ಕೃಷ್ಣ ಸಿದ್ದಾಪುರ
ಜಿಲ್ಲಾ ಕೇಂದ್ರಕ್ಕೆ ಸೀಮಿತವಾದ ಸೌಲಭ್ಯ; ೫ ತಾಲ್ಲೂಕು ಕೇಂದ್ರಗಳ ಖಾಸಗಿ ಆಸ್ಪತ್ರೆ ಸೇರ್ಪಡೆಗೆ ಒತ್ತಾಯ
ಸಿದ್ದಾಪುರ: ಜೀವದ ಹಂಗು ತೊರೆದು ಕೆಲಸ ನಿರ್ವಹಿಸುವ ಕಟ್ಟಡ ಕಾರ್ಮಿಕರ ಹಿತ ಕಾಯುವ ಕಾರ್ಮಿಕರ ಕಲ್ಯಾಣ ಮಂಡಳಿಯ ಆರೋಗ್ಯ ಸೌಲಭ್ಯ ಜಿಲ್ಲೆಯ ಗ್ರಾಮೀಣ ಭಾಗದ ಕಾರ್ಮಿಕರಿಗೆ ಕೈಗೆಟುಕದಂತಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕರ ಚಿಕಿತ್ಸಾ ಭಾಗ್ಯ ಎಂಬ ಎರಡು ಬಗ್ಗೆಯ ಸೌಲಭ್ಯವನ್ನು ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ನೀಡಲಾಗುತ್ತಿದೆ. ಇದಕ್ಕಾಗಿ ರಾಜ್ಯದ ಸುಮಾರು ೪,೨೮೦ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಕಲ್ಯಾಣ ಮಂಡಳಿ ನೋಂದಾಯಿಸಿ ಕೊಂಡಿದೆ.
ಇದರಲ್ಲಿ ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಹಾಗೂ ರಾಜರಾಜೇಶ್ವರಿ ಮತ್ತು ಅಶ್ವಿನಿ ಆಸ್ಪತ್ರೆಗಳೂ ಒಳಗೊಂಡಿವೆ. ಇವನ್ನು ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ಆಸ್ಪತ್ರೆಗಳನ್ನು ಈ ಸೌಲಭ್ಯಕ್ಕೆ ನೋಂದಾಯಿಸಿಲ್ಲ. ಮಂಡಳಿಯಿಂದ ನೋಂದಣಿ ಆದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಮಾತ್ರ ಸೌಲಭ್ಯ ಪಡೆಯಲು ಅವಕಾಶವಿದ್ದು, ಈ ಪಟ್ಟಿಗೆ ತಾಲ್ಲೂಕು ವ್ಯಾಪ್ತಿಯ ಸುಸಜ್ಜಿತ ಖಾಸಗಿ ಆಸ್ಪತ್ರೆಗಳನ್ನು ಸೇರ್ಪಡೆ ಮಾಡದೆ ಇರುವುದರಿಂದ ಕಟ್ಟಡ ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಇದನ್ನೂ ಓದಿ: ವಿಷ್ಣು ಜನ್ಮದಿನಾಚರಣೆ | ವಿಷ್ಣು ಸ್ಮಾರಕಕ್ಕೆ ಕುಟುಂಬಸ್ಥರು,ಅಭಿಮಾನಿಗಳಿಂದ ಪೂಜೆ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕರ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕರ ಚಿಕಿತ್ಸಾ ಭಾಗ್ಯ ಎಂಬ ಎರಡು ಬಗೆಯ ಸೌಲಭ್ಯವನ್ನು ಒದಗಿಸುತ್ತಿದೆ. ಕಾರ್ಮಿಕರ ಆರೋಗ್ಯ ಭಾಗ್ಯದಲ್ಲಿ ನೋಂದಾಯಿತ ಕಾರ್ಮಿಕ ಮತ್ತು ಅವಲಂಬಿತರು ಸಾಮಾನ್ಯ ಚಿಕಿತ್ಸಾ ವೆಚ್ಚದ ಭಾಗವಾಗಿ ೩೦೦ ರೂ.ಗಳಿಂದ ೨೦,೦೦೦ ಸಾವಿರ ರೂ. ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಕಾರ್ಮಿಕರ ಚಿಕಿತ್ಸಾ ಭಾಗ್ಯ ಯೋಜನೆಯಲ್ಲಿ ಪ್ರಮುಖ ವೈದ್ಯಕೀಯ ಸೌಲಭ್ಯವನ್ನು ನೀಡುವುದರ ಭಾಗವಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ಫಲಾನುಭವಿ ಹಾಗೂ ಅವಲಂಬಿತರು ಸುಮಾರು ೨ ಲಕ್ಷ ರೂ.ಗಳವರೆಗೆ ಚಿಕಿತ್ಸಾ ಸೌಲಭ್ಯ ಪಡೆಯಲು ಅವಕಾಶವಿದೆ.
ಗುಣಮಟ್ಟದ ಚಿಕಿತ್ಸೆಗಾಗಿ ಕಟ್ಟಡ ಕಾರ್ಮಿಕರು ಖಾಸಗಿ ಆಸ್ಪತ್ರೆಯನ್ನು ಅವಲಂಬಿಸುವುದು ಅನಿವಾರ್ಯವಾಗಿದ್ದು, ಹೊರ ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಮಿಕ ಮಂಡಳಿಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಜಿಲ್ಲೆಯ ತಾಲ್ಲೂಕು ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಇದಕ್ಕೆ ಅವಕಾಶ ನೀಡದೆ ಇರುವುದರಿಂದ ಸುಮಾರು ೧೨,೭೦೦ ನೋಂದಾಯಿತ ಕಾರ್ಮಿಕರು ಸೌಲಭ್ಯ ಪಡೆಯಲು ಹೊರಜಿಲ್ಲೆಯ ಆಸ್ಪತ್ರೆಗಳನ್ನೇ ಅವಲಂಬಿಸುವಂತಾಗಿದೆ.
ಜಿಲ್ಲೆಯ ಲೋಪಮುದ್ರಾ, ವೈವಾಸ್, ಆರ್.ಐ.ಎಚ್.ಪಿ. ಅಮ್ಮತ್ತಿ, ಪಿ.ಎನ್.ಎಂ. ಗೋಣಿಕೊಪ್ಪ, ವಿರಾಜಪೇಟೆ ಅತ್ರೇಯ ಆಸ್ಪತ್ರೆ ಸೇರಿದಂತೆ ತಾಲ್ಲೂಕು ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳನ್ನು ನೋಂದಾಯಿಸಿಕೊಂಡು ಚಿಕಿತ್ಸಾ ಸೌಲಭ್ಯ ಪಡೆಯಲು ಅವಕಾಶ ಮಾಡಿಕೊಟ್ಟಲ್ಲಿ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬುದು ಕಾರ್ಮಿಕರ ಒತ್ತಾಯವಾಗಿದೆ.
” ಹೊರ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಮಿಕರಿಗೆ ಚಿಕಿತ್ಸಾ ಸೌಲಭ್ಯ ಒದಗಿಸುತ್ತಿದ್ದು, ಕೊಡಗು ಜಿಲ್ಲೆಯ ೨ ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದ ಆಸ್ಪತ್ರೆಗಳಲ್ಲಿ ಸೌಲಭ್ಯ ಇಲ್ಲದೇ ಇರುವುದರಿಂದ ಕಟ್ಟಡ ಕಾರ್ಮಿಕರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಕಾರ್ಮಿಕ ಇಲಾಖೆಯನ್ನು ಒತ್ತಾಯಿಸಲಾಗುವುದು. ಹೊರ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ನಂತರ ಪರೀಕ್ಷಾರ್ಥವಾಗಿ ೪ರಿಂದ ೫ ಬಾರಿ ಅಲೆದಾಡಬೇಕಾಗುತ್ತದೆ. ಜಿಲ್ಲೆಯ ಆಸ್ಪತ್ರೆ ನೋಂದಣಿ ಆದಲ್ಲಿ ಹೆಚ್ಚು ಅನುಕೂಲವಾಗುತ್ತದೆ”
-ಕೆ.ವಿ.ಸುನಿಲ್, ಜಿಲ್ಲಾಧ್ಯಕ್ಷರು, ಕಾಫಿನಾಡು ಕಟ್ಟಡ ಕಾರ್ಮಿಕ ಸಂಘಟನೆ (ಎಐಟಿಯುಸಿ)
” ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ವನ್ಯಜೀವಿಗಳ ಉಪಟಳ ಹೆಚ್ಚಿದೆ. ವಾಹನಗಳ ಸಂಖ್ಯೆ ಕಡಿಮೆ ಇದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು ಕಟ್ಟಡ ಕಾರ್ಮಿಕರಿಗೆ ಅಪಘಾತ ಸಂಭವಿಸಿದರೆ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸಬೇಕಿದೆ. ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ತಾಲ್ಲೂಕುವಾರು ಒಂದೊಂದು ಖಾಸಗಿ ಆಸ್ಪತ್ರೆಯನ್ನು ನೋಂದಣಿ ಮಾಡಬೇಕು.”
-ಶಾಜಿ ಮ್ಯಾಥ್ಯು, ಕಟ್ಟಡ ಕಾರ್ಮಿಕ, ಅಮ್ಮತಿ
” ಜಿಲ್ಲೆಯಲ್ಲಿ ಈ ಹಿಂದೆ ಯಾವುದೇ ಆಸ್ಪತ್ರೆ ನೋಂದಣಿ ಆಗದೆ ಕಟ್ಟಡ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯ ಅಶ್ವಿನಿ ಮತ್ತು ರಾಜರಾಜೇಶ್ವರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಒದಗಿಸಲಾಗುತ್ತಿದೆ. ಹೆಚ್ಚಿನ ಆಸ್ಪತ್ರೆಗಳನ್ನು ನೋಂದಾಯಿಸುವಂತೆ ಮನವಿ ಬಂದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು.”
-ಕಾವೇರಿ, ಜಿಲ್ಲಾ ಕಾರ್ಮಿಕ ಅಧಿಕಾರಿ, ಕೊಡಗು
” ಕಳೆದ ೩೫ ವರ್ಷಗಳಿಂದ ಕಟ್ಟಡ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜಿಲ್ಲಾ ಕೇಂದ್ರದಲ್ಲಿ ೨ ಖಾಸಗಿ ಆಸ್ಪತ್ರೆಗಳು ನೋಂದಣಿ ಆಗಿರುವುದನ್ನು ಹೊರತುಪಡಿಸಿದರೆ ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದೇ ಆಸ್ಪತ್ರೆ ನೋಂದಣಿಯಾಗಿಲ್ಲ. ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ವಾಹನ ಸೌಲಭ್ಯ ಕಡಿಮೆಯಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದರಿಂದ ೫ ತಾಲ್ಲೂಕುಗಳ ಖಾಸಗಿ ಆಸ್ಪತ್ರೆಗಳನ್ನೂ ನೋಂದಾಯಿಸಿಕೊಂಡು ಸೌಲಭ್ಯ ಒದಗಿಸಬೇಕು.”
-ಎಂ.ಎಂ. ಶೌಕತ್ ಅಲಿ, ಕಟ್ಟಡ ಕಾರ್ಮಿಕ
ಮೈಸೂರು: ರಂಗವಲ್ಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ: 28.01.2026 ಮತ್ತು 29.01.2026ರ ಸಂಜೆ…
ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡರನ್ನು…
ವಾಷಿಂಗ್ಟನ್: ಅಮೇರಿಕಾದಾದ್ಯಂತ ಬೀಸುತ್ತಿರುವ ಭೀಕರ ಹಿಮಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹಿಮಪಾತ ಹಾಗೂ ಮೈಕೊರೆಯುವ ಚಳಿಗೆ ಇದುವರೆಗೆ ಸುಮಾರು 25ಕ್ಕೂ ಹೆಚ್ಚು…
ಬೆಂಗಳೂರು: ನಟಿ ಕಾವ್ಯಾಗೌಡ ಹಾಗೂ ಆಕೆಯ ಪತಿ ಸೋಮಶೇಖರ್ ಮೇಲೆ ಪತಿ ಸಂಬಂಧಿಕರೇ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ…
ಬೆಂಗಳೂರು: ಅರಬ್ಬಿ ಸಮುದ್ರದ ಮೇಲೆ ತೇವಾಂಶ ಭರಿತ ಮೋಡಗಳು ಹಾದು ಹೋಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸೋಮವಾರ ಮಳೆಯಾಗಿದೆ. ರಾಜಧಾನಿ…
ದಾವಣಗೆರೆ: 2028ಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ. ಈ ಕುರಿತು…