Andolana originals

‘ವಿದ್ಯಾರ್ಥಿ ಶಕ್ತಿ’ಗೆ ಸೆರ್ಬಿಯಾ ಸರ್ಕಾರ ಪತನ..!

ಸಂಘಟಿತ ಹೋರಾಟದಿಂದ ದುರಾಡಳಿತ ಅಂತ್ಯ ಎಂಬುದನ್ನು ವಿಶ್ವಕ್ಕೆ ತೋರಿದ ಯುವಜನಾಂಗ 

ಕೇವಲ ೬೫ ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಯೂರೋಪ್‌ನ ಪುಟ್ಟ ದೇಶ ಸೆರ್ಬಿಯಾದಲ್ಲಿ ನಡೆದ ವಿದ್ಯಾರ್ಥಿಗಳ ಕ್ರಾಂತಿಕಾರಿ ಆಂದೋಲನ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಆಡಳಿತದಲ್ಲಿರುವವರ ಭ್ರಷ್ಟಾಚಾರ, ಸ್ವೇಚ್ಛಾಚಾರ, ಬೇಜವಾಬ್ದಾರಿತನ ಮತ್ತು ಸರ್ವಾಧಿಕಾರಿ ಧೋರಣೆ ಮಿತಿ ಮೀರಿದಾಗ ಅದರ ಪರಿಣಾಮ ಏನಾಗಬಲ್ಲದು ಎಂಬುದಕ್ಕೆ ಈ ವಿದ್ಯಾರ್ಥಿಗಳ ಕ್ರಾಂತಿಯೇ ಒಂದು ಸ್ಪಷ್ಟ ಮತ್ತು ತಾಜಾ ನಿದರ್ಶನ. ೧೪ ವರ್ಷಗಳ ಕಾಲ ಸತತವಾಗಿ ಅಧಿಕಾರದಲ್ಲಿದ್ದ ಅಧ್ಯಕ್ಷ ಅಲೆಕ್ಸಾಂಡರ್ ವೂಚಿ ನೇತೃತ್ವದ ಅಲ್ಲಿನ ಎಸ್‌ಎನ್ ಎಸ್ ಪಕ್ಷದ ಸರ್ಕಾರವನ್ನು ವಿದ್ಯಾರ್ಥಿಗಳು ಚುನಾವಣೆಯಲ್ಲಿ ಪರಾಭವಗೊಳಿಸಿ ಸೆರ್ಬಿಯಾದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸ್ಪಷ್ಟ ಬೇಡಿಕೆಗಳೊಂದಿಗೆ ಸರ್ಕಾರದ ದುರಾಡಳಿತದ ವಿರುದ್ಧ ಪ್ರಜಾತಾಂತ್ರಿಕವಾಗಿಯೇ ಸಂಘಟಿತ ಹೋರಾಟ ನಡೆಸಿದರೆ ರಕ್ತಪಾತವಿಲ್ಲದೇ ಯಾವುದೇ ದುರಾಡಳಿತವನ್ನು ಕೊನೆಗಾಣಿಸಬಹುದು, ಬದಲಾವಣೆಯನ್ನೂ ಮಾಡಬಹುದು ಎಂಬ ಪಾಠವನ್ನು ಸೆರ್ಬಿಯಾದ ಈ ವಿದ್ಯಾರ್ಥಿಗಳು ಜಗತ್ತಿಗೆ ಹೇಳಿಕೊಟ್ಟಿದ್ದಾರೆ.

ಸೆರ್ಬಿಯಾದಲ್ಲಿ ನಡೆದದ್ದೇನು?:  ಸೆರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಿಂದ ಬರೋಬ್ಬರಿ ನೂರು ಕಿ.ಮೀ. ದೂರದಲ್ಲಿರುವ ನೊವಿಸಾಡ್ ಪಟ್ಟಣದಲ್ಲಿ ೨೦೨೪ರ ನವೆಂಬರ್ ತಿಂಗಳು ಒಂದು ದುರ್ಘಟನೆ ನಡೆಯಿತು. ಕೆಲವೇ ವಾರಗಳ ಹಿಂದೆ ನವೀಕರಣಗೊಂಡಿದ್ದ ಅಲ್ಲಿನ ರೈಲ್ವೇ ನಿಲ್ದಾಣದ ಮೇಲ್ಚಾವಣಿ ಕುಸಿದು ಕೆಲ ಮಕ್ಕಳೂ ಸೇರಿದಂತೆ ೧೬ ಜನರು ಮೃತಪಟ್ಟರು. ಈ ದುರ್ಘಟನೆ ಸೆರ್ಬಿಯಾದ ಕೆಲ ವಿದ್ಯಾರ್ಥಿಗಳಲ್ಲಿ ಹೋರಾಟದ ಕಿಡಿ ಹೊತ್ತಿಸಿತು. ‘ಈಗಷ್ಟೇ ನವೀಕರಣಗೊಂಡಿರುವ ರೈಲ್ವೇ ನಿಲ್ದಾಣದ ಮೇಲ್ಚಾವಣಿ ಕುಸಿಯಲು ಕಳಪೆ ಕಾಮಗಾರಿಯೇ ಕಾರಣ, ಸರ್ಕಾರದಲ್ಲಿನ ಭ್ರಷ್ಟಾಚಾರವೇ ಕಾರಣ’ ಎಂಬುದು ವಿದ್ಯಾರ್ಥಿಗಳ ಸ್ಪಷ್ಟ ಅಭಿಪ್ರಾಯವಾಗಿತ್ತು. ಆ ದುರ್ಘಟನೆಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರುವುದಕ್ಕಾಗಿ ವಿದ್ಯಾರ್ಥಿಗಳು ಆರಂಭದಲ್ಲಿ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ ಬೃಹತ್ ಮೌನ ಪ್ರತಿಭಟನೆ ನಡೆಸಿದರು. ಅದಾದ ಮೇಲೆ ಒಂದರ ಹಿಂದೊಂದರಂತೆ ಸರಣಿ ಪ್ರತಿಭಟನೆಗಳು ಶುರುವಾದವು.

ವಿದ್ಯಾರ್ಥಿಗಳ ಈ ಪ್ರತಿಭಟನೆಗಳು ಅತ್ಯಂತ ವಿನೂತನವಾಗಿ ನಡೆಯುತ್ತಿದ್ದವು. ಮೊದಲನೆಯದಾಗಿ ೧೬ ಜನರ ಸಾವಿಗೆ ಕಾರಣವಾದ ಈ ದುರ್ಘಟನೆ ಬೆಳಿಗ್ಗೆ ೧೧ ಗಂಟೆ ೫೨ ನಿಮಿಷಕ್ಕೆ ನಡೆದದ್ದರಿಂದಾಗಿ ಪ್ರತಿದಿನ ಬೆಳಿಗ್ಗೆ ೧೧.೫೨ಕ್ಕೆ ೧೬ ನಿಮಿಷಗಳ ಕಾಲ ಸಾವಿರಾರು ಜನರು ರಸ್ತೆಗಳ ನಿಂತು ಮೌನ ಪ್ರತಿಭಟನೆ ನಡೆಸುವುದು ಹಾಗೂ ಸರ್ಕಾರದ ಕೈಗಳು ಪ್ರಜೆಗಳ ಸಾವಿನಿಂದ ರಕ್ತಸಿಕ್ತವಾಗಿವೆ ಎಂಬುದರ ಸಂಕೇತವಾಗಿ ಪ್ರತಿಭಟನಾಕಾರರು ತಮ್ಮ ಕೈಗಳನ್ನು ಕೆಂಪು ಬಣ್ಣದಲ್ಲಿ ಅದ್ದಿ ತೆಗೆದು ಪ್ರತಿಭಟಿಸುವುದು. ಈ ದುರ್ಘಟನೆಗೆ ಮತ್ತು ೧೬ ಜನರ ಸಾವಿಗೆ ಕಾರಣರಾದವರು ಯಾರು ಎಂಬುದು ದೇಶಕ್ಕೆ ತಿಳಿಯಲೇಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು, ಅಲ್ಲಿಯವರೆಗೆ ಹೋರಾಟ ನಿಲ್ಲುವುದಿಲ್ಲ ಎಂಬ ಸಂಕಲ್ಪದೊಂದಿಗೆ ಈ ಪ್ರತಿಭಟನೆಗಳನ್ನು ನಡೆಸಲಾಗುತ್ತಿತ್ತು.

ರೈಲ್ವೇ ನಿಲ್ದಾಣದ ನವೀಕರಣಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಬಹಿರಂಗಗೊಳಿಸಬೇಕು, ಈ ಘಟನೆಗೆ ಕಾರಣರಾದ ಅಧಿಕಾರಿಗಳು ಯಾರೆಂಬುದು ಗೊತ್ತಾಗಬೇಕು ಹಾಗೂ ಆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು ಎಂಬ ಬೇಡಿಕೆಗಳನ್ನು ವಿದ್ಯಾರ್ಥಿಗಳು ಸರ್ಕಾರದ ಮುಂದಿಟ್ಟಿದ್ದರು.

ಆದರೆ, ವಿದ್ಯಾರ್ಥಿಗಳ ಈ ಬೇಡಿಕೆಗೆ ಪೂರಕವಾಗಿ ಸ್ಪಂದಿಸುವ ಬದಲಿಗೆ ಪ್ರತಿಭಟನಾನಿರತರ ಮೇಲೆ ಪೊಲೀಸರು ಹಾಗೂ ಆಡಳಿತಾರೂಢ ಪಕ್ಷಗಳ ಬೆಂಬಲಿಗರು ಮಾರಣಾಂತಿಕ ಹಗಳನ್ನು ನಡೆಸಿದರು. ಈ ಹಗಳು ಇಡೀ ದೇಶಾದ್ಯಂತ ಆಕ್ರೋಶ ಮತ್ತಷ್ಟು ಭುಗಿಲೇಳಲು ಕಾರಣವಾದವು. ಪ್ರತಿಭಟನೆಗಳು ಇನ್ನಷ್ಟು ತೀವ್ರಗೊಳ್ಳುವುದಲ್ಲದೇ ದೇಶದ ಬಹುತೇಕ ಶಹರಗಳಿಗೆ ಈ ಪ್ರತಿಭಟನೆಗಳು ವ್ಯಾಪಿಸಿದವು.

ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು, ರೈತರು, ವಕೀಲರು, ಕಲಾವಿದರು ಸೇರಿದಂತೆ ಸೆರ್ಬಿಯಾದ ಎಲ್ಲ ವರ್ಗಗಳ, ವೃತ್ತಿಗಳ ಜನರು ವಿದ್ಯಾರ್ಥಿಗಳ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ಈ ಹೋರಾಟವನ್ನು ಬಗ್ಗುಬಡಿಯುವ ಸರ್ಕಾರದ ಎಲ್ಲ ಪ್ರಯತ್ನಗಳೂ ವಿಫಲವಾಗುತ್ತವೆ.

ಮಧ್ಯಾವಧಿ ಚುನಾವಣೆ: ೨೦೨೫ರ ಮೇ ತಿಂಗಳು ವಿದ್ಯಾರ್ಥಿಗಳ ಪ್ರತಿಭಟನೆ ಇನ್ನೊಂದು ಮಹತ್ವದ ತಿರುವು ಪಡೆಯಿತು. ಅಲ್ಲಿಯವರೆಗೆ ಕೇವಲ ರೈಲ್ವೇ ನಿಲ್ದಾಣ ನವೀಕರಣದ ದಾಖಲೆಗಳ ಬಹಿರಂಗವಾಗಬೇಕು, ಘಟನೆಯ ಬಗ್ಗೆ ತನಿಖೆ ನಡೆಯಬೇಕು, ಉತ್ತರಾದಯಿತ್ವ ನಿಗದಿಪಡಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಿದ್ದ ವಿದ್ಯಾರ್ಥಿಗಳು, ಅಲೆಕ್ಸಾಂಡರ್ ಸರ್ಕಾರ ಜನಬೆಂಬಲ ಕಳೆದುಕೊಂಡಿದೆ ಎಂಬುದು ಜಗತ್ತಿಗೆ ತಿಳಿಯಬೇಕು, ಸೆರ್ಬಿಯಾದ ಸಂಸತ್ತಿಗೆ ಮಧ್ಯಾವಧಿ ಚುನಾವಣೆ ನಡೆಯಬೇಕು ಎಂಬ ಹೊಸ ಬೇಡಿಕೆ ಇಡುತ್ತಾರೆ. ವಿದ್ಯಾರ್ಥಿಗಳ ಹೋರಾಟದ ಕಾವು ಎಷ್ಟಿರುತ್ತದೆಂದರೆ ಅನಿವಾರ್ಯವಾಗಿ ದೇಶದಲ್ಲಿ ಮಧ್ಯಾವಧಿ ಚುನಾವಣೆಗಳನ್ನು ಸರ್ಕಾರ ಘೋಷಣೆ ಮಾಡಲೇಬೇಕಾಗುತ್ತದೆ. ಈ ಚುನಾವಣೆಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ತಮ್ಮದೇ ಆದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ.

ವಿದ್ಯಾರ್ಥಿಗಳು, ಶಿಕ್ಷಕರು, ವಕೀಲರು, ರೈತರು, ಕಲಾವಿದರು, ಎಂಜಿನಿಯರುಗಳು ಹೀಗೆ ಸಮಾಜದ ಎಲ್ಲ ರಂಗಗಳಲ್ಲಿನ ಆಯ್ದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅದಕ್ಕೆ ‘ಸ್ಟೂಡೆಂಟ್ಸ್ ಲಿಸ್ಟ್’ ಎಂದು ಹೆಸರಿಡುತ್ತಾರೆ. ವಿದ್ಯಾರ್ಥಿಗಳು ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿ ‘ಸ್ಟೂಡೆಂಟ್ಸ ಲಿಸ್ಟ್’ ಅಭ್ಯರ್ಥಿಗಳ ಪರವಾಗಿ ಪ್ರಚಾರ ಸಭೆಗಳನ್ನು, ರ‍್ಯಾಲಿಗಳನ್ನು ಮತ್ತು ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡುತ್ತಾರೆ. ಇದೇ ವರ್ಷದ ಅಕ್ಟೋಬರ್ ೨೫ರಂದು ಚುನಾವಣಾ ಫಲಿತಾಂಶಗಳು ಹೊರಬಿದ್ದಾಗ ‘ಸ್ಟೂಡೆಂಟ್ಸ್ ಲಿಸ್ಟ್’ನ ಅಭ್ಯರ್ಥಿಗಳಿಗೆ ಬಹುಮತ ದೊರೆಯುತ್ತದೆ. ಸತತವಾಗಿ ೧೪ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅಲೆಕ್ಸಾಂಡರ್ ವೂಚಿ ಸರ್ಕಾರದ ಆಡಳಿತ ಅಂತ್ಯಗೊಳ್ಳುತ್ತದೆ.

ಮಾಧ್ಯಮಗಳ ಮುಖಕ್ಕೆ ಕನ್ನಡಿ: 

ಚುನಾವಣೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜಧಾನಿ ಬೆಲ್‌ಗ್ರೇಡ್ ನಲ್ಲಿರುವ ‘ಇನ್ ಫಾರ್ಮರ್ ಟಿವಿ’ ಕಚೇರಿಗೆ ಸುಮಾರು ೩೦ ಜನ ಪ್ರತಿಭಟನಾಕಾರರು ನುಗ್ಗುತ್ತಾರೆ. ಆ ಚಾನೆಲ್ ಸಂಪಾದಕನಿಗೆ ಘೇರಾವ್ ಹಾಕಿ, ಕ್ಷಮೆಯಾಚನೆಗೆ ಪಟ್ಟು ಹಿಡಿಯುತ್ತಾರೆ. ಏಕೆಂದರೆ, ಎರಡು ವರ್ಷಗಳ ಕಾಲ ನಿರಂತರವಾಗಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಅಪಪ್ರಚಾರ ಮಾಡುವುದು ಮತ್ತು ಸರ್ಕಾರದ ಪರವಾದ ಸುದ್ದಿ ಪ್ರಸಾರ ಮಾಡುವುದನ್ನು ಬಿಟ್ಟರೆ ಈ ಚಾನೆಲ್ಲುಗಳು ಬೇರೇನೂ ಮಾಡಿರುವುದಿಲ್ಲ. ವಿದ್ಯಾರ್ಥಿಗಳನ್ನು ತೀವ್ರಗಾಮಿಗಳು, ಪ್ರತ್ಯೇಕತಾವಾದಿಗಳು, ವಿರೋಧ ಪಕ್ಷಗಳ ಕೈಗೊಂಬೆಗಳು, ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹುನ್ನಾರ ನಡೆಸಿರುವವರು ಹಾಗೂ ವಿದೇಶಿ ಏಜೆಂಟರು ಎಂದೆಲ್ಲ ಬಿಂಬಿಸಿ ಸುಳ್ಳು ಸುದ್ದಿ ಪ್ರಸಾರ ಮಾಡಿರುತ್ತಾರೆ. ಆ ರೀತಿ ಸರ್ಕಾರದ ಮುಖವಾಣಿಯಂತೆ ವರ್ತಿಸುತ್ತ ಪ್ರತಿಭಟನಾಕಾರರ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ನ್ಯೂಸ್ ಚಾನೆಲ್ಲುಗಳಲ್ಲಿ ಈ ‘ಇನ್  ಫಾರ್ಮರ್ ಟಿವಿ’ ಮುಂಚೂಣಿಯಲ್ಲಿರುತ್ತದೆ.

ಅದೇ ಕಾರಣಕ್ಕೆ ಅಲೆಕ್ಸಾಂಡರ್ ವೂಚಿ ಆಡಳಿತ ಅಂತ್ಯಗೊಳ್ಳುತ್ತಿದ್ದಂತೆಯೇ ಸುದ್ದಿ ವಾಹಿನಿಗಳ ವಿರುದ್ಧದ ಜನರ ಆಕ್ರೋಶವೂ ಮುಗಿಲುಮುಟ್ಟುತ್ತದೆ. ಕ್ರೊಯೇಷಿಯಾದಿಂದ ಕೆಲ ತೀವ್ರಗಾಮಿ ವಿದ್ಯಾರ್ಥಿಗಳು ಸೆರ್ಬಿಯಾಕ್ಕೆ ಆಗಮಿಸಿದ್ದಾರೆ, ಆ ವಿದ್ಯಾರ್ಥಿಗಳ ಜೊತೆ ಸೇರಿ ಯೂಕ್ರೇನ್‌ನಲ್ಲಿರುವ ಮತ್ತೊಂದು ತೀವ್ರಗಾಮಿ ಗುಂಪಿನ ಬೆಂಬಲದೊಂದಿಗೆ ಸೆರ್ಬಿಯಾದಲ್ಲಿ ಅರಾಜಕತೆ ಸೃಷ್ಟಿ ಮಾಡುವುದು ಮತ್ತು ಅಲೆಕ್ಸಾಂಡರ್ ವೂಚಿ ಸರ್ಕಾರದ ವಿರುದ್ಧ ಸಂಚು ರೂಪಿಸುವುದು ಪ್ರತಿಭಟನಾಕಾರರ ಉದ್ದೇಶವಾಗಿದೆ ಎಂದು ‘ಇನ್ ಫಾರ್ಮರ್ ಟಿವಿ’ ೨೦೨೪ರ ಡಿಸೆಂಬರ್ ತಿಂಗಳ ಸುದ್ದಿ ಪ್ರಸಾರ ಮಾಡಿರುತ್ತದೆ. ಇನ್ನೊಂದು ಬಾರಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಯುದ್ಧ ಸಾರುವುದಕ್ಕಾಗಿ ದೇಶದ ಸೈನ್ಯಕ್ಕೆ ಪರ್ಯಾಯವಾಗಿ ತಮ್ಮದೇ ಸೈನ್ಯಪಡೆ ಕಟ್ಟುತ್ತಿದ್ದಾರೆ, ದೇಶದಲ್ಲಿ ರಕ್ತಪಾತ ಮಾಡುವುದು ಇವರ ಉದ್ದೇಶವಾಗಿದೆ ಎಂದೂ ಸುಳ್ಳು ಸುದ್ದಿ ಹರಡುವ ಪ್ರಯತ್ನವನ್ನು ಇದೇ ಟಿವಿ ಚಾನೆಲ್ ಮಾಡಿರುತ್ತದೆ.

ಈ ಘಟನೆಯ ನಂತರ ಸೆರ್ಬಿಯಾದ ಸರ್ಕಾರಿ ಸುದ್ದಿವಾಹಿನಿ ಆರ್‌ಟಿವಿ ನೇರ ಪ್ರಸಾರದಲ್ಲಿ ವಿದ್ಯಾರ್ಥಿಗಳ ಕ್ಷಮೆಯಾಚನೆ ಮಾಡುತ್ತದೆ. ‘ಸುಮಾರು ಎರಡು ವರ್ಷಗಳ ಕಾಲ ನಾವು ಒನ್ ಸೈಡೆಡ್ ಸುದ್ದಿ ಪ್ರಸಾರ ಮಾಡಿದ್ದೇವೆ, ವಾಸ್ತವ ಸಂಗತಿಗೆ ವಿರುದ್ಧವಾದ ಹಾಗೂ ಕೇವಲ ಸರ್ಕಾರದ ಪರವಾದ ಸುದ್ದಿ ಪ್ರಸಾರ ಮಾಡಿದ್ದೇವೆ. ಅದಕ್ಕಾಗಿ ನಾವು ವಿದ್ಯಾರ್ಥಿಗಳ ಹಾಗೂ ಇಡೀ ದೇಶದ ಕ್ಷಮೆಯಾಚಿಸುತ್ತೇವೆ’ ಎಂದು ಆ ಚಾನೆಲ್‌ನ ಆಂಕರ್ ನೇರ ಪ್ರಸಾರದಲ್ಲಿ ಬಂದು ಹೇಳುತ್ತಾರೆ.

ಅಸ್ತಿತ್ವದಲ್ಲಿರುವ ಸರ್ಕಾರದ ದುರಾಡಳಿತದ ವಿರುದ್ಧ ಬಂಡೆದ್ದು ಈಗ ತಮ್ಮದೇ ಆದ ಸರ್ಕಾರ ರಚಿಸುವ ಹಂತಕ್ಕೆ ತಲುಪಿರುವ ಅನುಭವಿ ವಿದ್ಯಾರ್ಥಿಗಳ ಗುಂಪು ಭವಿಷ್ಯದಲ್ಲಿ ಸೆರ್ಬಿಯಾದಲ್ಲಿ ಯಾವ ರೀತಿ ಆಡಳಿತ ನಡೆಸಲಿದೆ ಎಂಬ ಕುತೂಹಲ ಇಡೀ ಜಗತ್ತಿಗಿದೆ.

” ಅಸ್ತಿತ್ವದಲ್ಲಿರುವ ಸರ್ಕಾರದ ದುರಾಡಳಿತದ ವಿರುದ್ಧ ಬಂಡೆದ್ದು ಈಗ ತಮ್ಮದೇ ಆದ ಸರ್ಕಾರ ರಚಿಸುವ ಹಂತಕ್ಕೆ ತಲುಪಿರುವ ಅನನುಭವಿ ವಿದ್ಯಾರ್ಥಿಗಳ ಗುಂಪು ಭವಿಷ್ಯದಲ್ಲಿ ಸೆರ್ಬಿಯಾದಲ್ಲಿ ಯಾವ ರೀತಿ ಆಡಳಿತ ನಡೆಸಲಿದೆ ಎಂಬ ಕುತೂಹಲ ಇಡೀ ಜಗತ್ತಿಗಿದೆ”

 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಹಾಲಿನ ದರದ ಹೆಚ್ಚಳದ ಲಾಭ ರೈತನಿಗೆ ಸಿಗಲಿ

ರೈತರ ಹೆಸರನ್ನು ಮುಂದಿಟ್ಟುಕೊಂಡು ಸರ್ಕಾರ ಹಾಲಿನ ದರ ಹೆಚ್ಚಳದ ಘೋಷಣೆ ಮಾಡುತ್ತದೆ. ಆದರೆ ಆ ಘೋಷಣೆಯ ಪೂರ್ಣ ಲಾಭ ಮಾತ್ರ…

5 mins ago

ಓದುಗರ ಪತ್ರ: ಶಿಕ್ಷಣದ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುವುದು ಏಕೆ?

ಸರ್ಕಾರಿ ಶಾಲೆಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಸಿಎಸ್‌ಆರ್(ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಯೋಜನೆಯಡಿ ವಹಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ.…

8 mins ago

ಓದುಗರ ಪತ್ರ: ತಿಳಿ ವಾತಾವರಣ ರಾಡಿ ಮಾಡಬಾರದು

ಮೈಸೂರು ಅರಮನೆ, ಚಿನ್ನದ ಅಂಬಾರಿ, ವಜ್ರಖಚಿತ ಸಿಂಹಾಸನ ಅಂದು..ಇಂದು.. ಮುಂದು.. ಎಂದೆಂದಿಗೂ ಮೈಸೂರು ರಾಜಮನೆತನದ ಖಾಸಗಿ ಸ್ವತ್ತಾಗಿದ್ದು, ಸರ್ಕಾರ ಇದರ…

14 mins ago

ತೆರಿಗೆ ವಸೂಲಾತಿ; ಮೈಸೂರು 6ನೇ ಸ್ಥಾನಕ್ಕೆ ಜಿಗಿತ

ಕೆ.ಬಿ.ರಮೇಶನಾಯಕ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶಕ್ಕೆ ತೆರಿಗೆ ವಸೂಲಾತಿಗೆ ಮುಂದಾಗಿರುವ ಪಿಡಿಒಗಳು ಮೈಸೂರು: ಗ್ರಾಮ ಪಂಚಾಯಿತಿಗಳು ರಾಜ್ಯ, ಕೇಂದ್ರ ಸರ್ಕಾರಗಳ…

26 mins ago

ಪಟಾಕಿ ತ್ಯಜಿಸಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ

ನವೀನ್ ಡಿಸೋಜ ಹಸಿರು ಪಟಾಕಿಗಳಿಗಷ್ಟೇ ಅವಕಾಶ; ರಾತ್ರಿ ೮ರಿಂದ ೧೦ರವರೆಗೆ ಸಿಡಿಸಲು ಕಾಲಮಿತಿ, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಮಡಿಕೇರಿ:…

46 mins ago

ಕೃಷ್ಣಯ್ಯನಹುಂಡಿಯಲ್ಲಿ ನೀರಿನ ಸಮಸ್ಯೆಗೆ ಮುಕ್ತಿ

ಮಂಜು ಕೋಟೆ ಗ್ರಾಮದಲ್ಲಿ ಬೋರ್‌ವೆಲ್ ಕೊರೆಸಿ ನೀರಿನ ಸಮಸ್ಯೆ ಪರಿಹರಿಸಿದ ಶಂಕರೇಗೌಡ  ಎಚ್.ಡಿ.ಕೋಟೆ: ಅಧಿಕಾರಿಗಳು ಕುಡಿಯುವ ನೀರು ಒದಗಿಸಲು ಎಷ್ಟೇ…

53 mins ago