ಕೆ.ಬಿ.ರಮೇಶನಾಯಕ
ಗ್ರೇಟರ್ ಮೈಸೂರು ರಚನೆಗೆ ಸಂಬಂಧಿಸಿದಂತೆ ಪಿಪಿಟಿ ವಿವರಣೆ
ಶಾಸಕ ಜಿ.ಟಿ.ದೇವೇಗೌಡರ ಒತ್ತಡಕ್ಕೆ ಕೊನೆಗೂ ಮಣಿದ ಸಿಎಂ
ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ
ಮೈಸೂರು: ಮೈಸೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಅಥವಾ ಗ್ರೇಡ್-೧ ಮೈಸೂರನ್ನಾಗಿ ರಚನೆ ಮಾಡುವ ಕುರಿತಾಗಿ ಹಲವು ತಿಂಗಳುಗಳಿಂದ ಉಂಟಾಗಿದ್ದ ಅನಿಶ್ಚಿತತೆಯ ಕಾರ್ಮೋಡ ಕರಗುವ ಲಕ್ಷಣಗಳು ಗೋಚರಿಸಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಮಹತ್ವದ ಸಭೆ ನಡೆಯಲಿದೆ.
ಗ್ರೇಡ್- ೧ ಮೈಸೂರು ರಚನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಿದ್ಧಪಡಿಸಿರುವ ಪ್ರಕ್ರಿಯೆಯ ಸಮಗ್ರ ಚಿತ್ರಣವನ್ನು ಸಭೆಯಲ್ಲಿ ಸಿದ್ದರಾಮಯ್ಯ ಅವರ ಎದುರು ಪವರ್ ಪಾಯಿಂಟ್ ಮೂಲಕ ಪ್ರದರ್ಶಿಸಲಿದ್ದು, ಇದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದರೆ ನಗರಾಭಿವೃದ್ಧಿ ಇಲಾಖೆ ಮೂಲಕ ಸಚಿವ ಸಂಪುಟ ಸಭೆಯಲ್ಲೂ ಮಂಡಿಸಲು ತಯಾರಿ ನಡೆದಿದೆ.
ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳು, ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸೋಮವಾರ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ, ನಗರಪಾಲಿಕೆ ವಲಯ ಕಚೇರಿ-೩ರಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಜಿ.ಟಿ.ದೇವೇಗೌಡ, ಕೆ. ಹರೀಶ್ ಗೌಡ, ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ತಿರಸ್ಕಾರಗೊಂಡಿದ್ದ ಪ್ರಸ್ತಾವಕ್ಕೆ ಮರುಜೀವ: ಒಂದು ವರ್ಷದ ಹಿಂದೆ ನಗರಪಾಲಿಕೆಯನ್ನು ಗ್ರೇಟರ್ ಮೈಸೂರು ಅಥವಾ ಗ್ರೇಡ್ ೧ ನಗರ ಪಾಲಿಕೆಯನ್ನಾಗಿ ಉನ್ನತೀಕರಿಸಬೇಕೆಂಬ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಇದಕ್ಕೆ ಪೂರಕವಾಗಿ ರಿಂಗ್ ರಸ್ತೆಯ ಹೊರಗಿರುವ ಕಡಕೊಳ, ಬೋಗಾದಿ, ಶ್ರೀರಾಂಪುರ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಹೂಟಗಳ್ಳಿ ನಗರಸಭೆ, ಸಿದ್ದಲಿಂಗಪುರ, ಇಲವಾಲ, ಬೀರಿಹುಂಡಿ, ಧನಗಳ್ಳಿ, ನಾಗವಾಲ ಸೇರಿದಂತೆ ೮ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸಿಕೊಂಡು ಗ್ರೇಡ್-೧ ಪಾಲಿಕೆ ರಚನೆ ಮಾಡುವ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು.
ಮೈಸೂರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾಗಿರುವ ಕಾರಣ ಈ ಪ್ರಸ್ತಾವನೆಗೆ ಒಪ್ಪಿಗೆ ದೊರೆಯುವ ಸಾಧ್ಯತೆ ಹೆಚ್ಚಿದೆ ಎನ್ನುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಪ್ರಸ್ತಾವನೆಯನ್ನು ಮುಂದಿನ ಆರ್ಥಿಕ ಸಾಲಿಗೆ ಮುಂದೂಡುವಂತೆ ಆರ್ಥಿಕ ಇಲಾಖೆ ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ತಿರಸ್ಕರಿಸಿ ಪ್ರಸ್ತಾವನೆಯನ್ನು ಕೈ ಬಿಡಲಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸೆ.೧೬ರಂದು ಆದೇಶ ಹೊರಡಿಸಿದ್ದರು.
ಗ್ರೇಡ್-೧ ನಗರ ಪಾಲಿಕೆ ರಚನೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಒಲವು ತೋರಿದರೂ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಆಂತರಿಕವಾಗಿ ವಿರೋಧ ಮಾಡುವ ಜತೆಗೆ, ಕಾಂಗ್ರೆಸ್‌ಗಿಂತ ಬೇರೆ ಪಕ್ಷಗಳಿಗೆ ಅನುಕೂಲ ಮಾಡಿಕೊಡಬೇಕಾಗುತ್ತದೆ ಎನ್ನುವ ಮಾತನ್ನಾಡಿದ್ದರಿಂದ ಆರ್ಥಿಕ ಇಲಾಖೆ ಮೂಲಕ ತಿರಸ್ಕರಿಸಲಾಗಿದೆ ಎನ್ನಲಾಗಿತ್ತು.
ಶಾಸಕ ಜಿಟಿಡಿ ನಿರಂತರ ಪ್ರಯತ್ನ: ರಿಂಗ್ ರಸ್ತೆಯ ಹೊರಗಿನ ಸ್ಥಳೀಯ ಸಂಸ್ಥೆಗಳು, ಗ್ರಾಪಂಗಳನ್ನು ನಗರಪಾಲಿಕೆಗೆ ಸೇರಿಸಿ ಗ್ರೇಟರ್ ಮೈಸೂರು ರಚನೆ ಮಾಡಬೇಕೆಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ನಿರಂತರವಾಗಿ ಪ್ರಯತ್ನ ನಡೆಸುತ್ತಲೇ ಬಂದಿದ್ದರು. ಚಾಮುಂಡಿಬೆಟ್ಟದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲೂ ಗ್ರೇಟರ್ ಮೈಸೂರು ರಚನೆಗೆ ಬೇಡಿಕೆ ಇಟ್ಟಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗ್ರೇಟರ್ ಮೈಸೂರು ರಚನೆಗೆ ಒಲವು ತೋರಿ ಅಧಿಕಾರಿಗಳಿಗೆ ಸಭೆ ಕರೆಯುವಂತೆ ಸೂಚಿಸಿರುವುದರಿಂದ ಗ್ರೇಟರ್ ಮೈಸೂರು ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಗ್ರೇಟರ್ ಮೈಸೂರಿನಿಂದ ಏನೇನು ಅನುಕೂಲ? ಗ್ರೇಟರ್ ಮೈಸೂರು ರಚನೆಯಾದರೆ ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರಿಗೆ ಮತ್ತಷ್ಟು ಕೈಗಾರಿಕೆಗಳು, ಉದ್ಯಮಗಳು ಬರಲಿದ್ದು, ಭವಿಷ್ಯದಲ್ಲಿ ಪೆರಿಫೆರಲ್ ರಿಂಗ್ ರಸ್ತೆ, ಮೆಟ್ರೋ ರೈಲು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಬಹುದು ರಿಂಗ್ ರಸ್ತೆಯ ಹೊರಗಿರುವ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕ ಅನುದಾನ ಈಗಾಗಲೇ ಕಬಿನಿ, ಕಾವೇರಿ ಜಲಾಶಯ ಗಳಿಂದ ನೀರು ಸರಬರಾಜು ಮಾಡುತ್ತಿರುವ ಕಾರಣ ನೀರಿನ ತೆರಿಗೆ ಸಂಗ್ರಹ ಸುಲಭವಾಗಲಿದ್ದು, ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ನಿರೀಕ್ಷಿಸಬಹುದು.
ಆಕಾಂಕ್ಷಿಗಳಿಗೆ ನಿರಾಸೆ:
ಗ್ರೇಟರ್ ಮೈಸೂರು ರಚನೆಗೆ ಸಿಎಂ ಒಪ್ಪಿಗೆ ದೊರೆತರೆ ನಗರಪಾಲಿಕೆ ಚುನಾವಣೆಯನ್ನುಎದುರ ನೋಡುತ್ತಿರುವವರಿಗೆ ನಿರಾಸೆಯಾಗಲಿದೆ.ವಾರ್ಡು ವಿಂಗಡಣೆ, ಮೀಸಲಾತಿ ನಿಗದಿ ಮೊದಲಾದ ಕೆಲಸಗಳು ಮುಗಿಯುವ ತನಕ ಚುನಾವಣೆ ನಡೆಯುವುದು ಅಸಾಧ್ಯ. ಚುನಾವಣೆ ನಡೆಯದೆ ಆಡಳಿತಾಧಿಕಾರಿಗಳನ್ನು ಹೊಂದಿರುವ ನಾಲ್ಕು ಪಪಂ, ಒಂದು ನಗರಸಭೆ ಬರಖಾಸ್ತು ಹೊಂದಲಿದೆ.
ಮಹಾದೇಶ್ ಎಂ ಗೌಡ ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…
ಮಹಾದೇಶ್ ಎಂ ಗೌಡ ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…