ಕೆ.ಬಿ.ರಮೇಶನಾಯಕ
ಬಂಡೀಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆದಾಯಕ್ಕೆ ದೊಡ್ಡ ಹೊಡೆತ
ಮಾನವ-ವನ್ಯಜೀವಿ ಪ್ರಾಣಿಗಳ ನಡುವಿನ ಸಂಘರ್ಷ ತಡೆಗೆ ಸಫಾರಿ ಸ್ಥಗಿತ
ಹೋಮ್ ಸ್ಟೇ, ರೆಸಾರ್ಟ್‌ಗಳ ಕೊಠಡಿಗಳು ಖಾಲಿ ಖಾಲಿ
ಸಫಾರಿಯಿಂದಲೇ ನಿತ್ಯ ಅಂದಾಜು ೧೨ ಲಕ್ಷ ರೂ.ಗೂ ಹೆಚ್ಚು ಸಂಗ್ರಹವಾಗುತ್ತಿದ್ದ ಆದಾಯ
ಮೈಸೂರು: ಕಳೆದ ಕೆಲವು ತಿಂಗಳುಗಳಿನಿಂದ ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಾಗಿರುವ ಹುಲಿ ಉಪಟಳವನ್ನು ನಿಯಂತ್ರಿಸಲು ಬಂಡೀಪುರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರ ಸಫಾರಿಯನ್ನು ಸ್ಥಗಿತ ಮಾಡಿದ್ದರ ಪರಿಣಾಮವಾಗಿ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ವನ್ಯಜೀವಿ ಪ್ರವಾಸೋದ್ಯಮದಿಂದ ರಾಜ್ಯ ಸರ್ಕಾರಕ್ಕೆ ಬರುತ್ತಿದ್ದ ಆದಾಯದ ಮೇಲೆ ಹೊಡೆತ ಬೀಳುವ ಜತೆಗೆ, ಪ್ರವಾಸಿಗರನ್ನೇ ನಂಬಿದ್ದ ಹೋಟೆಲ್, ರೆಸಾರ್ಟ್‌ಗಳು, ಹೋಮ್ ಸ್ಟೇಗಳ ಆದಾಯಕ್ಕೂ ಕತ್ತರಿ ಬಿದ್ದಿದೆ.
ನಿತ್ಯ ಅಂದಾಜು ೧೫ ಲಕ್ಷಕ್ಕೂ ಹೆಚ್ಚು ಸಫಾರಿಯಿಂದ ಬರುತ್ತಿದ್ದ ಆದಾಯವೇಕಳೆದ ಒಂದು ವಾರದಿಂದ ನಿಂತು ಹೋಗಿದೆ. ಮುಂದಿನ ದಿನಗಳಲ್ಲೂ ಸ್ಥಗಿತ ಮುಂದುವರಿದರೆ ಜೆಎಲ್‌ಆರ್ ಕಾರ್ಮಿಕರ ಉದ್ಯೋಗಕ್ಕೂ ಕತ್ತರಿ ಬೀಳುವುದರಿಂದ ನೂರಾರು ಮಂದಿ ನೌಕರರ ಮನದಲ್ಲಿ ಆತಂಕ ಮೂಡಿಸಿದೆ. ದೇಶ-ವಿದೇಶಗಳಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಅರಣ್ಯ ಪ್ರದೇಶ ಹಾಗೂ ವನ್ಯ ಪ್ರಾಣಿಗಳನ್ನು ವೀಕ್ಷಿಸಲೆಂದು ಬಂಡೀಪುರ- ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದಲ್ಲಿ ಸಫಾರಿಯನ್ನು ಆರಂಭಿಸಲಾಗಿತ್ತು. ವರ್ಷದಿಂದ
ವರ್ಷಕ್ಕೆ ಸಫಾರಿಗೆ ಬರುವವರ ಪ್ರಮಾಣ ಹೆಚ್ಚಾಗಿದ್ದರಿಂದ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯು ಪ್ರವಾಸಿಗರಿಗೆ ವಿವಿಧ ರೀತಿಯ ಪ್ಯಾಕೇಜ್‌ಗಳನ್ನು ರೂಪಿಸಿ ಆಕರ್ಷಿಸುವ ಕೆಲಸ ಮಾಡಿದರೆ, ಖಾಸಗಿಯಾಗಿ ಹೋಮ್ ಸ್ಟೇಗಳು, ರೆಸಾರ್ಟ್ ಗಳು ತಲೆಎತ್ತಿದ್ದವು. ವಿಶೇಷವಾಗಿ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿ ಮಾಡಲು ಜೆಎಲ್‌ಆರ್‌ನಲ್ಲಿ ತಿಂಗಳ ಮುನ್ನವೇ ಬುಕಿಂಗ್ ಮಾಡಿಕೊಳ್ಳುವಷ್ಟು ಹೆಸರುವಾಸಿಯಾಗಿತ್ತು. ಆದರೆ, ಬಂಡೀಪುರ, ನಾಗರಹೊಳೆ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿ ಯನ್ನು ವ್ಯವಸ್ಥಿತವಾಗಿ ಹಿಮ್ಮೆಟ್ಟಿಸುವಲ್ಲಿ ಸಫಲವಾದರೂ ಆಗಿಂದಾಗ್ಗೆ ಹುಲಿ ದಾಳಿ ನಡೆಯುತ್ತಿರುವುದು ಅಧಿಕಾರಿಗಳ ನಿದ್ದೆಗೆಡಿಸಿತ್ತು. ಒಂದು ತಿಂಗಳಿಂದ ಎಚ್.ಡಿ.ಕೋಟೆ, ಹೆಡಿಯಾಲ ಭಾಗದಲ್ಲಿ ಹುಲಿಗಳು ಮಾನವನ ಮೇಲೆ ದಾಳಿ ಮಾಡುತ್ತಿರುವುದರಿಂದ ರಾಜ್ಯ ಸರ್ಕಾರ ನವೆಂಬರ್ ೭ರಿಂದ ಸಫಾರಿ ಸ್ಥಗಿತ ಮಾಡಿ ಹೊರಡಿಸಿದ ಆದೇಶದ ಎಫೆಕ್ಟ್ ದಿನ ಕಳೆದಂತೆ ದೊಡ್ಡ ನಷ್ಟಕ್ಕೆ ದಾರಿ ಮಾಡಿಕೊಟ್ಟಿದೆ.
ಅರಣ್ಯ ಇಲಾಖೆ ಮೂಲಗಳ ಪ್ರಕಾರ ಬಂಡೀಪುರ ಸಫಾರಿಯಿಂದಲೇ ನಿತ್ಯ ೨ರಿಂದ ೩ ಲಕ್ಷ, ವಾರಾಂತ್ಯದಲ್ಲಿ ೬ ರಿಂದ ೭ ಲಕ್ಷ ರೂ., ರಜಾದಿನಗಳಲ್ಲಿ ೮ರಿಂದ ೧೦ ಲಕ್ಷ ರೂ.,ಜೆಎಲ್‌ಆರ್‌ಗೆ ದಿನಕ್ಕೆ ೮೦ರಿಂದ ೧.೨೫ ಲಕ್ಷ ರೂ. ಆದಾಯ ಬರುತ್ತಿತ್ತು. ಅದರಲ್ಲೂ ಸರ್ಕಾರಿ ರಜಾ ದಿನಗಳು, ವರ್ಷಾಂತ್ಯ, ಹೊಸವರ್ಷದ ದಿನಗಳು, ದಸರಾ ದಿನಗಳಲ್ಲಿ ಸ-ರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಆದಾಯದಲ್ಲೂ ಏರಿಕೆಯಾಗುತ್ತಿತ್ತು.
ಅದೇ ರೀತಿ ಹುಣಸೂರು ತಾಲ್ಲೂಕಿನ ವೀರನ ಹೊಸಳ್ಳಿ, ಎಚ್.ಡಿ.ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ವಲಯದ ಸಫಾರಿಗೂ ಹೆಚ್ಚಿನ ಜನರು ಬರುತ್ತಿದ್ದರಿಂದ ಒಂದೊಂದು ದಿನ ೮ರಿಂದ ೧೦ಲಕ್ಷ ರೂ. ದಾಟುತ್ತಿತ್ತು ಎಂದು ಹೇಳಲಾಗಿದೆ. ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಅಧಿಕೃತವಾಗಿ ೧೮ ಹೋಮ್ ಸ್ಟೇಗಳು, ೧೫ ರೆಸಾರ್ಟ್‌ಗಳು ಇದ್ದರೆ, ಬಂಡೀಪುರ ಭಾಗದಲ್ಲಿ ೨೦ಕ್ಕೂ ಹೆಚ್ಚು ರೆಸಾರ್ಟ್ಗಳು ಇವೆ. ಈ ಎಲ್ಲಾ ರೆಸಾರ್ಟ್‌ಗಳಲ್ಲೂ ಸಫಾರಿಗೆ ಬಂದವರು ಉಳಿದುಕೊಳ್ಳುತ್ತಿದ್ದರಿಂದಲೇ ವಹಿವಾಟು ನಡೆಯುತ್ತಿತ್ತು. ಆದರೆ, ಈಗ ಸಫಾರಿ ಸ್ಥಗಿತಗೊಂಡಿರುವ ಪರಿಣಾಮವಾಗಿ ಪ್ರವಾಸಿಗರು ಇತ್ತ ಬರುತ್ತಿಲ್ಲ ಎಂಬುದು ಮಾಲೀಕರ ಅಳಲಾಗಿದೆ.
ಜೆಎಲ್‌ಆರ್‌ಗೆ ದೊಡ್ಡ ನಷ್ಟ: ಸಫಾರಿ ಸ್ಥಗಿತ ಮಾಡಿರುವ ಕಾರಣದಿಂದಾಗಿ ಸರ್ಕಾರಿ ಸ್ವಾಮ್ಯದ ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಗೆ ದೊಡ್ಡ ಪೆಟ್ಟು ಬಿದ್ದಿದೆ. ಬಂಡೀಪುರದಲ್ಲಿರುವ ಜೆಎಲ್‌ಆರ್‌ನಲ್ಲಿ ೨೪ ಕೊಠಡಿಗಳು ಇದ್ದು, ನಿತ್ಯ ಶೇ.೯೫ರಷ್ಟು ಭರ್ತಿಯಾಗಿರುತ್ತದೆ. ಒಂದು ಕೊಠಡಿಯಲ್ಲಿ ಇಬ್ಬರಂತೆ ನಿತ್ಯ ೪೮ ಮಂದಿ ಇರುತ್ತಾರೆ. ಅದರಲ್ಲೂ ಒಂದು ತಿಂಗಳ ಮುನ್ನವೇ ಬುಕ್ಕಿಂಗ್ ಮಾಡಿದವರಿಗೆ ಅವಕಾಶ ದೊರೆಯುತ್ತದೆ. ಸಫಾರಿಗಾಗಿಯೇ ಬುಕ್ಕಿಂಗ್ ಮಾಡುವವರಲ್ಲಿ ಶೇ.೯೭ರಷ್ಟು ಇದ್ದು, ಇವರಿಗೆ ತಿಂಡಿ, ಊಟ, ಸಫಾರಿ ಇರುತ್ತದೆ. ಯಾರು ಕೂಡ ಊಟ, ತಿಂಡಿಗಾಗಿ ಬರುವುದಿಲ್ಲ. ಬಂದವರೆಲ್ಲರೂ ಸಫಾರಿಗಾಗಿಯೇ ಬರುತ್ತಿದ್ದರು. ಈಗ ಸ್ಥಗಿತ ಆಗಿರುವ ಕಾರಣ ಬುಕ್ಕಿಂಗ್ ಸ್ಥಗಿತವಾಗಿದೆ.
ಮೈಸೂರಿನಿಂದ ಊಟಿಗೆ ಹೋಗುವ ಪ್ರವಾಸಿಗರಲ್ಲಿ ಅನೇಕರು ಬಂಡೀಪುರದಲ್ಲಿ ಇಳಿದು ಸ-ರಿ ಮಾಡಿ ಹೋಗುತ್ತಿದ್ದರು. ಈಗ ಅವರು ಕೂಡ ಮೈಸೂರಿನಲ್ಲೇ ಊಟ ಮಾಡಿ ನೇರವಾಗಿಊಟಿಯತ್ತ ತೆರಳುತ್ತಿರುವುದು ಕಂಡುಬಂದಿದೆ. ಕಾರ್ಮಿಕರ ವೇತನಕ್ಕೂ ಕೊಕ್ಕೆ: ಜೆಎಲ್‌ಆರ್‌ನಲ್ಲಿ ನೇಮಕಗೊಂಡಿರುವ ಸಿಬ್ಬಂದಿ ಬಿಟ್ಟರೆ ಉಳಿದವರ ವೇತನಕ್ಕೆ ಕೊಕ್ಕೆ ಬಿದ್ದಿದೆ. ಸಿಬ್ಬಂದಿಗೆ ಸರ್ಕಾರಿ ವೇತನ ದೊರೆಯುತ್ತಿದೆ. ಒಂದು ವಾರದಿಂದ ಬೇರೆ ಸಿಬ್ಬಂದಿಗೆ ಊಟ, ತಿಂಡಿ ಕೊಡುವ ಕೆಲಸ ಮಾಡಿದರೂ ಮುಂದೆ ಅದನ್ನೂ ನಿಲ್ಲಿಸಬೇಕಾಗಿದೆ.
ಅದೇ ರೀತಿ ಬೇರೆ ಕಡೆಗಳಲ್ಲಿರುವ ರೆಸಾರ್ಟ್ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರಜೆ ಕೊಟ್ಟು ಊರಿಗೆ ಕಳುಹಿಸಲಾಗಿದೆ. ಹೋಮ್ ಸ್ಟೇಗಳಿಗೆ ಸದ್ಯಕ್ಕೆ ನಷ್ಟವೇನೂ ಇಲ್ಲ. ಏಕೆಂದರೆ ರಾತ್ರಿ ಬಂದವರು ಬೆಳಿಗ್ಗೆ ಹೋಗುತ್ತಾರೆ. ಆದರೆ, ಹೋಟೆಲ್‌ಗಳಿಗೆ ಪ್ರವಾಸಿಗರು ಬಾರದ ಕಾರಣ ಸಂಪೂರ್ಣ ನಷ್ಟವಾಗುತ್ತಿದೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ಹೇಳಿದರು.
” ಸಫಾರಿ ಸ್ಥಗಿತ ಮಾಡಿರುವ ಕಾರಣ ಜೆಎಲ್‌ಆರ್‌ಗೆ ತುಂಬಾ ನಷ್ಟವಾಗುತ್ತಿದೆ. ನಿತ್ಯ ಶೇ.೯೫ರಷ್ಟು ಕೊಠಡಿ ಬುಕ್ಕಿಂಗ್ ಆಗುತ್ತಿದ್ದವು. ಪ್ರವಾಸಿಗರು ಸಫಾರಿಗಾಗಿಯೇ ಬರುತ್ತಿದ್ದರಿಂದಾಗಿ ಆದಾಯ ಬರುತ್ತಿತ್ತು. ಸಫಾರಿಯೇ ಇಲ್ಲದ ಮೇಲೆ ಊಟ, ತಿಂಡಿಗೆ ಯಾರೂ ಬರಲ್ಲ. ಸಫಾರಿ ಸ್ಥಗಿತ ಮುಂದುವರಿದರೆ ಕಷ್ಟವಾಗಬಹುದು.”
-ಪಂಪಾಪತಿ, ವ್ಯವಸ್ಥಾಪಕರು, ಜೆಎಲ್‌ಆರ್ ಬಂಡೀಪುರ.
” ಮಾನವ-ಹುಲಿ ಸಂಘರ್ಷವನ್ನು ತಡೆಯಲು ಸಫಾರಿ ಬಂದ್ ಮಾಡಿರುವುದರಿಂದ ತುಂಬಾ ನಷ್ಟವಾಗುತ್ತಿದೆ. ಕಾರ್ಮಿಕರಿಗೆ ಸಂಬಳ ಕೊಡಲು ದುಡ್ಡಿಲ್ಲದ ಸ್ಥಿತಿಯಲ್ಲಿದ್ದಾರೆ. ಪ್ರವಾಸಿಗರು ಬಂದರೆ ವಹಿವಾಟು ನಡೆಯಲಿದೆ. ಈಗ ನಿಂತಿರುವುದರಿಂದ ಕಷ್ಟವಾಗಿದೆ. ಹತ್ತು, ಹದಿನೈದು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವವರಿಗೆ ಈಗ ಸಮಸ್ಯೆ ಎದುರಾಗಿದೆ.”
-ಜಿ.ವಿ.ಸೀತಾರಾಮ್, ಎಚ್.ಡಿ.ಕೋಟೆ
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…