ಕೆ.ಬಿ.ರಮೇಶ ನಾಯಕ
ಮೈಸೂರು: ಹಲವು ವರ್ಷಗಳಿಂದ ಬೇಕಾಬಿಟ್ಟಿಯಾಗಿ ತೆರಿಗೆ ವಿಧಿಸುತ್ತಿರುವುದಕ್ಕೆ ಬ್ರೇಕ್ ಹಾಕಿರುವ ರಾಜ್ಯ ಸರ್ಕಾರ, ಸಂಪನ್ಮೂಲ ಕ್ರೋಡೀಕರಣಕ್ಕೆ ಗ್ರಾಮ ಪಂಚಾಯಿತಿಗಳು ಆಸ್ತಿ ತೆರಿಗೆ ವಸೂಲಿ ಮಾಡುವಾಗ ಸರ್ಕಾರದ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಕರಡು ನಿಯಮವನ್ನು ರೂಪಿಸಿ ಅಧಿಸೂಚನೆ ಜಾರಿಗೊಳಿಸಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಭೂಮಿಯನ್ನು ಹೊರತುಪಡಿಸಿ ಉಳಿದಂತೆ ವಸತಿ, ವಾಣಿಜ್ಯ ಕಟ್ಟಡಗಳ ತೆರಿಗೆಯನ್ನು ಹೆಚ್ಚಿಸಿ ಹೊಸ ಮಾರ್ಗ ಸೂಚಿಯಂತೆ ತೆರಿಗೆ ವಸೂಲಿ ಮಾಡಬೇಕಿದೆ. ಇದರಿಂದಾಗಿ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಮನಬಂದಂತೆ ತೆರಿಗೆ ವಸೂಲಿ ಮಾಡುವ ಬದಲು ಎಲ್ಲವನ್ನೂ ಆನ್‌ಲೈನ್ ಮೂಲಕ ಪಾವತಿಸಿ ಕೊಳ್ಳುವಂತೆ ಆದೇಶ ಹೊರಡಿಸಿರುವುದರಿಂದ ಒಂದೆಡೆ ಸರ್ಕಾರದ ಬೊಕ್ಕಸಕ್ಕೆ ಆದಾಯ ಬಂದರೆ, ಮತ್ತೊಂದೆಡೆ ತೆರಿಗೆ ವಸೂಲಾತಿಯಾದ ಹಣದಲ್ಲಿ ಸೋರಿಕೆ ಪ್ರಮಾಣ ತಪ್ಪಿದಂತಾಗುತ್ತದೆ.
ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಮಾನುಸಾರ ಆಸ್ತಿ ತೆರಿಗೆ ಮತ್ತು ನಾನಾ ಶುಲ್ಕಗಳ ದರ ಪರಿಷ್ಕರಣೆ, ಹೊಸ ತೆರಿಗೆ ಅಂಶಗಳ ಸೇರ್ಪಡೆ ಹಾಗೂ ‘ಬಿ-ಖಾತಾ’ ಪಡೆದ ಆಸ್ತಿಗಳಿಂದ ಮೊದಲ ವರ್ಷ ದುಪ್ಪಟ್ಟು ಆಸ್ತಿ ತೆರಿಗೆ ಸಂಗ್ರಹ ಪ್ರಸ್ತಾವ ಒಳಗೊಂಡ ಕರಡು ನಿಯಮವನ್ನು ಜುಲೈ ೪ರಂದು ರಾಜ್ಯ ಸರ್ಕಾರ ಜಾರಿಗಳಿಸಿದೆ.
‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತುಫೀಸುಗಳು) ಕರಡು ನಿಯಮ- ೨೦೨೫’ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಾರಿಗೊಳಿಸಿದ್ದು, ಆಕ್ಷೇಪಣೆ ಸಲ್ಲಿಕೆಗೆ ೧೫ ದಿನಗಳ ಕಾಲಾವಕಾಶ ನೀಡಲಾಗಿದೆ. ನಂತರ ಆಕ್ಷೇಪಣೆಗಳನ್ನು ಪರಿಶೀಲಿಸಿ ನಿಯಮದಲ್ಲಿ ಬದಲಾವಣೆ ತಂದು ಅಂತಿಮ ಅಧಿಸೂಚನೆ ಹೊರಡಿಸಲಿದೆ.
ಈ ಹಿಂದೆ ಅಂದರೆ ೨೦೨೧ರಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹಾಗೂ ನಾನಾ ಶುಲ್ಕಗಳ ಪರಿಷ್ಕರಣೆ, ತರುವಾಯ ತೆರಿಗೆ ಪರಿಷ್ಕರಣೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂದಾಗಿತ್ತು. ಸದ್ಯ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯಿಂದ ವಾರ್ಷಿಕ ೧,೫೦೦ ಕೋಟಿ ರೂ. ಆದಾಯ ಸಂಗ್ರಹವಾಗುತ್ತಿದೆ. ‘ಬಿ-ಖಾತಾ’ ಸ್ವತ್ತುಗಳಿಗೆ ದುಪ್ಪಟ್ಟು ತೆರಿಗೆ ಸೇರಿದಂತೆ ಹೊಸ ತೆರಿಗೆ ಪ್ರಸ್ತಾವಗಳಿಂದ ದರ ಪರಿಷ್ಕರಣೆಯಾಗಿ ಜಾರಿಯಾದರೆ ವಾರ್ಷಿಕ ೫,೦೦೦ ಕೋಟಿ ರೂ.ನಷ್ಟು ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ ಗ್ರಾಪಂ ವ್ಯಾಪ್ತಿಯಲ್ಲಿ ಏಕರೂಪದ ತೆರಿಗೆ, ಶುಲ್ಕ ವಿಧಿಸುವ ಅಂಶವನ್ನು ಕರಡು ನಿಯಮಾವಳಿಯಲ್ಲಿ ಪ್ರಸ್ತಾಪಿಸಲಾಗಿದೆ.
ತೆರಿಗೆಯಲ್ಲಿ ಏರಿಕೆ: ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿ ವಸತಿ, ವಸತಿಯೇತರ ಕಟ್ಟಡ, ವಾಣಿಜ್ಯ ಉದ್ದೇಶದ ಭೂಮಿ ಸೇರಿದಂತೆ ಇನ್ನಿತರ ಸ್ವತ್ತುಗಳಿಗೆ ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ನೀಡಿ, ನೋಂದಣಿ ಮಾಡುವಂತೆಯೂ ಪಿಡಿಒಗಳಿಗೆ ನಿರ್ದೇಶನ ನೀಡುವ ಅಂಶವೂ ಇದೆ. ಹಾಗೆಯೇ, ವಸತಿ, ವಾಣಿಜ್ಯ ಕಟ್ಟಡಗಳು, ನಿವೇಶನ, ವಾಣಿಜ್ಯ ಉದ್ದೇಶದ ಭೂಮಿ, ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ), ಮೊಬೈಲ್ ಟವರ್ ಸೇರಿದಂತೆ ಇನ್ನಿತರ ಆಸ್ತಿಗಳ ಸಂಬಂಧ ಪ್ರತ್ಯೇಕ ಶುಲ್ಕ ವಿಧಿಸುವ ಪ್ರಸ್ತಾಪವಿದೆ.
ಮೊದಲ ವರ್ಷ ಎರಡು ಪಟ್ಟು ತೆರಿಗೆ: ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡ ಕಟ್ಟಡ, ಭೂಪರಿವರ್ತನೆಯಾಗದ ಕಂದಾಯ ನಿವೇಶನ, ಬಡಾವಣೆ ನಕ್ಷೆಯಿಲ್ಲದ ಭೂಪರಿವರ್ತಿತ ಜಮೀನಿನಲ್ಲಿರುವ ನಿವೇಶನ, ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ಪಾವತಿಸಿಕೊಂಡು ಇ-ಖಾತಾ, ಪಿಐಡಿ ನೀಡದೆ ಪ್ರತ್ಯೇಕ ರಿಜಿಸ್ಟರ್‌ನಲ್ಲಿ(ಬಿ-ಖಾತಾ) ದಾಖಲಿಸಬೇಕೆಂದು ಉಲ್ಲೇಖಿಸಲಾಗಿದೆ. ಬಿ-ಖಾತಾ ಪಡೆಯುವ ಆಸ್ತಿಗಳಿಗೆ ಮೊದಲ ವರ್ಷ ಎರಡು ಪಟ್ಟು ತೆರಿಗೆ ವಿಧಿಸಬೇಕು. ಆ ನಂತರದ ವರ್ಷಗಳಿಂದ ನಿಗದಿತ ತೆರಿಗೆ ವಸೂಲಿ ಮಾಡಬೇಕು ಎಂದೂ ಉಲ್ಲೇಖಿಸಲಾಗಿದೆ. ಈವರೆಗೆ ಗ್ರಾಪಂ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಶುಲ್ಕ, ವ್ಯಾಪಾರ- ವಾಣಿಜ್ಯ ಚಟುವಟಿಕೆ ನಡೆಸಲು ಅನುಮತಿ ಶುಲ್ಕ, ಕೈಗಾರಿಕೆ ಘಟಕಗಳ ಸ್ಥಾಪನೆಗೆ ಅನುಮತಿ ಶುಲ್ಕ ವಿಧಿಸುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದೀಗ ಮಾರ್ಗಸೂಚಿ ದರದಂತೆ ಚದರ ಮೀಟರ್ ಆಧಾರದಲ್ಲಿ ವೈಜ್ಞಾನಿಕವಾಗಿ ಶುಲ್ಕ ವಿಧಿಸುವ ಪ್ರಸ್ತಾಪವೂ ಇದೆ ಎಂದು ಮೂಲಗಳು ಹೇಳಿವೆ.
ಮೈಸೂರು: ತೆರಿಗೆ ವಸೂಲಿ ವೇಳೆ ಗ್ರಾಪಂ ಸದಸ್ಯರ ಮೌಖಿಕ ಸೂಚನೆಗೆ ಬೆಲೆ ಕೊಟ್ಟು ಶುಲ್ಕವನ್ನು ಪಾವತಿಸಿಕೊಳ್ಳುತ್ತಿದ್ದರು. ಆದರೆ, ಈಗ ಸದಸ್ಯರ ಹಸ್ತಕ್ಷೇಪಕ್ಕೂ ಕಡಿವಾಣ ಬಿದ್ದಿದೆ. ತೆರಿಗೆ ಮೊತ್ತ ಒಂದು ಸಾವಿರ ರೂ. ಇದ್ದರೆ ಅಷ್ಟನ್ನೂ ಪಾವತಿಸಬೇಕು. ಐದು ಸಾವಿರ ರೂ. ಇರುವ ತೆರಿಗೆಗೆ ಒಂದು ಸಾವಿರ ರೂ. ಪಡೆಯುವುದಕ್ಕೆ ಅವಕಾಶವಿಲ್ಲ. ಆನ್ ಲೈನ್‌ನಲ್ಲಿ ಆಸ್ತಿ ವಿವರವನ್ನು ನಮೂದಿಸಬೇಕಿರುವ ಕಾರಣಅಂತಹ ರಾಜಕೀಯ ಶಿಫಾರಸಿಗೂ ಕಡಿವಾಣ ಬಿದ್ದಿದೆ.
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…