Andolana originals

ಕಡತ ವಿಲೇವಾರಿಗೆ ಸರ್ವರ್‌ ಕಂಟಕ

ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಇರುವ ಕಡತಗಳು; ಸಾರ್ವಜನಿಕರ ಅಲೆದಾಟ

ಎಚ್.ಎಸ್.ದಿನೇಶ್‌ಕುಮಾರ್

ಮೈಸೂರು: ಕಡತಗಳ ವಿಲೇವಾರಿ ವಿಳಂಬವಾಗುತ್ತಿದೆ ಎಂಬ ದೂರಿನ ಮೇರೆಗೆ ಪಟ್ಟಣ ಪಂಚಾಯಿತಿ ಹಾಗೂ ನಗರಪಾಲಿಕೆ ವಲಯ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು.

ಇದರಿಂದ ಎಚ್ಚೆತ್ತ ಅಧಿಕಾರಿಗಳು ಕಡತ ವಿಲೇವಾರಿಗೆ ಮುಂದಾಗಿದ್ದರೂ ಕಡತಗಳ ವಿಲೇ ವಾರಿಗೆ ಈಗ ಸರ್ವರ್ ಸಮಸ್ಯೆ ಕಂಟಕವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸಗಳು ತಡವಾಗುತ್ತಿವೆ ಎಂಬ ಹತ್ತಾರು ದೂರುಗಳು ಲೋಕಾಯುಕ್ತ ಕಚೇರಿಗೆ ಬಂದಿದ್ದವು. ಈ ಆಧಾರದ ಮೇಲೆ ಕಳೆದ ವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

ದಾಳಿ ವೇಳೆ ಕೆಲ ಪಟ್ಟಣ ಪಂಚಾಯಿತಿಗಳಲ್ಲಿ ಸಾವಿರಾರು ಕಡತಗಳು ವಿಲೇವಾರಿ ಆಗದೆ ಉಳಿದಿರುವುದು ಪತ್ತೆಯಾಗಿತ್ತು. ನಗರ ಪಾಲಿಕೆಯ ವಲಯ ಕಚೇರಿಗಳಲ್ಲಿ ಕೂಡ ೫೦೦ರಿಂದ ೬೦೦ ಕಡತಗಳು ವಿಲೇವಾರಿಯಾಗದೆ ಇದ್ದುದು ಕೂಡ ಪರಿಶೀಲನೆ ವೇಳೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ನಂತರ ಲೋಕಾಯುಕ್ತ ಪೊಲೀಸರ ದಾಳಿಗೆ ಬೆದರಿದ್ದ ಅಧಿಕಾರಿಗಳು ಕಡತಗಳ ವಿಲೇವಾರಿಗೆ ಮುಂದಾಗಿದ್ದರು.

ಎಲ್ಲ ಕಡತಗಳ ಪರಿಶೀಲನೆ ಕೂಡ ಆರಂಭಿಸಿದ್ದರು. ಆದರೆ, ಅವರ ಕೆಲಸಕ್ಕೆ ಇದೀಗ ಅಡ್ಡಿಯಾಗುತ್ತಿರುವುದು ಇಲಾಖೆಯ ತಂತ್ರಾಂಶ ವ್ಯವಸ್ಥೆ. ರಾಜ್ಯಾದ್ಯಂತ ಕಂದಾಯ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ. ದಿನದಲ್ಲಿ ಕೇವಲ ಅರ್ಧ ಗಂಟೆ ಮಾತ್ರ ಸರ್ವರ್ ಸಿಗುತ್ತಿದೆ ಎನ್ನಲಾಗಿದೆ. ಹೀಗಾಗಿ ಸಾರ್ವಜನಿಕರ ಕೆಲಸ ಮಾಡುವ ಉತ್ಸಾಹ ಅಧಿಕಾರಿಗಳಲ್ಲಿದ್ದರೂ ಸರ್ವರ್ ಸಮಸ್ಯೆಯ ಕಾರಣದಿಂದ ಆಗುತ್ತಿಲ್ಲ. ಇದರಿಂದಾಗಿ ಇ-ಖಾತಾ, ಇ-ಸ್ವತ್ತು ಸೇರಿದಂತೆ ಯಾವುದೇ ದಾಖಲೆಗಳನ್ನು ನೀಡುವ ಕಾರ್ಯವೂ ಆಗುತ್ತಿಲ್ಲ.

ನೋಂದಣಿಗೂ ತೊಂದರೆ: ಯಾವುದೇ ಆಸ್ತಿಯನ್ನು ಖರೀದಿಸ ಬೇಕಾದಲ್ಲಿ ಇದೀಗ ಇ-ಖಾತೆ ಬಹಳ ಮುಖ್ಯ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಖಾತೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಆಸ್ತಿ ನೋಂದಣಿ ಪ್ರಕ್ರಿಯೆ ಕೂಡ ವಿಳಂಬವಾಗುತ್ತಿದೆ.

ಇನ್ನೂ ನಾಲ್ಕು ದಿನ ಸಮಸ್ಯೆ: ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳುವಂತೆ ಸರ್ವರ್ ಸಮಸ್ಯೆ ಇನ್ನೂ ನಾಲ್ಕು ದಿನ ಮುಂದುವರಿಯಲಿದೆ. ಇದು ರಾಜ್ಯಮಟ್ಟದ ಸಮಸ್ಯೆಯಾಗಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಸರ್ವರ್ ಸಮಸ್ಯೆ ಸರಿಯಾಗಲಿದೆ ಎನ್ನುತ್ತಾರೆ. ಲೋಕಾಯುಕ್ತ ಪೊಲೀಸರ ದಾಳಿಯ ನಂತರ ಬಾಕಿ ಇರುವ ಕಡತಗಳನ್ನು ವಿಲೇವಾರಿಗೆ ನಾವುಗಳು ಮುಂದಾಗಿದ್ದೆವು. ಅಷ್ಟರಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದ ನಮ್ಮ ಕೆಲಸಕ್ಕೆ ಅಡ್ಡಿಯಾಗಿದೆ. ಸಮಸ್ಯೆ ಬಗೆಹರಿದಲ್ಲಿ ಮುಂದಿನ ಒಂದು ವಾರದ ಒಳಗೆ ಎಲ್ಲಾಕಡತಗಳ ವಿಲೇವಾರಿ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಇಲಾಖೆಯ ಒಳಗಿನ ಸಮಸ್ಯೆ ಜನರಿಗೆ ಗೊತ್ತಾಗುವುದಿಲ್ಲ. ಲೋಕಾದಾಳಿಯ ನಂತರ ನಮ್ಮ ಕೆಲಸವನ್ನು ಬೇಗ ಮಾಡಿಕೊಡಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ. ಸರ್ವರ್ ಸಮಸ್ಯೆಯನ್ನು ಹೇಳಿದರೂ ಅವರುಗಳು ಕೇಳುವ ಸ್ಥಿತಿಯಲ್ಲಿ ಇಲ್ಲ. ಇದಕ್ಕಾಗಿ ಸರ್ವರ್ ಸಮಸ್ಯೆ ಇದೆ ಎಂದು ಫಲಕ ಹಾಕಲಾಗಿದೆ.

ಕೆಲ ಪತ್ರಿಕೆಗಳಲ್ಲಿ ಇದು ಲಂಚದ ಬೇಡಿಕೆಯ ಸ್ವರೂಪ ಎಂದು ವರದಿ ಮಾಡಿದ್ದಾರೆ. ಜನರು ಇದನ್ನೇ ಮುಂದಿಟ್ಟುಕೊಂಡು ಗಲಾಟೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಸರ್ವರ್ ಸಮಸ್ಯೆ ಇಲ್ಲದಿದ್ದರೂ ಫಲಕ ಹಾಕಲು ಹೇಗೆ ಸಾಧ್ಯ ಎಂಬುದನ್ನು ಸಾರ್ವಜನಿಕರೂ ಅರಿತುಕೊಳ್ಳಬೇಕು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಹೇಳಿದರು

” ಕಳೆದ ಕೆಲ ದಿನಗಳಿಂದ ಮೈಸೂರು ಮಾತ್ರವ ಲ್ಲದೆ ರಾಜ್ಯಾದ್ಯಂತ ಸರ್ವರ್‌ನ ಬ್ಯಾಕಪ್ ಸಮಸ್ಯೆ ಇದೆ. ಈ ಸಂಬಂಧ ನಾವು ಕೂಡ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಮುಂದಿನ ೩ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ.”

-ಪ್ರಿಯದರ್ಶಿನಿ, ಯೋಜನಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶ

” ಆಸ್ತಿ ಮಾರಾಟಕ್ಕಾಗಿ ಅಮೆರಿಕಾದಿಂದ ಬಂದಿದ್ದೇನೆ. ನಗರಪಾಲಿಕೆಯ ವಲಯ ಕಚೇರಿಯಲ್ಲಿ ನನ್ನ ತೆರಿಗೆ ಹಣ ಪಾವತಿಯ ಅಪ್‌ಡೇಟ್ ಆಗಬೇಕಿತ್ತು. ಕಳೆದ ಮೂರು ದಿನಗಳಿಂದ ವಲಯ ಕಚೇರಿಗೆ ಅಲೆಯುತ್ತಿದ್ದೇನೆ. ಸರ್ವರ್ ಸಮಸ್ಯೆ ಕಾರಣದಿಂದಾಗಿ ಕೆಲಸವಾಗುತ್ತಿಲ್ಲ. ಇದರಿಂದಾಗಿ ನನಗೆ ಆರ್ಥಿಕವಾಗಿ ನಷ್ಟವುಂಟಾಗಿದೆ. ಸರ್ಕಾರ ಇಂತಹ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸಬೇಕು.”

-ಪ್ರಶಾಂತ್, ಕುವೆಂಪುನಗರ ನಿವಾಸಿ

” ಯಾವುದೇ ಆಸ್ತಿ ನೋಂದಣಿಯಾಗಬೇಕಾದಲ್ಲಿ ಖಾತೆ ಅವಶ್ಯ ಹಾಗೂ ತೆರಿಗೆ ಪಾವತಿಯು ತಂತ್ರಾಂಶದಲ್ಲಿ ಅಪ್‌ಡೇಟ್ ಆಗಬೇಕು. ಸರ್ವರ್ ಸಮಸ್ಯೆಯಿಂದಾಗಿ ಕಳೆದ ಒಂದು ವಾರದಿಂದ ಖಾತೆಯೂ ದೊರಕುತ್ತಿಲ್ಲ. ತೆರಿಗೆ ಪಾವತಿ ಕೂಡ ಅಪ್‌ಡೇಟ್ ಆಗುತ್ತಿಲ್ಲ. ಇದರಿಂದ ಜನರಿಗೂ ತೊಂದರೆ, ಸರ್ಕಾರಕ್ಕೂ ನಷ್ಟ.”

ಸುನಿಲ್, ಪತ್ರ ಬರಹಗಾರ

ಆಂದೋಲನ ಡೆಸ್ಕ್

Recent Posts

ಸಿಲಿಂಡರ್‌ಗಳ ಮೇಲೆ ಕಳ್ಳರ ಕಣ್ಣು!

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದ ದೇಶದಲ್ಲಿ ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಮಧ್ಯೆ ಸಿಲಿಂಡರ್‌ ಕಳ್ಳತನ ಸಹ ಹೆಚ್ಚಾಗಿದ್ದು…

16 mins ago

ಇರಾನ್‌ ನೂತನ ಸುಪ್ರೀಂ ಲೀಡರ್‌ಗೆ ಕಾಲು ಕಟ್‌, ಕೋಮಾಗೆ ಜಾರಿದ ಮೊಜ್ತಾಬಾ? ದಾಳಿ ಬಗ್ಗೆ ಸಿಗದ ಸ್ಪಷ್ಟನೆ

ಟೆಹ್ರಾನ್ : ಇರಾನ್- ಇಸ್ರೇಲ್‌,‌ ಅಮೆರಿಕಾ ಯುದ್ಧ ದಿನಕ್ಕೊಂದು ಸ್ವರೂಪ ಪಡೆಯುತ್ತಿದ್ದು, ತಂದೆ ಸಾವಿನ ಬಳಿಕ ನೇಮಕಗೊಂಡ ಇರಾನ್‌ ಸುಪ್ರೀಂ…

42 mins ago

ಅಕ್ರಮ ಮರ ಕಡಿತಲೆ ತಡೆಗೆ ಸಚಿವ ಈಶ್ವರ್‌ ಖಂಡ್ರೆ ಖಡಕ್‌ ಸೂಚನೆ

ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ತಲೆದೋರಿರುವ ಅಡುಗೆ ಅನಿಲ ಅಭಾವದ ಬಿಸಿ ಇದೀಗ ರಾಜ್ಯದ ಅರಣ್ಯಗಳ ಮೇಲೆ ತಟ್ಟುವ…

2 hours ago

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಕಳೆದ ನಾಲ್ಕೈದು ದಶಕಗಳ ನನ್ನ ರಾಜಕೀಯ ಬದುಕಿನಲ್ಲಿ ಅನೇಕ ಸೋಲುಗೆಲುವುಗಳನ್ನು ಕಂಡಿದ್ದರೂ, ಜನಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ…

2 hours ago

ನನ್ನ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ: ಸಿಎಂ ಸಿದ್ದರಾಮಯ್ಯ

ಮೈಸೂರು: ನನ್ನ ಉಸಿರು ಇರುವವರೆಗೂ ನಾನು ರಾಜಕೀಯದಲ್ಲೇ ಸಕ್ರಿಯನಾಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದ ವರಕೋಡು…

3 hours ago

ಇರಾನ್‌-ಇಸ್ರೇಲ್‌ ಸಂಘರ್ಷ ಎಫೆಕ್ಟ್:‌ ನೀರಾವರಿ ಪೈಪ್‌ಗಳ ಬೆಲೆಯಲ್ಲೂ ಏರಿಕೆ

ಮೈಸೂರು: ಇರಾನ್‌ ಮತ್ತು ಇಸ್ರೇಲ್‌ ಯುದ್ಧದ ಪರಿಣಾಮ ಭಾರತದ ಕೃಷಿ ವಲಯದ ಮೇಲೂ ಬಿದ್ದಿದ್ದು, ಕೃಷಿ ಚಟುವಟಿಕೆ ಆರಂಭಿಸುವ ವೇಳೆ…

3 hours ago