೇಮಕಾತಿಯಾದರೆ ಸಾರ್ವಜನಿಕ ಕೆಲಸಗಳು ಸುಗಮವಾಗಿ ನಡೆಯಲು ಅನುಕೂಲವಾಗುತ್ತದೆ.
ಕೆ.ಆರ್.ಪೇಟೆ ಪುರಸಭೆ
23 ವಾರ್ಡ್‌ಗಳನ್ನು ಹೊಂದಿರುವ ಕೆ.ಆರ್.ಪೇಟೆ ಪುರಸಭೆಯಲ್ಲಿ 104 ಮಂಜೂರಾತಿಯಾದ ಹುದ್ದೆಗಳಿದ್ದು, ಇದರಲ್ಲಿ ಕೇವಲ ೩೮ ನೌಕರರಿದ್ದಾರೆ. ಬರೋಬ್ಬರಿ 64 ಹುದ್ದೆಗಳು ಖಾಲಿಯಾಗಿ ಉಳಿದಿವೆ. ಈ ಕಚೇರಿಯಲ್ಲಿ ಕಾರ್ಯದೊತ್ತಡ ಹೆಚ್ಚಾಗಿದ್ದು, 2011ರ ಗಣತಿಯ ಪ್ರಕಾರ ಪಟ್ಟಣದಲ್ಲಿ 26 ಸಾವಿರ ಜನಸಂಖ್ಯೆ ಇದೆ. ಹೀಗಿರುವಾಗ ಜೆಇ, ಪರಿಸರ ಇಂಜಿನಿಯರ್, ಸಹಾಯಕ ಆರೋಗ್ಯ ನಿರೀಕ್ಷಕರು ಹಾಗೂ ಎಫ್‌ಡಿಎ ಹುದ್ದೆಗಳ ಅತ್ಯಗತ್ಯವಿದೆ ಎಂಬುದು ಪುರಸಭೆ ಅಧಿಕಾರಿಯೊಬ್ಬರ ಅಳಲು.
ಬೆಳ್ಳೂರು ಪಟ್ಟಣ ಪಂಚಾಯಿತಿ
ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿಯನ್ನು 2018ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಯಿತು. ಸುಮಾರು 20
ಸಾವಿರ ಜನಸಂಖ್ಯೆಯನ್ನು ಹೊಂದಿರುವ ಬೆಳ್ಳೂರು ಪ.ಪಂಚಾಯಿತಿಯಲ್ಲಿ 13 ವಾರ್ಡ್ ಕಾರ್ಯನಿರ್ವಹಿಸುತ್ತಿದ್ದು, 20 ಹುದ್ದೆಗಳು ಖಾಲಿ ಉಳಿದಿವೆ. ಮುಖ್ಯವಾಗಿ ಆರ್‌ಐ, ಇಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.
ಈ ಸಮಸ್ಯೆ ರಾಜ್ಯಾದ್ಯಂತ ಇದ್ದು, ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ನಾವು ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಪ್ರತಿ ತಿಂಗಳೂ ಕೂಡ ಮಂಡ್ಯ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿನ ಖಾಲಿ ಹುದ್ದೆಗಳ ಕುರಿತಂತೆ ಸರ್ಕಾರದ ಗಮನಕ್ಕೆ ತರುತ್ತಲಿದ್ದೇವೆ. ಸರ್ಕಾರ ನಿರ್ಧರಿಸಬೇಕಿದೆ.
-ಕೆ.ಮಾಯಣ್ಣಗೌಡ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಂಡ್ಯ.
ಮಂಡ್ಯ: ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ…