ಡಾ. ಕಲೀಮ್ ಉಲ್ಲಾ
ಮಂಡ್ಯದಲ್ಲಿ ಹಳ್ಳಿ ಶೈಲಿಯ ಮಟನ್ ಮುದ್ದೆ ಊಟ ಎಲ್ಲಿ ಸಿಗುತ್ತದೆ ಎಂದು ಫೋನು ಹಚ್ಚಿ ಅನೇಕರ ವಿಚಾರಿಸಿದೆವು. ನಮ್ಮ ಸಂಪರ್ಕದ ಮಾಹಿತಿ ವ್ಯಕ್ತಿಗಳು ಸಮ್ಮೇಳನದಲ್ಲಿ ಸಿಕ್ಕಿಬಿದ್ದು ಕರೆ ಅವರ ತನಕ ಹೋಗುತ್ತಿರಲಿಲ್ಲ. ಲತಕ್ಕ ಮತ್ತು ಸುಶಿಯಕ್ಕ ಉಪ್ಪು ಸಾರು ಮುದ್ದೆ ಹುಡುಕುತ್ತಾ ಹೊರಟರು ರೈಲು ನಿಲ್ದಾಣದ ದಾರಿ ಹಿಡಿದರು. ನನ್ನ ಮಂಡ್ಯದ ಗೆಳೆಯ ನಿಂಗೇಗೌಡನಿಗೆ ಪೋನು ಹಚ್ಚಿ ಕೇಳಲಾಗಿ ಅವನು ಯಾರಿಗೋ ಕೇಳಿ ಒಂದು ಹೊಟೆಲ್ಲು ಹೆಸರು ಸೂಚಿಸಿದ. ಊಟ ಮುಗಿಸಿ ಸಮ್ಮೇಳನಕ್ಕೆ ಬಂದಾಗ ಬಿಸಿಲು ತಾರಾಮಾರಿ ಬಾರಿಸುತ್ತಿತ್ತು.
ಬಣ್ಣಬಣ್ಣದ ಬಟ್ಟೆಯ ಶಾಲೆಯ ಚಿಣ್ಣರು ಟೀಚರ್‌ಗಳ ಸೂಚನೆ ಮೀರಿ ತಮ್ಮಿಷ್ಟವಾಗಿ ಕುಣಿದು ಓಡುತ್ತಿದ್ದರು. ಅವರಿಗೆ ದೂಳು, ಬಿಸಿಲು, ಸೆಕೆಯ ಯಾವ ಬಾಧೆಗಳು ತಲುಪಿರಲಿಲ್ಲ. ಅವ್ವ ಅಪ್ಪನ ಬಾಲ ಹಿಡಿದು ಬಂದ ಮಕ್ಕಳಿಗೆ ಶುರುವಿನಿಂದಲೇ ಆಕರ್ಷಣೆಗಳಿದ್ದವು. ಗೊಂಬೆ, ಪೀಪಿ, ಐಸು. ‘ಹೊತ್ತೂಡಿದ ಇಲ್ಲೀಗಂಟ ಕೊಡ್ಸುಸ್ತೀನಂತ ಸುಳ್ಳೇ ಹೇಳೀಯಾ? ’ ಎಂದು ಅವು ಮುನಿಸಿಕೊಂಡು ಬಂಡಾಯ ಹೇಳುತ್ತಿದ್ದವು. ಕೈಯನ್ನು ಹಿಂದಕ್ಕೆ ಜಗ್ಗುತ್ತಿದ್ದವು. ‘ಯೇ. . . ಕೊಡ್ಸೋಗಂಟ ಸುಮ್ನಿರು ಮೂದೇವಿ’ ಎಂದು ಅವ್ವ ತಿವಿಯುತ್ತಿದ್ದಳು. ಯುವತಿಯರು ಮೊಬೈಲ್ ಸೆಲ್ಛಿಗಳಲ್ಲಿ, ನಾಚಿಕೆಯ ನಗುವಿನಲ್ಲಿ ಮಗ್ನರಾಗಿದ್ದರು.
ಹಬ್ಬದ ಸಡಗರವ ಮೈತಾಳಿ ಸಿಂಗಾರಗೊಂಡು ಅನೇಕ ಹಳ್ಳಿಯ ಹೆಣ್ಣು ಮಕ್ಕಳು ನಲುವಿನಿಂದ ಎಲ್ಲವನ್ನೂ ಗಮನಿಸುತ್ತಿದ್ದರು. ಸಮ್ಮೇಳನದ ಒಳಗೆ ಏನು ನಡೆಯುತಿದೆಯೋ ಇನ್ನೂ ಗೊತ್ತಿಲ್ಲ. ಹೊರಗಂತೂ ಪರಿಷೆಯ ಸಡಗರ, ಸಂಭ್ರಮ ತುಂಬಿತ್ತು. ಇಲ್ಲೊಂದು ಕಡೆ ಕನ್ನಡದ ತೇರಿನ ಎದುರು ಅನೇಕರು ಗೀತೆಗಳಿಗೆ ನೃತ್ಯ ಮಾಡುತ್ತಿದ್ದರು. ಬಸವಣ್ಣನವರ ಪ್ರತಿಮೆಯ ಮುಂದೆ ಪಟ ತೆಗೆಸುವವರದು ನೂಕು ನುಗ್ಗಲು. ನಡುವೆ ತೂರಿ ಬರುವ ನಡಿಗೆಯ ವ್ಯಾಪಾರಗಾರರು. ಮುದ್ದು ಮಕ್ಕಳು. ಹೈರಾಣಾಗಿ ಹೋದ ಪೊಲೀಸರು. ರಸ್ತೆಯಲ್ಲೇ ಸಿ. ಬಸಲಿಂಗಯ್ಯ ಅವರನ್ನು ಕಂಡು ಅನೇಕರು ಸುತ್ತುವರೆದರು. ಮಾತಾಡಿಸಿ ಪಟಕ್ಕೆ ನಿಲ್ಲುತ್ತಿದ್ದರು. ‘ಇಷ್ಟು ದೊಡ್ಡ ಸಮ್ಮೇಳನದಲ್ಲಿ ಒಂದು ನಾಟಕ ಪ್ರದರ್ಶನಕ್ಕೆ ಅವಕಾಶ ಇಲ್ಲದಂತಾಯಿತಲ್ಲ’ ಎಂದು ಬಸು ಅವರು ಚಡಪಡಿಸುತ್ತಿದ್ದರು. ಮೊದಲು ಪುಸ್ತಕ ಮಳಿಗೆಗೆ ಹೋಗೋಣ ಎಂದು ಹೊರಟೆವು.
ಇಕ್ಕಟ್ಟಾದ ಜಾಗೆಯಲ್ಲಿ ಕಣ್ಣು ಎತ್ತರಿಸಿದಷ್ಟು ದೂರಕ್ಕೂ ಜನರ ಮಂಡೆಗಳೇ. ಪುಸ್ತಕ ಮಳಿಗೆ ಒಳ ಹೋಗುವ ಮತ್ತು ಹೊರ ಬರುವ ಹಾದಿಯಲ್ಲಿ ಚಕ್ರವ್ಯೂಹದ ರಚನೆ ಹಾಸಲಾಗಿತ್ತು. ಜನರ ಕೇಳಿ ವಿಚಾರಿಸಿ ನುಗ್ಗಬೇಕಿತ್ತು. ಮೊದಲ ಗುಡಾರಗಳಲ್ಲಿದ್ದ ಜನರ ಪ್ರವಾಹ ನೋಡಿ ಹೆದರಿ ನಾವು ಕೊನೆಯ ಗುಡಾರಗಳತ್ತ ಹೋದೆವು. ಬಿಳಿಯ ಜರ್ಮನ್‌ಗುಡಾರಗಳಿಂದ ಹೊರ ಬರುತ್ತಿದ್ದ ಜನರ ಮುಖ, ಹಣೆ, ಬೋಳು ತಲೆಗಳು ಹನಿ ನೀರ ಸಿಂಪಡಿಸಿಕೊಂಡು ಮಿಂಚುತ್ತಿದ್ದವು. ಉಸಿರು ಸಿಗದೆ ಒದ್ದಾಡುವ ಗುಹೆಗಳಾಂತಾಗಿ ಜನ ಹೆಚ್ಚು ಹೊತ್ತು ಒಳಗೆ ನಿಲ್ಲದೆ ಹೊರ ಬಂದು ಜೀವ ತಡವಿ ನೋಡಿಕೊಂಡರು.
ಮುಖ್ಯ ವೇದಿಕೆಯ ಮಾತುಗಳು ಎಲ್ಲಾ ಕಡೆಗೂ ಕೇಳುತ್ತಿದ್ದ ಕಾರಣ ನಾವು ಓಡಾಡಿಕೊಂಡೇ ರೇಡಿಯೋ ತರಹ ಆಲಿಸುತ್ತಿದ್ದೆವು. ಅನೇಕ ಗೆಳೆಯರು, ಕನ್ನಡದ ಲೇಖಕರು, ಕಲಾವಿದರು ಸಿಕ್ಕರು. ತಮ್ಮ ವಿದ್ಯಾರ್ಥಿಗಳ ಕರಕೊಂಡು ಬಂದು ಸಾಹಿತ್ಯದ ಹಂಬಲ ಹೆಚ್ಚಿಸುವ ಅನೇಕ ಮೇಷ್ಟ್ರುಗಳು ಸಿಕ್ಕರು. ಭಾವನಾತ್ಮಕವಾಗಿ ಕಂಡು ಮಾತಾಡುವ ಓದುಗ ಅಭಿಮಾನಿಗಳು ಸಿಕ್ಕು ಪುಸ್ತಕದ ಮೇಲೆ ಹಸ್ತಾಕ್ಷರ ಪಡೆದರೆ ಅಲ್ಲೇ ಸ್ವರ್ಗ. ಈಗ ಪಟ ಪಡೆದು ನೆನಪು ಉಳಿಸಿಕೊಳ್ಳುವ ಹೊಸ ಐಡಿಯಾ ಕೂಡ ಚೆನ್ನ. ಮಳೆ, ಸೆಕೆ, ನೂಕು ನುಗ್ಗಲು, ಇಕ್ಕಟ್ಟು, ನೆರಳಿಲ್ಲದ ಕೊರಗು.
ಕೊನೆಯ ದಿನ ಮಳೆ ಕೆಸರ ಪಿಚಿಪಿಚಿ ಎಂಬ ಅನಿವಾರ್ಯಗಳು. ಕೊನೆಯ ದಿನ ಬಾಡೂಟ ಸಿಗುವ ವಿಚಾರ ತಲುಪಿ ಮುಖ್ಯ ಸ್ಥಳಕ್ಕೆ ಹೋಗುವಲ್ಲಿಗೆ ಹೋರಾಟಗಾರ ರಾಜೇಂದ್ರ ಪ್ರಸಾದ್‌ಸಿಕ್ಕರು. ಬಾಡೂಟದ ಪಾತ್ರೆ ಪಗಡೆ ಬಂದ ಕ್ಷಣ ಮಾತ್ರದಲ್ಲಿ ಮಾಧ್ಯಮದವರ ಆಗಮನವೂ ಹಿಂದೆಯೇ ಪೋಲೀಸರ ದೌಡು ನಡೆಯಿತು. ಕಣ್ಣೆದುರೇ ಅನ್ನ, ಸಾರು, ಮುದ್ದೆಗಳು ಅರೆಸ್ಟ್ ಆಗಿ ಜೀಪು ಸೇರಿದವು. ಎಳೆದಾಟದಲ್ಲಿ ಘಮಘಮಿಸುವ ಚಿಕನ್ ಸಾರ್ ಕಪ್ಪು ನೆಲ ಹೀರಿತು. ಮೊಟ್ಟೆಯ ಪೊಟ್ಟಣವನ್ನು ಪೊಲೀಸರ ವಶದಿಂದ ಕಿತ್ತು ತಂದ ಧೈರ್ಯಶಾಲಿ ಸಲೀಸಾಗಿ ಹಂಚಿ ಯಶಸ್ಸು ಕಂಡರು. ತಕ್ಷಣ ಜಗಿದು ನುಂಗಲು ಸಾಧ್ಯವಿದ್ದ ಬೇಯಿಸಿದ ಮೊಟ್ಟೆ ಎಲ್ಲರ ಕೈ ಸೇರಿ ದಸ್ತಗಿರಿ ಆಗುವುದರಿಂದ ಬಚಾವಾಯಿತು. ಮಾಂಸದಡಿಗೆ ತಿನ್ನುವ ಚಟವೂ, ಹಟವೂ ಅದಾಗಿರಲಿಲ್ಲ. ಯಾರಿಗೂ ಮುಜುಗರ ಮಾಡುವ ಇರಾದೆಯೂ ಅಲ್ಲಿರಲಿಲ್ಲ. ಅನಗತ್ಯವಾಗಿ ಕೆಣಕಿ ಅವಮಾನ ಮಾಡಿದವರಿಗೆ ಆಹಾರ ನಮ್ಮ ಹಕ್ಕು ಎಂದು ಹೇಳುವ ಸ್ವಾಭಿಮಾನದ ದನಿ ಅದಾಗಿತ್ತು. ನಂತರ ನಾವು ಬೇಸರವಾಗಿ ಉಣ್ಣದೆ ಉಪವಾಸದಿಂದ ಅಲ್ಲಿಂದ ಹೊರಟೆವು.
ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ…
ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…
ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…
ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು…
ಹೊಸ ವರ್ಷದ ಆಗಮನವೆಂದರೆ ಬಣ್ಣಬಣ್ಣದ ದೀಪಗಳ ಅಲಂಕಾರ, ಸಿಹಿ ವಿತರಣೆ ಅಥವಾ ಮಧ್ಯರಾತ್ರಿಯ ಸಂಭ್ರಮಾಚರಣೆಯಷ್ಟೇ ಅಲ್ಲ. ಅದು ಕಾಲ ಚಕ್ರದ…
ಪಂಜುಗಂಗೊಳ್ಳಿ ಸಮಾಜದಿಂದ ಪರಿತ್ಯಕ್ತರಾದ ಮಕ್ಕಳ ಬಾಳಲ್ಲಿ ಬೆಳಕು ಮೂಡಿಸಿದ ಆನಂದ ಗ್ರಾಮ ಮಹಾರಾಷ್ಟ್ರದ ಬೀಡ್‌ನ ಜಿಲ್ಲಾ ಆಸ್ಪತ್ರೆಯ ರಕ್ತದ ಬ್ಯಾಂಕಿನಲ್ಲಿ…