Andolana originals

ಕಡಿಮೆ ಅವಧಿಯಲ್ಲಿ ಮೀನುಮರಿಗಳ ದಾಖಲೆ ಬಿತ್ತನೆ

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದಾಖಲೆಯ ೫೧.೧೯ ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಲಾಗಿದ್ದು, ಈ ಹಂಗಾಮಿನ ಇಷ್ಟು ಅಲ್ಪ ಅವಧಿಯಲ್ಲಿ ಈ ಮಟ್ಟದ ಬಿತ್ತನೆ ಹಿಂದೆ ಯಾವಾಗಲೂ ಆಗಿರಲಿಲ್ಲ!

ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಆಗಸ್ಟ್ ೪ರ ತನಕ ೨೨ಲಕ್ಷ ಮೀನು ಮರಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಈ ಅವಽಯಲ್ಲಿ ೫೧.೧೯ ಲಕ್ಷ ಬಿತ್ತನೆ ಮಾಡಿರುವುದು ದಾಖಲೆಯ ಸಾಧನೆಯಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್.ಮಂಜೇಶ್ವರ ಮಾಹಿತಿ ನೀಡಿದರು.

ಪ್ರಸಕ್ತ ವರ್ಷದ ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು ಜೂನ್, ಜುಲೈನ ಮುಂಗಾರು ವೇಳೆ ವಾಡಿಕೆಗಿಂತ ಸ್ವಲ್ಪ ಮಳೆ ಕಡಿಮೆಯಾಗಿದ್ದರೂ ಕೆರೆಗಳಲ್ಲಿ ನೀರು ಸಂಗ್ರಹವಾಗಿರುವ ಕಾರಣ ಜಿಲ್ಲೆಯಲ್ಲಿ ಮೀನುಮರಿ ಬಿತ್ತನೆ ಕಳೆದ ಬಾರಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ! ಹೋದ ವರ್ಷ ಈ ವೇಳೆ ೨೧.೦೭ ಲಕ್ಷ ಮೀನು ಮರಿಗಳ ಬಿತ್ತನೆಯಾಗಿತ್ತು.

ಮೀನುಗಾರಿಕೆ ಇಲಾಖೆಯು ತನ್ನ ವ್ಯಾಪ್ತಿಗೆ ಒಳಪಟ್ಟಿರುವ ಕೆರೆಗಳು, ಜಲಾಶಯಗಳಲ್ಲಿ ಪ್ರತಿ ವರ್ಷ ಟೆಂಡರ್ ಕರೆದು ಮೀನು ಮರಿ ಬಿತ್ತನೆಗೆ ಅವಕಾಶ ನೀಡುತ್ತದೆ. ಮೀನುಗಾರಿಕೆ ಇಲಾಖೆಗೆ ಒಳಪಟ್ಟಿರುವ ಜಿಲ್ಲೆಯ ೯೨ ಕೆರೆಗಳ ಪೈಕಿ ಇದುವರೆಗೆ ೫೧ ಕೆರೆಗಳಲ್ಲಿ ಮೀನುಮರಿಗಳ ಬಿತ್ತನೆಯಾಗಿದೆ.

ಚಾಮರಾಜನಗರ ತಾಲ್ಲೂಕಿನ ಅವಳಿ ಜಲಾಶಯಗಳಾದ ಚಿಕ್ಕಹೊಳೆ, ಸುವರ್ಣಾವತಿ ಯಲ್ಲಿಯೂ ಬಿತ್ತನೆ ಕಾರ್ಯ ಮುಗಿದಿದೆ. ಕಬಿನಿ ನದಿಮೂಲದಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕಿನ ೩೨ ಕೆರೆಗಳಲ್ಲಿ ಮತ್ತು ಗುಂಡಾಲ್ ಜಲಾಶಯದಲ್ಲಿ ಮೀನು ಮರಿ ಬಿಡಲು ಟೆಂಡರ್ ಪ್ರಕ್ರಿಯೆ ಸಾಗಿದ್ದು ಇಷ್ಟರಲ್ಲಿಯೇ ಈ ಎಲ್ಲಾ ಕಡೆ ಬಿತ್ತನೆ ನಡೆಯಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ನದಿ ಮೂಲದ ಈ ಕೆರೆಗಳಲ್ಲಿ ಮೀನುಗಾರಿಕೆಗೆ ವಿಪುಲ ಅವಕಾಶವಿದೆ.

ಮೀನುಗಾರಿಕೆಗೆ ಅವಕಾಶ ನೀಡುವಾಗ ಸ್ಥಳೀಯ ಮೀನುಗಾರಿಕೆ ಸಹಕಾರ ಸಂಘಗ ಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಂತರ ಇ-ಟೆಂಡರ್ ಕರೆದು ಗುತ್ತಿಗೆ ನೀಡ ಲಾಗುತ್ತದೆ. ಯಾರೂ ಮುಂದೆ ಬಾರದಿದ್ದರೆ ಮೀನು ಕೃಷಿ ಸ್ಥಳದಿಂದ ೫ಕಿಮೀ ಸರಹದ್ದಿನಲ್ಲಿ ವಾಸಿಸುವ ಯಾರಾದರೂ ಮುಂದೆ ಬಂದರೆ ಅಂತಹವರಿಗೆ ಮೀನು ಮರಿಗಳ ಬಿತ್ತನೆ ಮಾಡಲು ಇಲಾಖೆ ಅನುಮತಿ ನೀಡುತ್ತದೆ. ಮಳೆ ಸ್ಥಿತಿಗತಿ ನೋಡಿಕೊಂಡು ಮಾರ್ಚ್-೨೦೨೬ರ ವರೆಗೂ ಮೀನು ಮರಿ ಬಿತ್ತನೆ ಮಾಡಬಹುದಾಗಿದೆ.

ಜಿಲ್ಲೆಯಲ್ಲಿ ೨೦೨೫ರ ಏಪ್ರಿಲ್ ನಿಂದ ಬರುವ ಮಾರ್ಚ್ ತನಕ ೮೮ ಲಕ್ಷ ಮೀನು ಮರಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಅವಧಿಯಲ್ಲಿ ೧೩ ಸಾವಿರ ಟನ್ ಮೀನು ಉತ್ಪಾದನೆ ಗುರಿ ಹಾಕಿಕೊಳ್ಳಲಾಗಿದೆ ಎಂದು ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.

ಏಪ್ರಿಲ್,ಮೇ ಮಾಹೆಯಲ್ಲಿ ಒಳ್ಳೆಯ ಮಳೆ ಬೀಳಲಾಗಿ ಇಲಾಖೆಗೆ ಸೇರಿರುವ ಅರ್ಧ ಕ್ಕಿಂತಲೂ ಹೆಚ್ಚಿನ ಕೆರೆಗಳಲ್ಲಿ ಮೀನುಗಳಿಗೆ ನಲಿದಾಡುವ ಭಾಗ್ಯ ಈಗಾಗಲೇ ದೊರಕಿದ್ದು ಬರುವ ದಿನಗಳಲ್ಲಿ ಉಳಿದ ಕೆರೆಗಳಲ್ಲಿ ಮೀನುಗಳು ಮಿನುಗುವ ಅವಕಾಶ ಒದಗಿ ಬರುವಂತಹ ವಾತಾವರಣ ಕಾಣುತ್ತಿದೆ ಎನ್ನುತ್ತಾರೆ ಮೀನು ಕೃಷಿಕರು.

” ಏಪ್ರಿಲ್‌ನಿಂದ ಇಲ್ಲಿಯ ತನಕ ಚಾ.ನಗರ ತಾಲ್ಲೂಕಿನಲ್ಲಿ ೧೯.೯ ಲಕ್ಷ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ೧೩.೯೫ ಲಕ್ಷ, ಯಳಂದೂರು ತಾಲ್ಲೂಕಿನಲ್ಲಿ ೧೦.೮೪ ಲಕ್ಷ, ಕೊಳ್ಳೇಗಾಲ ತಾಲ್ಲೂಕಿನಲ್ಲಿ (ಹನೂರು ಸೇರಿ) ೬.೫೦ ಲಕ್ಷ ಸೇರಿದಂತೆ ಒಟ್ಟು ೫೧.೧೯ ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಲಾಗಿದೆ.”

-ಎಂ.ಎಸ್.ಮಂಜೇಶ್ವರ, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ

ಯಾವ ತಳಿಯ ಮೀನು ಮರಿಗಳು?: ಕಾಟ್ಲಾ, ಸಾಮಾನ್ಯಗೆಂಡೆ, ರೋಹು, ಮೃಗಾಲ್, ಹುಲ್ಲುಗೆಂಡೆ ತಳಿಯ ಮೀನುಮರಿಗಳನ್ನು ಬಿತ್ತನೆ ಮಾಡಲಾಗಿದೆ. ಕೆರೆಗಳಲ್ಲಿ ಕನಿಷ್ಠ ೬ ತಿಂಗಳವರೆಗೆ ನೀರಿನ ಸಂಗ್ರಹವಿರಬೇಕು. ಆಗ ಉತ್ತಮ ಇಳುವರಿ ನಿರೀಕ್ಷಿಸಬಹುದು. ಒಂದು ವೇಳೆ ಕೆರೆಗಳಲ್ಲಿ ನೀರು ದಿಢೀರ್ ಕಡಿಮೆಯಾದರೆ ಮೀನುಗಳನ್ನು ಅವಽಗೂ ಮುಂಚೆಯೇ ಹಿಡಿದು ಅವುಗಳನ್ನು ಟೆಂಡರ್ ಪಡೆದವರು ಮಾರಾಟ ಮಾಡಿಕೊಳ್ಳುತ್ತಾರೆ. ಅವಽಗೆ ಮೊದಲೇ ಹಿಡಿಯುವುದರಿಂದ ಮೀನುಗಳ ತೂಕ ಕಡಿಮೆ ಇರಲಿದ್ದು ಅನಿವಾರ್ಯವಾಗಿ ಮಾರಾಟ ಮಾಡುತ್ತಾರೆ.

ಜಮೀನುಗಳಲ್ಲಿಯೇ ಒಂದು ಎಕರೆ, ಅರ್ಧ ಎಕರೆ ಹಾಗೂ ೧೦ ಗುಂಟೆ ಜಾಗದಲ್ಲಿ ನೀರಿನಕೊಳ ನಿರ್ಮಿಸಿಕೊಂಡು ಮೀನು ಸಾಕಾಣಿಕೆ ಮಾಡುವವರ ರೈತರಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದ್ದು ಈ ರೈತರು ವಾರ್ಷಿಕವಾಗಿ ಅಂದಾಜು ೪೦೦ ಟನ್ ಮೀನು ಉತ್ಪಾದನೆ ಮಾಡುತ್ತಾರೆ.ಚಾಮರಾಜ ನಗರ, ಕೊಳ್ಳೇಗಾಲ ಭಾಗದಲ್ಲಿ ಮೀನು ಕೃಷಿಕರ ಸಂಖ್ಯೆ ಜಾಸ್ತಿ ಇದ್ದು ಮತ್ಸ್ಯೋ ದ್ಯಮ ಲಾಭದಾಯಕವಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ತರುವ ತಳಿಯ ಮೀನುಗಳನ್ನು ರೈತರು ಉತ್ಪಾದನೆ ಮಾಡು ತ್ತಿದ್ದಾರೆ. ಮೀನು ಕೃಷಿಕರಿಗೆ ಇಲಾಖೆ ಯಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದರು.

ಆಂದೋಲನ ಡೆಸ್ಕ್

Recent Posts

ಎಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ: ಮುಗಿಲುಮುಟ್ಟಿದ ಗೋವಿಂದ ನಾಮಸ್ಮರಣೆ

ಬೆಂಗಳೂರು: ದೇಶದೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದ್ದು, ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ.…

8 mins ago

ಓದುಗರ ಪತ್ರ: ಕುವೆಂಪು

ಕುವೆಂಪು ಮಲೆನಾಡಿನಲಿ ಹುಟ್ಟಿದರು ಮೈಸೂರಿಗೆ ಕಾಲಿಟ್ಟರು ಕವಿಯಾಗಿ ಕನ್ನಡದ ಮೊದಲ ಜ್ಞಾನಪೀಠ ಗಳಿಸಿದರು ಮೂಢನಂಬಿಕೆಯನು ಬದಿಗೊತ್ತಿ ವಿಜ್ಞಾನದ ಬೀಜ ಬಿತ್ತಿ…

3 hours ago

ಓದುಗರ ಪತ್ರ: ಮುಕ್ತ ವಿಶ್ವವಿದ್ಯಾಲಯದ ರಸ್ತೆ ದುರಸ್ತಿ ಮಾಡಿ

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ (ಕೆಎಸ್‌ಒಯು) ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮಳೆಗಾಲದಲ್ಲಿ ಈ…

3 hours ago

ಓದುಗರ ಪತ್ರ: ರಸ್ತೆ ದುರಸ್ತಿ ಮಾಡಿ

ಹೆಗ್ಗಡದೇವನಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದಿಂದ ಜಿನ್ನಹಳ್ಳಿ -ಮಲಾರದಹುಂಡಿಗೆ ತೆರಳುವ ಮುಖ್ಯ ರಸ್ತೆ ಹಾಳಾಗಿದ್ದು, ವಿಪರೀತ ಹಳ್ಳ-ಕೊಳ್ಳಗಳಿಂದ ಕೂಡಿದೆ. ಹಲವಾರು ಬಾರಿ…

3 hours ago

ಓದುಗರ ಪತ್ರ: ಹೊಸ ವರ್ಷ ಆಚರಣೆ: ಇರಲಿ ಸಂಯಮ, ಗುರಿ

ಹೊಸ ವರ್ಷದ ಆಚರಣೆ ಡಿ.೩೧ರ ರಾತ್ರಿ ಮತ್ತು ಜನವರಿ ೧ ರಂದು ನಡೆಯುತ್ತದೆ. ಯುವ ಜನತೆಗೆ ಹೊಸ ವರ್ಷದ ಆಚರಣೆ…

3 hours ago

ಮಕ್ಕಳ ಪರೀಕ್ಷಾ ಸಿದ್ಧತೆಯಲ್ಲಿ ಪೋಷಕರ ಪಾತ್ರದ ಮಹತ್ವ

ಡಾ.ಪಿ.ಮಂಜುನಾಥ ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಮೂಡದಂತೆ ಎಚ್ಚರ ಅಗತ್ಯ  ಪರೀಕ್ಷೆಗಳು ಕೆಲವೇ ತಿಂಗಳುಗಳಲ್ಲಿ ಸಾಲು ಸಾಲಾಗಿ ಪ್ರಾರಂಭವಾಗಲಿವೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ…

3 hours ago