Andolana originals

ಸಂಕ್ರಾಂತಿ: ಮಾರುಕಟ್ಟೆಯಲ್ಲಿ ಖರೀದಿ ಸಡಗರ

ಎಚ್.ಎಸ್.ದಿನೇಶ್ ಕುಮಾರ್

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ; ಸ್ವಲ್ಪ ದುಬಾರಿಯಾದ ಅವರೆಕಾಯಿ, ೫೦ ರೂ.ಮುಟ್ಟಿದ ಸೇವಂತಿಗೆ 

ಮೈಸೂರು: ನಗರದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಡಗರ-ಸಂಭ್ರಮ ಜೋರಾಗಿದೆ. ಹಬ್ಬಕ್ಕೆ ಎರಡು ದಿನಗಳು ಉಳಿದಿರುವಂತೆಯೇ ಮಂಗಳವಾರ ದೇವರಾಜ ಮಾರುಕಟ್ಟೆ, ಅಗ್ರಹಾರ, ಚಿಕ್ಕ ಮಾರುಕಟ್ಟೆ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಜನ ಜಾತ್ರೆಯೇ ನೆರೆದಿತ್ತು. ಹೂವು, ಹಣ್ಣು, ಎಳ್ಳು, ಬೆಲ್ಲ, ಕಬ್ಬು ಖರೀದಿಗಾಗಿ ಜನರು ಮುಗಿಬಿದ್ದಿದ್ದರು.

ಸಂಕ್ರಾಂತಿ ಸಮೃದ್ಧಿಯ ಸಂಕೇತ. ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು ಎಂಬುದು ಹಿರಿಯರ ಪ್ರೀತಿಯ ಸಲಹೆ. ಹೀಗಾಗಿ ಹಬ್ಬದ ಅಂಗವಾಗಿ ಬಂಧುಗಳು, ಸ್ನೇಹಿತರು ಹಾಗೂ ಹಿತೈಷಿಗಳ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ, ಕಬ್ಬು ವಿನಿಮಯ ಮಾಡಿಕೊಳ್ಳುವ ಮೂಲಕ ಆತ್ಮೀಯ ಸಂಬಂಧಗಳಿಗೆ ಒತ್ತು ನೀಡುವ ಹಬ್ಬವಿದು. ಹೀಗಾಗಿ ಹಬ್ಬದ ಆಚರಣೆ ಸಂಬಂಧ ನಗರದ ಮಾರುಕಟ್ಟೆ ಸೇರಿದಂತೆ ಎಲ್ಲ ಬಡಾವಣೆಗಳ ಪ್ರಮುಖ ವೃತ್ತಗಳಲ್ಲಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿರುವುದು ಕಂಡು ಬಂದಿತ್ತು.

ಈ ಬಾರಿ ಬೆಲೆಗಳು ತುಸು ಹೆಚ್ಚಾದರೂ ಕೂಡ ಜನರ ಮೊಗದಲ್ಲಿ ಹಬ್ಬದ ಉತ್ಸಾಹ ಮಾತ್ರ ಕುಗ್ಗಿಲ್ಲ. ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾರುಕಟ್ಟೆಗೆ ತೆರಳಿ ಚೌಕಾಸಿ ಮಾಡುವ ಮೂಲಕ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಸಂತಸದಿಂದಲೇ ಖರೀದಿಸುತ್ತಿದ್ದುದು ಕಂಡುಬಂದಿತು.

ಹುರಿದ ಕಡಲೇಬೀಜ ಕೆ.ಜಿ.ಗೆ೧೬೦ ರೂ.: ಹಬ್ಬದ ಅಂಗವಾಗಿ ಹುರಿದ ಕಡಲೆ ಬೀಜ ಕೆಜಿಗೆ ೧೬೦ ರೂ.ನಿಂದ ೧೮೦ ರೂ.ಗಳವರೆಗೆ ಮಾರಾಟವಾಯಿತು. ಜೊತೆಗೆ ಕತ್ತರಿಸಿದ ಬೆಲ್ಲ ಕೆಜಿಗೆ ೧೦೦ ರೂ.ರಿಂದ ೧೪೦ ರೂ., ಕತ್ತರಿಸಿದ ಕೊಬ್ಬರಿ ಕೆಜಿಗೆ ೫೫೦ ರೂ.ನಿಂದ ೬೦೦ ರೂ., ಹುರಿಗಡಲೆ ಕೆಜಿಗೆ ೧೩೫ ರೂ., ಸಕ್ಕರೆ ಅಚ್ಚು ಕೆಜಿಗೆ ೧೦೦ ರೂ.ಗಳಿಂದ ೧೫೦ ರೂ. ಗಳವರೆಗೂ ಮಾರಾಟವಾದವು. ರಾಶಿ, ರಾಶಿ ಕಬ್ಬು: ಸಂಕ್ರಾಂತಿ ಹಬ್ಬದ ಅಂಗವಾಗಿ ದೇವರಾಜ ಮಾರುಕಟ್ಟೆ, ಅಗ್ರಹಾರ, ಅಶೋಕ ವೃತ್ತ, ಕುವೆಂಪುನಗರ, ವಿವೇಕಾನಂದನಗರ, ಒಂಟಿಕೊಪ್ಪಲು ಸೇರಿದಂತೆ ವಿವಿಧ ಬಡಾವಣೆಗಳ ಪ್ರಮುಖ ವೃತ್ತಗಳಲ್ಲಿ ರೈತರು ಕಬ್ಬನ್ನು ಮಾರಾಟ ಮಾಡುತ್ತಿದ್ದುದು ಕಂಡುಬಂದಿತು. ಒಂದು ಜಲ್ಲೆ ಕಬ್ಬು ೩೦ ರೂ. ಗಳಿಂದ ೩೫ ರೂ.ವರೆಗೂ ಮಾರಾಟವಾಗುತ್ತಿದ್ದುದು ವಿಶೇಷ.

೫೦ ರೂ. ಮುಟ್ಟಿದ ಸೇವಂತಿಗೆ: ಹಬ್ಬವೆಂದರೆ ಅಲ್ಲಿ ಹೂವು ಇರಲೇಬೇಕು. ಹೀಗಾಗಿ ಈ ಬಾರಿ ಸೇವಂತಿಗೆ ಹೂವು ತನ್ನ ಬೆಲೆಯನ್ನು ಹೆಚ್ಚಿಸಿಕೊಂಡಿದೆ. ಕಳೆದ ಮೂರು ದಿನಗಳ ಹಿಂದೆ ಮಾರೊಂದಕ್ಕೆ ೨೦ರಿಂದ ೩೦ ರೂ.ಗೆ ದೊರಕುತ್ತಿದ್ದ ಸೇವಂತಿಗೆ ಮಂಗಳವಾರ ೫೦ ರಿಂದ ೬೦ ರೂ.ಗೆ ಮಾರಾಟವಾಯಿತು. ಉಳಿದಂತೆ ಮಾರುಕಟ್ಟೆಯಲ್ಲಿ ಮಲ್ಲಿಗೆ, ಕಾಕಡ, ಕನಕಾಂಬರ, ಸುಗಂಧರಾಜ, ಗುಲಾಬಿ ಹೂಗಳನ್ನು ಕೂಡ ಸಾರ್ವಜನಿಕರು ಖರೀದಿಸಿದರು.

ಸಂಕ್ರಾಂತಿ ಹಬ್ಬದ ಪ್ರಮುಖ ಆಕರ್ಷಣೆ ಪೊಂಗಲ್, ಹೀಗಾಗಿ ಹಬ್ಬದ ಪ್ರಯುಕ್ತರ ಬಹುತೇಕ ಎಲ್ಲರೂ ಕೂಡ ಅವರೇ ಕಾಯಿಯನು  ಖರೀದಿ ಸುತ್ತಾರೆ. ಕಳೆದ ವರ್ಷ ಕೆಜಿಗೆ ೨೫ರಿಂದ ೩೦ ರೂ.ಗೆ ದೊರಕುತ್ತಿದ್ದ ಅವರೇಕಾಯಿ ಈ ಬಾರಿ ೬೦ ರೂ. ಮುಟ್ಟಿದೆ.

ಕೈಸುಡದ ತರಕಾರಿ: ಹಬ್ಬದ ಪ್ರಯುಕ್ತ ನುಗ್ಗೆ ಹಾಗೂ ಅವರೆಕಾಯಿ ೪೦ರಿಂದ ೬೦ ರೂ. ವರೆಗೆ ಏರಿಕೆಯಾಗಿದೆ ಎಂಬುದನ್ನು ಬಿಟ್ಟರೆ ಇನ್ನಿತರ ತರಕಾರಿಗಳ ಬೆಲೆ ಹೆಚ್ಚಳವಾಗಿಲ್ಲ ಎಂಬುದೇ ಸಮಾಧಾನಕರ ಸಂಗತಿ. ಮಾರುಕಟ್ಟೆಯಲ್ಲಿ ಶುಕ್ರವಾರ ಕೆಜಿ ಕ್ಯಾರೆಟ್‌ಗೆ ೪೦ ರೂ. ಬೀಟ್ ರೂಟ್, ಎಲೆ ಕೋಸು ೩೦ ರೂ., ಹಸಿ ಬಟಾಣಿ, ಬದನೆ, ಹೂ ಕೋಸು ೪೦ರಿಂದ ೫೦ ರೂ., ಬೆಂಡೆಕಾಯಿ ೪೦ ರೂ., ಪಡುವಲಕಾಯಿ, ಸೋರೆಕಾಯಿ, ಹೀರೇಕಾಯಿ ೨೦ರಿಂದ ೨೫ ರೂ., ಉಳಿದಂತೆ ಸೌತೇಕಾಯಿ, ಹಸಿ ಮೆಣಸಿನಕಾಯಿ, ನಿಂಬೆ ಹಣ್ಣು, ಇನ್ನಿತರ ತರಕಾರಿಗಳು  ಅಗ್ಗದ ಬೆಲೆಯಲ್ಲಿ ಮಾರಾಟವಾದವು.

ಪ್ಲಾಸ್ಟಿಕ್ ಡಬ್ಬಗಳಿಗೆ ಬೇಡಿಕೆ…:  ಈ ಹಿಂದೆ ಕಾಗದದ ಕವರ್ ಅಥವಾ ಪ್ಲಾಸ್ಟಿಕ್ ಕವರ್‌ಗಳಲ್ಲಿ ಎಳ್ಳು -ಬೆಲ್ಲವನ್ನು ಹಂಚಲಾಗುತ್ತಿತ್ತು. ಆದರೀಗ ಅವುಗಳ ಜಾಗವನ್ನು ಪ್ಲಾಸ್ಟಿಕ್ ಡಬ್ಬಿಗಳು ಆವರಿಸಿಕೊಂಡಿವೆ. ಹೀಗಾಗಿ ದೇವರಾಜ ಮಾರುಕಟ್ಟೆ, ಶಿವರಾಂಪೇಟೆ, ಅಗ್ರಹಾರ, ವಿದ್ಯಾರಣ್ಯಪುರಂ ಇನ್ನಿತರ ಕಡೆಗಳಲ್ಲಿನ ಪ್ಲಾಸಿಕ್ ಮಾರಾಟ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಡಬ್ಬಿಗಳು ಸಾಕಷ್ಟು ಬಿಕರಿಯಾದವು.

ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಅಂತ್ಯ

5,54,32,314 ಎನ್ಯುಮರೇಷನ್ ಫಾರಂ ಹಂಚಿಕೆ ; ಶೇ.100 ರಷ್ಟು ಡಿಜಿಟಲೀಕರಣ ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)…

5 hours ago

ಮೈಸೂರು | ದಸರಾ ವೇಳೆಗೆ ಫುಟ್‌ಪಾತ್‌ಗಳ ದುರಸ್ತಿಗೆ ಸೂಚನೆ

ಮೈಸೂರು‌ : ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದ್ದು,…

5 hours ago

ಪ.ಬಂಗಾಳ | ಬೆಂಕಿ ಅವಘಡದಲ್ಲಿ ಏಳು ಮಂದಿ ಸಾವು, ಹಲವರು ಗಂಭೀರ

ತಾರಾಪಿತ್ (ಪಶ್ಚಿಮ ಬಂಗಾಳ) : ಬೆಂಕಿ ಅವಘಡದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ…

6 hours ago

ಯಳಂದೂರು | ಚಿರತೆ ದಾಳಿಗೆ ಕರು ಬಲಿ

ಯಳಂದೂರು : ಚಿರತೆ ದಾಳಿಗೆ ಕರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಯರಗಂಬಳ್ಳಿ ಗ್ರಾಮದ ಶೋಭಾ ಕೋಂ…

6 hours ago

ಸಿಡಬ್ಲ್ಯುಎಂಎ ಆದೇಶ ಪಾಲಿಸಿ ; ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧದ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾವೇರಿ ನೀರು ನಿರ್ವಹಣಾ…

7 hours ago

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಚ್1ಎನ್1‌ ಸೋಂಕು ದೃಢ

ಬೆಂಗಳೂರು : ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 (H1N1) ದೃಢಪಟ್ಟಿದ್ದು ಆತಂಕ ಮೂಡಿಸಿದೆ. ಸದ್ಯಕ್ಕೆ ಹೈಸ್ಕೂಲ್ ಮಾತ್ರ…

8 hours ago