ಲಕ್ಷಿ ಕಾಂತ್ ಕೊಮಾರಪ್ಪ
ಕೃಷಿಕರಿಂದ ಅಗತ್ಯ ಸಾಮಗ್ರಿಗಳ ಖರೀದಿ; ಶೀಘ್ರದಲ್ಲೇ ಕೆಲಸ ಪೂರ್ಣಗೊಳಿಸಬೇಕಾದ ಅನಿವಾರ್ಯತೆ
ಸೋಮವಾರಪೇಟೆ: ವಾಯುಭಾರ ಕುಸಿತದಿಂದ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಒಂದು ವಾರ ಧಾರಾಕಾರವಾಗಿ ಸುರಿದ ಮಳೆಯು ಬಿಡುವು ನೀಡಿದ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದ ಕೃಷಿ ಫಸಲಿಗೆ ಹಾನಿಯಾಗಿತ್ತು. ಹಸಿಮೆಣಸಿನ ಗಿಡಗಳು ಗಾಳಿ ಮಳೆಗೆ ನೆಲಕಚ್ಚಿದ್ದವು. ಬೀನ್ಸ್ ಹಾಗೂ ತರಕಾರಿ ಬೆಳೆಗಳಿಗೂ ಹಾನಿಯಾಗಿತ್ತು. ಕಾಫಿ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ, ಕಾಫಿ ಗಿಡಗಳ ಎಲೆಗಳು ಉದುರಲು ಪ್ರಾರಂಭಿಸಿದ್ದವು. ಧಾರಾಕಾರ ಮಳೆಯಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿತ್ತು. ಭತ್ತ ಸಸಿ ಮಡಿ ಮಾಡಲು ಸಾಧ್ಯವಾಗಿರಲಿಲ್ಲ. ಕಾಫಿ ತೋಟಗಳಿಗೆ ಶಿಲೀಂಧ್ರ ನಾಶಕ ಸಿಂಪಡಿಸುವುದು, ಮರ ಕಪಾತು, ರಾಸಾಯನಿಕ ಗೊಬ್ಬರವನ್ನು ಹಾಕುವ ಕೆಲಸಗಳಿಗೆ ಹಿನ್ನೆಡೆಯಾಗಿತ್ತು. ಇದೀಗ ಬಿಸಿಲಿನ ವಾತಾವರಣ ಕಾಣಿಸಿಕೊಂಡಂತೆ ಗ್ರಾಮೀಣ ಪ್ರದೇಶದಲ್ಲಿ ರೈತರು ಕೃಷಿ ಚಟುವಟಿಕೆಗೆ ಸಿದ್ಧವಾಗುತ್ತಿದ್ದಾರೆ. ಭೂಮಿಯಲ್ಲಿ ಭತ್ತದ ಸಸಿಮಡಿ ಮಾಡಲು ಗದ್ದೆಯನ್ನು ಉತ್ತು ಮಣ್ಣನ್ನು ಹದಗೊಳಿಸಲು ಕೃಷಿಕರು ಮುಂದಾಗಿದ್ದಾರೆ.
ಸೋಮವಾರಪೇಟೆ ಪಟ್ಟಣಕ್ಕೆ ಆಗಮಿಸುತ್ತಿರುವ ಕೃಷಿಕರು, ಕೃಷಿಗೆ ಅಗತ್ಯ ಪರಿಕರಗಳನ್ನು ಖರೀದಿ ಮಾಡುತ್ತಿದ್ದ ಚಿತ್ರಣಗಳು ಕಂಡುಬರುತ್ತಿದೆ. ಗುದ್ದಲಿಗಳ ಖರೀದಿ, ಗದ್ದೆ ಉಳುಮೆ ಮಾಡುವಾಗ ಮಳೆಯಿಂದ ರಕ್ಷಣೆ ಪಡೆಯಲು ಪ್ಲಾಸ್ಟಿಕ್ ಹೊದಿಕೆಗಳು ಹಾಗೂ ಭತ್ತ ಬಿತ್ತನೆ ಬೀಜಕ್ಕೆ ಸಿಂಪಡಿಸುವ ಕ್ರಿಮಿನಾಶಕಗಳನ್ನು ಕೊಂಡುಕೊಂಡರು. ಕಾಫಿ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ವಿಳಂಬವಾದ ಹಿನ್ನೆಲೆಯಲ್ಲಿ, ಬೆಳೆಗಾರರು ಕಾಫಿ ಬುಡವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೆರಡು ದಿನಗಳ ಕಾಲ ಮಳೆ ಬಿಡುವು ಕೊಟ್ಟರೆ ಕಾಫಿ ತೋಟದ ಕೆಲಸಗಳನ್ನು ಮುಂದುವರಿಸಬಹುದು ಎಂದು ಕಾಫಿ ಬೆಳೆಗಾರ ದಿವಾಕರ್ ಕೂತಿ ಹೇಳಿದರು.
ಕಾಫಿ ಗಿಡದ ಚಿಗುರು ತೆಗೆದು, ರಾಸಾಯನಿಕ ಗೊಬ್ಬರ ಹಾಕಿ ಶಿಲೀಂಧ್ರನಾಶಕ ಸಿಂಪಡಿಸುವುದು ಅನಿವಾರ್ಯವಾಗಿದೆ. ಈಗ ಕಾರ್ಮಿಕರ ಕೊರತೆಯಿಂದ ನಿಗದಿತ ಸಮಯದಲ್ಲಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಬೆಳೆಗಾರರು. ತಾಲ್ಲೂಕಿನ ಶಾಂತಳ್ಳಿ ಹೋಬಳಿಯಾದ್ಯಂತ ಕೃಷಿ ಚಟುವಟಿಕೆ ಹೆಚ್ಚು ಬಿರುಸುಗೊಂಡಿದೆ. ಟ್ರಾಕ್ಟರ್, ಎತ್ತುಗಳ ಮೂಲಕ ಉಳುಮೆ ಶುರುವಾಗಿದೆ. ದೀರ್ಘಾವಽ ತಳಿಗಳ ಸಸಿಮಡಿ ಮಾಡುತ್ತಿದ್ದು, ಗದ್ದೆಗಳನ್ನು ಉಳುಮೆ ಕಾರ್ಯಕ್ಕೆ ಸಿದ್ಧಪಡಿಸುವ ಸಂಬಂಧ ಕೆಲವು ರೈತರು ಟಿಲ್ಲರ್, ಟ್ರಾಕ್ಟರ್ ಇನ್ನಿತರೆ ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಸೂಕ್ತ ವ್ಯವಸ್ಥೆ ಇಲ್ಲದವವರು ಸಾಂಪ್ರಾದಾಯಕ ಜೋಡೆತ್ತಿಗೆ ನೇಗಿಲು ಕಟ್ಟಿಕೊಂಡು ಉಳುಮೆ ಮಾಡುತ್ತಿದ್ದಾರೆ.
ಮಳೆ ಇದ್ದಾಗಲೇ ಸಸಿಮಡಿ ಮಾಡಿಕೊಂಡು ಗದ್ದೆಯ ಮಣ್ಣನ್ನು ಹದಗೊಳಿಸಬೇಕು, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆ ಸುರಿದಿದೆ. ವ್ಯಾಪ್ತಿಯ ಕುಂಬಾರಗಡಿಗೆ, ಸೂರ್ಲಬ್ಬಿ, ಮಂಕ್ಯಾ, ಗರ್ವಾಲೆ, ಕಿಕ್ಕರಹಳ್ಳಿ ಗ್ರಾಮಗಳಲ್ಲಿ ಕೃಷಿಕರಿಗೆ ಸದ್ಯಕ್ಕೆ ಭತ್ತವೇ ಜೀವನಾಧಾರ ಬೆಳೆಯಾಗಿದೆ. ಈ ಕಾರಣದಿಂದ ಭತ್ತದ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
” ವಾಡಿಕೆಯಂತೆ ಜೂನ್ ಎರಡನೇ ವಾರದಲ್ಲಿ ಮಳೆ ಪ್ರಾರಂಭವಾಗಿದ್ದರೆ, ದೊಡ್ಡಮಟ್ಟದ ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಈ ಬಾರಿ ಬೇಗನೆ ಮಳೆ ಸುರಿದಿದ್ದು, ಕೆಲಸಗಳು ವಿಳಂಬವಾಗಿವೆ. ಶೀಘ್ರದಲ್ಲಿ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರತಿ ವರ್ಷವೂ ಈ ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗಿದೆ.”
-ಶರಣ್ ಹರಗ, ಕೃಷಿಕರು, ಸೋಮವಾರಪೇಟೆ
” ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಭತ್ತ ಸಸಿ ಮಾಡಲು ರೈತರು ಮುಂದಾಗಿದ್ದಾರೆ. ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜ ಸಬ್ಸಿಡಿಯಲ್ಲಿ ದೊರೆಯುತ್ತದೆ. ಇಂಟಾನ್, ತುಂಗ, ಬಿ.ಆರ್.ಅಥಿರಾ, ಐಆರ್೬೪, ಎಂಟಿಯು ೧೦೦೧ ಭತ್ತದ ಬೀಜವನ್ನು ರೈತರಿಗೆ ವಿತರಿಸಲಾಗುವುದು.”
-ಕೆ.ಪಿ.ವೀರಣ್ಣ, ಕೃಷಿ ಸಹಾಯಕ ನಿರ್ದೇಶಕ, ಸೋಮವಾರಪೇಟೆ
ಕಾಫಿ ಬೆಳೆಯೇ ಹೆಚ್ಚು:
ಸೋಮವಾರಪೇಟೆ ತಾಲ್ಲೂಕಿನಲ್ಲಿ ವಾರ್ಷಿಕವಾಗಿ ೯,೪೦೦ ಹೆಕ್ಟೆರ್ ಭತ್ತ, ೩,೮೦೦ ಹೆಕ್ಟೆರ್‌ನಲ್ಲಿ ಮುಸುಕಿನ ಜೋಳ, ಬಾಳೆ, ಶುಂಠಿ ಬೆಳೆಯಲಾಗುತ್ತದೆ. ಹಿಂಗಾರುವಿನಲ್ಲಿ ೫೦೦ರಿಂದ ೬೦೦ ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ, ೩೦ ಹೆಕ್ಟೇರ್ ನಲ್ಲಿ ಹೊಗೆಸೊಪ್ಪು, ೪೦ ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಒಟ್ಟು ೨೮,೫೪೦ ಹೆ.ನಲ್ಲಿ ಕಾಫಿ ಬೆಳೆಯುತ್ತಿದ್ದು, ೨೨,೯೪೦ ಹೆ.ನಲ್ಲಿ ಅರೇಬಿಕಾ, ೫,೬೦೦ ಹೆ.ನಲ್ಲಿ ರೊಬೆಸ್ಟಾ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ತಾಲ್ಲೂಕಿನ ಅರೇಬಿಕಾ ಕಾಫಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಶೇ.೮೦ರಷ್ಟು ಮಂದಿ ಹಿಂಗಾರು ಮತ್ತು ಮುಂಗಾರು ಮಳೆಯನ್ನು ಆಶ್ರಯಿಸಿದ್ದಾರೆ.
ಹುಣಸೂರು: ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳಿಂದ ಅರಣ್ಯ ಪ್ರವೇಶ ಅಭಿಯಾನ ಹುಣಸೂರು: ತಾಲ್ಲೂಕಿನ ಆದಿವಾಸಿಗಳು ೨೦೦೬ರ ಆರಣ್ಯ ಹಕ್ಕು…
ಕೆ.ಬಿ.ರಮೇಶ ನಾಯಕ ೨೦೧೩-೧೪, ೨೦೧೪-೧೫ನೇ ಸಾಲಿನಲ್ಲಿ ಪ್ರವೇಶ ಪಡೆದು ಉತ್ತೀರ್ಣರಾದವರಿಗೆ ಪದವಿ ಪ್ರಮಾಣಪತ್ರ ಮುಕ್ತ ವಿವಿಯ ಇನ್‌ಹೌಸ್‌ನಲ್ಲಿ ಪ್ರವೇಶ ಪಡೆದಿದ್ದವರಿಗೆ…
ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದ ಕ್ಯಾಂಟೀನ್ ಮುಚ್ಚಿದ್ದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆ ಎಚ್.ಡಿ.ಕೋಟೆ: ಅನೇಕ ವಿದ್ಯಾರ್ಥಿಗಳಿಗೆ, ಕೂಲಿ…
ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದ ಕ್ಷಿಪ್ರ ಕಾರ್ಯಪಡೆ ರಚನೆಗೆ ಒಪ್ಪಿಗೆ ಮೈಸೂರು: ಶಿಕ್ಷಣ, ಸಾಮಾಜಿಕ, ಆರೋಗ್ಯ ಮತ್ತಿತರ ಸೇವಾ…
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…