Andolana originals

‘ಚಂದಕವಾಡಿ ಶಾಲಾ ಕಟ್ಟಡ ಕಾಪಾಡಿ’

ರಾಜೇಶ್ ಬೆಂಡರವಾಡಿ

೧೨೧ ವರ್ಷಗಳ ಹಿಂದಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವರ್ಷದಿಂದ ವರ್ಷಕ್ಕೆ ಮೇಲ್ದರ್ಜೆಗೆ

ಚಾಮರಾಜನಗರದಿಂದ ಕೇವಲ ೮ ಕಿಮೀ ದೂರದ ಚಂದಕವಾಡಿ ಗ್ರಾಮದಲ್ಲಿರುವ ಶತಮಾನ ಪೂರೈಸಿ ರುವ ಸರ್ಕಾರಿ ಶಾಲೆ ವರ್ಷದಿಂದ ವರ್ಷಕ್ಕೆ ಮೇಲ್ದರ್ಜೆಗೆ ಏರಿಕೆಯಾಗಿ ಸಂತಸ ಮೂಡಿಸಿದ್ದರೆ ಶಾಲೆಯ ಮೂಲ ಕೊಠಡಿಗಳು ದುಸ್ಥಿತಿಯ ಹಾದಿ ಹಿಡಿದಿರುವುದು ಬೇಸರ ಮೂಡಿಸಿದೆ!

ಹೋಬಳಿ ಕೇಂದ್ರವಾಗಿರುವ ಈ ಗ್ರಾಮದಲ್ಲಿ ೧೯೦೫ರಲ್ಲಿಯೇ ಶಾಲೆ ಪ್ರಾರಂಭವಾಗಿದೆ. ಸರಿ ಸುಮಾರು೧೨೧ ವರ್ಷಗಳ ಇತಿಹಾಸ ಈ ಶಾಲೆಗಿದೆ. ಇಂತಿಪ್ಪ ಶಾಲೆಯ ೯ ಹಳೆಯ ಕೊಠಡಿಗಳ ಪೈಕಿ ಒಂದು ಕೊಠಡಿ ಮಾತ್ರ ಸುಸಜ್ಜಿತವಾಗಿದ್ದು, ಮೂರು ಕೊಠಡಿಗಳು ಸಣ್ಣ- ಪುಟ್ಟ ದುರಸ್ತಿಯನ್ನು ಎದುರು ನೋಡುತ್ತಿವೆ. ಇನ್ನೈದು ಕೊಠಡಿಗಳ ಆಯುಷ್ಯ ಯಾವಾಗ ಏನೋ? ಎಂಬಂತಿದೆ. ಮಳೆ ಬಂದರೆ ನೀರು ಸೋರಿಕೆಯಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಈಗಲೇ ಎಚ್ಚೆತ್ತು, ಮೂಲ ಸ್ವರೂಪಕ್ಕೆ ಧಕ್ಕೆಯಾಗ ದಂತೆ ನವೀಕರಣ ಮಾಡಿದರೆ ನೂರಾರು ವರ್ಷಗಳ ಇತಿಹಾಸದ ಈ ಹಳೆಯ ಶಾಲಾ ಕಟ್ಟಡವನ್ನು ಉಳಿಸಬಹುದು. ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನೂ ತಪ್ಪಿಸಬಹುದು. ವಿಳಂಬ ಮಾಡಿದರೆ ಹಳೆಯ ಕಟ್ಟಡ ಮರೆಯಾಗುವ ದಿನಗಳು ದೂರವಿಲ್ಲ.

ಆ ದಿನಗಳಲ್ಲಿ ೧ರಿಂದ ೪ನೇ ತರಗತಿ ತನಕ ಶಾಲೆ ಇದ್ದುದು ಈ ಭಾಗದಲ್ಲಿ ಇಲ್ಲಿ ಮಾತ್ರ. ಸುತ್ತಮುತ್ತಲಿನ ೧೮ರಿಂದ ೨೦ ಗ್ರಾಮಗಳವರಿಗೆ ಇದು ಆಗ ಶಿಕ್ಷಣ ಗಂಗೋತ್ರಿಯಂತಿತ್ತು. ೧೯೫೦ರಲ್ಲಿ ೬,೭ನೇ ತರಗತಿಗಳೂ ಆರಂಭವಾಗಿ ಉನ್ನತೀಕರಿಸಲ್ಪಟ್ಟಿತು. ಆವಾಗ ೧೫೦ ಮಕ್ಕಳು ಕಲಿಯುತ್ತಿದ್ದರು. ಬಳಿಕ ಈ ಶಾಲೆ ಬಳಿಯೇ ಹಂತ ಹಂತವಾಗಿ ಪ್ರೌಢ ಶಾಲೆ, ಪಿಯು ಕಾಲೇಜು ಕೂಡ ಆರಂಭವಾಗಿತ್ತು. ಎಲ್ಲ ವರ್ಗದವರ ಅವಲಂಬನೆಯ ಶಾಲೆ ಇದಾಗಿತ್ತು. ದಡದಹಳ್ಳಿ, ಬಸಪ್ಪನಪಾಳ್ಯ, ಸರಗೂರು, ಹುರಳಿನಂಜನಪುರ, ಹಂಚಿತಾಳಪುರ, ಹರಳೀಪುರ, ಕೊಕ್ಕನಹಳ್ಳಿ, ಮಲ್ಲೇದೇವನಹಳ್ಳಿ, ಅಮ್ಮನಪುರ, ಅಯ್ಯನಪುರ ಹೀಗೆ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಈ ಶಾಲೆಗೆ ಬರುತ್ತಿದ್ದರು. ಇಷ್ಟೂ ಗ್ರಾಮಗಳ ಮಕ್ಕಳು ಪ್ರಸ್ತುತ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಿಕ್ಷಣವನ್ನು ತಮ್ಮೂರಿನ ಶಾಲೆಗಳಲ್ಲಿಯೇ ಪಡೆಯುತ್ತಿದ್ದಾರೆ. ಆದರೂ ಬಹಳ ಮಂದಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ-ಯುಕೆಜಿ), ಪ್ರೌಢ ಮತ್ತು ಕಾಲೇಜು ಶಿಕ್ಷಣ ಪಡೆಯಲು ಈ ಶತಕಾಲದ ಶಾಲೆಯ ಹಳೆಕಟ್ಟಡದ ಪ್ರಾಂಗಣದ ಪಕ್ಕದಲ್ಲೇ ೨೦೧೭-೧೮ನೇ ಸಾಲಿನಲ್ಲಿ ಶುರುವಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಓದಲು ಈಗಲೂ ಬರುತ್ತಿದ್ದಾರೆ. ಅಂದಿನ ಕಿರಿಯ ಪ್ರಾಥಮಿಕ ಶಾಲೆಯನ್ನು ಮೂಲವಾಗಿರಿಸಿಕೊಂಡು ಕೆಪಿಎಸ್ ಶಾಲೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿ ಎಲ್‌ಕೆಜಿಯಿಂದ ಪಿಯುಸಿವರೆಗಿನ ಒಟ್ಟು ಮಕ್ಕಳ ಸಂಖ್ಯೆ ಪ್ರಸ್ತುತ ೧೦೬೨ಕ್ಕೆ ತಲುಪಿದೆ. ಕನ್ನಡದೊಂದಿಗೆ ಇಂಗ್ಲಿಷ್ ಮಾಧ್ಯಮವೂ ಚಾಲ್ತಿಯಲ್ಲಿದೆ. ಎರಡೂ ಮಾಧ್ಯಮದ ತರಗತಿಗಳನ್ನು ಬೇರೆ ಬೇರೆಯಾಗಿ ನಿರ್ವಹಿಸಲಾಗುತ್ತಿದೆ.

ಗಡಿ ಜಿಲ್ಲೆಯಾದ ಇಲ್ಲಿ ಶತಮಾನ ಪೂರೈಸಿರುವ ೩೫ ಶಾಲೆಗಳಿವೆ. ಅದರಲ್ಲಿ ಕೆಲವು ಶಾಲೆಗಳ ಹಳೆಕಟ್ಟಡಗಳುಹೇಳ ಹೆಸರಿಲ್ಲದಂತೆ ಮರೆಯಾಗಿವೆ. ಕೆಲವೊಂದು, ಶತಮಾನದ ಶಾಲೆಯ ಕುರುಹು ಉಳಿಸಿಕೊಂಡಿದ್ದು ಅದರಲ್ಲಿ ಚಂದಕವಾಡಿ ಶಾಲೆಯೂ ಒಂದಾಗಿದೆ. ಶತಮಾನದ ಶಾಲೆಗಳಿಗೆ ಸರ್ಕಾರ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಿರುವ ಉದಾಹರಣೆಗಳಿದ್ದರೂ ಗ್ರಾಮದ ಈ ಶಾಲೆಗೆ ಅಂತಹ ಯಾವುದೇ ಅನುದಾನ ಇದು ವರೆಗೂ ಬಿಡುಗಡೆಯಾಗಿಲ್ಲ. ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿರುವ ಈ ಶಾಲೆಗೆ ಒಂದೇ ಒಂದು ‘ಸ್ಮಾರ್ಟ್ ಕ್ಲಾಸ್’ ಕೊಠಡಿ ಇರುವುದು ದೊಡ್ಡ ಅಣಕವೇ ಸರಿ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪೀಠೋಪಕರಣಗಳಿಲ್ಲದೇ ನೆಲದ ಮೇಲೆ ಕೂರಿಸಲಾಗುತ್ತಿದೆ.

ಗ್ರಂಥಾಲಯ, ವ್ಯವಸ್ಥಿತ ಪ್ರಯೋಗಾಲಯಗಳದ್ದೂ ಕೊರತೆ. ಶಾಲಾ ಸುತ್ತು ಗೋಡೆ ಅಪೂರ್ಣವಾಗಿಯೇ ಉಳಿದಿದೆ! ವಿಶಾಲ ಮೈದಾನದಲ್ಲಿ ಆಟೋಟಕ್ಕೆ ಅಡ್ಡಿಯಾಗಿರುವ ಬಂಡೆ ಕಲ್ಲುಗಳನ್ನು ತೆರವು ಮಾಡಬೇಕಿದೆ. ನೀರಿನ ವ್ಯವಸ್ಥೆ ಇದ್ದರೂ ಅದು ಕುಡಿಯಲು ಯೋಗ್ಯಇಲ್ಲದ ಕಾರಣಕ್ಕೆ ಶುದ್ಧ ನೀರಿನ ಘಟಕವನ್ನು ಜರೂರಾಗಿ ಮಾಡಬೇಕಿದೆ. ಹೆಣ್ಣು, ಗಂಡು ಮಕ್ಕಳ ಶೌಚಾಲಯಗಳು ಈಗ ಇರುವು ದಕ್ಕಿಂತಲೂ ಎರಡು ಪಟ್ಟು ಹೆಚ್ಚಾಗಬೇಕಿದೆ. ಇದೆಲ್ಲವೂ ಆದರೆ ಶತಮಾನ ಶಾಲೆಯ ಕಲಿಕೆಯ ಮಾಪನ,ಗುಣಮಟ್ಟ ಇನ್ನಷ್ಟು ಉತ್ತಮವಾಗುವುದರಲ್ಲಿ, ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಈ ದಿನಗಳಲ್ಲಿ ಈ ಶಾಲೆ ಮಾದರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

” ೧೯೯೦ರ ದಶಕದಲ್ಲಿ ೫, ೬, ೭ನೇ ತರಗತಿಗಳನ್ನು ಇದೇ ಶಾಲೆಯಲ್ಲಿ ಓದಿದೆ. ಜ್ಯೋತಿಗೌಡನಪುರ, ಕುಂಭೇಶ್ವರ ಕಾಲೋನಿ, ಕಾಗಲವಾಡಿ, ಹುರಳಿನಂಜನಪುರ, ಕೋಡಿಮೋಳೆ, ಬಸವನಪುರ ಮೊದಲಾದ ಗ್ರಾಮಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದರು. ತರಗತಿಗಳು ತುಂಬಿರುತ್ತಿದ್ದವು.”

-ಚಂದಕವಾಡಿ ನಾಗೇಂದ್ರಸ್ವಾಮಿ, ಹಳೆಯ ವಿದ್ಯಾರ್ಥಿ

” ಈ ಶಾಲೆಯಲ್ಲಿ ಓದಿದ ದಿನಗಳನ್ನು ನೆನೆಸಿಕೊಂಡರೆ ಖುಷಿಯಾಗುತ್ತದೆ. ಹಲವಾರು ಗ್ರಾಮಗಳಿಂದ ಬಹುತೇಕ ಎಲ್ಲರೂ ನಡೆದೇ ಶಾಲೆಗೆ ಬರುತ್ತಿದ್ದೆವು. ಶಿಕ್ಷಕರು ಬದ್ಧತೆಯಿಂದ ಪಾಠ ಮಾಡುತ್ತಿದ್ದ ರೀತಿ ಜೀವನದಲ್ಲಿ ಮರೆಯುವಂತ್ತಿಲ್ಲ.”

-ಅಯ್ಯನಪುರ ಶಿವಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷರು ಹಾಗೂ ಹಳೇ ವಿದ್ಯಾರ್ಥಿ

” ಶಾಲೆ ಪ್ರಾರಂಭವಾಗಿರುವುದು ೧೯೦೫ರಲ್ಲಿ. ಗಾರೆ ಬಳಸಿ ನಿರ್ಮಿಸಿರುವ ಕಟ್ಟಡವಿದು. ಶಾಲೆಯ ಅಭಿವೃದ್ಧಿಗೆ ಇಲಾಖೆ ಕ್ರಮ ವಹಿಸಿದೆ. ದಾನಿಗಳು, ಹಳೇ ವಿದ್ಯಾರ್ಥಿಗಳು ಕೈ ಜೋಡಿಸಿದರೆ ಒಳ್ಳೆಯದು.”

-ವಿ.ಮಹದೇವಸ್ವಾಮಿ, ಮುಖ್ಯ ಶಿಕ್ಷಕರು

” ಶಾಲಾ ಕಟ್ಟಡದ ಬಗ್ಗೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಆಸಕ್ತಿ ವಹಿಸಿ ಸಿಎಸ್‌ಆರ್ ನಿಧಿಯಿಂದ ಅನುದಾನ ಕೊಡಿಸುವುದಾಗಿ ತಿಳಿಸಿದ್ದಾರೆ. ಏನೇನು ಅವಶ್ಯಕತೆ ಇದೆ ಎಂಬ ಬಗ್ಗೆ ವರದಿ ಕೇಳಿದ್ದು, ಅದನ್ನು ಅವರಿಗೆ ಕಳಿಸುತ್ತೇವೆ.”

-ಹನುಮಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ

” ಶತಮಾನ ದಾಟಿರುವ ಶಾಲಾ ಕೊಠಡಿಗಳಲ್ಲಿ ೬, ೭ನೇ ತರಗತಿಯ ಕನ್ನಡ, ಇಂಗ್ಲಿಷ್ ಮಾಧ್ಯಮದ ಮಕ್ಕಳು ಪ್ರತ್ಯೇಕವಾಗಿ ಕಲಿಯುತ್ತಿದ್ದಾರೆ. ಪ್ರತಿ ತರಗತಿಗೆ ಎರಡರಂತೆ ೪ ಸೆಕ್ಷನ್‌ಗಳಲ್ಲಿ ೧೪೦ ಮಕ್ಕಳು ಓದುತ್ತಿದ್ದಾರೆ. ಈ ಶಾಲೆಯಲ್ಲಿ ಕೆಲಸ ಮಾಡಲು ತುಂಬಾ ಖುಷಿಯಾಗುತ್ತಿದೆ.”

-ಎಚ್.ಎಸ್.ಮಹೇಶ್, ಸಹಶಿಕ್ಷಕರು

ಶಾಲೆಯ ಹೆಮ್ಮೆ:  ಇಲ್ಲಿ ಓದಿದವರು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಜಕೀಯ ಇನ್ನಿತರ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಅವರಿಗೆಲ್ಲಾ ತಾವು ಓದಿದ ಶಾಲೆ ಎಂಬ ಹೆಮ್ಮೆ ಇದೆ.

ಆಂದೋಲನ ಡೆಸ್ಕ್

Recent Posts

ಲಕ್ಕುಂಡಿಯಲ್ಲಿ ಮುಂದುವರಿದ ಉತ್ಖನನ ಕಾರ್ಯ: ಐತಿಹಾಸಿಕ ಕುರುಹುಗಳು ಪತ್ತೆ

ಗದಗ: ಕಳೆದ ಮೂರು ದಿನಗಳಿಂದ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಈಗಾಗಲೇ ಶಿವಲಿಂಗ ಮತ್ತು ಪಾಣಿಪೀಠದಂತಹ…

32 mins ago

ಬ್ಯಾಲೆಟ್‌ ಪೇಪರ್‌ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ: ಚುನಾವಣೆ ಆಯುಕ್ತ ಸಂಗ್ರೇಶ್‌

ಬೆಂಗಳೂರು: ಮುಂಬರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳು ಬ್ಯಾಲೆಟ್…

38 mins ago

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾ.ರಾ.ಮಹೇಶ್‌ ಸ್ಪರ್ಧೆ ವಿಚಾರ: ಶಾಸಕ ಜಿ.ಟಿ.ದೇವೇಗೌಡ ಮೊದಲ ಪ್ರತಿಕ್ರಿಯೆ

ಮೈಸೂರು: 2028ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾಜಿ ಸಚಿವ ಸಾ.ರಾ.ಮಹೇಶ್‌ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ವಿಚಾರಕ್ಕೆ…

1 hour ago

ಹುಣಸೂರು| ಅರಣ್ಯಕ್ಕೆ ಬೆಂಕಿ: 30 ಎಕರೆ ಕುರುಚಲು ಕಾಡು ನಾಶ

ಹುಣಸೂರು: ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಸೊಳ್ಳೆಪುರ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಗೆ ಸುಮಾರು 30 ಎಕರೆ ಕುರುಚಲು…

2 hours ago

ಬಿಗ್ ಬಾಸ್ ಗೆದ್ದ ಗಿಲ್ಲಿ ನಟನನ್ನು ಅಭಿನಂದಿಸಿದ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಗಿಲ್ಲಿ ನಟ ಎಂದೇ…

2 hours ago

ಮೈಸೂರು| ಮಹಿಳಾ ಅಧಿಕಾರಿಗೆ ಧಮ್ಕಿ ಪ್ರಕರಣ: 20 ಎಕರೆ ಒತ್ತುವರಿ ಜಾಗ ಸರ್ಕಾರದ ವಶಕ್ಕೆ

ಮೈಸೂರು: ಮಹಿಳಾ ಅಧಿಕಾರಿಗೆ ವ್ಯಕ್ತಿಯೊಬ್ಬ ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಎಕರೆ ಒತ್ತುವರಿ ಜಾಗವನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ.…

4 hours ago