ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಸಫಾರಿಯನ್ನು ತಜ್ಞರ ಶಿಫಾರಸ್ಸಿನ ಮೇಲೆ ರೈತ ಮುಖಂಡರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಇತ್ತೀಚೆಗೆ ಪುನಾರಂಭಿಸಿದ್ದು, ಈ ಬಗ್ಗೆ ಜಿಲ್ಲೆಯ ಜನರು ‘ಆಂದೋಲನ’ ದಿನಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
” ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಪುನಾರಂಭವಾಗಿದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಆಂದೋಲನ ಪತ್ರಿಕೆಯಲ್ಲಿ ಉತ್ತಮವಾದ ಹಾಗೂ ಓದುಗರಿಗೆ ಮತ್ತಷ್ಟು ಆಸಕ್ತಿ ಮೂಡಿಸುವ ವರದಿ ಪ್ರಕಟವಾಯಿತು. ವೀರಪ್ಪನ್ ಕಾಲದಿಂದಲೂ ಆಂದೋಲನ ಪತ್ರಿಕೆ ವಸ್ತುನಿಷ್ಠ ವರದಿಗೆ ಹೆಸರುವಾಸಿ. ಸಫಾರಿಯಿಂದ ಆಗುವ ಪ್ರಯೋಜನ ಹಾಗೂ ತೊಂದರೆಗಳ ವರದಿಗಳು ಪ್ರಕಟವಾಗಿವೆ. ಇದೊಂದು ಒಳ್ಳೆಯ ಪ್ರಯತ್ನ.”
ಎಚ್.ಎಂ.ನಂದೀಶ್, ಪ್ರಗತಿಪರ ರೈತ, ಹಂಗಳ
” ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ-ಸಂಘರ್ಷ ವಿಷಯವಾಗಿ ಆಂದೋಲನ ಪತ್ರಿಕೆ ಸರಣಿ ಲೇಖನಗಳನ್ನು ಪ್ರಕಟಿಸಿ ಎಲ್ಲ ಆಯಾಮಗಳನ್ನೂ ತೆರೆದಿಟ್ಟಿದೆ. ಪತ್ರಿಕೆಗಳು ಮಾಡಬೇಕಾದ ನಿಜವಾದ ಕೆಲಸ ಇದಾಗಿದೆ. ಸಫಾರಿಯಿಂದಾಗುವ ಆಗು ಹೋಗುಗಳ ಕುರಿತ ವರದಿಗಳು ಉತ್ತಮವಾಗಿ ಮೂಡಿಬಂದಿವೆ.”
ಸ್ನೇಹಜೀವಿ ರಾಜು, ಸಾಮಾಜಿಕ ಕಾರ್ಯಕರ್ತ, ಪೊನ್ನಾಚಿ
” ಸಫಾರಿಯ ಸಾಧಕ ಬಾಧಕಗಳ ಬಗ್ಗೆ ಆಂದೋಲನದಲ್ಲಿ ಪ್ರಕಟವಾದ ಸರಣಿ ವರದಿಗಳನ್ನು ಓದಿದೆ. ಒಂದು ವಿವಾದ ಅಥವಾ ಸಂಘರ್ಷಕ್ಕೆ ಕಾರಣಗಳನ್ನು ಎಲ್ಲ ಆಯಾಮಗಳಿಂದ ಪ್ರಕಟಿಸಬೇಕಾದದ್ದು ನಿಜವಾದ ಪತ್ರಿಕಾ ಧರ್ಮ. ಇಂತಹ ವರದಿಗಳು ಇನ್ನೂ ಹೆಚ್ಚಾಗಿ ಪ್ರಕಟವಾಗಬೇಕು. ಪತ್ರಿಕೆ ಇನ್ನಷ್ಟು ಜನರಿಗೆ ಹತ್ತಿರವಾಗಲಿ.”
ಕೆ.ವೀರಭದ್ರಸ್ವಾಮಿ, ಚಾಮರಾಜನಗರ
” ಸಫಾರಿಯಿಂದಾಗಿ ಹುಲಿಯು ಕಾಡಿನಿಂದ ಹೊರ ಬಂದು ಮನುಷ್ಯರನ್ನು ಕೊಲ್ಲುತ್ತಿದೆ ಎಂದು ಕೆಲವರು ಅಕ್ಷೇಪಣೆ ಮಾಡಿದ್ದಾರೆ. ಆದರೆ ಚಳಿಗಾಲದ ಸಮಯದಲ್ಲಿ ಹುಲಿಯು ಕಾಡಿನಿಂದ ಹೊರಗೆ ಬರುವುದು ಸಾಮಾನ್ಯವಾಗಿದ್ದು, ಆ ಸಂದರ್ಭದಲ್ಲಿ ಹುಲಿ ದಾಳಿ ಮಾಡಿದೆ. ಸ-ರಿ ಪುನಾರಂಭಿಸಿರುವುದು ಸರಿಯಾಗಿದೆ.”
ಲಿಖಿತ್‌ರಾಜೇ ಅರಸ್, ಕೆ.ಜಿ.ಕೊಪ್ಪಲು
ಪ್ರಾಣಿಗಳ ಸಹಜ ಸಂಚಾರಕ್ಕೆ ಅಡ್ಡಿ ಸರಿಯಲ್ಲ: ಊರಿಗೆ ವನ್ಯಪ್ರಾಣಿ ನುಗ್ಗಿದರೆ ಹಿಡಿದು ಬಡಿದು ಕೊಲ್ಲುವ ಜನ ಕಾಡಿನೊಳಕ್ಕೆ ಜೀಪ್ ನುಗ್ಗಿಸಿ ಖುಷಿ ಪಡುವುದು ಎಷ್ಟು ಸರಿ? ವನ್ಯಜೀವಿಗಳ ಸ್ವಚ್ಛಂದ ಸಂಚಾರ, ಆನೆಗಳು ತಮ್ಮದೇ ಆದ ಸಂಚಾರದ ಜಾಡನ್ನು ರಚಿಸಿಕೊಂಡಿರುತ್ತವೆ. ಅವುಗಳ ಸಹಜ ಸಂಚಾರಕ್ಕೂ ಅಡ್ಡಿಪಡಿಸುವ ಈ ಸಫಾರಿ ಎಂಬ ಮೋಜು ಅಗತ್ಯವೇ ಇಲ್ಲ.
ಮಾದಪ್ಪ, ಮಂಡಿಬೆಟ್ಟಹಳ್ಳಿ, ಪಾಂಡವಪುರ ತಾಲ್ಲೂಕು
ಸಫಾರಿ ನಿರ್ಬಂಧ ಸೂಕ್ತ:
ಸಫಾರಿ ಪುನಾರಂಭಕ್ಕೆ ಸರ್ಕಾರ ಅನುಮೋದನೆ ಕೊಟ್ಟಿರುವುದು ಖಂಡನೀಯ. ಸಫಾರಿಯಿಂದ ವನ್ಯಜೀವಿಗಳ ಸ್ವಚ್ಛಂದ ಜೀವನಕ್ಕೆ ಅಡ್ಡಿಯಾಗುವುದಲ್ಲದೆ, ಪರಿಸರ ನಾಶ ಖಂಡಿತವಾಗುತ್ತದೆ. ಯಾರದೋ ಶಿಫಾರಸ್ಸಿಗೆ, ಮತ್ತಾವುದೋ ಲಾಭದ ದೃಷ್ಟಿಯಿಂದ ಅನುಮತಿ ನೀಡಿರುವುದು ಸೂಕ್ತವಲ್ಲ.
ಎಂ.ಅಭಿನಂದನ್
ಸಫಾರಿಯಿಂದ ಸಮಾಜಕ್ಕೇನು ಉಪಯೋಗ?:
ಶಾಂತವಾಗಿರುವ ಕಾಡಿನಲ್ಲಿ ಸಫಾರಿ ಆರಂಭಿಸಿ ಪ್ರಾಣಿಗಳಲ್ಲಿ ಭಯ ಹುಟ್ಟಿಸಿ ದಾಳಿ ಮಾಡಲು ಪ್ರೇರಣೆ ಮಾಡುವುದು ಸರಿಯಲ್ಲ. ಸಫಾರಿಯಿಂದ ಸಮಾಜಕ್ಕೆ ಉಪಯೋಗ ಏನಿದೆ? ಪ್ರವಾಸೋದ್ಯಮ ಅಭಿವೃದ್ಧಿ ಅನ್ನುವುದು ಒಂದು ನೆಪ ಅಷ್ಟೇ. ರೆಸಾರ್ಟ್ ಹಾಗೂ ಉಳ್ಳವರ ಮೋಜಿಗೆ ಅನುಕೂಲ ಮಾಡಿಕೊಡುವುದು ಸಫಾರಿ ಉದ್ದೇಶ.
ಕೆ.ಸಿ.ಆಶಾ, ಕಲ್ಕುಣಿಕೆ, ಹುಣಸೂರು ಟೌನ್
” ರೆಸಾರ್ಟ್ ಮಾಲೀಕರ ಹಿತಾಸಕ್ತಿ ಕಾಯುವ ಹುನ್ನಾರ ಸಫಾರಿ ಪುನಾರಂಭಿಸುವ ಸರ್ಕಾರದ ನಿರ್ಧಾರವು ಕೇವಲ ರೆಸಾರ್ಟ್ ಮಾಲೀಕರ ಹಿತಾಸಕ್ತಿ ಕಾಯುವ ಹುನ್ನಾರದಂತೆ ಕಾಣುತ್ತಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಸಫಾರಿ ಮತ್ತು ಇನ್ನಿತರ ಮೋಜಿನ ಚಟುವಟಿಕೆಗಳಿಂದ ವನ್ಯಜೀವಿಗಳ ನೆಮ್ಮದಿ ಕೆಡಿಸಿದರೆ ಅವು ಮತ್ತಷ್ಟು ನಾಡಿಗೆ ನುಗ್ಗಿ ಬಂದು ರೈತರ ಬದುಕನ್ನು ದುಸ್ತರಗೊಳಿಸುತ್ತವೆ.”
ಜಯಂತಿ ವಿಜಯಕುಮಾರ್, ರೂಪಾನಗರ, ಮೈಸೂರು
ಸಫಾರಿ ಮುಂದುವರಿಕೆ ಸೂಕ್ತ: ಸಫಾರಿಯಿಂದ ಕಾಡು ಪ್ರಾಣಿಗಳು ಮತ್ತು ಅವುಗಳ ಚಲನವಲನ ಕಾಣಲು ಸಾಧ್ಯ. ಇಲ್ಲಿ ಸಫಾರಿಯ ಸಂದರ್ಭದಲ್ಲಿ ಯಾವುದೇ ಹುಲಿ ದಾಳಿ ಮಾಡಿಲ್ಲ, ಸಾವು-ನೋವುಗಳು ಸಂಭವಿಸಿಲ್ಲ ಮತ್ತು ಸಫಾರಿ ಸ್ಥಗಿತವಾಗಿದ್ದ ಸಮಯದಲ್ಲಿಯೂ ಮಾನವ-ವನ್ಯಪ್ರಾಣಿ ಸಂಘರ್ಷ ನಡೆದಿದೆ. ಆದ್ದರಿಂದ ಕೆಲವು ಕಾನೂನಿನ ಚೌಕಟ್ಟಿನಲ್ಲಿ ಸಫಾರಿ ಮುಂದುವರಿಸಿದರೆ ಸೂಕ್ತ.
ಎಸ್.ಜಯಪ್ರಕಾಶ್, ಗ್ರಾಪಂ ಮಾಜಿ ಸದಸ್ಯರು, ಹೊಮ್ಮರಗಳ್ಳಿ
ರೈತರು ತೊಂದರೆ ಅನುಭವಿಸುತ್ತಿದ್ದಾರೆ: ಸಫಾರಿಗೆ ಅನುಮತಿ ನೀಡಿರುವುದು ತಪ್ಪು. ಸಫಾರಿ ಸಂದರ್ಭ ವಾಹನಗಳ ಶಬ್ದದಿಂದ ಕಾಡು ಪ್ರಾಣಿಗಳು ಪಕ್ಕದ ತೋಟಕ್ಕೆ ಅಥವಾ ಗದ್ದೆಗೆ ಬಂದು ಪ್ರಾಣ ಹಾಗೂ ಆಸ್ತಿ ಹಾನಿಗೆ ಕಾರಣವಾಗಿದ್ದು, ಸಫಾರಿಯಿಂದ ಪ್ರವಾಸಿಗರಿಗೆ ಖುಷಿ ತಂದಿರಬಹುದು, ಆದರೆ ಕಾಡಂಚಿನಲ್ಲಿರುವ ರೈತರು ಕಾಡು ಪ್ರಾಣಿಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಕಂಜಿತಂಡ ಪ್ರವೀಣ್, ರೈತರು
ದುರುಪಯೋಗ ಸಾಧ್ಯತೆ ಹೆಚ್ಚು: ಸಫಾರಿಯಿಂದ ಅರಣ್ಯ ನಾಶದೊಂದಿಗೆ ಪ್ರಾಣಿ ಪಕ್ಷಿಗಳಿಗೂ ತೊಂದರೆಯುಂಟಾಗುತ್ತದೆ. ಕೆಲವು ಭಾಗಗಳಲ್ಲಿ ಸ್ವಚ್ಛತೆ ಕಾಪಾಡಿದರೂ ಸಫಾರಿ ಇರುವ ಅರಣ್ಯ ಪ್ರದೇಶ ಪ್ಲಾಸ್ಟಿಕ್‌ಮಯವಾಗುತ್ತದೆ. ಹೊರಗಿನವರು ಹೆಚ್ಚಾಗಿ ಬರುವುದರಿಂದ ಸಫಾರಿ ದುರುಪಯೋಗವಾಗುವ ಸಾಧ್ಯತೆಯೂ ಇದೆ.
ಗೌತಮ್ ಕಿರಗಂದೂರು, ಕಾಫಿ ಬೆಳೆಗಾರ, ಸೋಮವಾರಪೇಟೆ ತಾಲ್ಲೂಕು
ರೈತರಿಗೆ ಇನ್ನಿಲ್ಲದ ಸಮಸ್ಯೆ: ಸಫಾರಿಯ ಸಾಧಕ ಬಾಧಕಗಳ ಬಗ್ಗೆ ಈಗಾಗಲೇ ‘ಆಂದೋಲನ’ ದಿನಪತ್ರಿಕೆ ಅಭಿಯಾನದ ಮೂಲಕ ಸಮಗ್ರ ಮಾಹಿತಿಯನ್ನು ಜನತೆಗೆ ನೀಡಿದೆ. ಈಗಾಗಲೇ ವನ್ಯಮೃಗಗಳು ನಾಡಿನತ್ತ ಬಂದು ರೈತರಿಗೆ ಇನ್ನಿಲ್ಲದ ಸಮಸ್ಯೆಯನ್ನು ಉಂಟುಮಾಡುತ್ತಿವೆ. ಆದ್ದರಿಂದ ಸಫಾರಿಗೆ ಅವಕಾಶ ನೀಡಬಾರದು.
ರವಿಗೌಡ, ಮಡಿಕೇರಿ
ಸಫಾರಿ ಪುನಾರಂಭ ಖುಷಿ ತಂದಿದೆ: ಸಫಾರಿ ಆರಂಭಿಸಿರುವುದು ಖುಷಿ ತಂದಿದೆ. ವನ್ಯಮೃಗಗಳನ್ನು ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಅನುಕೂಲವಾಗಲಿದೆ. ಆದರೆ, ಕಾಡುಪ್ರಾಣಿಗಳ ವೀಕ್ಷಣೆಗೆ ಬರುವ ಪ್ರವಾಸಿಗರು ಅವುಗಳ ಯಾವುದೇ ಸ್ವಚ್ಛಂದ ವಿಹಾರಕ್ಕೆ ತೊಂದರೆ ಆಗದಂತೆ ಅರಣ್ಯ ಇಲಾಖೆ ಮುತುವರ್ಜಿ ವಹಿಸಬೇಕು.
ನವೀನ್, ಹೋಟೆಲ್ ಮಾಲೀಕರು, ಗೋಣಿಕೊಪ್ಪ
ಪರಿಸರದ ಜ್ಞಾನ ಪಡೆಯಲು ಸಹಕಾರಿ: ವನ್ಯಜೀವಿಗಳನ್ನು ಹತ್ತಿರದಿಂದ ನೋಡಲು ಸಫಾರಿ ಸಹಕಾರಿಯಾಗಿದೆ. ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಪ್ರಕೃತಿ ಸೊಬಗನ್ನು ಸವಿಯುವುದರೊಂದಿಗೆ ಪರಿಸರದ ಜ್ಞಾನ ಪಡೆಯಲೂ ಸಾಧ್ಯವಾಗುತ್ತದೆ. ಆದರೆ ಪ್ರಾಣಿ ಪಕ್ಷಿ, ಅರಣ್ಯಕ್ಕೆ ಸಮಸ್ಯೆಯಾಗದಂತೆ ಹೆಚ್ಚಿನ ಎಚ್ಚರವಹಿಸಬೇಕಿದೆ.
ಮಜೀದ್, ಕುಶಾಲನಗರ
ಪ್ರಾಣಿಗಳ ಮೇಲೆ ನಕಾರಾತ್ಮಕ ಪರಿಣಾಮ: ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ವಾಹನಗಳ ಓಡಾಟದಿಂದ ಪರಿಸರ ಮಾಲಿನ್ಯದೊಂದಿಗೆ ಪ್ರಾಣಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜೊತೆಗೆ ಅರಣ್ಯದಂಚಿನಲ್ಲಿರುವ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಸಫಾರಿಗೆ ಅವಕಾಶ ನೀಡದಿದ್ದರೆ ಒಳ್ಳೆಯದು.
ಅಫ್ಸಲ್, ಸಾಮಾಜಿಕ ಕಾರ್ಯಕರ್ತ, ಸಿದ್ದಾಪುರ
ಸರ್ಕಾರದಿಂದ ಉತ್ತಮ ತೀರ್ಮಾನ: ಸಫಾರಿ ಪುನಾರಂಭ ಪ್ರಾಣಿ ಪ್ರಿಯರಿಗೆ ಸಂತೋಷವಾಗಿದೆ. ಜೊತೆಗೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಸರ್ಕಾರ ಉತ್ತಮ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ‘ಆಂದೋಲನ’ ಪತ್ರಿಕೆಯಲ್ಲಿ ಸಫಾರಿ ಸಂಬಂಧಿತ ಅಭಿಯಾನ ಮಾಡಿರುವ ಚಿಂತನೆ ತುಂಬಾ ವಿಶೇಷವಾಗಿದೆ.
ಮನೋಹರ್, ಟಿ.ಕೆ.ಲೇಔಟ್, ಮೈಸೂರು
ನಿಯಂತ್ರಿತ ಜಂಗಲ್ ಸಫಾರಿ ವ್ಯವಸ್ಥೆ ಒಳಿತು:
ಸಫಾರಿಯನ್ನು ನಿಷೇಧಿಸುವುದು ಸಮಸ್ಯೆಗೆ ಪರಿಹಾರವಾಗದೆ, ಅನೇಕ ಅಕ್ರಮಚಟುವಟಿಕೆಗಳಿಗೆ ದಾರಿಯಾದೀತು. ಅದರ ಬದಲು ಸರ್ಕಾರ ಮತ್ತು ಅರಣ್ಯ ಇಲಾಖೆ ಸ್ಥಳೀಯರ ಸಹಕಾರದೊಂದಿಗೆ ನಿಯಂತ್ರಿತ ಸಫಾರಿ ವ್ಯವಸ್ಥೆ ಮಾಡುವುದು ಒಳಿತು. ಇತರೆಡೆ ಇರುವ ಸಫಾರಿಗಳ ಉತ್ತಮ ಅಂಶಗಳನ್ನು ಅಳವಡಿಸಿಕೊಂಡರೆ ಅನುಕೂಲ.
ತಾನ ಮೋಹನ್ ಕುಮಾರ್, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ, ಮೈಸೂರು
ಅನಿಯಂತ್ರಿತ ಸಫಾರಿಯಿಂದ ಪರಿಸರಕ್ಕೆ ಹಾನಿ:
ಮಾನವ-ವನ್ಯಜೀವಿ ಸಂಘರ್ಷದಿಂದಾಗಿ ೨೦೨೫ರ ನವೆಂಬರ್‌ನಲ್ಲಿ ಸಫಾರಿ ತಾತ್ಕಾಲಿಕ ನಿಷೇಧ ಸೇರಿದಂತೆ ಇತ್ತೀಚಿನ ಘಟನೆಗಳು, ಅನಿಯಂತ್ರಿತ ಸಫಾರಿ ಕಾರ್ಯಾಚರಣೆಗಳು ಪರಿಸರ ವ್ಯವಸ್ಥೆಗೆ ಹಾನಿ ಮಾಡಬಹುದು ಆದರೆ ಉತ್ತಮವಾಗಿ ನಿಯಂತ್ರಿಸಲ್ಪಟ್ಟವು ಸಂರಕ್ಷಣೆಗೆ ಸಹಾಯ ಮಾಡಬಹುದು.
ಧ್ಯಾನ್, ವಿದ್ಯಾರ್ಥಿ, ವಿಶ್ವನಾಥಯ್ಯ ಕಾಲೋನಿ, ಆಶ್ರಯ ಬಡಾವಣೆ, ಎಚ್.ಡಿ.ಕೋಟೆ ತಾಲ್ಲೂಕು
ಸಫಾರಿ ನಿಲ್ಲಿಸಿ, ರೆಸಾರ್ಟ್‌ಗಳ ಮುಚ್ಚಿಸಿ:
ಸಫಾರಿಯಿಂದ ಬದುಕು ಕಟ್ಟಿಕೊಂಡ ಕುಟುಂಬಗಳು ಕಡಿಮೆ. ಆದರೆ, ಕಾಡಿನೊಳಗೆ ಇರುವ ರೆಸಾರ್ಟ್‌ಗಳು, ಹೋಟೆಲ್‌ಗಳು, ಹೋಂ ಸ್ಟೇಗಳ ಪರವಾಗಿ ಮಂತ್ರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಸಾಮಾನ್ಯರ ಬದುಕು ಮತ್ತು ಉಳ್ಳವರ ಮೋಜಿನ ನಡುವಿನ ಗುದ್ದಾಟ. ಬೇಷರತ್ತಾಗಿ ತಕ್ಷಣದಿಂದಲೇ ಸಫಾರಿ ನಿಲ್ಲಿಸಬೇಕು. ರೆಸಾರ್ಟ್‌ಗಳನ್ನು ಮುಚ್ಚಬೇಕು.
ಕೆ.ವೆಂಕಟರಾಜು, ಚಿಂತಕ,ಚಾ.ನಗರ
ನಿಯಂತ್ರಿತ ಪ್ರವೇಶ ಲಾಭಕರ: ಸಫಾರಿಯು ಜನರಿಗೆ ವನ್ಯಜೀವಿ, ಜೀವವೈವಿಧ್ಯ ಮತ್ತು ಪರಿಸರ ಸಮತೋಲನದ ಮಹತ್ವವನ್ನು ಅರಿವಿಗೆ ತರುತ್ತದೆ. ನಿಯಂತ್ರಿತ ಪರಿಸರ ನಿರ್ವಹಣೆಯ ಭಾಗವಾಗಿ ಸಫಾರಿ ನಡೆಸಿದರೆ ಮಾನವ-ವನ್ಯಪ್ರಾಣಿ ಸಂಘರ್ಷ ಕಡಿಮೆಯಾಗುತ್ತದೆ. ಕಟ್ಟುನಿಟ್ಟಿನ ನಿಯಮಗಳೊಂದಿಗೆ ಮಾತ್ರ ಸಫಾರಿ ಪರಿಸರಕ್ಕೆ ಲಾಭಕರವಾಗುತ್ತದೆ.
ಸಹನ ಗೌಡ
ಕಾಡುಪ್ರಾಣಿಗಳಿಗೆ ಸಮಸ್ಯೆಯಾಗಬಾರದು:
ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ, ಸಫಾರಿ ಸಂದರ್ಭಗಳಲ್ಲಿ ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸುರಕ್ಷತಾ ಕ್ರಮವನ್ನು ತೆಗೆದುಕೊಂಡು ವನ್ಯಜೀವಿ ವಲಯಗಳಲ್ಲಿ ಸಫಾರಿ ಮಾಡುವುದು ಸೂಕ್ತ. ಆಂದೋಲನ ಪತ್ರಿಕೆ ಸಫಾರಿ ಕುರಿತು ಅಭಿಯಾನ ಮಾಡಿರುವುದು ಸೂಕ್ತವಾಗಿದೆ.
ವಿ.ನಂಜುಂಡಸ್ವಾಮಿ, ಅಧ್ಯಕ್ಷರು, ಬಹುಜನ ಸಮಾಜ ಪಾರ್ಟಿ, ಮಳವಳ್ಳಿ
ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ: ‘ಆಂದೋಲನ’ದಲ್ಲಿ ಅಭಿಯಾನ ನಡೆಸಿರುವುದು ಸಕಾಲಿಕವಾಗಿದೆ. ಸಫಾರಿಯಿಂದಾಗಿ ಸರ್ಕಾರಕ್ಕಷ್ಟೇ ಲಾಭವಲ್ಲ. ಗಿರಿಜನರ ಉತ್ಪನ್ನಗಳು, ಸಣ್ಣ ಪುಟ್ಟ ಹೋಟೆಲ್‌ಗಳು, ಅರಣ್ಯ ಉತ್ಪನ್ನಗಳನ್ನು ಬಳಸಿ ಕರಕುಶಲ ವಸ್ತುಗಳನ್ನು ಮಾಡುವ, ಇದನ್ನೇ ನಂಬಿ ಬದುಕುತ್ತಿರುವ ಜನರ ಬದುಕೂ ಮುಖ್ಯ.
ಬಿ.ಆರ್.ನೀಲಾ, ಉಪನ್ಯಾಸಕಿ, ಕಾಂತಾಪುರ, ನಾಗಮಂಗಲ ತಾಲ್ಲೂಕು
ವನ್ಯಜೀವಿಗಳ ಆವಾಸ ನೈಸರ್ಗಿಕವಾಗಿರಲಿ: ಕಾಡಿನ ಪರಿಸರ-ವನ್ಯಜೀವಿಗಳ ಬದುಕನ್ನು ರಕ್ಷಿಸಬೇಕಾದ ಅರಣ್ಯ ಇಲಾಖೆ ಪ್ರವಾಸೋದ್ಯಮದ ಹೆಸರಲ್ಲಿ ಕಾಡು ಪ್ರಾಣಿಗಳ ಆವಾಸ ಸ್ಥಾನಗಳಿಗೆ ನುಗ್ಗುವುದು ಸರಿಯಲ್ಲ. ಹಣದ ಆಸೆಗೆ ವನ್ಯಜೀವಿಗಳಿಗೆ ಕಿರುಕುಳ ನೀಡುವುದು ಎಷ್ಟು ಸರಿ? ಆಂದೋಲನ ಇಂತಹ ಜಾಗೃತಿ ಅಭಿಯಾನ ರೂಪಿಸಿರುವುದು ಉತ್ತಮವಾಗಿದೆ.
ಎನ್.ಶಿವಸ್ವಾಮಿ, ರೈತ ಮುಖಂಡರು, ನಗುವನಹಳ್ಳಿ, ಶ್ರೀರಂಗಪಟ್ಟಣ ತಾಲ್ಲೂಕು
ಬಡ ಕುಟುಂಬಗಳಿಗೆ ಉದ್ಯೋಗ ಸಿಕ್ಕಿದೆ: ಸಫಾರಿಯಿಂದ ಕಾಡು ಪ್ರಾಣಿಗಳಿಗೆ ಯಾವುದೇ ತೊಂದರೆಯಾಗುತ್ತಿಲ್ಲ. ಪ್ರವಾಸಿಗರು ತಮ್ಮ ವ್ಯವಹಾರ ಮತ್ತು ಜೀವನದ ಜಂಜಾಟವನ್ನು ಬದಿಗಿಟ್ಟು ಅರಣ್ಯ ಪ್ರದೇಶಗಳಿಗೆ ಪ್ರವಾಸಕ್ಕೆ ಬರುತ್ತಾರೆ. ಕಾಡು ಪ್ರಾಣಿಗಳು ಸಹ ಸಫಾರಿ ವಾಹನಗಳಿಗೆ ಹೊಂದಿಕೊಂಡಿವೆ. ಉದ್ಯೋಗದಲ್ಲಿರುವ ಎಷ್ಟೋ ಬಡ ಕುಟುಂಬಗಳಿಗೆ ಸಫಾರಿಯಿಂದ ಅನುಕೂಲವಾಗುತ್ತಿದೆ.
ಬಿ.ಎಂ.ಸಹನ, ಭಾರತೀನಗರ
ಪ್ರಾಣಿ ಹಾವಳಿಗೆ ಸಫಾರಿಯೇ ಕಾರಣ ಎನ್ನಲಾಗದು:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಶೇ.೮ರಷ್ಟು ಹಾಗೂ ನಾಗರಹೊಳೆಯ ಶೇ.೭.೫ರಷ್ಟು ಅರಣ್ಯ ಪ್ರದೇಶವನ್ನು ಮಾತ್ರ ಸಫಾರಿಗೆ ಬಳಸಲಾಗುತ್ತಿದೆ ಎಂದು ಓದಿದ್ದೇನೆ. ಹಾಗಾಗಿ ಹುಲಿ, ಚಿರತೆಗಳು ಕಾಡಿನಿಂದ ನಾಡಿಗೆ ಬರಲು ಸಫಾರಿಯೇ ಕಾರಣ ಎಂಬುದನ್ನು ಒಪ್ಪಲಾಗದು. ಮಕ್ಕಳಿಗೆ ನಿಜವಾದ ಅರಣ್ಯದೊಳಗಿನ ಪರಿಸರವನ್ನು ತೋರಿಸುವುದು ಉತ್ತಮ.
ಮದನ್, ಮಡುವಿನಕೋಡಿ, ಕೆ.ಆರ್.ಪೇಟೆ ತಾ.
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಂಗಳೂರು ಜಿಎಎಫ್ ಎಕ್ಸ್-2026ರ 7ನೇ ಆವೃತ್ತಿಯ ಉದ್ಘಾಟಿಸಿ ಮಾತನಾಡಿದರು. “ಎವೊಲ್ಯೂಶನ್ ರಿಲೋಡೆಡ್” ಎಂಬ ವಿಷಯವನ್ನೊಳಗೊಂಡ…
ಬೆಂಗಳೂರು: ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಮುಹೂರ್ತ ನಿಗದಿಯಾಗಿದೆ ಈ ವರ್ಷವೂ ಸಂಪ್ರದಾಯದಂತೆ ತಿಗಳರಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ವೈಭವದ…
ಮಂಡ್ಯ: 2028ಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಹಾಗಾಗಿ ಹೈಕಮಾಂಡ್ ಮಧ್ಯಪ್ರವೇಶಿಸಿ ಕುರ್ಚಿ ಗೊಂದಲ ಬಗೆಹರಿಸಬೇಕು ಎಂದು ಕಾಂಗ್ರೆಸ್ ಶಾಸಕ ಗಣಿಗ…
ಮಂಡ್ಯ: ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಮೈಕ್ರೋ ಫೈನಾನ್ಸ್ ಕಂಪನಿಗಳು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ…
ರಾಯಚೂರು: ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಯಚೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ…
ಮೈಸೂರು: ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಬಹಿರಂಗಪಡಿಸಲು ಎಂದು ಶಾಸಕ ತನ್ವೀರ್ ಸೇಠ್ ಆಗ್ರಹಿಸಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ…