ಪುನೀತ್ ಮಡಿಕೇರಿ
ಮಳೆಗಾಲದಲ್ಲಿ ಸಂಚಾರ ಅಪಾಯ ಹಿನ್ನೆಲೆ; ಕುಶಾಲನಗರ- ಪಿರಿಯಾಪಟ್ಟಣ ತಾಲ್ಲೂಕಿನ ಸಂಪರ್ಕಕ್ಕೆ ಬ್ರೇಕ್
ಮಡಿಕೇರಿ: ಕೊಡಗಿನ ಕುಶಾಲನಗರ ತಾಲ್ಲೂಕು ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಮಧ್ಯೆ ಬಾಂಧವ್ಯದ ಬೆಸುಗೆಯಾಗಿರುವ ರಾಮಸ್ವಾಮಿ ಕಣಿವೆಯ ತೂಗು ಸೇತುವೆಯನ್ನು ಮಳೆಯ ಕಾರಣ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಮಳೆಗಾಲದಲ್ಲಿ ಈ ಸೇತುವೆ ಮೇಲೆ ಓಡಾಟ ಅಪಾಯಕಾರಿ ಎನ್ನುವ ಕಾರಣಕ್ಕೆ ಗೇಟ್‌ಗೆ ತಂತಿಯ ಬಲೆಯನ್ನು ಹಾಕಿ ಮುಚ್ಚಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆಯೇ ಹಾಳಾಗಿದ್ದ ಈ ಸೇತುವೆಯನ್ನು ಸಕಾಲದಲ್ಲಿ ದುರಸ್ತಿ ಮಾಡಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಗಡಿಭಾಗದ ಗ್ರಾಮಗಳಾದ ದೊಡ್ಡ ಕಮರಹಳ್ಳಿ, ಶ್ಯಾನುಭೋಗನಹಳ್ಳಿ, ದಿಂಡಿಗಾಡು, ಮುತ್ತಿನಮುಳ್ಳುಸೋಗೆ, ಕಣಗಾಲು, ಹನುಮಂತಪುರ, ಕರಡಿ ಲಕ್ಕನಕೆರೆ ಕಾವೇರಿ ನದಿ ತೀರದ ಒಂದು ಕಡೆ ಇದ್ದರೆ ಮತ್ತೊಂದು ಕಡೆಯಲ್ಲಿ ಕೊಡಗಿನ ಕಣಿವೆ, ಭುವನಗಿರಿ, ಹುಲುಸೆ, ಹಕ್ಕೆ, ಕೂಡಿಗೆ, ಮರೂರು, ಹೆಬ್ಬಾಲೆ ಮತ್ತಿತರ ಗ್ರಾಮಗಳು ಇವೆ. ಇವೆರಡೂ ತೀರದ ಗ್ರಾಮಗಳ ಜನರ ನಡುವೆ ಉತ್ತಮ ಬಾಂಧವ್ಯ ಇದೆ. ಪಕ್ಕದ ತಾಲ್ಲೂಕಿನವರಿಗೆ ಹತ್ತಿರದ ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ಅಗತ್ಯ ವಸ್ತುಗಳು ಬೇಕಾದರೂ ಕಾವೇರಿ ನದಿಯನ್ನು ದಾಟಿ ಬರಲೇಬೇಕು. ಕುಶಾಲನಗರದ ಕೈಗಾರಿಕಾ ಬಡಾವಣೆಯಲ್ಲಿ ಅತ್ತ ಕಡೆಯ ಸಾವಿರಾರು ಜನರು ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ವಿವಿಧ ರೀತಿಯ ಉದ್ಯೋಗಾವಕಾಶಗಳಿಗಾಗಿ ಪ್ರತಿನಿತ್ಯ ಓಡಾಡುವವರೂ ಇದ್ದಾರೆ. ಇವರಿಗೆಲ್ಲಾ ರಾಮಸ್ವಾಮಿ ಕಣಿವೆಯ ಈ ತೂಗು ಸೇತುವೆಯೇ ಸುಲಭದ ಸಂಪರ್ಕ ಹಾದಿಯಾಗಿದೆ.
ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಪಿ.ಅಪ್ಪಚ್ಚು ರಂಜನ್ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ ಇಲ್ಲಿಗೆ ತೂಗು ಸೇತುವೆ ನಿರ್ಮಿಸಿ ಕೊಡುವಲ್ಲಿ ಯಶಸ್ವಿ ಆಗಿದ್ದರು. ಕೊಡಗು ಮತ್ತು ಮೈಸೂರು ಜಿಲ್ಲೆಗೆ ಅತಿ ಹತ್ತಿರದಲ್ಲಿ ಸಂಪರ್ಕ ಕಲ್ಪಿಸುವ ಈ ಸೇತುವೆಯಿಂದ ಬಹಳಷ್ಟು ಜನರಿಗೆ ದೊಡ್ಡ ಮಟ್ಟದಲ್ಲಿ ಉಪಯೋಗ ಆಗುತ್ತಿತ್ತು.
೨೦೧೮ರಲ್ಲಿ ಜಿಲ್ಲೆಯಲ್ಲಿ ಸುರಿದ ಮಹಾಮಳೆಯ ಸಂದರ್ಭದಲ್ಲಿ ಕಾವೇರಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಈ ಸೇತುವೆಗೆ ಹಾನಿ ಆಗಿತ್ತು. ತೂಗು ಸೇತುವೆಯ ಮೇಲೆ ನೀರು ಹರಿದ ಪರಿಣಾಮದಿಂದ ಕಬ್ಬಿಣದ ರಾಡುಗಳು ಮತ್ತು ಅದಕ್ಕೆ ಅಳವಡಿಸಿದ್ದ ಕಾಂಕ್ರೀಟ್ ಮೆಟ್ಟಿಲುಗಳು ಹಾಳಾಗಿದ್ದವು. ನಂತರ ಸ್ವಲ್ಪ ಮಟ್ಟಿಗೆ ದುರಸ್ತಿ ಕಾರ್ಯ ನಡೆದರೂ ೨೦೧೯ರ ಕುಂಭದ್ರೋಣ ಮಳೆಗಾಲದಲ್ಲಿ ಮತ್ತೆ ಹಾನಿಗೆ ಒಳಗಾಯಿತು. ಹಾಳಾದ ಮೆಟ್ಟಿಲುಗಳನ್ನು ೨೦೨೦ರಲ್ಲಿ ದುರಸ್ತಿ ಮಾಡಿ ಅಳವಡಿಸಲಾಯಿತು.
ಇದೀಗ ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿದ್ದು, ಕಾವೇರಿ ಮತ್ತು ಹಾರಂಗಿ ನದಿಗಳು ತುಂಬಿ ಹರಿಯುತ್ತಿವೆ. ಹಾಗಾಗಿ ಕಣಿವೆಯಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯ ತಪ್ಪಿಸಲು ಕುಶಾಲನಗರ ತಾಲ್ಲೂಕು ಆಡಳಿತ ತೂಗು ಸೇತುವೆಯನ್ನೇ ಬಂದ್ ಮಾಡಿದೆ. ಸೇತುವೆಯ ದ್ವಾರವನ್ನು ಕಬ್ಬಿಣದ ಬಲೆ ಅಳವಡಿಸಿ ಮುಚ್ಚಲಾಗಿದೆ. ಉಳಿದೆಡೆ ಗೇಟ್‌ಗಳಿಗೆ ಬೀಗ ಹಾಕಲಾಗಿದೆ.
ಸಂಚಾರಕ್ಕೆ ಮುಕ್ತಗೊಳಿಸಲು ಒತ್ತಾಯ: ಕುಶಾಲನಗರ ತಾಲ್ಲೂಕು ಕಣಿವೆ ಗ್ರಾಮದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯನ್ನು ಕೂಡಲೇ ದುರಸ್ತಿಪಡಿಸಿ ಅಳವಡಿಸಿರುವ ಬೀಗ ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
” ಕುಶಾಲನಗರ ತಾಲ್ಲೂಕು ಕಣಿವೆ ತೂಗು ಸೇತುವೆ ಪರಿಶೀಲನೆ ನಡೆಸಲಾಗಿದೆ. ಮಳೆ ಹೆಚ್ಚಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆಯನ್ನು ಮುಚ್ಚಲಾಗಿದೆ. ಪ್ರವಾಸಿಗರು ತೆರಳದಂತೆ ರಾಮೇಶ್ವರ ದೇವಾಲಯದ ಬಳಿ ಹೊಳೆಗೆ ಹೋಗುವ ಗೇಟ್‌ಗೆ ಕೂಡ ಬೀಗ ಅಳವಡಿಸಲಾಗಿದೆ.”
-ಕಿರಣ್ ಗೌರಯ್ಯ, ತಹಸಿಲ್ದಾರ್, ಕುಶಾಲನಗರ
ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.…
ಬೆಳಗಾವಿ: ಬೆಳಗಾವಿ ಅಧಿವೇಶನ ವಿರೋಧಿಸಿ ಎಂಇಎಸ್ ಪುಂಡರು ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದಿನಿಂದ…
ಬೆಂಗಳೂರು: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಮೊದಲ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್ ಗೈರಾಗಿದ್ದಾರೆ. ಇಂದಿನಿಂದ ಡಿಸೆಂಬರ್.19ರವರೆಗೆ ಅಧಿವೇಶನ…
ಬೆಂಗಳೂರು: ನಾಯಕತ್ವ ಬದಲಾವಣೆ ಗೊಂದಲ, ಸರ್ಕಾರದಲ್ಲಿ ಶೇಕಡಾ.63 ರ್ಷಟು ಕಮಿಷನ್ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ…
ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದ ಬಳಿಕ ಅಲ್ಲಲ್ಲಿ ಕೆರೆ-ಕಟ್ಟೆ, ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣ ಮೇಲಿಂದ ಮೇಲೆ ಭಾರೀ…