ಕೆ.ಬಿ.ರಮೇಶನಾಯಕ
ಎಂಡಿಎ ಕರೆದಿದ್ದ ಡಿಪಿಆರ್ ತಯಾರಿಸುವ ಟೆಂಡರ್‌ನಲ್ಲಿ ನಾಲ್ಕು ಸಂಸ್ಥೆಗಳು ಭಾಗಿ
ವಿಸ್ತೃತ ಯೋಜನಾ ವರದಿ ತಯಾರಿಸಲು ೭.೫ ಕೋಟಿ ರೂ. ಅನುದಾನ ಮೀಸಲು
ಮೈಸೂರು: ವೇಗವಾಗಿ ಬೆಳೆಯುತ್ತಿರುವ ಮೈಸೂರಿಗೆ ಮತ್ತೊಂದು ಬಾಹ್ಯ ವರ್ತುಲ ರಸ್ತೆ(ಪೆರಿಫೆರಲ್ ರಿಂಗ್ ರೋಡ್) ನಿರ್ಮಿಸಲು ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲು ಶೀಘ್ರದಲ್ಲೇ ಸರ್ವೆ ಕಾರ್ಯ ಶುರುವಾಗಲಿದೆ.
ಡಿಪಿಆರ್ ತಯಾರಿಕೆಗೆ ಟೆಂಡರ್ ಕರೆಯಲಾಗಿದ್ದು, ನಾಲ್ಕು ಕಂಪೆನಿಗಳು ಭಾಗಿಯಾಗಿವೆ. ಇದರಲ್ಲಿ ಎಂಡಿಎ ವಿಧಿಸಿರುವ ಷರತ್ತುಗಳನ್ನು ಪೂರೈಸಬಲ್ಲ ಒಂದು ಕಂಪೆನಿಯನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಕಂಪೆನಿಗೆ ಅನುಮೋದನೆ ನೀಡುತ್ತಿದ್ದಂತೆ ಬಹುನಿರೀಕ್ಷಿತ ಬೃಹತ್ ಯೋಜನೆಗೆ ಮತ್ತೊಮ್ಮೆ ಜೀವ ಕಳೆ ಬರಲಿದೆ. ಎಂಡಿಎ ಬಜೆಟ್‌ನಲ್ಲಿ ೭.೫ ಕೋಟಿ ರೂ. ಅನುದಾನ ಮೀಸಲಿಟ್ಟಿರುವುದರಿಂದ ಸರ್ವೆ ಕಾರ್ಯ ಐದಾರು ತಿಂಗಳಲ್ಲಿ ಮುಗಿಯುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣವಾದರೆ ಮೈಸೂರು ಸೇರಿದಂತೆ ನಂಜನಗೂಡು, ಶ್ರೀರಂಗಪಟ್ಟಣ, ಹುಣಸೂರು, ತಿ.ನರಸೀಪುರ, ಎಚ್.ಡಿ.ಕೋಟೆ ಮಾರ್ಗಗಳು, ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ.
ಹಲವು ವರ್ಷಗಳ ಕನಸು: ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ೨೦೫೦ರ ವೇಳೆಗೆ ಜನಸಂಖ್ಯೆ ೩೫ರಿಂದ ೪೦ ಲಕ್ಷಕ್ಕೆ ಹೆಚ್ಚಾಗುವ ಅಂದಾಜು ಇಟ್ಟುಕೊಂಡಿರುವ ಎಂಡಿಎ ಈ ಹಿಂದೆಯೇ ನಗರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಸಂಬಂಧ ೭೫೦ ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಮುಂದಾಗಿತ್ತು. ಆದರೆ, ಆಗ ಯೋಜನೆ ಸಂಬಂಧ ಸಮೀಕ್ಷೆಯೇ ನಡೆಯದೆ ನನೆಗುದಿಗೆ ಬಿದ್ದಿತ್ತು. ಈಗ ಯೋಜನೆ ಮತ್ತೆ ಚಾಲ್ತಿಗೆ ಬರುವ ಜೊತೆಗೆ ಡಿಪಿಆರ್ ತಯಾರಿಸಲು ಟೆಂಡರ್ ಕರೆದು ನಾಲ್ಕು ಸಂಸ್ಥೆಗಳು ಸರ್ವೇ ಕಾರ್ಯಕ್ಕಾಗಿ ಮುಂದೆ ಬಂದಿರುವುದು ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್ ವಲಯದಲ್ಲಿ ಸಂತಸ ಉಂಟುಮಾಡಿದೆ.
೨,೫೦೦ ಕೋಟಿ ರೂ. ಅಂದಾಜು: ಮುಂದಿನ ೨೦ ವರ್ಷಗಳ ನಗರದ ಬೆಳವಣಿಗೆಯನ್ನು ಗಮದಲ್ಲಿಟ್ಟುಕೊಂಡು ಒಟ್ಟು ೭೩.೨೫ ಕಿ.ಮೀ. ಉದ್ದದ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ೨,೫೦೦ ಕೋಟಿ ರೂ. ಅಂದಾಜು ಮೊತ್ತದ ಯೋಜನೆ ನಿರೀಕ್ಷೆ ಹೊಂದಲಾಗಿದೆ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕಳೆದ ಮೂರು ವರ್ಷಗಳ ಹಿಂದೆ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ನೆರವು ನೀಡುವ ಭರವಸೆ ನೀಡಿದ್ದರು. ರಸ್ತೆ ನಿರ್ಮಾಣಕ್ಕೆ ಒಟ್ಟು ಅಂದಾಜು ೮೦೦ ಎಕರೆ ಜಾಗದ ಅವಶ್ಯಕತೆ ಇದೆ. ೨೦೧೬ರ ಸಿಡಿಪಿ ಯಲ್ಲಿಯೇ ಪೆರಿಫೆರಲ್ ರಿಂಗ್ ರೋಡ್ ಬಗ್ಗೆ ಪ್ರಸ್ತಾಪಿಸ ಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.೫೦ರಷ್ಟು ಅನುದಾನ ನೀಡಲಿದೆ. ಆದರೆ, ಯೋಜನೆಯ ಡಿಪಿಆರ್ ತಯಾರಾದ ಮೇಲೆ ಅದರ ಸ್ಪಷ್ಟರೂಪ, ನಿಖರ ಅಂದಾಜು ಮೊತ್ತ ತಿಳಿಯಲಿದೆ ಎನ್ನುತ್ತಾರೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು.
ಕೈಗಾರಿಕೆಗಳಿಗೆ ಉತ್ತೇಜನ: ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಿದರೆ ದೊಡ್ಡ ವಾಹನಗಳೂ ಸೇರಿದಂತೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಅನುಕೂಲವಾಗುತ್ತದೆ. ಹೊಸ ಬಡಾವಣೆಗಳು, ಗ್ರಾಮಗಳಿಗೂ ಸಂಪರ್ಕ ಸೌಲಭ್ಯ ಸಿಗುವುದರಿಂದ ಮುಂದೆ ಮೈಸೂರು ನಗರದಲ್ಲಿ ಸಂಚಾರ ಒತ್ತಡ ತಪ್ಪಿಸಬಹುದಾಗಿದೆ. ರಾಜ್ಯವಷ್ಟೇ ಅಲ್ಲ, ದೇಶ-ವಿದೇಶಗಳಿಂದ ಮೈಸೂರಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅಲ್ಲದೆ ಮೈಸೂರು ನಗರ ಮತ್ತು ಜಿಲ್ಲಾದ್ಯಂತ ಬೃಹತ್, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಆರಂಭಗೊಂಡಿರುವುದು ನಗರದಲ್ಲಿ ಜನಸಂಖ್ಯೆ ಹಾಗೂ ವಾಹನ ಸಂಖ್ಯೆ ಅಧಿಕವಾಗಲು ಪ್ರಮುಖ ಕಾರಣವಾಗಿದೆ.
ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣವಾದರೆ ಈ ಎಲ್ಲ ಸಮಸ್ಯೆಗೆ ಉತ್ತರ ಸಿಗಲಿದೆ. ಸದ್ಯ ನಗರದಲ್ಲಿನ ೪೪ ಕಿಮೀ ಉದ್ದದ ರಿಂಗ್ ರಸ್ತೆಯ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ನಗರದ ಟ್ರಾಫಿಕ್ ಒತ್ತಡಕ್ಕೆ ಮುಕ್ತಿ ಸಿಗಲಿದೆ. ಇದಲ್ಲದೆ ಹೊರವಲಯದಲ್ಲಿ ಬಡಾವಣೆಗಳನ್ನು ರಚಿಸಿರುವ ರಿಯಲ್ ಎಸ್ಟೇಟ್ ಮಾಲೀಕರಿಗೂ ಅನುಕೂಲ, ಭೂ ಸ್ವಾಽನವಾಗುವ ರೈತರ ಭೂಮಿಗೂ ಬಂಪರ್ ಬೆಲೆ ದೊರೆಯಲಿದೆ.
” ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡುವ ಸಂಬಂಧ ಸರ್ವೆ ಕಾರ್ಯಕ್ಕಾಗಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ನಾಲ್ಕು ಕಂಪೆನಿಗಳು ಮುಂದೆ ಬಂದಿವೆ. ಮೈಸೂರಿನ ಅಭಿವೃದ್ಧಿಗೆ ಪೂರಕವಾಗಿ ಬಾಹ್ಯ ವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಪ್ರಸ್ತುತ ಇರುವ ವರ್ತುಲ ರಸ್ತೆಯಿಂದ ೮ರಿಂದ ೧೦ ಕಿ.ಮೀ. ದೂರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸುವ ಯೋಜನೆಗೆ ಸಮೀಕ್ಷೆ ನಡೆಸಿ ಎಷ್ಟು ಭೂಮಿ ಅಗತ್ಯವಿದೆ. ಯಾವ ಗ್ರಾಮಗಳ ಮೇಲೆ ಹಾದು ಹೋಗುತ್ತದೆ, ಪ್ರಸ್ತುತ ಇರುವ ಯಾವ ರಸ್ತೆಗಳಿಗೆ ಸಂಪರ್ಕ ಕಲ್ಪಿಸಬಹುದು, ಒಟ್ಟಾರೆ ಯೋಜನೆಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದರ ಸಮಗ್ರ ಮಾಹಿತಿಯನ್ನೊಳಗೊಂಡ ಪ್ರಾಥಮಿಕ ವರದಿ ತಯಾರಿಸಲು ಶೀಘ್ರ ಸರ್ವೆ ಕಾರ್ಯ ಆರಂಭಿಸಲಾಗುವುದು.”
ಕೆ.ಆರ್.ರಕ್ಷಿತ್, ಆಯುಕ್ತರು, ಎಂಡಿಎ
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…