Andolana originals

‘ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ’

ಎಚ್.ಎಸ್.ದಿನೇಶ್ ಕುಮಾರ್

‘ಆಂದೋಲನ’ ದಿನಪತ್ರಿಕೆಯ ವಿಶೇಷ ಸಂದರ್ಶನದಲ್ಲಿ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ

ಮೈಸೂರು: ರಾಜಧಾನಿ ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮೈಸೂರು ಜಿಲ್ಲೆ ಕೂಡ ಒಂದು. ೧೭ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ಅಪರಾಧಗಳು ಮತ್ತು ನಿಯಮಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸರು ತಮ್ಮದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದಸರಾ ಸಂದರ್ಭ ಹೊರತುಪಡಿಸಿಯೂ ವಾರ್ಷಿಕ ಲಕ್ಷಾಂತರ ಪ್ರವಾಸಿಗರು ಮೈಸೂರಿನ ಪ್ರವಾಸಿ ಸ್ಥಳಗಳ ಜೊತೆಗೆ ಜಿಲ್ಲೆಯಲ್ಲಿರುವ ಪ್ರವಾಸಿ ಸ್ಥಳಗಳಿಗೂ ಬಂದು ಹೋಗುವುದು ವಾಡಿಕೆ. ಹೀಗಾಗಿ ಸುಗಮ ಸಂಚಾರ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ‘ಆಂದೋಲನ’ ದಿನಪತ್ರಿಕೆ ಜೊತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು ಜಿಲ್ಲೆ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದೀರಿ. ನಿಮಗೆ ಹೇಗನಿಸುತ್ತಿದೆ?

ಮಲ್ಲಿಕಾರ್ಜುನ ಬಾಲದಂಡಿ: ಮೈಸೂರು ಜಿಲ್ಲೆ ತನ್ನದೇ ಆದ ಪಾವಿತ್ರ್ಯತೆಯನ್ನು ಹೊಂದಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ ಹಾಗೂ ಹೆಚ್ಚಿನ ಜವಾಬ್ದಾರಿಯೂ ಇದೆ. ಇಲ್ಲಿನ ಜನರು ಶಾಂತಿಪ್ರಿಯರು. ನಾವು ಯಾವುದೇ ಯೋಜನೆಗಳನ್ನು ಹಮ್ಮಿಕೊಂಡರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ಹೀಗಾಗಿ ಇಲ್ಲಿ ಕೆಲಸ ಮಾಡಲು ಸಂತೋಷವಾಗುತ್ತದೆ.

ಆಂದೋಲನ: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ನೀವು ಕೈಗೊಂಡಿರುವ ಕ್ರಮಗಳೇನು?

ಮಲ್ಲಿಕಾರ್ಜುನ ಬಾಲದಂಡಿ: ಇತರೆ ಪ್ರಮುಖ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಇಲ್ಲಿ ಕಡಿಮೆ ಇದೆ. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಳೆದ ಆರು ತಿಂಗಳಿನಿಂದ ಮಾದಕ ವಸ್ತು ವಿರೋಧಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸಮಾಜ ವಿರೋಧಿ ಶಕ್ತಿಗಳನ್ನು ಹತ್ತಿಕ್ಕುವ ಕೆಲಸವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಜನಸ್ನೇಹಿ ಪೊಲೀಸ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮನೆಮನೆಗೆ ಪೊಲೀಸ್ ಯೋಜನೆಯನ್ನು ಪರಿಚಯಿಸಲಾಗಿದೆ. ಆಗಾಗ್ಗೆ ಪ್ರತೀ ತಾಲ್ಲೂಕಿಗೆ ತೆರಳಿ ಅಲ್ಲಿ ಜನರ ಸಭೆ ನಡೆಸುವ ಮೂಲಕ ಅವರ ಅಹವಾಲುಗಳನ್ನು ಸ್ವೀಕರಿಸುವ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ.

ಆಂದೋಲನ: ನಿಮ್ಮ ಕೈ ಕೆಳಗಿನ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಏನನ್ನು ನಿರೀಕ್ಷಿಸುತ್ತೀರಿ; ಅವರು ನಿಮಗೆ ಸ್ಪಂದಿಸುತ್ತಿದ್ದಾರಾ?

ಮಲ್ಲಿಕಾರ್ಜುನ ಬಾಲದಂಡಿ: ಯಾವುದೇ ಪ್ರದೇಶದಲ್ಲಿಯಾಗಲಿ ಜನರು ಶಾಂತಿ, ನೆಮ್ಮದಿಯಿಂದ ಇರಬೇಕಾದಲ್ಲಿ ಪೊಲೀಸರ ಕಾರ್ಯವೈಖರಿ ಸರಿಯಿರಬೇಕು. ತಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಹೊಂದಬೇಕು. ಈ ವಿಚಾರದಲ್ಲಿ ಮೈಸೂರಿನ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಮುಂದೆ ಕೂಡ ಅವರ ಕಾರ್ಯವೈಖರಿ ಹೀಗೆಯೇ ಇರುತ್ತದೆ ಎಂಬ ವಿಶ್ವಾಸವಿದೆ.

ಆಂದೋಲನ: ಪೊಲೀಸ್ ಹಾಗೂ ನಾಗರಿಕರ ನಡುವೆ ವಿಶ್ವಾಸ ಮೂಡಿಸಲು ನೀವು ಕೈಗೊಂಡಿರುವ ಕ್ರಮಗಳೇನು?

ಮಲ್ಲಿಕಾರ್ಜುನ ಬಾಲದಂಡಿ: ಜಿಲ್ಲೆಯಲ್ಲಿ ಸಂಚಾರ ನಿಯಮಗಳನ್ನು ಪಾಲಿಸಬೇಕಾದಲ್ಲಿ ಹಾಗೂ ಅಪರಾಧಗಳನ್ನು ತಡೆಗಟ್ಟಬೇಕಾದಲ್ಲಿ ಜನರ ಸಹಕಾರ ಅತ್ಯಗತ್ಯ. ಹೀಗಾಗಿ ಆಯಾಯ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರೊಂದಿಗೆ ಸತತ ಸಂಪರ್ಕದಲ್ಲಿ ಇರಬೇಕು ಎಂದು ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಜನರೊಂದಿಗೆ ವಿಶ್ವಾಸದಿಂದ ಇರದಿದ್ದಲ್ಲಿ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಿಲ್ಲ.

ಆಂದೋಲನ: ನಾಡಹಬ್ಬ ದಸರಾ ಸಮೀಪಿಸುತ್ತಿದೆ. ದಸರಾ ವೇಳೆ ಭದ್ರತೆ ಹೇಗಿರಬೇಕು? ಅದಕ್ಕೆ ಸಿದ್ಧತೆಗಳೇನು?

ಮಲ್ಲಿಕಾರ್ಜುನ ಬಾಲದಂಡಿ: ನಾಡಹಬ್ಬ ದಸರಾಗೆ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಮೈಸೂರಿಗೆ ಬಂದ ಪ್ರವಾಸಿಗರು ಜಿಲ್ಲೆಯ ನಂಜನಗೂಡು, ತಿ.ನರಸೀಪುರ, ಚುಂಚನಕಟ್ಟೆ, ಸೋಮನಾಥಪುರ, ಬಂಡೀಪುರ, ನಾಗರಹೊಳೆ ಹೀಗೆ ಹಲವಾರು ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಅವರ ಸುರಕ್ಷತೆಗೆ ನಮ್ಮ ಆದ್ಯತೆ ಇದ್ದೇ ಇರುತ್ತದೆ. ಭದ್ರತೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗಾಗಿ ಬೇರೆ ಜಿಲ್ಲೆಗಳಿಂದಲೂ ಪೊಲೀಸರು ಆಗಮಿಸುತ್ತಿದ್ದಾರೆ. ಹೀಗಾಗಿ ಎಲ್ಲರ ಸಹಕಾರದಿಂದ ದಸರಾವನ್ನು ಯಶಸ್ವಿಯಾಗಿ ನಡೆಸುವ ವಿಶ್ವಾಸ ನಮ್ಮ ಇಲಾಖೆಗಿದೆ. ಈ ಬಾರಿ ನಮ್ಮ ವ್ಯಾಪ್ತಿಯ ಸಾತಗಳ್ಳಿಯಲ್ಲಿ ಕಂಬಳ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಗಮನ ಹರಿಸಲು ಸಿದ್ಧತೆ ನಡೆಸಲಾಗುತ್ತಿದೆ.

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅಧ್ಯಾತ್ಮ ದುರಂತ!

ಅಧ್ಯಾತ್ಮ ದುರಂತ! ಲೌಕಿಕ ಬದುಕಿನ ಆಶೆ ಆಮಿಷಗಳ ಸೆರೆಮನೆಯಿಂದ ಬಿಡಿಸಿಕೊಳುವ ಸನ್ಮಾರ್ಗವನು ಅಧ್ಯಾತ್ಮವೆನ್ನುವರು ಪ್ರಾಜ್ಞರು! ಆದರೀಗ ಲೌಕಿಕದ ಆಶೆ ಆಮಿಷಗಳ…

2 hours ago

ಓದುಗರ ಪತ್ರ: ರಸ್ತೆ, ಉದ್ಯಾನಕ್ಕೆ ಎಸ್. ಜಾನಕಿ ಅವರ ಹೆಸರಿಡಿ

ಭಾರತೀಯ ಚಿತ್ರರಂಗದ ಗಾನಕೋಗಿಲೆ ಎಸ್.ಜಾನಕಿ ಅವರ ಸಾಧನೆ ಎಂದೆಂದಿಗೂ ಅಜರಾಮರ. ಅವರ ಹೆಸರನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಮೂಲಕ ಚಿರಸ್ಥಾಯಿಯಾಗಿಸಲು…

2 hours ago

ಓದುಗರ ಪತ್ರ: ಚಾಮರಾಜಪುರಂನಲ್ಲಿ ರೈಲುಗಳ ನಿಲುಗಡೆಯಾಗಲಿ

ಮೈಸೂರಿನ ಅಶೋಕಪುರಂನಿಂದ ಚೆನ್ನೆ ಗೆ ತೆರಳುವ ಚೆನ್ನೆ ನಿಂದ - ಅಶೋಕಪುರಂಗೆ ಆಗಮಿಸುವ ೧೬೫೫೧ ಎಂಜಿಆರ್ ಚೆನ್ನೈಎಕ್ಸ್ ಪ್ರೆಸ್, ೨೦೬೨೪…

2 hours ago

ಓದುಗರ ಪತ್ರ: ನಂಜನಗೂಡಿನಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಿ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನಲ್ಲಿ ವಾಹನಗಳ ಸಂಚಾರದಟ್ಟಣೆ ವಿಪರೀತವಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆರ್.ಪಿ .ರಸ್ತೆಯಲ್ಲಿ ರೈಲು ಬರುವ ವೇಳೆ…

2 hours ago

114 ಪ್ರದೇಶಗಳಲ್ಲಿ ಪ್ರವಾಹ, ಭೂಕುಸಿತ ಅಪಾಯ

ನವೀನ್ ಡಿಸೋಜ ಮಳೆ ಕಡಿಮೆಯಿದ್ದರೂ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ; ಅಪಾಯಕಾರಿ ಪ್ರದೇಶಗಳ ಗುರುತು ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜುಲೈ ಆರಂಭದಿಂದ…

2 hours ago

ಟಿಎಪಿಸಿಎಂಎಸ್ ಚುನಾವಣೆಗೆ ಪಕ್ಷಗಳಿಂದ ಭರ್ಜರಿ ಸಿದ್ಧತೆ

ಭೇರ್ಯ ಮಹೇಶ್ ಕೆ.ಆರ್.ನಗರ: ಜು.೨೬ರಂದು ಚುನಾವಣೆ; ನಾಮಪತ್ರ ಸಲ್ಲಿಕೆ ಆರಂಭ  ಕೆ.ಆರ್.ನಗರ: ತಾಲ್ಲೂಕು ಕೃಷಿ ಉತ್ಪನ್ನಗಳ ಸಹಕಾರ ಮಾರಾಟ ಸಂಘದ…

2 hours ago