ಸದಾನಂದ ಆರ್.
“ಸದಾ ಕಾಲ ಚಟುವಟಿಕೆಯಿಂದಿರುವ ತಮ್ಮ ಯೋಗ ಗುರು ಅಷ್ಟೇನು ಎತ್ತರವಿಲ್ಲದ ಆ ಬೆಟ್ಟ-ಗುಡ್ಡಗಳ ದಾರಿಯಲ್ಲಿ ಮುಂದೆ ಮುಂದೆ ನಡೆಯದೆ ಎಲ್ಲರಿಗಿಂತ ಹಿಂದೆ ನಡೆದು ಬರುತ್ತಿರುವುದನ್ನು ತುಸು ಅಚ್ಚರಿಯಿಂದ ಗಮನಿಸುತ್ತಲೇ ಮುಂದೆ ಸಾಗುತ್ತಿದ್ದ ಆ ಐವತ್ತು ಶಿಷ್ಯರಿಗೆ ತಮ್ಮ ಪ್ರೀತಿಯ ಗುರುವಿನ ಜೀವ ಇನ್ನೇನು ಇಲ್ಲವಾಗಲಿದೆ ಎನ್ನುವ ಸುಳಿವು ದೊರೆತಿರಲೇ ಇಲ್ಲ.
ಅಮೆರಿಕ ದೇಶದ ವರ‍್ಜೀನಿಯಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನ ಮತ್ತೊಂದು ತುದಿಯಲ್ಲಿಯೇ ಇದ್ದ ಹಪ್‌ಬ್ಯಾಕ್ ಬೆಟ್ಟ ಪ್ರದೇಶದಲ್ಲಿ ಈ ಲಘು ಚಾರಣ ಇದೇ ನವೆಂಬರ್‌ನ ೧೧ರಂದು ಮಧ್ಯಾಹ್ನ ನಡೆದಿತ್ತು. ಮೂರು ಮೈಲಿಯಷ್ಟು ನಡೆದ ಮೇಲೆ ಅವರ ಪ್ರೀತಿಯ ‘ಬಾಸ್’ (ತಮ್ಮ ಗುರುವಿಗೆ ಶಿಷ್ಯರು ಇಟ್ಟಿದ್ದ ಪ್ರೀತಿಯ ಅಡ್ಡ ಹೆಸರು) ಕಾಲುದಾರಿಯ ಪಕ್ಕದಲ್ಲಿದ್ದ ಕಲ್ಲಿನ ಬೆಂಚ್‌ನ ಮೇಲೆ ಕುಳಿತಾಗಲೂ ಅವರಿಗೆ ಸಾವಿನ ಮುನ್ಸೂಚನೆ ಕಂಡಿರಲಿಲ್ಲ. ಆದರೆ ಅವರ ಪ್ರೀತಿಯ ಬಾಸ್ ಅವರು ಕಲ್ಲಿನ ಬೆಂಚ್ ಮೇಲೆ ಕುಳಿತ ಒಂದೆರಡು ಗಳಿಗೆಯೊಳಗೆ ಅವರ ಶರೀರ ಬೆಂಚಿನಿಂದ ಜೋಲಿ ಹೊಡೆದು ಕೆಳಗೆ ಬಿದ್ದಿತ್ತು. ಅಲ್ಲಿದ್ದ ಶಿಷ್ಯರಲ್ಲಿ ಕೆಲವರಿಗೆ ಹೃದಯಾಘಾತದ ಪರಿಣಾಮವಿದೆಂದು ಅರಿವಾಗಿ ತಮ್ಮ ಪ್ರೀತಿಯ ಗುರುವಿನ ಹೃದಯವನ್ನು ಜಾಗೃತಗೊಳಿಸಲು ಮುಂದಾದರು.
ಮತ್ತೆ ಕೆಲವರು ತುರ್ತು ವೈದ್ಯಕೀಯ ಸೇವೆಗೆ ಮೊರೆಯಿಟ್ಟರು. ಆದರೆ ಇವ್ಯಾವುದು ಕೆಲಸಕ್ಕೆ ಬರಲೇ ಇಲ್ಲ. ಅವರೆಲ್ಲರ ಪ್ರೀತಿಯ ಯೋಗದ ‘ಬಾಸ್’ ಅವರ ಕಣ್ಣ ಮುಂದೆಯೇ ಇಹಲೋಕವನ್ನು ತ್ಯಜಿಸಿಬಿಟ್ಟರು. ಇವು ಯೋಗ ಗುರು ಶ್ರೀ ಶರತ್ ಜೋಯಿಸರು ನಿಧನರಾದ ಮರುದಿನ ಅಮೆರಿಕ ದೇಶದ ‘ದ ನ್ಯೂಯರ್ಕ್ ಟೈಮ್ಸ್’ನಲ್ಲಿ ಅಚ್ಚಾದ ಸಾಲುಗಳು. ಈ ಯೋಗ ಗುರು ನಮ್ಮ ಮೈಸೂರಿನವರು! ಬಹುತೇಕ ಮೈಸೂರಿಗರಿಗೆ ಇವರ ಹೆಸರು ಅಪರಿಚಿತವೆನಿಸಿದರೂ, ಯೋಗದ ಅಭ್ಯಾಸದಲ್ಲಿ ತೊಡಗಿರುವವರಿಗೆ ಇದು ವಿಶ್ವವಿಖ್ಯಾತ ಹೆಸರು.
ಅದರಲ್ಲೂ ಯೋಗದ ಮುಖ್ಯ ಶಾಖೆಯಾದ ಅಷ್ಟಾಂಗ ಯೋಗದ ಸಾಧಕರಿಗೆ ಶರತ್ ಜೋಯಿಸರೆಂದರೆ ಅಷ್ಟಾಂಗ ಯೋಗದ ಆದ್ಯ ಗುರುವಾದ ಶ್ರೀ ಕೃಷ್ಣ ಪಟ್ಟಾಭಿ ಜೋಯಿಸರ ಮೊಮ್ಮಗ ಎನ್ನುವುದಕ್ಕಿಂತ ಅಷ್ಟಾಂಗ ಯೋಗದ ಗುರಪರಂಪರೆಯಲ್ಲಿ ಸಾಗಿ ಬಂದಿರುವ ‘ಪರಮಗುರು’ವಾಗಿದ್ದರು. ಕೃಷ್ಣ ಪಟ್ಟಾಭಿ ಜೋಯಿಸರು, ಯೋಗದ ಗುರುಪರಂಪರೆಯಲ್ಲಿ ಮತ್ತೊಂದು ದೊಡ್ಡ ಹೆಸರಾದ ಬಿ. ಕೆ. ಎಸ್. ಐಯ್ಯಂಗಾರ್ ಅವರ ಸಮಕಾಲೀನರು. ಇವರಿಬ್ಬರು ತಿರುಮಲೈ ಕೃಷ್ಣಾಮಾಚರ‍್ಯರಿಂದ ಯೋಗ ಕಲಿತವರು. ತಿರುಮಲೈ ಕೃಷ್ಣಾಮಾಚಾರ್ಯರನ್ನು ಆಧುನಿಕ ಯೋಗದ ಪಿತಾಮಹ ಎಂದು ಕರೆಯಲಾಗುತ್ತದೆ.
ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಖಾಸಾ ಯೋಗ ಗುರುವಾಗಿದ್ದವರು ಕೃಷ್ಣಾಮಾಚಾರ್ಯರು. ಇವರ ಶಿಷ್ಯರಲ್ಲಿ ಒಬ್ಬರಾದ ಕೃಷ್ಣ ಪಟ್ಟಾಭಿ ಜೋಯಿಸರು ಪ್ರಚುರಪಡಿಸಿದ ಯೋಗ ಪ್ರಕಾರ ಅಷ್ಟಾಂಗ ಯೋಗವಾಗಿದೆ. ಕೃಷ್ಣ ಪಟ್ಟಾಭಿ ಜೋಯಿಸರ ಮಗಳಾದ ಸರಸ್ವತಿಯವರ ಮಗನೇ ಶರತ್ ಜೋಯಿಸ್ ಅವರು. ಯೋಗ ಸಾಧಕರ ಮನೆಯಲ್ಲಿ ೧೯೭೧ರಲ್ಲಿ ಜನಿಸಿದ ಶರತ್ ಜೋಯಿಸರು ದುರ್ಬಲ ಶರೀರವನ್ನು ಹೊತ್ತು ತಂದಿದ್ದವರು.
ಅನೇಕ ಕಾಯಿಲೆಗಳಿಂದ ಪೀಡಿತನಾಗಿದ್ದ ಬಾಲಕ ಶರತ್ ಜೋಯಿಸರನ್ನು ತಿದ್ದಿತೀಡಿ ಆರೋಗ್ಯವಂತ ನಾಗಿ ಸಿದ್ಧಗೊಳಿಸಿದ್ದು ತಾತ ಕೃಷ್ಣ ಪಟ್ಟಾಭಿ ಜೋಯಿಸರು. ತಮ್ಮ ಬಾಲ್ಯದ ದಿನಗಳನ್ನು ತಮ್ಮ ಪುಸ್ತಕ ‘ಏಜಲೆಸ್’ ನಲ್ಲಿ ಮೆಲುಕು ಹಾಕುವ ಶರತ್ ಅವರು “ತಾತ ಮತ್ತು ತಾಯಿ ಒತ್ತಾಯದ ಕಾರಣದಿಂದ ನನ್ನ ಯೋಗದ ಕಲಿಕೆ ಆರಂಭವಾಯಿತು. ಅದರೆ ಬಹು ಬೇಗ ನನಗೆ ಯೋಗದ ಶಕ್ತಿ ಮತ್ತು ಸಾಧ್ಯತೆಗಳ ಪರಿಚಯವಾಯಿತು. ದುರ್ಬಲ ಶರೀರವನ್ನು ಹೊಂದಿದ್ದ ನಾನು ನಿಧಾನವಾಗಿ ಆರೋಗ್ಯವಂತ ಸಬಲ ಶರೀರವನ್ನು ಹೊಂದುವುದು ಸಾಧ್ಯವಾಯಿತು. ಮುಂದೆ ನನ್ನ ಹದಿನೇಳನೆಯ ವಯಸ್ಸಿನಿಂದ ಪೂರ್ಣ ಪ್ರಮಾಣದಲ್ಲಿ ಯೋಗ ಕಲಿಸುವ ಕೆಲಸಕ್ಕೆ ನನ್ನನ್ನು ನಾನು ಸೀಮಿತಗೊಳಿಸಿಕೊಂಡೆ” ಎನ್ನುತ್ತಾರೆ.
೨೦೦೭ರಲ್ಲಿ ತಾತ ಪಟ್ಟಾಭಿ ಜೋಯಿಸರಿಂದ ಅಷ್ಟಾಂಗ ಯೋಗ ಕಲಿಕೆಯ ಪೂರ್ಣ ಹೊಣೆಗಾರಿಕೆಯನ್ನು ಪಡೆದುಕೊಂಡ ಶರತ್ ಜೋಯಿಸರು, ತಾತನ ಹೆಸರಿನಲ್ಲಿ ಕೆ. ಪಟ್ಟಾಭಿ ಜೋಯಿಸ್ ಅಷ್ಟಾಂಗ ಯೋಗ ಸಂಸ್ಥೆಯನ್ನು ಸ್ಥಾಪಿಸಿ ಅಷ್ಟಾಂಗ ಯೋಗದ ಕಲಿಸುವಿಕೆಯನ್ನು ಮುಂದುವರಿಸಿದರು. ಮುಂದೆ ತಮ್ಮದೇ ಹೆಸರಿನಲ್ಲಿ ಅಷ್ಟಾಂಗ ಯೋಗ ಕಲಿಕಾ ಸಂಸ್ಥೆಯನ್ನು ಆರಂಭಿಸಿದರು. ಮೂರು ತಲೆಮಾರಿನ ಯೋಗ ಸಾಧನೆಯ ಜ್ಞಾನದೊಂದಿಗೆ ಆಧುನಿಕತೆಯ ಒಳನೋಟವನ್ನು ಗಳಿಸಿಕೊಂಡ ಶರತ್ ಅವರು ಕೆಲವು ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ ಯೋಗ ಕೋರ್ಸುಗಳನ್ನು ಆಯೋಜಿಸತೊಡಗಿದರು. ಇಂತಹ ಒಂದು ಸಂಸ್ಥೆಯಾದ ಧ್ಯಾನ ವಿಜ್ಞಾನಗಳ ಕೇಂದ್ರ ಸಹಭಾಗಿತ್ವದಲ್ಲಿ ಯೋಗ ಕಾರ‍್ಯಾಗಾರ ನಡೆಸುವ ವೇಳೆಯಲ್ಲಿಯೇ ಅವರು ಕಾಲನ ಕರೆಗೆ ಓಗೊಟ್ಟಿದ್ದು. ಶರತ್ ಜೋಯಿಸರು ತಾವು ಕಲಿತ ಸಾಂಪ್ರದಾಯಿಕ ಯೋಗದ ಜ್ಞಾನವನ್ನು ಆಧುನಿಕ ವಿಜ್ಞಾನದ ಸಹಭಾಗಿತ್ವದಲ್ಲಿ ಹೊಸತನದ ಅನ್ವೇಷಣೆಯನ್ನು ಮಾಡುವ ಸ್ವಭಾವವನ್ನು ಹೊಂದಿದವರಾಗಿದ್ದವರು.
ಕೋವಿಡ್ ೧೯ರ ಮಹಾ ಸಾಂಕ್ರಾಮಿಕ ಜನರ ಮೇಲೆ ಬೀರಿದ ಗಂಭೀರ ಪರಿಣಾಮಗಳಿಗೆ ಸೂಕ್ತ ಪರಿಹಾರವಾಗಿ ಶರತ್ ಅವರು ‘ಆಕ್ಟೀವ್ ಸಿರೀಸ್’ ಅನ್ನೋ ಲಘು ಯೋಗಾಸನ ವ್ಯವಸ್ಥೆಯನ್ನು ಸಂಶೋಽಸಿ ಜನರಿಗೆ ಕಲಿಸುವಲ್ಲಿ ನಿರತರಾಗಿದ್ದರೆಂದು ವರ‍್ಜೀನಿಯಾ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾದ ಧ್ಯಾನ ವಿಜ್ಞಾನಗಳ ಸಂಸ್ಥೆ (ಕಂಟೆಪ್ಲೇಟಿವ್ ಸೈನ್ಸ್ ಸೆಂಟರ್) ತನ್ನ ವೆಬ್ ಸೈಟಿನಲ್ಲಿ ಹೇಳಿಕೊಂಡಿದೆ. ಕೋವಿಡ್ ೧೯ರ ಪರಿಣಾಮಕ್ಕೆ ಸಿಲುಕಿದವರು ತೀವ್ರ ತರದ ಖಿನ್ನತೆ, ಮಾನಸಿಕ ವ್ಯಗ್ರತೆ ಮತ್ತಿತರ ಮಾನಸಿಕ ಹಾಗೂ ದೈಹಿಕ ಕ್ಷೋಭೆಗಳಿಗೆ ಒಳಗಾಗಿ ಬಳಲುತ್ತಿರುವುದನ್ನು ಕಂಡು ಮರುಗಿದ ಶರತ್ ಜೋಯಿಸರು ತಾವು ಅನ್ವೇಷಿಸಿದ ‘ಆಕ್ಟೀವ್ ಸೀರಿಸ್’ ಯೋಗಾ ಭ್ಯಾಸದ ಮೂಲಕ ಜನ ರಿಗೆ ಪರಿಹಾರ ಒದಗಿಸುವ ಕಾರ್ಯದಲ್ಲಿ ನಿರತರಾಗಿದ್ದ ಸಾಧಕ-ಚಿಕ್ಸಿತಕ ಜೀವವೆಂದು ಅವರ ಕುರಿತಾದ ಅನೇಕ ಶ್ರದ್ಧಾಂಜಲಿಯ ಲೇಖನಗಳಲ್ಲಿ ಕಾಣಬಹುದಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಹಠಕ್ಕೆ ಬಿದ್ದವರಂತೆ ಯೋಗ ಕಲಿಸುವಿಕೆಯಲ್ಲಿ ನಿರತರಾಗಿದ್ದ ಶರತ್ ಜೋಯಿಸರ ದಿನ – ಪ್ರತಿ ದಿನ ಮಧ್ಯರಾತ್ರಿ ೧ ಗಂಟೆಗೆ ಆರಂಭವಾಗುತ್ತಿತ್ತೆಂದು ಅವರೊಂದಿಗೆ ಕೆಲಸ ಮಾಡುತ್ತಿದ್ದವರು ನೆನೆಸುತ್ತಾರೆ. ಅವರು ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಡೆಸುತ್ತಿದ್ದ ಶರತ್ ಯೋಗ ಕೇಂದ್ರದಲ್ಲಿ ಪ್ರವೇಶ ಪಡೆಯಲು ತಿಂಗಳು ಗಟ್ಟಲೆ ಕಾಯುವ ಪರಿಸ್ಥಿತಿ ಇತ್ತು. ನೂರು ವರ್ಷಗಳ ಕಾಲ ಬದುಕಿದ್ದ ತಿರುಮಲೈ ಕೃಷ್ಣಮಾಚಾರಿಯವರ ಶಿಷ್ಯರಾದ ಶರತ್ ಜೋಯಿಸರ ತಾತನವರಾದ ಕೃಷ್ಣ ಪಟ್ಟಾಭಿ ಜೋಯಿಸರು ೯೩ ವರ್ಷಗಳು ಬದುಕಿದವರು. ಈ ಮಹಾನ್ ಯೋಗ ಸಾಧಕರ ಹಾದಿಯಲ್ಲಿ ರೂಪುಗೊಂಡಿದ್ದ ಶರತ್ ಜೋಯಿಸರು ಕೇವಲ ೫೩ನೇ ವಯಸ್ಸಿನಲ್ಲೇ ಇಹಲೋಕದ ಯಾತ್ರೆ ಪೂರೈಸಿ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಹೊರಟಿದ್ದಾರೆ. ಜೊತೆಗೆ ಅವರು ತಮ್ಮನ್ನು ಪ್ರೀತಿಯಿಂದ ಬಾಸ್ ಎನ್ನುತ್ತಿದ್ದ ತಮ್ಮ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ. ಮೈಸೂರಿಗರಿಗೆ ಬಹುತೇಕ ಅಪರಿಚಿತರಾಗೆ ಉಳಿದಿದ್ದ ಶರತ್ ಜೋಯಿಸ್ ಯೋಗವನ್ನು ವಿಶ್ವಕ್ಕೆ ಪರಿಚಯಿಸಿ ಅದನ್ನು ವಿಶಾಲವಾಗಿ ವಿಸ್ತರಿಸಿದ ಮೈಸೂರಿನ ಹೆಮ್ಮೆಯ ಪುತ್ರರಲ್ಲಿ ಒಬ್ಬರಾಗಿದ್ದರು ಎನ್ನುವುದಂತೂ ಸತ್ಯ.
ಶರತ್ ಜೋಯಿಸ್ ಬಹಳ ಆತ್ಮೀಯ ಸ್ವಭಾವದವರು. ಅವರ ಮನೆ ತನವೇ ಒಂದು ಧಾರ್ಮಿಕ ಕುಟುಂಬದ ಹಿನ್ನೆಲೆಯ ಮನೆತನ. ದೈವಭಕ್ತರೂ ಹೌದು. ಮೂಲತಃ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಆದರೂ ಅವರ ಹತ್ತೊಂಬತ್ತನೆಯ ವಯಸ್ಸಿಗೇ ಅವರ ಅಜ್ಜ ಪಟ್ಟಾಭಿ ಜೋಯಿಸರ ಹೆಜ್ಜೆಯೊಂದಿಗೆ ಹೆಜ್ಜೆ ಹಾಕುತ್ತಾ ಅವರ ಗರಡಿಯಲ್ಲಿ ಪಳಗುತ್ತಾ ವಿಶ್ವವಿಖ್ಯಾತರಾದರು. ಅಷ್ಟಾಂಗ ಯೋಗದ ಹುಟ್ಟೂರಾದ ಮೈಸೂರಲ್ಲಿ ಶರತ್ ಜೋಯಿಸ್ ಅವರಿಗೆ ಯೋಗ ಬಾಸ್ ಎಂಬ ಹೆಸರೂ ಇತ್ತು . ೨೦೦೭ನೇ ಇಸವಿಯಲ್ಲಿ ಅವರಜ್ಜ ಆರಂಭ ಮಾಡಿದ ಅಷ್ಟಾಂಗ ಯೋಗ ವಿನ್ಯಾಸ ಸಂಸ್ಥೆಯನ್ನೇ ಶರತ್ ಜೋಯಿಸ್ ಅವರು ಕೃಷ್ಣ ಪಟ್ಟಾಭಿ ಜೋಯಿಸ್ ಅಷ್ಟಾಂಗ ವಿನ್ಯಾಸ ಫೌಂಡೇಷನ್ ಅಂತ ಮಾಡಿ ಮುಂದುವರಿಸಿಕೊಂಡು ಹೋದರು. ಬಹಳ ಕೌಟುಂಬಿಕ ಒಲವಿರುವ ವ್ಯಕ್ತಿ, ಸ್ನೇಹಜೀವಿ ಹಾಗೂ ೨೦೦೯ನೇ ಇಸವಿಯಲ್ಲಿ ಅವರದೇ ಆದ ಶರತ್ ಅಷ್ಟಾಂಗ ಇನ್‌ಸ್ಟಿಟ್ಯೂಟ್‌ಅನ್ನು ಮೈಸೂರಲ್ಲಿ ಸ್ಥಾಪಿಸಿ ಅಜ್ಜನ ಹೆಸರನ್ನು ಹಾಗೂ ಮೈಸೂರಿನ ಅಷ್ಟಾಂಗ ಯೋಗ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಕೆಲಸವನ್ನು ಮಾಡಿದರು. ಈಗ ಅವರ ಕುಟುಂಬದವರೊಂದಿಗೆ ಸಹಸ್ರಾರು ಯೋಗಾಭಿಮಾನಿಗಳನ್ನು ದುಃಖದ ಮಡುವಿನಲ್ಲಿ ತಳ್ಳಿದ್ದಾರೆ. – ಡಾ. ರಾಘವೇಂದ್ರ ಪೈ, ಹಿರಿಯ ಯೋಗ ಸಾಧಕರು
ನವದೆಹಲಿ: ಸೇನಾ ದಿನದ ಅಂಗವಾಗಿ ಇಂದು ಭಾರತೀಯ ಸೇನೆಯು ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಳೆದ ವರ್ಷ ನಡೆದ…
ಜನನಾಯಗನ್ ಚಿತ್ರವನ್ನು ಮುಂದೂಡಿದ್ದಕ್ಕೆ ಸಂಬಂಧಿಸಿದಂತೆ ಸಿಬಿಎಫ್ಸಿ ಅನುಮತಿ ಕೋರಿ ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಸೆನ್ಸಾರ್…
ರಾಮನಗರ: ಪ್ರೀತಿ ಹೆಸರಿನಲ್ಲಿ ಯುವತಿಯೊಂದಿಗೆ ದೈಹಿಕ ಸಂಪರ್ಕ ನಡೆಸಿ ಯುವಕನೊಬ್ಬ ಕೈಕೊಟ್ಟಿದ್ದು, ಮನನೊಂದ ಯುವತಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ…
ಬೆಂಗಳೂರು: ರಾಜ್ಯದಲ್ಲಿ ದಲಿತ ಸಿಎಂ ಆಗದಿರುವುದರ ಬಗ್ಗೆ ನಮಗೆ ನೋವಿದೆ. ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲಾ ಆಗುತ್ತದೆ ಎಂದು ಸಚಿವ…
ಮೈಸೂರು: ರಾಜ್ಯ ರಾಜಕಾರಣಕ್ಕೆ ಬರುವ ಸುಳಿವು ನೀಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್…
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಳಿಯ ಅಬ್ಬರ ತಗ್ಗಿದೆಯಾದರೂ ಮೋಡ ಕವಿದ ವಾತಾವರಣವಿರಲಿದೆ. ರಾಜ್ಯದಲ್ಲಿ ಒಂದು…