Mysore
19
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ವನ್ಯಜೀವಿ ಹಾವಳಿ ತಡೆಗೆ ವೈಜ್ಞಾನಿಕ ಕ್ರಮ

ಪುನೀತ್

೨೨ ಕೋಟಿ ರೂ. ಅನುದಾನ ಬಿಡುಗಡೆ ; ೧೫ ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ

ಮಡಿಕೇರಿ: ಕೊಡಗಿನಲ್ಲಿ ವನ್ಯಜೀವಿ-ಮಾನವ ಸಂಘರ್ಷವನ್ನು ತಡೆಗಟ್ಟಲು ೨೨ ಕೋಟಿ ರೂ. ಅನುದಾನ ತರುವ ಮೂಲಕ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಪ್ರಬಲ ಇಚ್ಛಾಶಕ್ತಿ ಪ್ರದರ್ಶಿಸಿದ್ದು, ಸ್ಥಳೀಯರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಪ್ರಯತ್ನ ರೂಪಿಸಲಾಗುವುದು ಎನ್ನುವ ಭರವಸೆ ಪ್ರತಿ ಚುನಾವಣೆ ಬಂದಾಗಲೂ ರಾಜಕೀಯ ಪಕ್ಷಗಳ ನಾಯಕರಿಂದ ಕೇಳಿ ಬರುತ್ತಲೇ ಇತ್ತು. ಮತದಾರರು ಕೂಡ ಇದೇ ಬೇಡಿಕೆಯನ್ನು ಮುಂದಿಡುತ್ತಿದ್ದರು. ಆದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ನೂತನ ಜನಪ್ರತಿನಿಧಿಗಳಿಂದ ಒಂದಿಷ್ಟು ಪ್ರಯತ್ನಗಳು ನಡೆದರೂ ಸಮಸ್ಯೆ ಮಾತ್ರ ಹಾಗೆಯೇ ಉಳಿದುಕೊಂಡಿರುತ್ತಿದ್ದವು. ಇದೀಗ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿ ಮುಂದಡಿ ಇಟ್ಟಿರುವುದು ಸ್ಥಳೀಯರಲ್ಲಿ ದೊಡ್ಡ ಮಟ್ಟದ ಭರವಸೆ ಮೂಡಿಸಿದೆ. ಪೊನ್ನಣ್ಣ ಅವರು ತಮ್ಮ ಪ್ರಭಾವ ಬಳಸಿ ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪ್ರಯತ್ನ ಕಂಡುಕೊಳ್ಳುವ ನಿಟ್ಟಿನಲ್ಲಿ ಆರಂಭದಿಂದಲೂ ಪ್ರಯತ್ನ ನಡೆಸುತ್ತಿದ್ದಾರೆ.

ಕೊಡಗಿನಲ್ಲಿ ಸುಮಾರು ೧ ಸಾವಿರ ಆನೆಗಳಿದ್ದು, ಈ ಪೈಕಿ ೨೦೦ಕ್ಕಿಂತ ಅಧಿಕ ಆನೆಗಳು ಕಾಡಿನಿಂದ ಹೊರಗೆ ಬದುಕುತ್ತಿವೆ. ವಿರಾಜಪೇಟೆ ತಾಲ್ಲೂಕು ಒಂದರಲ್ಲೇ ೬೦ರಿಂದ ೭೦ ಆನೆಗಳು ಕಾಡಿನಿಂದ ಹೊರಗಿವೆ. ಆನೆಗಳು ಜನವಸತಿ ಪ್ರದೇಶ ಹಾಗೂ ಕೃಷಿ ಭೂಮಿ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ.

ಇದೀಗ ೨೨ ಕೋಟಿ ರೂ. ಮೊತ್ತದ ವಿಶೇಷ ಅನುದಾನವು ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಿಕ್ಕಿದೆ. ಈ ಮೊತ್ತವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ವಿವಿಧ ಪ್ರದೇಶದ ೧೫ ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಚಾಲನೆಯನ್ನೂ ನೀಡಲಾಗಿದೆ.

ಬಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಕುಟ್ಟಂದಿಯಲ್ಲಿ ೩ ಕಿ. ಮೀ. ಉದ್ದ, ನಾಗರಹೊಳೆ ಆಭಯಾರಣ್ಯ ವ್ಯಾಪ್ತಿಯಲ್ಲಿ ೧೧ ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದ್ದಾರೆ. ಮಡಿಕೇರಿ ವಿಭಾಗದ ದುಬಾರೆ ಮೀಸಲು ಅರಣ್ಯದ ಸರಹದ್ದಿನಲ್ಲೂ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಶಾಶ್ವತವಾಗಿ ವನ್ಯಪ್ರಾಣಿ ಹಾವಳಿ ನಿಯಂತ್ರಿಸಲು ಅಗತ್ಯವಿರುವ ಕಡೆ ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿ ನಿರ್ಮಾಣ ಹಾಗೂ ಆನೆ ಕಂದಕ ನಿರ್ಮಾಣವನ್ನೂ ಮಾಡಲಾಗುತ್ತಿದೆ.

ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿ ನಿರ್ಮಾಣದಿಂದ ಶೇ.೮೦ರಷ್ಟು ಪ್ರಮಾಣದಲ್ಲಿ ವನ್ಯಪ್ರಾಣಿಗಳ ಹಾವಳಿ ನಿಯಂತ್ರಿಸಬಹುದಾಗಿದೆ. ಕಾಡಾನೆ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಜತೆಗೆ ವನ್ಯಪ್ರಾಣಿಗಳಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಲಾಗಿದೆ. ಈ ಯೋಜನೆಯಲ್ಲಿ ಸಾರ್ವಜನಿಕರ ಸಹಯೋಗವನ್ನೂ ಬಳಸಿಕೊಳ್ಳಲಾಗುತ್ತಿದೆ.

೧೭ ತಂಡಗಳ ರಚನೆ : ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಕಾಡಂಚಿನ ಪ್ರದೇಶದಲ್ಲಿ ಸುಮಾರು ೧೮೨ ಗ್ರಾಮಗಳು ಇವೆ. ಈ ಭಾಗದಲ್ಲಿ ವನ್ಯಪ್ರಾಣಿಗಳ ಚಲನವಲನಗಳ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದೆ. ಅರಣ್ಯ ಇಲಾಖೆಯಿಂದ ೧೭ ತಂಡಗಳನ್ನು ರಚಿಸಲಾಗಿದ್ದು, ಸ್ಥಳೀಯರಿಗೆ ಎಸ್‌ಎಂಎಸ್ ಮೂಲಕ ವನ್ಯಪ್ರಾಣಿಗಳ ಚಲನವಲನದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ೧೬,೮೦೦ ಜನರಿಗೆ ಈ ರೀತಿ ಎಸ್‌ಎಂಎಸ್ ಹೋಗುತ್ತಿದೆ. ಈ ವರ್ಷ ೫ ಕೋಟಿ ರೂ. ಬೆಳೆ ಪರಿಹಾರ ವಿತರಿಸಲಾಗಿದೆ. ಇನ್ನೂ ೧ ಕೋಟಿ ರೂ. ಬೆಳೆ ಪರಿಹಾರ ವಿತರಿಸಲು ಬಾಕಿ ಇದೆ.

” ಕೊಡಗಿನಲ್ಲಿ ವನ್ಯಪ್ರಾಣಿ ಹಾವಳಿ ತಡೆಯಲು ಸರ್ಕಾರ ಹಲವು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಿದೆ. ಆ ನಿಟ್ಟಿನಲ್ಲಿ ನಾಗರಿಕರು, ಅಧಿಕಾರಿಗಳು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ವನ್ಯಪ್ರಾಣಿ ಹಾವಳಿ ನಿಯಂತ್ರಿಸುವಲ್ಲಿ ಅಗತ್ಯ ಕ್ರಮಕೈಗೊಂಡು ಮಾನವರ ಪ್ರಾಣ ಉಳಿಸುವುದು, ಬೆಳೆ ಹಾನಿ ತಡೆಯುವುದು ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿ ಗಮನಕ್ಕೆ ತಂದಾಗ ೨೨ ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೆ ಮಂಜೂರಾತಿ ಕೊಟ್ಟಿದ್ದಾರೆ.”

-ಎ.ಎಸ್.ಪೊನ್ನಣ್ಣ, ಶಾಸಕ, ವಿರಾಜಪೇಟೆ

” ವನ್ಯಜೀವಿ ಮತ್ತು ಮಾನವ ಸಂಘರ್ಷವನ್ನು ತಡೆದು ಶಾಶ್ವತವಾಗಿ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ. ಈ ನಿಟ್ಟಿನಲ್ಲಿ ವಿರಾಜಪೇಟೆ ಶಾಸಕ ಎ. ಎಸ್.ಪೊನ್ನಣ್ಣ ವಿಶೇಷ ಕಾಳಜಿ ತೋರಿಸುತ್ತಿದ್ದಾರೆ. ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಅವರು ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರ ಗಮನಕ್ಕೆ ತಂದಿದ್ದಾರೆ. ದಶಕಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರಯತ್ನಿಸಲಾಗುತ್ತಿದೆ.”

– ಸಂಕೇತ್ ಪೂವಯ್ಯ, ಸದಸ್ಯರು, ರಾಜ್ಯ ವನ್ಯಜೀವಿ ಮಂಡಳಿ

Tags:
error: Content is protected !!