Andolana originals

ಸಫಾರಿಗೆ ರಹದಾರಿ; ವಾದ-ಪ್ರತಿರೋಧ

ಸಫಾರಿ ಪುನಾರಂಭಕ್ಕೆ ಸರ್ಕಾರದ ಆದೇಶ ಹೊರ ಬಿದ್ದ ಬಳಿಕ ರೈತ ಸಂಘಟನೆಗಳ ಆಕ್ರೋಶ ಭುಗಿಲೆದಿದ್ದೆ. ಅಧಿಕಾರಿಗಳು, ಸರ್ಕಾರದ ವಿರುದ್ಧ ರೈತ ನಾಯಕರು ರಣ ಕಹಳೆ ಊದಿ ಸಫಾರಿ ಬಂದ್‌ಗೆ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದಾರೆ. ಆದರೆ, ಸಫಾರಿ ಪುನಾರಂಭದಿಂದ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ ಎಂಬ ವಾದವೂ ಇದೆ. ಸಫಾರಿಯ ಪರವಾಗಿರುವ ಮತ್ತು ವಿರುದ್ಧವಾಗಿರುವ ಇಬ್ಬರು ಮುಖಂಡರ ಇಬ್ಬರ ಅಭಿಪ್ರಾಯಗಳು ಇಲ್ಲಿವೆ.

ಸಫಾರಿಯಿಂದ ಜನರಿಗಾಗಲಿ, ವನ್ಯಜೀವಿಗಳಿಗಾಗಲಿ ತೊಂದರೆಯಿಲ್ಲ 

ಬಿ.ಎಸ್.ಪ್ರಶಾಂತ್, ಅಧ್ಯಕ್ಷ, ಮೈಸೂರು ಟ್ರಾವಲ್ಸ್ ಅಸೋಸಿಯೇಷನ್

ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ನವೆಂಬರ್ ತಿಂಗಳಿನಿಂದ ಸ್ಥಗಿತಗೊಂಡಿದ್ದ ಸಫಾರಿ ಈಗ ಹೊಸ ನಿಯಮಗಳೊಂದಿಗೆ ಪುನರಾರಂಭವಾಗಿದೆ. ಕಳೆದ ಮೂರು ತಿಂಗಳುಗಳಿಂದ ಇಲ್ಲಿನ ಗ್ರಾಮಸ್ಥರು, ಪ್ರವಾಸೋದ್ಯಮಿಗಳು ನೀಡುತ್ತಿದ್ದ ಮನವಿಗಳಿಗೆ ಸರ್ಕಾರ ಓಗೊಟ್ಟಿದೆ. ಇದರ ನಡುವೆ ಸಫಾರಿ ಪುನರಾರಂಭ ಆಗಬಾರದಿತ್ತು ಎನ್ನುವ ಜನರೂ ಇದ್ದಾರೆ. ಅಸಲಿಗೆ ಮಾನವ-ವನ್ಯಜೀವಿ ಸಂಘರ್ಷಕ್ಕೂ, ಸಫಾರಿಗೂ ಸಂಬಂಧ ಇಲ್ಲ. ಬಂಡೀಪುರ ಅರಣ್ಯ ಪ್ರದೇಶ ಸುಮಾರು ೧,೦೩೬ ಚದರ ಕಿ.ಮೀ. ವಿಸ್ತೀರ್ಣದಲ್ಲಿದ್ದರೆ, ನಾಗರಹೊಳೆ ಅರಣ್ಯ ಪ್ರದೇಶ ಸುಮಾರು ೮೪೪ ಚದರ ಕಿ.ಮೀ. ವಿಸ್ತೀರ್ಣದಲ್ಲಿದೆ. ಆದರೆ ಸಫಾರಿ ನಡೆಯುತ್ತಿರುವುದು ಬಂಡೀಪುರದಲ್ಲಿ ೮೦ ಚದರ ಕಿ.ಮೀ. ಹಾಗೂ ನಾಗರಹೊಳೆಯಲ್ಲಿ ೬೩ ಚದರ ಕಿ.ಮೀ. ಮಾತ್ರ. ಸಫಾರಿ ಮಾಡುವ ಜಾಗವನ್ನು ಹೊರತುಪಡಿಸಿ ಇನ್ನೂ ಒಳಗಿನ ದಟ್ಟ ಅರಣ್ಯಕ್ಕೆ ಯಾರೂ ತೊಂದರೆ ಕೊಡುತ್ತಿಲ್ಲ. ಅದೂ ಅಲ್ಲದೆ ಈಗ ಮೊದಲಿನಂತೆ ಕಾಡುಗಳ್ಳರಿಲ್ಲ. ಅರಣ್ಯ ಕಾನೂನುಗಳು ಬಹಳ ಕಠಿಣವಾಗಿವೆ.

ಇದರಿಂದಾಗಿ ಕಾಡಿನ ಒಳಗಿರುವ ವನ್ಯಜೀವಿಗಳು ಬಹಳ ಸುರಕ್ಷಿತವಾಗಿವೆ. ಈ ಕಾರಣದಿಂದ ನೈಸರ್ಗಿಕವಾಗಿ ಕಾಡಿನಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಹುಲಿಗಳು ಪ್ರತಿದಿನ ಕಾಡಿನಿಂದ ಹೊರಗೆ ಬರುವುದಿಲ್ಲ. ವರ್ಷದಲ್ಲಿ ಕೆಲವೇ ಬೇರೆ ಮೇಟಿಂಗ್ ಮತ್ತಿತರ ಕಾರಣಗಳಿಗೆ ಹೊರಗೆ ಬರುತ್ತವೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೇ ಹೊರತು ಸಫಾರಿ ನಿಲ್ಲಿಸುವುದರಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ.

ಮಾನವ ಮತ್ತು ವನ್ಯಜೀವಿ ಸಂಘರ್ಷ ಇಂದು ನಿನ್ನೆಯ ವಿಷಯವಲ್ಲ. ಸಫಾರಿ ಎಂಬ ಪರಿಕಲ್ಪನೆ ನಮ್ಮಲ್ಲಿ ತಲೆದೋರುವ ಮೊದಲಿನಿಂದಲೇ ಈ ಸಮಸ್ಯೆ ಇದೆ. ಇದನ್ನು ಕಡಿಮೆ ಮಾಡಲು ಅರಣ್ಯ ಇಲಾಖೆ ತಜ್ಞರ ಸಲಹೆಯ ಮೇರೆಗೆ ಆಗಿಂದಾಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿರುತ್ತದೆ. ಅಲ್ಲದೆ ಇಷ್ಟು ವರ್ಷಗಳಲ್ಲಿ ಒಂದು ದಿನವೂ ಈ ಭಾಗದಲ್ಲಿ ಸಫಾರಿ ನಡೆಯುವಾಗ ವನ್ಯಜೀವಿಗಳು ಮನುಷ್ಯರ ಮೇಲೆ ದಾಳಿ ಮಾಡಿರುವ ಅಥವಾ ಮನುಷ್ಯರುಮ ವನ್ಯಜೀವಿಗಳ ಮೇಲೆ ಅಟ್ಟಹಾಸ ತೋರಿಸಿರುವ ಘಟನೆಗಳು ವರದಿಯಾಗಿಲ್ಲ.

ಇದರ ಅರ್ಥ ಯಾರಿಗೂ ತೊಂದರೆಯಾಗದಂತೆ ಸಫಾರಿ ನಿಯಮದ ಪ್ರಕಾರ ನಡೆಯುತ್ತಿದೆ. ಇತ್ತೀಚೆಗೆ ನಡೆದ ಘಟನೆಯಿಂದಾಗಿ ಸಫಾರಿ ನಿಲ್ಲಿಸಿದಾಗಲೂ ಪ್ರವಾಸೋದ್ಯಮಿಗಳು ಹೇಳಿದ್ದು, ‘ನಿಯಮಗಳನ್ನು ಕಠಿಣ ಮಾಡಿ, ಯಾರಿಗೂ ತೊಂದರೆ ಯಾಗದಂತೆ ಸಫಾರಿ ಪುನರಾರಂಭಿಸಿ’ ಎಂದು. ಸರ್ಕಾರ ಈ ನಿಟ್ಟಿನಲ್ಲಿ ಎಸ್‌ಒಪಿಗಳನ್ನು, ನಿಯಮ ಗಳನ್ನು ಬಿಗಿಗೊಳಿಸಿ ಸಫಾರಿಯನ್ನು ಮತ್ತೆ ಆರಂಭಿಸಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಯಾವ ತೊಂದರೆಯೂ ಆಗುವುದಿಲ್ಲ ಎಂಬುದು ನಿರ್ವಿವಾದ.

ಕರ್ನಾಟಕದ ಪ್ರವಾಸೋದ್ಯಮ ಇಲಾಖೆ ಬಂಡೀಪುರ ಹಾಗೂ ನಾಗರಹೊಳೆಯನ್ನು, ಕರ್ನಾಟಕದ ವನ್ಯಜೀವಿ ಸಂಪತ್ತನ್ನು ಪ್ರಚುರ ಪಡಿಸುತ್ತಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮಲ್ಲಿನ ವನ್ಯಜೀವಿ ಸಂಪತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಫಾರಿ ನಿಷೇಧಿಸಿದ ಪರಿಣಾಮ ಈ ಭಾಗಕ್ಕೆ ಬರುವ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಯಿತು. ಇದರ ಲಾಭ ಆಗಿದ್ದು ಪಕ್ಕದ ತಮಿಳುನಾಡು ಹಾಗೂ ಕೇರಳಕ್ಕೆ. ಇಲ್ಲಿಗೆ ಬರಬೇಕಿದ್ದ ಪ್ರವಾಸಿಗರು, ವನ್ಯಜೀವಿ ಆಸಕ್ತರು ಮಧುಮಲೈ ಸಫಾರಿಗೆ ಹಾಗೂ ಕೇರಳಕ್ಕೆ ತೆರಳಲು ಶುರು ಮಾಡಿದರು. ಒಮ್ಮೆ ಪ್ರವಾಸಿಗರು ಅಲ್ಲಿನ ಸಫಾರಿಗೆ ಒಗ್ಗಿಬಿಟ್ಟರೆ ಮತ್ತೆ ಇಲ್ಲಿ ಸಫಾರಿ ಪುನರಾರಂಭಿಸಿದರೂ ಯಾರೂ ಬರುವುದಿಲ್ಲ. ಹೀಗಾದರೆ ನಮ್ಮ ಪ್ರವಾಸೋದ್ಯಮ, ಆರ್ಥಿಕತೆ ಮೇಲಾಗುವ ದುಷ್ಪರಿಣಾಮಕ್ಕೆ ಯಾರು ಹೊಣೆ? ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ.

ಸಫಾರಿಯನ್ನೇ ನಂಬಿಕೊಂಡು ನಾಗರಹೊಳೆ ಬಂಡೀಪುರ ಭಾಗದಲ್ಲಿ ಸಾಕಷ್ಟು ಜನರು ಕೋಟಿ ಗಟ್ಟಲೆ ಹಣ ಹೂಡಿಕೆ ಮಾಡಿದ್ದಾರೆ. ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಇದೇರೆಸಾರ್ಟ್, ಹೋಂ ಸ್ಟೇಗಳಿಗೆ ಕೆಲಸಕ್ಕೆ ಹೋಗುವ ಮೂಲಕ, ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಒಮ್ಮೆಲೇ ಸಫಾರಿ ಬಂದ್ ಆದರೆ ಇವರ ಜೀವನೋಪಾಯದ ಕಥೆಯೇನು? ಸಫಾರಿ ಬಂದ್ ಆಗಿದ್ದ ಕಾರಣ ಪ್ರವಾಸಿಗರು ಈಗಾಗಲೇ ಮಾಡಿದ್ದ ಬುಕಿಂಗ್ ರದ್ದು ಮಾಡಿದ್ದರು. ರೆಸಾರ್ಟ್ಮಾಲೀಕರು ಇದರಿಂದ ಭಾರೀ ನಷ್ಟ ಅನುಭವಿಸಿದರು. ಸುತ್ತಮುತ್ತಲ ೭,೫೦೦ಕ್ಕೂ ಹೆಚ್ಚು ಜನರ ಉದ್ಯೋಗಕ್ಕೆ ಕತ್ತರಿ ಬಿದ್ದಿತ್ತು. ದಿನ ನಿತ್ಯ ಹೆಚ್ಚೂಕಡಿಮೆ ೭೫ ಲಕ್ಷ ರೂ. ನಷ್ಟವಾಗು ತ್ತಿತ್ತು. ಈ ಎಲ್ಲ ಆರ್ಥಿಕ ವಹಿವಾಟುಗಳೂ ವಯನಾಡು, ಮಧುಮಲೈ ಕಡೆಗೆ ದಿಕ್ಕು ಬದಲಾಯಿಸು ತ್ತಿದ್ದವು. ಇದೇ ಕಾರಣಕ್ಕೆ ಸಫಾರಿ ಪುನರಾರಾರಂಭಿಸಲು ಅಲ್ಲಿನ ಗ್ರಾಮಸ್ಥರು ಕೂಡ ಒತ್ತಾಯಿಸುತ್ತಿದ್ದರು. ಇದಕ್ಕೂ ಮೀರಿ ಅಲ್ಲಿ ಯಾವುದಾದರೂ ಅನಾಹುತ   ನಡೆಯುತ್ತಿದ್ದರೆ, ರೆಸಾರ್ಟ್‌ಗಳು ಅಥವಾ ಹೋಂ ಸ್ಟೇಗಳು ಕಾಡಿನ ಬಫರ್ ಝೋನ್ ಒಳಗೆ ಬಂದಿದ್ದರೆ ಅದರ ಮೇಲೆ ಸರ್ಕಾರ ಧಾರಾಳವಾಗಿ ಸೂಕ್ತ ಕ್ರಮ  ಕೈಗೊಳ್ಳ ಬಹುದು. ಎಲ್ಲವೂ ನಿಯಮದ ಪ್ರಕಾರ ನಡೆದರೆ ಸಫಾರಿ ಯಿಂದ ಜನರಿಗಾಗಲಿ, ವನ್ಯ ಜೀವಿಗಳಾಗಲಿ,  ಗ್ರಾಮಸ್ಥರಿಗಾಗಲಿ, ಪ್ರವಾಸಿಗರಿಗಾಗಲಿ ಒಂದಿನಿತೂ ತೊಂದರೆಯಾಗುವುದಿಲ್ಲ. ಈಗ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿ ಸಫಾರಿ ಪುನರಾರಂಭಿಸಿದೆ. ಮೊದಲಿಗೆ ಹೋಲಿಸಿದರೆ ಶೇ.೫೦ರಷ್ಟು ವಾಹನಗಳು ಮಾತ್ರ ಸಫಾರಿ ಮಾಡಲಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಶೇ.೮ರಷ್ಟು ಹಾಗೂ ನಾಗರಹೊಳೆಯ ಶೇ.೭.೫ರಷ್ಟು ಅರಣ್ಯ ಪ್ರದೇಶವನ್ನು ಮಾತ್ರ ಸಫಾರಿಗೆ ಬಳಸಲಾಗುತ್ತಿದೆ. ಆದ್ದರಿಂದ ಹುಲಿಗಳು ಕಾಡಿನಿಂದ ನಾಡಿಗೆ ಬರಲುಸಫಾರಿಯೇ ಕಾರಣ ಎಂದು ಹೇಳಲು ವೈಜ್ಞಾನಿಕಆಧಾರಗಳಿಲ್ಲ. ತಾಂತ್ರಿಕ ಸಮಿತಿಯ ವರದಿಯೂ ಇದನ್ನೇ ಹೇಳುತ್ತದೆ. ಸಫಾರಿ ಪುನರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಮೊದಲಿನಂತಾಗುವ ನಿರೀಕ್ಷೆ ಇದೆ.

ಸಫಾರಿಯಿಂದ ಕಾಡು ಪ್ರಾಣಿಗಳ ನೆಮ್ಮದಿ ಭಂಗ 

ಮಂಜು ಕಿರಣ್, ಕಾರ್ಯದರ್ಶಿ, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ

ಕಳೆದ ಆರೇಳು ತಿಂಗಳಿಂದ ನೆಮ್ಮದಿಯಿಂದ ಇದ್ದ ಕಾಡಂಚಿನ ಗ್ರಾಮಗಳ ರೈತರಿಗೆ ಸರ್ಕಾರ ಸಫಾರಿ ಪುನಾರಂಭಿಸುವ ನಿರ್ಧಾರ ಮತ್ತೆ ನಿದ್ದೆಗೆಡಿಸಿದೆ. ಈಗ ಮತ್ತೆ ವನ್ಯಜೀವಿಗಳು ತಂದೊಡ್ಡುವ ಅನಾಹುತದಿಂದ ಬೆಳೆಯನ್ನು ರಕ್ಷಿಸಿಕೊಂಡು ಬದುಕು ಮತ್ತು ಪ್ರಾಣಗಳನ್ನು ಉಳಿಸಿಕೊಳ್ಳಲು ಹೋರಾಡುವ ಅನಿವಾರ್ಯ ಎದುರಾಗಿದೆ.

ರಕ್ಷಿಸಬೇಕಾದವರೇ ಕಾಡನ್ನು ನಾಶಪಡಿಸುವ ಕಾರ್ಯಕ್ಕೆ ಮುಂದಾಗಿರುವುದು ಅಕ್ಷರಶಃ ರೈತರನ್ನು ತಲ್ಲಣಗೊಳಿಸಿದೆ. ಸಫಾರಿ ಪುನಾರಂಭದಿಂದ ಮತ್ತಷ್ಟು ಅಕ್ರಮ ರೆಸಾರ್ಟ್‌ಗಳು ತಲೆ ಎತ್ತಲು ಅವಕಾಶ ದೊರೆತಿದೆ.

೧,೦೩೬ ಚದರ ಕಿಲೋ ಮೀಟರ್ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮತ್ತು ೫೪೪ ಚದರ ಕಿಲೋ ಮೀಟರ್ ನಾಗರಹೊಳೆಯ ಕಾಡಿನ ವಿಸ್ತೀರ್ಣ ಇದೆ. ಇದರಲ್ಲಿ ಕೇವಲ ಶೇ.೬ರಷ್ಟು ಮಾತ್ರ ಸಫಾರಿಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಅರಣ್ಯ ಇಲಾಖೆ ವಾದ ಮಾಡುತ್ತಿದೆ. ಹುಲಿ ಮುಂತಾದ ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗಿ ಕಾಡಿನಿಂದ ಹೊರಬರುತ್ತಿವೆ ಎಂಬ ಸಬೂಬು ಹೇಳುತ್ತಿದ್ದಾರೆ.

ಪ್ರಾಣಿಗಳು ಹೆಚ್ಚಾಗಿರುವುದರಿಂದ ಕಾಡು ಕಡಿಮೆಯಾಗಿದೆ ಎನ್ನುತ್ತಾರೆ. ಆದರೆ, ಕಡಿಮೆಯಾಗಿರುವ ಕಾಡಿನಲ್ಲಿಯೂ ಶೇ.೧೦ರಷ್ಟು ಭೂಮಿಯನ್ನು ಅರಣ್ಯ ಇಲಾಖೆ ಕಬಳಿಸಿ ಸಫಾರಿ ನಡೆಸಲು ಹೊರಟಿರುವುದು ದ್ವಂದ್ವ ನೀತಿಯಾಗಿದೆ.

ಸಫಾರಿ ಮತ್ತೆ ಆರಂಭಿಸುವುದರಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅರಣ್ಯ ಇಲಾಖೆ ಕೆಲ ಅಧಿಕಾರಿಗಳೇ ರೆಸಾರ್ಟ್ ಮಾಲೀಕರು ಮತ್ತು ಇತರೆ ಕಾರ್ಮಿಕರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಇದೆ. ಹುಲಿ, ಚಿರತೆ ಸೇರಿದಂತೆ ಬಹುತೇಕ ವನ್ಯಜೀವಿಗಳು ನಾಚಿಕೆ ಸ್ವಭಾವದ ಪ್ರಾಣಿಗಳು. ಹೊಂಚು ಹಾಕಿ ಬೇಟೆಯಾಡುವ ಪ್ರಾಣಿಗಳು. ಇವು ಹೊಂಚು ಹಾಕಲು ಲಾಂಟನದಂತಹ ಪೊದೆಗಳು ಬೇಕೆ ಬೇಕು. ಹೀಗಾಗಿ ಲಾಂಟನಗಳು ಪ್ರಾಣಿಗಳಿಗೆ ರಕ್ಷಣೆ ಕವಚದಂತೆ. ಆದರೆ, ಅರಣ್ಯ ಇಲಾಖೆ ಲಾಂಟನ ತೆರವುಗೊಳಿಸುವ ಅಭಿಯಾನ ನಡೆಸಲಿದೆ. ಲಾಂಟನ ತೆರವುಗೊಳಿಸಿದರೆ ಕಾಡು ಬಯಲಾಗಲಿದೆ.

ಇದರಿಂದ ಹುಲಿ, ಚಿರತೆಯಂತಹ ಪ್ರಾಣಿಗಳಿಗೆ ಬೇಟೆಯಾಡಲು ಸಾಧ್ಯವಾಗಲ್ಲ. ಲಾಂಟನ ತೆರವುಗೊಳಿಸಲು ಅರಣ್ಯದೊಳಗೆ ಜೆಸಿಬಿ ಅಥವಾ ಲಾರಿಯಂತಹ ದೊಡ್ಡ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ. ನಿಶ್ಶಬ್ದ ವಾತಾವರಣದಲ್ಲಿ ಜೆಸಿಬಿಯ ಕರ್ಕಶ ಶಬ್ದಕ್ಕೆ ಬೆದರುವ ಪ್ರಾಣಿಗಳು ಕಾಡಿನಿಂದ ಹೊರಬಂದು ಸನಿಹದ ಗ್ರಾಮಗಳ ಕುರುಚಲು ಪ್ರದೇಶಗಳಲ್ಲಿ ಬೀಡುಬಿಡುತ್ತವೆ. ನಂತರ ಆಹಾರಕ್ಕಾಗಿ ಜಮೀನಿನಲ್ಲಿ ಕೆಲಸ ಮಾಡುವ ರೈತರು, ಜಾನುವಾರುಗಳ ಮೇಲೆ ದಾಳಿ ಮಾಡುತ್ತವೆ.

ಸಫಾರಿ ನೆಪದಲ್ಲಿ ದಿನದ ಎರಡು ಹೊತ್ತು ೪೦-೫೦ ಜೀಪ್‌ಗಳನ್ನು ಕಾಡಿನೊಳಗೆ ನುಗ್ಗಿಸಿ ಪ್ರಾಣಿಗಳನ್ನು ತಲ್ಲಣಗೊಳಿಸುತ್ತಾರೆ. ಜೀಪಿನ ಶಬ್ದಕ್ಕೆ ಪ್ರಾಣಿಗಳು ಗಾಬರಿಯಾಗಿ ಕಾಡಿನಿಂದ ಹೊರಗೆ ಓಡಲಿವೆ. ವಿಐಪಿ – ವಿವಿಐಪಿ ಮಂದಿ ಬಂದರೆ ಎಲ್ಲ ನೀತಿ-ನಿಯಮ-ಕಾನೂನುಗಳನ್ನು ಗಾಳಿಗೆ ತೂರಿ ಸಫಾರಿಗೆ ಮೀಸಲಿಡದ ಕಾಡಿನೊಳಗೆ ಕರೆದ್ಯೊಯುತ್ತಾರೆ. ಕಾಡು ಮತ್ತು ವನ್ಯಜೀವಿಗಳನ್ನು ಕಾಯಬೇಕಾದ ಅರಣ್ಯ ಇಲಾಖೆ ಯವರು ಹಣದ ಆಸೆಗೆ ವನ್ಯಜೀವಿಗಳಿಗೆ ಕಿರುಕುಳ ನೀಡುತ್ತಾರೆ. ಇವರ ಕಿರುಕುಳದಿಂದ ಬೇಸತ್ತ ವನ್ಯಮೃಗಗಳು ಕಾಡಿನಿಂದ ಹೊರಗೆ ಬಂದು ಬೆಳೆ ನಾಶ ಮಾಡುವ ಜೊತೆಗೆ ಜನರ ಪ್ರಾಣ ತೆಗೆಯುವುದೂ ನಿರಂತರವಾಗಿ ಮುಂದುವರಿದಿದೆ.

ಊರಲ್ಲಿ ಜನರಿರಲಿ, ಕಾಡಿನೊಳಗೆ ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸಿಕೊಂಡು ಇರಲಿ ಎನ್ನುವುದು ರೈತ ಸಂಘಟನೆ ನಾಣ್ಣುಡಿ. ಕಾಡುಪ್ರಾಣಿಗಳನ್ನು ನೋಡುವ ಆಸೆಯಾದರೆ ರಾಜ್ಯದಲ್ಲಿರುವ ಮೃಗಾಲಯಗಳಿಗೆ ತೆರಳಿ ವೀಕ್ಷಿಸಲಿ. ಇದರಿಂದ ಸರ್ಕಾರಕ್ಕೂ ಲಾಭವಾಗಲಿದೆ. ಅದನ್ನು ಬಿಟ್ಟು ವನ್ಯಜೀವಿಗಳನ್ನು ಶೋಷಿ ಸುತ್ತ ಮೋಜು ಮಸ್ತಿ ಮಾಡುವುದು ಎಷ್ಟು ಸರಿ? ಅರಣ್ಯ ಬೆಳೆಸಲು, ವನ್ಯಜೀವಿಗಳನ್ನು ಸಾಕಲು ಯಾರ ಕೊಡುಗೆಯೂ ಅಗತ್ಯ ಇಲ್ಲ. ಪ್ರಕೃತಿಯು ತನ್ನ ಒಡಲಿನಲ್ಲಿ ಮನುಷ್ಯರಂತೆ ಕಾಡುಗಳನ್ನು ಸಲಹಲಿದೆ. ಕಾಡನ್ನು ರಕ್ಷಿಸುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆದರೆ, ಹಣದಾಸೆಗೆ ಪರಿಸರವನ್ನು ಬಂಡವಾಳ ಮಾಡಿ ಕೊಂಡು ದರೋಡೆ ಮಾಡಲು ಹೊರಟಿರುವವರನ್ನು ತಡೆಯಲು ಸರ್ಕಾರ ಮುಂದಾಗಬೇಕಿದೆ.

ಅರಣ್ಯದೊಳಗೆ ವಿಹರಿಸಿಕೊಂಡು ಆರಾಮವಾಗಿರುವ ಕಾಡು ಪ್ರಾಣಿಗಳು ಸ-ರಿ ಮೂಲಕ ತಮ್ಮನ್ನು ನೋಡಲು ಬರುತ್ತಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆಯಾ?

ಹೋರಾಟ ತೀವ್ರ: ರೈತನ ಪ್ರಾಣ ಮತ್ತು ಬದುಕನ್ನು ಉಳಿಸುವ ಉದ್ದೇಶದಿಂದ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕಳೆದ ಆರು ತಿಂಗಳುಗಳಿಂದ ಸಫಾರಿ ಬಂದ್ ಮಾಡಿಸಿ ಹೋರಾಟ ನಡೆಸಿದ್ದೇವೆ. ರೈತರ ಪ್ರಾಣವನ್ನು ಲೆಕ್ಕಸದೆ ಸಫಾರಿ ಪುನಾರಂಭಿಸುವುದು ಖಂಡನೀಯ. ಇನ್ನು ಮುಂದೆ ರೈತ ಸಂಘಟನೆಗಳ ಹೋರಾಟಗಳು ತೀವ್ರಗೊಳ್ಳಲಿವೆ.

ಅಕ್ರಮ ರೆಸಾರ್ಟ್‌ಗಳಿಗೆ ಬೀಗ ಹಾಕಲಿ: ಕಾಡು ಪ್ರಾಣಿಗಳಿಗೆ ಮತ್ತು ಸಾರ್ವಜನಿಕರಿಗೆ ಸೇರಿದ ಅರಣ್ಯ ಸೂಕ್ಷ್ಮ ವಲಯ, ಕಬಿನಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಮೂಲ ನಕ್ಷೆಯ ಆಧಾರದ ಮೇಲೆ ಅಕ್ರಮ ರೆಸಾರ್ಟ್‌ಗಳಿಗೆ ಬೀಗ ಹಾಕಬೇಕು.

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಶಾಲಾ ದಾಖಲಾತಿ ವಯೋಮಿತಿ ಸಮಸ್ಯೆ ನಿವಾರಿಸಿ

ಮಕ್ಕಳನ್ನು ಒಂದನೇ ತರಗತಿಗೆ ಪ್ರಸಕ್ತ ಸಾಲಿಗೆ ದಾಖಲಿಸುವ ವಯೋಮಿತಿಯನ್ನು ಆರು ವರ್ಷಗಳಿಗೆ ನಿಗದಿಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.…

3 hours ago

ಓದುಗರ ಪತ್ರ: ಡ್ರಗ್ಸ್ ಜಾಲ ಪತ್ತೆಗೆ ಡ್ರೋನ್ ಕಾರ್ಯಾಚರಣೆ ಶ್ಲಾಘನೀಯ

ಮೈಸೂರಿನಲ್ಲಿ ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯ ಮತ್ತು ಡ್ರಗ್ಸ್ ಜಾಲ ಪ್ರಕರಣಗಳ ಪತ್ತೆಗೆ ಡ್ರೋನ್ ಕಾರ್ಯಾಚರಣೆ ನಡೆಸಲು ಮೈಸೂರು ನಗರ ಪೊಲೀಸರು…

3 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಸರ್ಕಾರ ಗುಣಮಟ್ಟದ ಚಲನಚಿತ್ರಗಳಿಗೆ ನೀಡುವ ಸಹಾಯಧನದ ಆಚೆ ಈಚೆ

ಗುಣಮಟ್ಟದ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ೨೦೨೬ನೇ ಸಾಲಿನಿಂದ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ ಎನ್ನುವುದು…

3 hours ago

ಅಮೃತ್ ೨.೦ ಯೋಜನೆ ಕಾಮಗಾರಿ ಚುರುಕು

ಎಸ್.ಎ. ಹುಸೇನ್ ಶೀಘ್ರದಲ್ಲೇ ಹೊಸ ಪೈಪ್‌ಲೈನ್ ಮೂಲಕ ನೀರು ಸರಬರಾಜು ೪೭.೪೧ ಕೋಟಿ ರೂ. ವೆಚ್ಚದ ೨ ಹಂತಗಳ ಕಾಮಗಾರಿ…

3 hours ago

ದಮ್ಮನಕಟ್ಟೆ ಸಫಾರಿ ಸವಿಯಲು ಪ್ರವಾಸಿಗರು ಕಾತರ…

ಮಂಜು ಕೋಟೆ ಆದೇಶ ಬಂದ ತಕ್ಷಣ ಸಫಾರಿ ಪುನರ್ ಆರಂಭಿಸಲಾಗುವುದು: ಅರಣ್ಯಾಧಿಕಾರಿ ಎಚ್.ಡಿ.ಕೋಟೆ: ರಾಜ್ಯ ಸರ್ಕಾರವು ಸಫಾರಿ ಆರಂಭಕ್ಕೆ ಆದೇಶ…

3 hours ago

ಟಿ20 ವಿಶ್ವಕಪ್‌ : ಇಟಲಿ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಸುಲಭ ಜಯ

ಕೋಲ್ಕತ್ತ : ನಾಯಕ ಶಾಯ್ ಹೋಪ್ ಅವರ ಸತತ ಎರಡನೇ ಅರ್ಧ ಶತಕ ಮತ್ತು ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಪ್ರದರ್ಶನದಿಂದ…

13 hours ago