Andolana originals

ಅವಕಾಶ ವಂಚಿತ ಮಕ್ಕಳತ್ತ ರಂಗಾಯಣ ಹೆಜ್ಜೆ

ಚಿರಂಜೀವಿ ಸಿ. ಹುಲ್ಲಹಳ್ಳಿ

ಹಾಡಿಗಳಲ್ಲಿ ಬುಡಕಟ್ಟು ಮಕ್ಕಳಿಗಾಗಿ ಬೇಸಿಗೆ ಚಿಣ್ಣರ ಮೇಳ ಆಯೋಜನೆ 

ಮೈಸೂರು: ಅಲಕ್ಷಿತ ಸಮುದಾಯದ ಮಕ್ಕಳಲ್ಲೂ ವಿಭಿನ್ನ ಕಲಾ ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಹೊರತೆಗೆದು, ಸಾಣೆ ಹಿಡಿದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವುದಕ್ಕೆ ಮಾರ್ಗದರ್ಶನ ನೀಡುವ ಹಂಬಲದೊಂದಿಗೆ ನಗರದ ರಂಗಾಯಣವು ಆದಿವಾಸಿ, ಬುಡಕಟ್ಟು ಸಮುದಾಯಗಳ ಮಕ್ಕಳ ಬಳಿಗೇ ತೆರಳಲು ನಿರ್ಧರಿಸಿದೆ. ಆ ಮೂಲಕ ರಂಗಾಯಣ ಹೊಸದಾರಿಯಲ್ಲಿ ಹೆಜ್ಜೆ ಇಟ್ಟಿದೆ.

ಹೌದು. ರಂಗಾಯಣ ಇದೇ ಮೊದಲ ಬಾರಿಗೆ ಅವಕಾಶ ವಂಚಿತ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಸಲು ಮುಂದಾಗಿದೆ. ಮಕ್ಕಳ ಮನಸ್ಸುಗಳಲ್ಲಿ ರಂಗಭೂಮಿಯ ಕನಸುಗಳನ್ನು ಬಿತ್ತುವುದು ರಂಗಾಯಣದ ಆಶಯವಾಗಿದೆ.

ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಅವರು ಬುಡಕಟ್ಟು ಸಮುದಾಯಗಳು ವಾಸಿಸುವ ಹಾಡಿಗಳು
ಅಥವಾ ಪಟ್ಟಣ ಪ್ರದೇಶದಲ್ಲಿರುವ ಆದಿವಾಸಿ ಮಕ್ಕಳಿಗೆ ರಂಗಭೂಮಿಯನ್ನು ಪರಿಚಯಿಸುವ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮೈಸೂರಿನಲ್ಲಿ ರಂಗಾಯಣದಿಂದ ನಡೆಯುವ ಚಿಣ್ಣರ ಮೇಳದಂತೆಯೇ ಈ ಮಕ್ಕಳಿಗೂ ಮೇಳದ ಸೌಲಭ್ಯ ಲಭಿಸಲಿದೆ. ಆದರೆ, ಇವರಿಗೆ ಉಚಿತ ಅವಕಾಶ ಕಲ್ಪಿಸಲಾಗಿದೆ.

ವನ್ಯಜೀವಿಗಳನ್ನು ನೋಡುತ್ತಾ, ನವಿಲು ಮತ್ತಿತರ ಪಕ್ಷಿಗಳೊಂದಿಗೆ ಆಟವಾಡುತ್ತಾ ಬೆಳೆಯುವ ಕಾಡಿನ ಪುಟಾಣಿಗಳಲ್ಲಿಯೂ ಸುಶ್ರಾವ್ಯವಾಗಿ ಹಾಡುಬಲ್ಲ ಕಂಠಸಿರಿ, ಲಯಬದ್ಧವಾಗಿ ನರ್ತಿಸಬಲ್ಲ ದೇಹಚಲನೆಗಳನ್ನು ಬಹುಶಃ ಕಂಡರಿತಿರುವ ಸತೀಶ್ ಅವರು, ಮಕ್ಕಳ ನೈಜ ಪ್ರತಿಭೆಗೆ ಸುಭದ್ರ ನೆಲೆ ಒದಗಿಸುವ ಪ್ರಯತ್ನ ಮಾಡಲು ಮುಂದಾಗಿದ್ದಾರೆ.

ಮೈಸೂರಿನ ಏಕಲವ್ಯ ನಗರದ ಮಕ್ಕಳಿಗೂ ಭಾಗ್ಯ: ಬೀದಿಯಲ್ಲಿ ಆಡಿಕೊಂಡು ಹೆತ್ತವರಿಗೆ ನೆರವಾಗಲು ಸಣ್ಣಪುಟ್ಟ ಕೆಲಸ ಮಾಡುತ್ತಿರುವ ಏಕಲವ್ಯ ನಗರದ ಅಲೆಮಾರಿ ಮಕ್ಕಳು ಕೂಡ ಬೀದಿಯಲ್ಲಿ ಆಡಿಕೊಂಡು ತಮ್ಮದೇ ಲೋಕದಲ್ಲಿ ಬೆಳೆಯುತ್ತಿದ್ದಾರೆ. ಅಂತಹ ಮಕ್ಕಳಿಗೂ ರಂಗಭೂಮಿಯ ಬಾಗಿಲು ತೆರೆಯುವ ವಿಶಿಷ್ಟ ಸಾಹಸಕ್ಕೆ ರಂಗಾಯಣ ಮುಂದಾಗಿದೆ.

ಮೈಸೂರಿನಲ್ಲಿ ರಂಗಾಯಣದ ವಾರ್ಷಿಕ ಚಿಣ್ಣರ ಮೇಳ ಏ. ೧೪ರಿಂದ ಮೇ ೧೦ರವರೆಗೆ ಬೆಳಿಗ್ಗೆ ೧೦ರಿಂದ ಸಂಜೆ ೫ರವರೆಗೆ ನಡೆಯಲಿದೆ. ಇದೇ ಅವಧಿಯಲ್ಲಿ ಎಚ್. ಡಿ. ಕೋಟೆಯಿಂದ ಆರು ಕಿಲೋ ಮೀಟರ್ ದೂರವಿರುವ ಹೀರೆಹಳ್ಳಿ, ಸೋನೆಹಳ್ಳಿ ಯಲ್ಲಿನ ಎರಡೂ ಹಾಡಿಗಳ ಮಕ್ಕಳಿಗೆ ಒಂದು ಸ್ಥಳದಲ್ಲಿ ಮತ್ತು ಮೈಸೂರಿನ ಏಕಲವ್ಯ ನಗರದ ಮಕ್ಕಳಿಗೆ ಸ್ಥಳೀಯ ಸಮುದಾಯ ಭವನವೊಂದರಲ್ಲಿ ಮೇಳ ನಡೆಯಲಿದೆ.

ಚಿಣ್ಣರ ಮೇಳಕ್ಕೆ ಬರುವ ಸಂಪನ್ಮೂಲ ವ್ಯಕ್ತಿಗಳು ಮತ್ತು ರಂಗಾಯಣದ ಕಲಾವಿದರು ಈ ಮಕ್ಕಳನ್ನು ತಂಡಗಳಾಗಿ ವಿಂಗಡಿಸಿ,ಬಣ್ಣ ಬಣ್ಣದ ಚಿತ್ರ ಬಿಡಿಸುವ, ಕಥೆ ಹೇಳುತ್ತಾ, ಕೇಳುತ್ತಾ ಸಾಮೂಹಿಕವಾಗಿ ಹಾಡುವ, ನರ್ತಿಸುವ ಇತರೆ ಚಟುವಟಿಕೆಗಳನ್ನು ಕಲಿಸಲಿದ್ದಾರೆ.

ಮಕ್ಕಳಿಗೆ ಕಲೆಗಳ ಪರಿಚಯದೊಂದಿಗೆ ಬದುಕಿನ ಪಾಠದ ಪರಿಚಯವಾಗಲಿದೆ.

ಎರಡು ಹಾಡಿಗಳು ಮತ್ತು ಏಕಲವ್ಯ ನಗರದ ಶಿಬಿರದಲ್ಲಿ ೭ರಿಂದ ೧೪ ವರ್ಷದೊಳಗಿನ ತಲಾ ೫೦ ಮಕ್ಕಳನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಿದ್ದೇವೆ. ಇನ್ನೂ ಹೆಚ್ಚಿನ ಮಕ್ಕಳು ಬಂದರೂ ನಾವು ತರಬೇತಿ ನೀಡುತ್ತೇವೆ. ಈ ಶಿಬಿರಗಳಲ್ಲಿಯೂ ಒಬ್ಬರು ನಿರ್ದೇಶಕರು, ಉಪ ನಿರ್ದೇಶಕರೊಂದಿಗೆ ತಂಡವಿರಲಿದೆ ಎಂಬುದಾಗಿ ತಿಪಟೂರು ಸತೀಶ್ ಹೇಳುತ್ತಾರೆ.

ಕೊನೆಯ ದಿನ ನಾಟಕ ಪ್ರದರ್ಶನ
ಚಿಣ್ಣರ ಮೇಳದಲ್ಲಿ ಕಲಿತ ಮಕ್ಕಳು ಕೊನೆಯ ದಿನ ತಾವು ಕಲಿತದ್ದನ್ನು ಪ್ರದರ್ಶನ ಮಾಡಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಜೊತೆಗೆ ನಾಟಕ ಪ್ರದರ್ಶನವನ್ನು ಉಣಬಡಿಸಲಿದ್ದಾರೆ. ಇದೇ ಮಾದರಿಯಲ್ಲಿ ಆದಿವಾಸಿ ಮತ್ತು ಬುಡಕಟ್ಟು ಸಮುದಾಯದ ಮಕ್ಕಳು ನಾಟಕ ಪ್ರದರ್ಶನ ಮಾಡಲಿದ್ದಾರೆ.

ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯಂದು ಚಾಲನೆ
ಚಿಣ್ಣರ ಮೇಳ ಡಾ. ಬಿ. ಆರ್. ಅಂಬೇಡ್ಕರ್ ಜನ್ಮದಿನವಾದ ಏ. ೧೪ರಂದು ಉದ್ಘಾಟನೆಗೊಳ್ಳಲಿದ್ದು, ಮೂರು ಕಡೆಗಳಲ್ಲಿಯೂ ಅಂದೇ ಚಾಲನೆ ದೊರೆಯಲಿದೆ. ೨೫ ದಿನಗಳ ಕಾಲ ಮಕ್ಕಳಿಗೆ ರಂಗಭೂಮಿಯ ಚಟುವಟಿಕೆಗಳನ್ನು ಕಲಿಸಲಾಗುವುದು.

ಅವಕಾಶ ವಂಚಿತ ಮಕ್ಕಳಿಗೆ ಅವಕಾಶ ಕಲ್ಪಿಸುವುದು ನನ್ನ ಉದ್ದೇಶ. ಎಲ್ಲ ಮಕ್ಕಳು ರಂಗಾಯಣಕ್ಕೆ ಬರಲಾಗುವುದಿಲ್ಲ. ಸಾಮಾಜಿಕ ನ್ಯಾಯದಡಿ ಆದಿವಾಸಿ ಮತ್ತು ಅಲೆಮಾರಿ ಮಕ್ಕಳಿಗೂ ಬೇಸಿಗೆ ಶಿಬಿರದ ಪ್ರಯೋಜನ ಸಿಗಬೇಕು. ರಂಗಾಯಣದ ಕಲಾವಿದರು ಅವರಿರುವ ಸ್ಥಳಗಳಲ್ಲೇ ತರಬೇತಿ ನೀಡಲಿದ್ದಾರೆ. – ಸತೀಶ್ ತಿಪಟೂರು, ನಿರ್ದೇಶಕರು, ರಂಗಾಯಣ.

ಆಂದೋಲನ ಡೆಸ್ಕ್

Recent Posts

ದಸರಾ ವೆಬ್‌ಸೈಟ್‌ ಲೋಕಾರ್ಪಣೆ : ಅ.11ರಿಂದ 21ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…

5 hours ago

ತಮಿಳುನಾಡಿಗೆ ಕಾವೇರಿ ನೀರು: 3 ಸಾವಿರ ಕ್ಯೂಸೆಕ್‌ಗೆ ಇಳಿಸಲು ರಾಜ್ಯ ಸರ್ಕಾರ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್‌ ನೀರನ್ನು 3 ಸಾವಿರ…

8 hours ago

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಸೆಪ್ಟೆಂಬರ್.18 ರಿಂದ ಅಮಿತ್ ಶಾ 2 ದಿನ ರಾಜ್ಯ ಪ್ರವಾಸ ‌

ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…

8 hours ago

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

12 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

17 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

17 hours ago