Andolana originals

ಸೌಹಾರ್ದತೆಯ ಜೀವತಾಣ ರತ್ನಪುರಿ

ಡಾ.ಕುಪ್ನಳ್ಳಿ ಎಂ.ಭೈರಪ್ಪ

ಸರ್ವಧರ್ಮೀಯರ ಸಾಮರಸ್ಯಕ್ಕೆ ಸಾಕ್ಷಿ ಶ್ರೀ ಆಂಜನೇಯ ಸ್ವಾಮಿ ಉತ್ಸವ; ಜಮಾಲ್ ಬೀಬೀ ಮಾ ಸಾಹೇಬರ ಗಂಧೋತ್ಸವ

ಉತ್ಸವ-ಉರುಸ್ ಎಂಬ ಜನಮೈತ್ರಿ ಜಾತ್ರೆಗಳ ಯಶಸ್ಸಿಗೆಸುತ್ತಲಿನ ೫೦ಕ್ಕೂ ಹೆಚ್ಚಿನ ಗ್ರಾಮಗಳ ಗ್ರಾಮಸ್ಥರ ಸಹಕಾರ

ರತ್ನಪುರಿ ಎಂಬ ವಿಶಿಷ್ಟವಾದ ಗ್ರಾಮವೊಂದು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಲ್ಲಿದೆ. ಮೈಸೂರು ಜಿಲ್ಲಾ ಕೇಂದ್ರ ದಿಂದ ಗದ್ದಿಗೆ ಮಾರ್ಗವಾಗಿ ಹೋದರೆ, ೪೫ ಕಿ. ಮೀ., ಬಿಳಿಕೆರೆ-ಹುಣಸೂರು ಮಾರ್ಗವಾಗಿ ಹೋದರೆ ೫೦ ಕಿ.ಮೀ. ದೂರದಲ್ಲಿ ರತ್ನಪುರಿ ನೆಲೆಯಿದೆ. ತನ್ನ ಮೈತುಂಬ ಹಸಿರನ್ನೇ ಹೊದ್ದುಕೊಂಡಿರುವ ಈ ನೆಲವು ಸಾಗರದಂತೆ ಕಾಣುವ ದೇವೀಕೆರೆಯನ್ನು ಮಡಿಲಾಗಿಸಿಕೊಂಡು ಗದ್ದುಗೆಯೆಂಬ ಊರನ್ನೇ ತನ್ನ ಗದ್ದುಗೆಯಾಗಿಸಿಕೊಂಡು ಧ್ಯಾನರತ್ನ ವೆಂಬಂತೆ ಮೈದಾಳಿಕೊಂಡಿರುವ ತಾಣ ರತ್ನಪುರಿ.

ಒಂದು ಐತಿಹ್ಯದ ಪ್ರಕಾರ, ಪಿರಿಯಾಪಟ್ಟಣ ಕಾಳಗದಲ್ಲಿ ರತ್ನಪುರವನ್ನು ರತ್ನರಾಜೇ ಅರಸು ಆಳುತ್ತಿದ್ದನೆಂದೂ,ಇವನು ಮೈಸೂರು ದಳವಾಯಿಗೆ ಸಹಾಯ ಮಾಡಿ ಪಿರಿಯಾಪಟ್ಟಣದ ವೀರರಾಜನ ಸೋಲಿಗೆ ಕಾರಣನಾದನೆಂದೂ ಹೇಳಲಾಗಿದೆ. ಅರಮನೆಯ ರಕ್ಷಣೆಗೆಂದು ಕೋಟೆ ಕಟ್ಟಿಸಿ ಅದರ ಸುತ್ತ ಕಂದಕ ನಿರ್ಮಿಸಿ ರಾತ್ರಿ ವೇಳೆ ಶತ್ರುಗಳ ದಾಳಿ ವಿಫಲಗೊಳಿಸಲು ಅವುಗಳಿಗೆ ನೀರು ತುಂಬಿಸುವ ವ್ಯವಸ್ಥೆ ಮಾಡಿಸಿದ್ದು ಇವನೇ ಎಂದೂ ಹೇಳಲಾಗುತ್ತದೆ. ಇಂದು ಕಂದಕಗಳಿವೆಯಾದರೂ ಕೋಟೆ ಉಳಿದಿಲ್ಲ. ಈ ರಾಜನಿಗೆ ಜಾನಕಿದೇವಿ ಎಂಬ ಮಗಳಿದ್ದು ಅವಳು ವಿವಾಹ ಪೂರ್ವದಲ್ಲೇ ತಾಯಿಯಾದುದರಿಂದ ಅವಳನ್ನು ಶಿಕ್ಷಿಸಲು ರಾಜಾಜ್ಞೆಯಾಯಿತು. ಆಗ ಜಾನಕಿದೇವಿ ಹಾಗೂ ಮಗು ಜೀವಂತ ಭೂಮಿಯೊಳಗೆ ಸೇರಿಕೊಂಡರೆಂದೂ ಅದನ್ನು ಕಂಡು ಓಡಿಬಂದ ಸಂತ ಫಕೀರನೊಬ್ಬನಿಗೆ ಜಾನಕೀದೇವಿಯ ಸೀರೆ ಸೆರಗು ಮಾತ್ರ ಸಿಕ್ಕಿತು ಎಂದೂ ಹೇಳಲಾಗುತ್ತದೆ. ಜಾನಕದೇವಿ ಐಕ್ಯವಾದ ಸ್ಥಳದಲ್ಲಿ ಸಮಾಧಿ ನಿರ್ಮಿಸಿ ಜಾನಕಿದೇವಿಯ ಸೀರೆ ಸೆರಗನ್ನು ಅದರ ಮೇಲೆ ಅವನೇ ಹೊದಿಸಿದನಂತೆ. ಜಾನಕಿದೇವಿಯ ಪವಾಡವನ್ನು ಕಣ್ಣಾರೆ ಕಂಡ ಫಕೀರ ಈ ಸಮಾಧಿಗೆ ಜಮಾಲಮ್ಮಗೋಧ ಎಂದು ಹೆಸರಿಟ್ಟು ಭಕ್ತಿಭಾವದಿಂದ ಪೂಜಿಸತೊಡಗಿದನೆಂದು ಪ್ರತೀತಿ. ಈ ಸಮಾಧಿಗೆ ಹಿಂದೂಗಳು ಹಾಗೂ ಮುಸಲ್ಮಾನರು ಸೇರಿ ಪೂಜಿಸುತ್ತಾ ಬಂದಿದ್ದಾರೆ. ಮುಂದೆ ಇಲ್ಲಿಗೆ ಬಂದ ಮಲ್ಲಿಕಾಫರ್ ಈ ಸಮಾಧಿಗೆ ಜಮಾಲ್‌ಬೇಬಿ ಎಂದು ನಾಮಕರಣ ಮಾಡಿದನೆಂದು ಹೇಳಲಾಗುತ್ತದೆ.

(ಹುಣಸೂರು ತಾಲ್ಲೂಕು ಗ್ಯಾಜೆಟಿಯರ್; ಪ್ರೇಕ್ಷಣೀಯ ಸ್ಥಳಗಳು; ಪುಟ ೧೪೪) ಕಾಲಾನಂತರದಲ್ಲಿ ಈ ಭಾಗದ ಹಿಂದೂಗಳು ಕೂಡ ಗೋರಿಗೆ ನಮಿಸಿದರೆ ತಮ್ಮ ಇಷ್ಟಾರ್ಥ ನೆರವೇರುತ್ತದೆ ಎಂಬ ಭಾವನೆಯಿಂದ ಭಕ್ತಿ ಭಾವದಿಂದ ಪೂಜಿಸುವ ಕಾರ್ಯ ಮುಂದುವರಿಸಿದ್ದಾರೆ. ಜಮಾಲ್ ಬೀಬೀ ಈಗ ಎಲ್ಲರ ಜಮಾಲಮ್ಮ ಆಗಿದ್ದಾರೆ. ಹಿಂದೂ-ಮುಸ್ಲಿಂ ಸಾಮರಸ್ಯ ಮಾತ್ರವಲ್ಲದೇ, ಶಾಂತಿ ಮತ್ತು ಸಾಮರಸ್ಯಕ್ಕೆ ಪೂರಕವಾಗಿ ೨೦೦೫ರಲ್ಲಿ ಆರಂಭವಾಗಿರುವ ಅವರ್ ಲೇಡಿ ಆಫ್ ಹೆಲ್ತ್ ಚರ್ಚ್ ಹಾಗೂ ಬೌದ್ಧರ ಆರಾಧನೆ-ಧ್ಯಾನ ಸಂಬಂಧವಾಗಿ ರೂಪಿಸಿಲಾಗಿರುವ ಬುದ್ಧವಿಹಾರ ತಾಣಗಳೂ ರತ್ನಪುರಿಯ ಸಾಂಸ್ಕತಿಕ ವೈವಿಧ್ಯತೆಗೆ ಹಾಗೂ ಸರ್ವಧರ್ಮೀಯ ಸಾಮರಸ್ಯಕ್ಕೆ ಸಾಕ್ಷಿಯಾಗಿವೆ.

ರತ್ನಪುರಿಯಲ್ಲಿಂದು ಆಂಜನೇಯಸ್ವಾಮಿ ದೇವಾಲಯವಾಗಲೀ, ಜಮಾಲಮ್ಮ ದರ್ಗಾ ಆಗಲೀ ಇಂದು ಏಕಮತೀಯ ಜನತಾಣವಾಗಿ ಉಳಿದಿಲ್ಲ. ಇಲ್ಲಿ ನಡೆವ ಈ ಉತ್ಸವ, ಉರುಸ್‌ಗಳು ಬೇರೆ ಕಡೆ ನಡೆಯುವಂತೆ ಏಕಮತೀಯವಲ್ಲ. ರತ್ನಪುರಿಯ ಸರ್ವಜನಾಂಗಗಳ ಸಾಮೂಹಿಕ ಸಮಾಗಮದಲ್ಲಿ ನಡೆಯುವಂಥವು. ಪ್ರತಿ ವರ್ಷ ನಡೆಯುವ ಶ್ರೀ ಆಂಜನೇಯ ಸ್ವಾಮಿಯ ಮಹಾಭಿಷೇಕ, ಪಲ್ಲಕ್ಕಿ ಉತ್ಸವ ಹಾಗೂ ಮುಸ್ಲಿಮರ ಜಮಾಲ್ ಬೀಬೀ ಮಾ ಸಾಹೇಬರವರ ಗಂಧೋತ್ಸವದ ಉರುಸ್‌ಗಳು ಹಿಂದೂ-ಮುಸ್ಲಿಮರ ಭಾವೈಕ್ಯತೆಗೆ ಸಾಕ್ಷಿಯಾಗಿ, ಪ್ರತಿವರ್ಷ ಫೆಬ್ರವರಿ ತಿಂಗಳ ಮೊದಲ ಅಥವಾ ಎರಡನೆಯ ವಾರದಲ್ಲಿ ಅದ್ಧೂರಿಯಾಗಿ ನಡೆಯುತ್ತವೆ. ಉತ್ಸವಗಳ ದಿನಾಂಕವನ್ನು ಹಿಂದೂ- ಮುಸ್ಲಿಮರು ಸೇರಿ ಚರ್ಚಿಸಿ ಶನಿವಾರ ಆಂಜನೇಯಸ್ವಾಮಿ ಉತ್ಸವ ಎಂದೂ ಭಾನುವಾರ ಜಮಾಲ್ ಬೀಬೀ ಗಂಧೋತ್ಸವ ಎಂದೂ ತೀರ್ಮಾನಿಸುತ್ತಾರೆ. ಇದಕ್ಕೆ ರತ್ನಪುರಿಯ ಜನತೆ ಮಾತ್ರವಲ್ಲ ರತ್ನಪುರಿಯ ಸುತ್ತಮುತ್ತಲಿನ ಉದ್ದೂರ್ ಕಾವಲ್, ಉಯಿಗೊಂಡನಹಳ್ಳಿ, ಧರ್ಮಾಪುರ, ಆಸ್ಪತ್ರೆ ಕಾವಲ್ ಪಂಚಾಯಿತಿಗಳು ಸೇರಿದಂತೆ ಧರ್ಮಾಪುರ, ನಂಜಾಪುರ, ಗೌರಿಪುರ, ದಾಸನಪುರ, ಹಳ್ಳದಕೂಪ್ಪಲು, ತರಿಕಲ್ಲು, ಮಲ್ಲೆಗೌಡನ ಕೊಪ್ಪಲು. ಹೊನ್ನಿಕುಪ್ಪೆ, ಕುಡಿನೀರು ಮುದ್ದನಹಳ್ಳಿ, ಹುಂಡಿಮಾಳ ಸೇರಿದಂತೆ ೫೦ಕ್ಕೂ ಹೆಚ್ಚು ಗ್ರಾಮಸ್ಥರು ಜನಮೈತ್ರಿ ಜಾತ್ರೆಗಳ ಯಶಸ್ಸಿಗೆ ಸಹಕರಿಸುತ್ತಾ ಬರುತ್ತಿದ್ದಾರೆ.

ಕಳೆದ ಸುಮಾರು ೫೦ ವರ್ಷಗಳಿಂದ ಶ್ರೀ ಆಂಜನೇಯ ಜಾತ್ರಾ ಮಹೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ ಹಾಗೂ ಕೊಂಡೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದು, ಕಳೆದ ೧೦ ವರ್ಷಗಳಿಂದ ಉತ್ಸವದ ದಿನದಂದು ಸಾವಿರಾರು ಮಂದಿಗೆ ಅನ್ನದಾನ ಮಾಡಲಾಗುತ್ತಿದೆ. ಅಲ್ಲದೇ ಪ್ರತಿವರ್ಷ ಒಂದಿಲ್ಲೊಂದು ಕ್ರೀಡಾಕೂಟ ಆಯೋಜಿಸಿ ಬಹುಮಾನ ನೀಡುತ್ತಿರುವುದೂ ಉಂಟು.

ಜಾತ್ರೆ ಆರಂಭಕ್ಕೂ ವಾರದ ಮೊದಲೇ ನಡೆವ ಜಾನುವಾರುಗಳದ್ದೇ ಒಂದು ದೊಡ್ಡ ಹಬ್ಬ. ರಾಜ್ಯದ ವಿವಿಧೆಡೆಗಳಿಂದ ಬೆಲೆ ಬಾಳುವ ಎತ್ತುಗಳು, ಬೀಜದ ಹೋರಿ, ಹಸುಗಳನ್ನು ಜಾತ್ರೆಗೆ ಕರೆತಂದು ಕಟ್ಟುತ್ತಾರೆ, ಸುಮಾರು ೫ ಸಾವಿರ ಜೋಡಿಗೂ ಹೆಚ್ಚು ಜಾನುವಾರುಗಳನ್ನು ಕಟ್ಟಲಿದ್ದು, ಕೋಟ್ಯಂತರ ರೂ. ವಹಿವಾಟು ನಡೆಯಲಿದೆ. ರಾಸು ಹರಕೆ ಹೊತ್ತವರು ಜಾತ್ರೆಗೆ ಮುನ್ನಾ ದಿನವೇ ಆಗಮಿಸಿ ಹರಕೆ ತೀರಿಸುತ್ತಾರೆ. ಸುತ್ತಮುತ್ತಲಿನ ರೈತರು ರಥೋತ್ಸವದ ಮಾರನೇ ದಿನ ರಾಸುಗಳನ್ನು ದೇಗುಲದ ಸುತ್ತ ಮೆರವಣಿಗೆ, ಪಂಜಿನ ಸೇವೆ ನಡೆಸುತ್ತಾರೆ. ಇದು ದರ್ಗಾ ಜಾತ್ರೆ ಎಂದೇ ಪ್ರಸಿದ್ಧಿಯಾಗಿದೆ. ಜಾತ್ರಾ ಮಾಳದಲ್ಲಿರುವ ಜಮಾಲ್ ಬೀಬೀ ಮಾ ಸಾಹೇಬರ ದರ್ಗಾಕ್ಕೆ ರತ್ನಪುರಿಯ ಜನರು ಮಾತ್ರವಲ್ಲದೇ, ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಮುಸಲ್ಮಾನರೂ ಹಾಗೂ ಇತರ ಜನರು ಗಂಧವನ್ನು ಮೆರವಣಿಗೆಯಲ್ಲಿ ತಂದು ಗೋರಿಗೆ ಪೂಜೆ ಸಲ್ಲಿಸಿ, ಗಂಧೋತ್ಸವ ನೆರವೇರಿಸುವರು. ಮೆರವಣಿಗೆ ವೇಳೆ ಸಾಕಷ್ಟು ಸಾಹಸ ಪ್ರದರ್ಶನವಿರುತ್ತದೆ. ಜಾತ್ರಾಮಾಳ ಪಕ್ಕದಲ್ಲೇ ಇರುವ ಸಂತೆಕೆರೆಯ ದೊಡ್ಡಕೆರೆಯ ನೀರು ಎಂದೂ ಬತ್ತುವುದಿಲ್ಲ. ಈ ಕೆರೆಯಲ್ಲೇ ಸ್ನಾನ ಮಾಡಿ ಬಂದು ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಎರಡೂ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಸಾರುವ ಉತ್ಸವವನ್ನು ಶತಮಾನಗಳಿಂದ ಆಚರಿಸಲಾ ಗುತ್ತಿದೆ. ಮೇಲು-ಕೀಳು ಎನ್ನುವ ಭಾವನೆ ತೊರೆಯುವ ಕಾಲ ಸನ್ನಿಹಿತವಾಗಿದೆ. ನಾನು ಎನ್ನುವ ಅಹಂಕಾರ ಅಳಿದು ನಾವು ಎನ್ನುವ ಭಾವನೆಯಿಂದ ಜೀವನ ನಡೆಸುವುದು ಇಂದಿನ ಅಗತ್ಯ. ಅದಕ್ಕೆ ಇಂತಹ ಉತ್ಸವಗಳೇ ಮುಖ್ಯ ವೇದಿಕೆಯಾಗಲಿ. ರಾಜ್ಯಕ್ಕೆ ಮಾದರಿಯಾಗಿರುವ ರತ್ನಪುರಿ ಉತ್ಸವ ಯಶಸ್ಸು ಸಾಽಸಲಿ ಎಂಬುದು ಸ್ಥಳೀಯರ ಮಹದಾಶಯವಾಗಿದೆ.

ರತ್ನಪುರಿಯೊಳಗೆ ಒಂದು ಅಪೂರ್ವ ಸಾಧನಪುರಿ ಇದೆ. ಇದರ ಸ್ಥಾಪಕರು ಶ್ರೀ ಲಕ್ಕಪ್ಪಸ್ವಾಮಿಗಳು. ಇವರಿಗೆ ೧೦೬ ವರ್ಷಗಳಾಗಿದ್ದು ಸರ್ವಜನರೂ ಶಾಂತಿ ಮತ್ತು ಜ್ಞಾನ ಸಾಧನೆಯಿಂದ ಸಹಬಾಳ್ವೆಯಿಂದ ಬದುಕಬೇಕೆಂಬ ಮಹದಾಶಯದಲ್ಲಿ ಸಾಧನಪುರಿಯನ್ನು ಸಂಚಾಲನೆ ಗೊಳಿಸಿದ್ದಾರೆ. ವಿಶ್ವಶಾಂತಿ ಎಂಬ ಹೆಸರಿನ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ, ಜಾತಿಮತಗಳಿಗೆ ಸೀಮಿತಗೊಳ್ಳದ ಸೀಮಾತೀತ ಜ್ಞಾನಸಂಪಾದನೆ ಮೂಲಕ ಸಾಮಾಜಿಕ ಶಾಂತಿಯನ್ನು ನೆಲೆಗೊಳಿಸಬೇಕೆಂಬ ಆಶಯದಲ್ಲಿ ಸಕ್ರಿಯ ರಾಗಿದ್ದಾರೆ. ಇವರು ರಚಿಸಿರುವ ತತ್ವಪದಗಳು ಮಾನವನ ಮನೋಗತವನ್ನು ಬೆಳಗುವ ಮಾಣಿಕ್ಯದೀಪ್ತಿಯಂತಿವೆ.

ಕೆಲವು ವರ್ಷಗಳಿಂದ ಭಾರತ ಸಂವಿಧಾನ ದಿನ, ಅಂಬೇಡ್ಕರ್ ಜಯಂತಿ, ಬಸವ ಜಯಂತಿ ಮೊದಲಾದಮಹೋತ್ಸವಗಳನ್ನು ಈ ಸೌಹಾರ್ದ ನೆಲದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಂವಿಧಾನೋ ರಕ್ಷತಿ ರಕ್ಷಿತಃ ಎಂಬ ಜನಜಾಗೃತಿಯನ್ನೂ ಇವನಮ್ಮವ ಇವನಮ್ಮವ ಎಂಬ ಅಗಾಧ ಮನೋಜಾಗೃತಿಯನ್ನೂಮೈವೆತ್ತುಕೊಂಡ ರತ್ನಪುರಿಯ ಜನಮಾನಸಕ್ಕೆ ಈ ಉತ್ಸವಗಳೂ ಕನ್ನಡಿಯಾಗಿವೆ. ಈಚೆಗೆ ರತ್ನಪುರಿಯ ಸರ್ವಜನಾಂಗದ ನಾಯಕರೂ ಸಾಮಾಹಿಕವಾಗಿ ಒಪ್ಪಿ ತೀರ್ಮಾನಿಸಿ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಆಶಯದ ಭಾರತ ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಯೋಜನೆ ಹಾಕಿಕೊಂಡಿದ್ದಾರೆ. ಈ ಸಂಬಂಧವಾಗಿ ಸ್ಥಾಪಿಸಲಾಗಿರುವ ಸಮಿತಿಯಲ್ಲಿ ಎಲ್ಲ ಜನಾಂಗದವರೂ ಸಂಚಾಲಕ-ಸದಸ್ಯರಾಗಿದ್ದು, ಜನಪ್ರಿಯ ದಲಿತ ಮುಖಂಡರಾದ ಹರಿಹರ ಆನಂದಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿಯೂ ಪಾಷ ಎಂಬವರನ್ನು ಕಾರ್ಯದರ್ಶಿಯನ್ನಾಗಿಯೂ ಮಾಡಲಾಗಿದೆ.

ತಮ್ಮ ತಮ್ಮ ಜಾತಿ, ಮತಗಳೇ ಆತ್ಯಂತಿಕ ಎಂಬ  ಶ್ರೇಷ್ಠತೆಯ ವ್ಯಸನ ಸುನಾಮಿಗೆ ಸಿಕ್ಕಿ ಮುಳುಗುತ್ತಿರುವ ಭಾರತವನ್ನು ಉಳಿಸಬಲ್ಲ ಶಕ್ತಿಯಿರುವುದು ಇಂತಹ ಸಾಮರಸ್ಯದ ಮಹಾನೌಕೆಗಳಿಗೆ ಮಾತ್ರ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಮೊದಲಾದ ಮತಾತೀತವಾಗಿ, ಮೇಲ್ಜಾತಿ-ಕೆಳಜಾತಿ ಎಂಬ ಯಾವುದೇ ಭಿನ್ನಭೇಧಗಳಿಲ್ಲದೆ ಎಲ್ಲರೂ ಏಕವಾಗಿ ಬಾಳುತ್ತಿರುವ ಪುಣ್ಯಭೂಮಿ ಈ ರತ್ನಪುರಿ. ಒಂದು ಕಾಲಕ್ಕೆ ಮುತ್ತುರತ್ನಗಳ ಆಗರವೇ ಆಗಿದ್ದ ರತ್ನಪುರಿಯು ಇಂದು ಸೌಹಾರ್ದರತ್ನದ ಆಗರವೂ ಆಗಿರುವುದು ನೆಲದ ಪುಣ್ಯವೋ ಎಂಬಂತಿದೆ.

” ೬೦ ವರ್ಷಗಳಿಂದ ಜಾತ್ರಾ ಮಹೋತ್ಸವ ಮತ್ತು ಉರುಸ್ ಆಚರಣೆಯನ್ನು ಶ್ರದ್ಧಾಭಕ್ತಿ ಮತ್ತು ಸಾಮರಸ್ಯದಿಂದ ಆಚರಿಸಲಾಗುತ್ತಿದೆ. ಎಲ್ಲರಿಗೂ ಸನ್ಮಂಗಳವನ್ನು ಉಂಟುಮಾಡಲಿ ಎನ್ನುವುದೇ ಆಂಜನೇಯಸ್ವಾಮಿ ಜಾತ್ರಾ ಸೇವೇ ಸಮಿತಿಯ ಆಶಯ. ಹಿಂದೂ ಮತ್ತು ಮುಸ್ಲಿಮರು ಜಾತ್ರಾ ಮಹೋತ್ಸವ ಮತ್ತು ಗಂಧೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ನಮ್ಮೂರಿನ ಈ ಜಾತ್ರೆ ನಮ್ಮೆಲ್ಲರ ಹೆಮ್ಮೆ.”

ಆರ್.ಪ್ರಭಾಕರ್, ಅಧ್ಯಕ್ಷರು, ಶ್ರೀ ಆಂಜನೇಯಸ್ವಾಮಿ ಜಾತ್ರಾ ಸಮಿತಿ

” ಆಂಜನೇಯಸ್ವಾಮಿಯ ಪಲ್ಲಕ್ಕಿ ಉತ್ಸವದಲ್ಲಿ ಇತರ ಜಿಲ್ಲೆಗಳಿಂದ ಆಗಮಿಸುವ ಮುಸ್ಲಿಮರು ಪಾಲ್ಗೊಂಡು ಹನುಮನ ದರ್ಶನ ಪಡೆದರೆ, ಜಾತ್ರೆಯ ಮೂರನೇ ದಿನ ಆಯೋಜನೆಗೊಳ್ಳುವ ಜಮಾಲಮ್ಮನ ಗಂಧೋತ್ಸವ ಮತ್ತು ಉರುಸ್‌ನಲ್ಲಿ ಹಿಂದೂಗಳು ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಆ ಮೂಲಕ ಸೌಹಾರ್ದತೆ, ಸಾಮರಸ್ಯದ ಪ್ರತೀಕವಾಗಿ ಜಾತ್ರೆ ಎಲ್ಲ ಮನೆ, ಮನಗಳನ್ನು ಗೆದ್ದಿದೆ.”

ಅಜ್ಗರ್ ಪಾಷ, ಮುಸ್ಲಿಂ ಮುಖಂಡ

ಮನುಷ್ಯರನ್ನು ಜೋಡಿಸುವ ದೇಗುಲಗಳು:  ಮನುಷ್ಯಲೋಕದೊಳಗೆ ಜಾತಿ, ಮತ, ಲಿಂಗ, ಭಾಷೆ, ಪ್ರದೇಶಗಳ ಸಂಕುಚಿತ ವಿಷಭಾವವು ಆಪಾದಮಸ್ತಕಕ್ಕೆ ಏರಿಕೊಂಡು ಸರ್ವವೂ ವಿಷಮಯವಾಗಿರುವಾಗ ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದಾದರೂ ಫಲ ಕೊಡುತ್ತದೆ ಎಂಬ ದೇವನೂರರ ಮಾತಿನಂತೆ ನಿಸ್ವಾರ್ಥ ನೆಲಕಾಯಕ ಮಾಡಿದ ಚೇತನಗಳು ನೆಲೆಗೊಂಡಿರುವ ನಮ್ಮ ಸುತ್ತಲಿನ ಕೆಲವು ಮುಖ್ಯ ಆರಾಧನಾ ತಾಣಗಳ ಕುರಿತು ಬೆಂಗಳೂರಿನ ಕ್ರಿಸ್ತು ಜಯಂತಿ ಡೀಮ್ಡ್ವಿ ಶ್ವವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಕುಪ್ನಳ್ಳಿ ಎಂ.ಭೈರಪ್ಪ ಬರೆಯುತ್ತಾರೆ.

ಆಂದೋಲನ ಡೆಸ್ಕ್

Recent Posts

ಒಂದು ಎಕರೆಯಲ್ಲಿ 102 ವಿವಿಧ ಬೆಳೆ : ರೋಗರಹಿತ ಬೆಳೆಗಳ ತಳಿ ಪ್ರದರ್ಶನ

ಸುತ್ತೂರು : ಕೇವಲ 1 ಎಕರೆ ಪ್ರದೇಶದಲ್ಲಿ ಸುಮಾರು 102 ಮಾದರಿಯ ವಿವಿಧ ತಳಿಯ ಬೆಳೆಗಳನ್ನು ಬೆಳೆಯಬಹುದೆಂಬುದನ್ನು ಸಾಬೀತು ಪಡಿಸಲಾಗಿದೆ.…

6 mins ago

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ 2 ತಿಂಗಳಲ್ಲಿ ದಾಖಲೆಯ ಆದಾಯ

ದಕ್ಷಿಣ ಕನ್ನಡ: ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣು ದೇವಸ್ಥಾನದ ಆದಾಯ 2025ರ ನವೆಂಬರ್‌ ಹಾಗೂ…

2 hours ago

ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ: ವಿಜಯೇಂದ್ರ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ…

2 hours ago

ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್:‌ 10 ಮಂದಿ ನಕ್ಸಲರ ಹತ್ಯೆ

ಜಾರ್ಖಂಡ್:‌ ಜಾರ್ಖಂಡ್‌ನ ಸಾರಂಡಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 10 ಮಂದಿ ನಕ್ಸಲರು…

2 hours ago

ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿ ವಿರೋಧಿಸಿ ಮುಂದುವರಿದ ಪ್ರತಿಭಟನೆ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ತೋಡಿಕೆ ಮತ್ತು ನಿರ್ಮಾಣ ಕಾರ್ಯಗಳ ವಿರುದ್ಧ ಮೈಸೂರಿನ ಹಲವು ನಾಯಕರು, ಚಿಂತಿತ ನಾಗರಿಕರು…

3 hours ago

ಸದನದಲ್ಲಿ ಅಗೌರವ ತೋರಿದ ಶಾಸಕರ ವಿರುದ್ಧ ಕ್ರಮ ಆಗಲಿ: ಆರ್.‌ಅಶೋಕ್‌

ಬೆಂಗಳೂರು: ಇಂದು ಕರಾಳ ದಿನ. ಕರಾಳ ರೀತಿಯಲ್ಲಿ ಈ ಅಧಿವೇಶನವನ್ನು ಕಾಂಗ್ರೆಸ್‌ ನಡೆಸಿದೆ ಎಂದು ವಿಪಕ್ಷ ನಾಯಕ ಆರ್.‌ಅಶೋಕ್‌ ಕಿಡಿಕಾರಿದ್ದಾರೆ.…

3 hours ago