ಸ್ವದೇಶ್ ದರ್ಶನ್ ೨.೦ನಲ್ಲಿ ಬಿಡುಗಡೆಗೊಂಡಿರುವ ೨೪ ಕೋಟಿ ರೂ. ಅನುದಾನ
ಕೆ.ಬಿ.ರಮೇಶನಾಯಕ
ಮೃಗಾಲಯ, ಕಾರಂಜಿಕೆರೆ, ಪ್ರಾದೇಶಿಕ ವಸ್ತು ಸಂಗ್ರಹಾಲಯ ಪ್ರವೇಶಕ್ಕೆ ಏಕ ಟಿಕೆಟ್
ಮೈಸೂರು: ಪಾರಂಪರಿಕ, ಧಾರ್ಮಿಕ, ಯೋಗ ನಗರಿ ಎಂದೆಲ್ಲಾ ಖ್ಯಾತಿ ಗಳಿಸಿದ್ದರೂ ಪ್ರವಾಸಿಗರು ದಿನಪೂರ್ತಿ ಕಾಲ ಕಳೆಯುವುದಿಲ್ಲ ಎನ್ನುವ ಪ್ರವಾಸೋದ್ಯಮದ ಕೊರಗು ದೂರವಾಗುವ ದಿನಗಳು ಸನಿಹದಲ್ಲಿದ್ದು, ಪರಿಸರ ಪ್ರವಾಸೋದ್ಯಮ (ಎಕಲಾಜಿಕಲ್ ಎಕ್ಸ್ ಪೀರಿಯನ್ಸ್ ಟೂರಿಸಂ) ಯೋಜನೆ ಕಾರ್ಯಗತಗೊಳಿಸಲು ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಶುರುವಾಗಲಿದೆ.
ಸ್ವದೇಶ್ ದರ್ಶನ್ ೨.೦ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ೨೪ ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈಗಾಗಲೇ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ತಾಂತ್ರಿಕ ಅನುಮೋದನೆಗೆ ಒಪ್ಪಿಗೆ ನೀಡಿರುವುದರಿಂದ ಟೆಂಡರ್ ಪ್ರಕ್ರಿಯೆ ಶುರು ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಮಹತ್ವದ ಯೋಜನೆಗೆ ಈಗಾಗಲೇ ಸಿಎಂಸಿ ಸಮಿತಿಯೂ ಒಪ್ಪಿಗೆ ನೀಡಿರುವುದರಿಂದ ಟೆಂಡರ್ ಪ್ರಕ್ರಿಯೆ ಆರಂಭಿಸಲು ಪ್ರವಾಸೋದ್ಯಮ ಇಲಾಖೆ ತಯಾರಿ ಮಾಡಿಕೊಂಡಿದೆ. ಸ್ವದೇಶ್ ದರ್ಶನ್ ಯೋಜನೆಯ ೩.೦ನಲ್ಲಿ ಮೈಸೂರಿಗೆ ದೊರೆಯಬಹುದಾದ ಮತ್ತಷ್ಟು ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಇದನ್ನು ಕಾರ್ಯರೂಪಕ್ಕೆ ತರಬೇಕಿರುವ ಕಾರಣ ಇದನ್ನು ತ್ವರಿತ ಗತಿಯಲ್ಲಿ ಮಾಡಬೇಕಿದೆ.
ಕೇಂದ್ರ ಸರ್ಕಾರ ಕಾಲಕಾಲಕ್ಕೆ ನೀಡಿದ ಸಲಹೆ ಮತ್ತು ಮಾರ್ಗದರ್ಶನದಂತೆ ರಾಜ್ಯ ಸರ್ಕಾರ ನಡೆಯುತ್ತಿದೆ ಎಂದು ಹೇಳಲಾಗಿದೆ.
ಏನಿದು ಪರಿಸರ ಪ್ರವಾಸೋದ್ಯಮ?: ಸಾಂಸ್ಕೃತಿಕ ನಗರಿ ಮೈಸೂರು ಕೇವಲ ಪಾರಂಪರಿಕ ನಗರ ಮಾತ್ರವಲ್ಲ. ಪರಿಸರಕ್ಕೆ ಪೂರಕವಾದ ನಗರವೂ ಹೌದು ಎಂದು ಹೊರ ಜಗತ್ತಿಗೆ ತೋರಿಸಲು ಯೋಜನೆ ಮಾಡಲಾಗಿದೆ. ಮೈಸೂರಿಗೆ ಬಂದ ಹೊರ ರಾಜ್ಯಗಳ, ಹೊರ ದೇಶಗಳ ಪ್ರವಾಸಿಗರು ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆ, ಸಿದ್ಧಾರ್ಥನಗರದಲ್ಲಿರುವ ಪ್ರಾದೇಶಿಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ದಿನವಿಡೀ ಸಮಯ ಕಳೆಯುವಂತೆ ಮಾಡಲಾಗುತ್ತದೆ.
ಯಾವುದೇ ಪ್ರವಾಸಿಗರು ಮೃಗಾಲಯ ನೋಡಿದ ತಕ್ಷಣ ಚಾಮುಂಡಿ ಬೆಟ್ಟ ಅಥವಾ ಬೃಂದಾವನ ಗಾರ್ಡನ್‌ಗೆ ಭೇಟಿ ನೀಡುತ್ತಾರೆ. ಆದರೆ, ಇದೇ ಪ್ರವಾಸಿಗರು ಕಾರಂಜಿಕೆರೆಯಲ್ಲಿ ಸಿಗುವ ತಂಪಾದ ಪರಿಸರದಲ್ಲಿ ಕಾಲ ಕಳೆಯುವುದಕ್ಕೆ ಮುಂದಾಗುತ್ತಿರಲಿಲ್ಲ. ಹೀಗಾಗಿ, ಅಂತಹವರನ್ನು ಕೈ ಬೀಸಿ ಕರೆಯುವಂತೆ ಮಾಡಲಾಗುತ್ತದೆ. ನಂತರ, ಸಮೀಪದಲ್ಲೇ ಇರುವ ಪ್ರಾದೇಶಿಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಅಲ್ಲಿ ಅಪರೂಪದ ವಸ್ತುಗಳನ್ನು ಸಂಜೆಯ ತನಕವೂ ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಲಾಗಿದೆ. ಕಾರಂಜಿಕೆರೆಯನ್ನು ಒಂದು ಸುತ್ತು ಹಾಕಲು ಕನಿಷ್ಠ ೩ ಗಂಟೆಯಾದರೂ ಬೇಕು. ಕೆಲವರು ದೋಣಿವಿಹಾರದ ತನಕವೂ ಹೋಗಲಾಗದೆ ವಾಪಸ್ ಬಂದು ಬಿಡುತ್ತಾರೆ. ಈ ಯೋಜನೆಯಲ್ಲಿ ದೋಣಿ ವಿಹಾರದ ತನಕವೂ ನೋಡಿ ಬರುವಂತೆ ಮಾಡಿದರೆ ಮತ್ತಷ್ಟು ಅನುಕೂಲವಾಗಲಿದೆ ಎನ್ನುವ ನಿರೀಕ್ಷೆ ಹೊಂದಲಾಗಿದೆ.
ಏಕ ಪ್ರವೇಶ ಟಿಕೆಟ್: ಪ್ರವಾಸಿಗರು ಮೂರು ಕಡೆಗಳಲ್ಲಿ ಸಾಲಾಗಿ ನಿಂತು ಪ್ರತ್ಯೇಕ ಟಿಕೆಟ್ ಪಡೆಯುವುದರಿಂದ ಸಮಯ ಪೋಲಾಗುವುದನ್ನು ತಪ್ಪಿಸಲು ಒಂದೇ ಪ್ರವೇಶ ಟಿಕೆಟ್ ವ್ಯವಸ್ಥೆ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಪ್ರವೇಶ ದರವನ್ನು ನಿಗದಿಪಡಿಸಲಾಗುತ್ತದೆ. ಈ ಯೋಜನೆಯನ್ನು ಖಾಸಗಿಯವರಿಗೆ ನಿರ್ವಹಣೆ ಮಾಡಲು ಅವಕಾಶ ನೀಡದ ಕಾರಣ ಸ್ಥಳೀಯ ಮತ್ತು ಹೊರಗಿನ ಪ್ರವಾಸಿಗರಿಗೆ ಅನುಕೂಲ ಆಗುವ ರೀತಿಯಲ್ಲಿ ಪ್ರವೇಶ ದರ ನಿಗದಿಪಡಿಸುವ ಆಲೋಚನೆ ಇದೆ ಎಂದು ಗೊತ್ತಾಗಿದೆ. ಒಂದೇ ಪ್ರವೇಶ ಟಿಕೆಟ್ ಮಾಡಬೇಕೆಂಬ ಚಿಂತನೆಯನ್ನು ಹಲವು ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆ ಮಾಡಿಕೊಂಡುಬಂದಿದ್ದರೂ ಈ ತನಕ ಸಾಧ್ಯವಾಗಿರಲಿಲ್ಲ. ಆದರೆ, ಎಕಲಾಜಿಕಲ್ ಎಕ್ಸ್‌ಪೀರಿಯನ್ಸ್ ಟೂರಿಸಂ ಯೋಜನೆಯ ಮೂಲಕವಾದರೂ ಮೂರು ಸ್ಥಳಗಳ ವೀಕ್ಷಣೆಗೆ ಜಾರಿ ಮಾಡಿದರೆ ಮುಂದೆ ಇತರ ಸ್ಥಳಗಳಿಗೂ ವಿಸ್ತರಿಸಲು ನೆರವಾಗಬಹುದೆಂಬ ವಿಶ್ವಾಸವನ್ನು ಅಧಿಕಾರಿಗಳು ಹೊಂದಿದ್ದಾರೆ.
” ಸ್ವದೇಶ್ ದರ್ಶನ್ ೨.೦ ಯೋಜನೆಯಡಿ ಬಿಡುಗಡೆಯಾಗಿರುವ ೨೪ ಕೋಟಿ ರೂ. ಡಿಪಿಆರ್‌ಗೆ ಈಗಾಗಲೇ ಅನುಮೋದನೆ ದೊರೆತಿದೆ. ಸಿಎಂಸಿ ಸಭೆಯಲ್ಲಿ ಟೆಂಡರ್ ಕರೆಯಲು ಒಪ್ಪಿಗೆ ಸಿಕ್ಕಿರುವುದರಿಂದ ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು. ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಹೊರಗಿನಿಂದ ಬಂದವರಿಗೆ ಎಕಲಾಜಿಕಲ್ ಟೂರಿಸಂನ ಆನಂದವನ್ನೂ ಅನುಭವಿಸುವಂತೆ ಮಾಡಲಾಗುವುದು.”
-ಎಂ.ಕೆ.ಸವಿತ, ಜಂಟಿ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ
ಮಂಡ್ಯ : ಪೌತಿ ಖಾತಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮುಂದಿನ ಆರು ತಿಂಗಳುಗಳೊಳಗೆ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ…
ಬೆಂಗಳೂರು : ಉದ್ಯೋಗ ಖಾತರಿಯನ್ನು ಇಲ್ಲವಾಗಿಸುವ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು…
ಬೆಂಗಳೂರು : ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಬಿಗ್ ರಿಲೀಫ್…
ಮೈಸೂರು : ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರಿನ ಪತ್ರಿಕೋದ್ಯಮ ಗುಣಮಟ್ಟದಿಂದ ಕೂಡಿದ್ದು, ಇಲ್ಲಿನ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು…
ಮಂಡ್ಯ : ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದಾದರೂ ಕಂಪನಿಗಳಿಂದ ಕೈಗಾರಿಕೆ ಸ್ಥಾಪನೆಗೆ…
ಮೈಸೂರು : ಹೊಸ ವರ್ಷ ಜನವರಿ 1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು…