Andolana originals

ವಿದ್ವತ್ತಿನ ಬಹುತ್ವದ ಪ್ರತೀಕವಾಗಿದ್ದ ಪ್ರೊ.ಅಸ್ಸಾದಿ

ಸಾರ್ವಜನಿಕ ಬದುಕಿನಲ್ಲೂ ಓದುಗರನ್ನು ಗಳಿಸಿದ್ದ ಪ್ರಾಧ್ಯಾಪಕ

ರಹಮತ್‌ ತರೀಕೆರೆ
ಕರ್ನಾಟಕ ಜನಪರ ವಿದ್ವಾಂಸರೂ ವಿದ್ಯಾರ್ಥಿ ಪ್ರೀತಿಯ ಪ್ರಾಧ್ಯಾಪಕರೂ, ಚಳವಳಿಗಳ ಸಖನೂ ಆಗಿದ್ದ ಪ್ರೊ. ಮುಜಾಪ್ಫರ್ ಅಸ್ಸಾದಿಯವರು, ಅನಿರೀಕ್ಷಿತವಾಗಿ ನಿಧನವಾಗಿ, ತಮ್ಮ ಗೆಳೆಯರನ್ನೂ ವಿದ್ಯಾರ್ಥಿಗಳನ್ನೂ ಕುಟುಂಬದವರನ್ನೂ ಶೋಕದಲ್ಲಿ ಮುಳುಗಿಸಿದ್ದಾರೆ. ಅವರಿನ್ನೂ ಬದುಕಿ, ನಾಡಿಗೆ ತಮ್ಮ ವಿದ್ವತ್ತಿನ ಸೇವೆ ಮಾಡಬೇಕಿತ್ತು. ಆ ಅದೃಷ್ಟ ನಾಡಿಗಿಲ್ಲವಾಯಿತು. ಈ ಹೊತ್ತಲ್ಲಿ ಅವರ ವಿದ್ವತ್ತಿನ ವಿಶಿಷ್ಟ ಮಾದರಿಯನ್ನು ವಿಶ್ಲೇಷಿಸಬಹುದು.

ಭಾರತದ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಲ್ಲಿ ಮುಖ್ಯವಾಗಿ ನಾಲ್ಕು ಮಾದರಿಗಳಿವೆ. ಒಂದು: ಸಂಶೋಧನೆ ಹಾಗೂ ಪಾಠ ಪ್ರವಚನಗಳಿಂದ ತಪ್ಪಿಸಿಕೊಂಡು, ವಿಶ್ವವಿದ್ಯಾಲಯ ಇಲ್ಲವೆ ಸರ್ಕಾರದ ಬೇರೆಬೇರೆ ಅಧಿಕಾರ ಸ್ಥಾನ ಗ್ರಹಿಸಿ ವೃತ್ತಿಜೀವನ ಮುಗಿಸುವವರು. ಎರಡು: ಒಳ್ಳೆಯ ಅಧ್ಯಾಪಕರು. ಆದರೆ ಸಂಶೋಧನೆ ಅಥವಾ ಬರವಣಿಗೆಯ ಕಲೆ ಇರುವುದಿಲ್ಲ. ಮೂರು: ಅತ್ಯುತ್ತಮ ಬೋಧನೆಯ ಜತೆ ಸಂಶೋಧನೆಯನ್ನೂ ಕೈಗೊಳ್ಳುವವರು. ಇವರಲ್ಲಿ ಕೆಲವರ ಸಂಶೋಧನೆ ಅಕೆಡೆಮಿಕ್ ವಲಯವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಸೃಷ್ಟಿಯಾಗುತ್ತದೆ. ಅದಕ್ಕೆ ಸಾಮಾನ್ಯ ಓದುಗರ ಜತೆ ನೇರ ಸಂಬಂಧ ಇರುವುದಿಲ್ಲ. ನಾಲ್ಕು: ಏಕಕಾಲಕ್ಕೆ ಬೋಧನೆ ಸಂಶೋಧನೆ ಮತ್ತು ಸಮಾಜ ಬದಲಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡವರು. ಇವರು ತಮ್ಮ ಸಂಶೋಧನೆಯ ಫಲಿತವನ್ನು ಸಾರ್ವಜನಿಕ ಉಪನ್ಯಾಸಗಳ ಅಥವಾ ಜನಪ್ರಿಯ ಬರೆಹಗಳ ಮೂಲಕ ಸಾಮಾನ್ಯ ಓದುಗರಿಗೆ ಸರಳ ನುಡಿಯಲ್ಲಿ ಹಂಚಿಕೊಳ್ಳುವವರು; ಅದನ್ನು ನಾಡಿನ ಸಾಮಾಜಿಕ ರಾಜಕೀಯ ಚಳವಳಿಗಳಲ್ಲಿ ತೊಡಗಿಸುವವರು. ಜ್ಞಾನವು ಸರ್ಕಾರದ ನೀತಿ ನಿರೂಪಣೆಯಲ್ಲಿ ಉಪಯುಕ್ತ ಆಗುವಂತೆ ಮಾಡುವವರು. ಈ ಮಾದರಿಯನ್ನು ವಿದ್ವತ್ತಿನ ಬಹುಸ್ತರೀಯ ಅಥವಾ ಜನೋಪಯೋಗಿ ಮಾದರಿ ಎನ್ನಬಹುದು. ಡಿ. ಆರ್. ನಾಗರಾಜ್, ಕಾಂಚ ಐಲಯ್ಯ, ಆನಂದ ತೇಲ್ತುಂಬ್ಡೆ, ಗಣೇಶ್ ದೇವಿ, ಯೋಗೇಂದ್ರ ಯಾದವ್, ವಸು ಮಳಲಿ, ಎ. ನಾರಾಯಣ, ಮುಜಾಪರ್ ಅಸ್ಸಾದಿ ಮೊದಲಾದವರು ಈ ಮಾದರಿಯವರು.

ಅಸ್ಸಾದಿಯವರು ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕರಾಗಿದ್ದರು. ತಮ್ಮ ಜನೋಪಯೋಗಿ ಸಂಶೋಧನೆ, ಉಪನ್ಯಾಸ ಮತ್ತು ಬರೆಹಗಳಿಂದಾಗಿ ಶೈಕ್ಷಣಿಕ ವಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕ ಬದುಕಿನಲ್ಲೂ ಓದುಗರನ್ನು ಗಳಿಸಿದ್ದರು. ಅವರ ಈ ವ್ಯಕ್ತಿತ್ವಕ್ಕೆ ಜೆಎನ್‌ಯುನಲ್ಲಿ ಕಲಿತಿದ್ದೂ ಒಂದು ಕಾರಣ. ಇದರಿಂದ ಕನ್ನಡಿಗರೊಬ್ಬರು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಕರ್ನಾಟಕದ ಬಗೆಗಿನ ತಿಳಿವನ್ನು ಹಂಚಿಕೊಳ್ಳುವುದು; ಕರ್ನಾಟಕದ ಹಳ್ಳಿಗಾಡು ಮತ್ತು ಕಾಡು ಪ್ರದೇಶಗಳಿಗೆ ಹೋಗಿ ಆದಿವಾಸಿ ಜನರೊಟ್ಟಿಗೆ ಸಂವಾದಿಸುವುದು; ಅಲ್ಲಿ ಪಡೆದ ಅನುಭವ ಮತ್ತು ಜ್ಞಾನವನ್ನು ಪ್ರಭುತ್ವದ ನೀತಿನಿರೂಪಣ ಸಭೆಗಳಲ್ಲಿ ಹಂಚಿಕೊಳ್ಳುವುದು ಸಾಧ್ಯವಾಯಿತು.

ಅಸ್ಸಾದಿಯವರು ಕರಾವಳಿ ಸೀಮೆಯವರು. ಕರ್ನಾಟಕದ ಕರಾವಳಿ ಅತಿಹೆಚ್ಚು ಜನಭಾಷೆ, ಹಲವಾರು ಆದಿವಾಸಿ, ವಿಭಿನ್ನ ಧರ್ಮ ಹಾಗೂ ಆಹಾರಪದ್ಧತಿ ಇರುವ ವಿಶಿಷ್ಟ ಪ್ರದೇಶ. ವೈರುಧ್ಯವೆಂದರೆ, ಇದು ಏಕರೂಪೀ ಸಂಸ್ಕೃತಿ ಹೇರಿಕೆಯ, ಮಹಿಳೆಯರ ಮತ್ತು ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ದಮನಿಸುವ, ಶೂದ್ರರನ್ನು ಮೇಲ್ಜಾತಿ ಸಂಸ್ಕೃತಿ ರಕ್ಷಣೆಯ ಕಾಲಾಳುಗಳನ್ನಾಗಿ ಪಳಗಿಸುವ ಹಿಂದುತ್ವದ ಪ್ರಯೋಗಶಾಲೆಯೂ ಆಗಿಬಿಟ್ಟಿದೆ. ಇಂತಹ ಸಾಮಾಜಿಕ ಮತ್ತು ಸೈದ್ಧಾಂತಿಕ ಪ್ರದೇಶದಿಂದ ಬಂದ ಅಸ್ಸಾದಿ, ಜಿ. ರಾಜಶೇಖರ, ಪುರುಷೋತ್ತಮ ಬಿಳಿಮಲೆ, ಚಂದ್ರ ಪೂಜಾರಿ, ದಿನೇಶ್ ಅಮಿನ್‌ಮಟ್ಟು, ಪಟ್ಟಾಭಿರಾಮ ಸೋಮಯಾಜಿ ಮೊದಲಾದ ಲೇಖಕರ-ಪತ್ರಕರ್ತರ ಮಾತು ಮತ್ತು ಬರೆಹಗಳಲ್ಲಿ, ಈ ದೇಶದ ಗುಂಡಿಗೆಯಂತಿರುವ ಬಹುತ್ವತತ್ವವು ಪ್ರತಿಪಾದಿತವಾಗಿದೆ. ಈ ತತ್ವಕ್ಕೆ ಮೂಲಭೂತವಾದ ಮತ್ತು ಮತೀಯವಾದ ಎರಡನ್ನೂ ಪ್ರತಿರೋಽಸುವ ಶಕ್ತಿ ಒದಗಿದೆ. ಇದಕ್ಕೆ ಬೇಕಾಗಿ ಅಸ್ಸಾದಿಯವರಿಗೆ ಉರ್ದು, ತುಳು, ಕನ್ನಡ, ಇಂಗ್ಲೀಶ್ ಭಾಷೆಗಳಲ್ಲಿ ಪ್ರಭುತ್ವವಿತ್ತು. ಈ ಭಾಷಿಕ ಬಹುತ್ವವು ಸಾಂಸ್ಕೃತಿಕ ಬಹುತ್ವವನ್ನು ಪ್ರತಿಪಾದಿಸುವಂತೆ ಮಾಡಿದೆ. ಅನೇಕ ಸಲ ಕೋಮುಸೌಹಾರ್ದ ಅಥವಾ ಮತೀಯವಾದ ವಿರೋಽಸುವ ಚಿಂತನೆ, ಸಮಾಜದಲ್ಲಿ ಆಳವಾಗಿ ರುವ ವರ್ಗಭೇದ ಮತ್ತು ಸಾಮಾಜಿಕ ತಾರತಮ್ಯದ ಆಯಾಮಗಳನ್ನು ಪರಿಗಣಿಸದೇ ಹೋಗುವ ಸಾಧ್ಯತೆಗಳಿವೆ. ಅಸ್ಸಾದಿಯವರ ಸಂಶೋಧನ ಬರೆಹ ಮತ್ತು ಉಪನ್ಯಾಸಗಳು, ಸಮಾಜದ ಬಡತನ ಮತ್ತು ಸಾಮಾಜಿಕ ಭೇದಗಳನ್ನು, ಅವುಗಳ ನಡುವಣ ಅಂತಃ ಸಂಬಂಧವನ್ನು ಮರೆಯುವುದಿಲ್ಲ. ಅವನ್ನು ಗುರುತಿಸುತ್ತವೆ ಮತ್ತು ವಿಶ್ಲೇಷಿಸುತ್ತವೆ. ಈ ದೃಷ್ಟಿಯಿಂದ ಮುಸ್ಲಿಮರಲ್ಲಿರುವ ಪಂಗಡ/ ಜಾತಿಪದ್ಧತಿ ಕುರಿತು ಅಸ್ಸಾದಿಯವರು ರಚಿಸಿದ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಪುಸ್ತಕವನ್ನು ಗಮನಿಸಬೇಕು. ಅಲ್ಲಿರುವ ಅಡಿಟಿಪ್ಪಣಿಗಳು ಮತ್ತು ಉಲ್ಲೇಖಗೊಂಡ ಕೃತಿಗಳು, ಅವರ ವ್ಯಾಪಕ ಅಧ್ಯಯನದ ಪ್ರತೀಕವಾಗಿವೆ.

‘ಜಗತ್ತಿನ ಮುಸ್ಲಿಮರೆಲ್ಲ ಒಂದೇ, ಮುಸ್ಲಿಮರಲ್ಲಿ ಜಾತಿ ವ್ಯವಸ್ಥೆ ಇಲ್ಲ’ ಎಂದು ಪ್ರತಿಪಾದಿಸುವವರಿಗೆ ಈ ಪುಸ್ತಕ ಅಪಥ್ಯವಾಗಿದೆ. ಆದರೆ ಒಬ್ಬ ವಿದ್ವಾಂಸ ಸಮುದಾಯಕ್ಕೆ ತನ್ನ ಬೌದ್ಧಿಕತೆ ಮೂಲಕ ಸೇವೆ ಸಲ್ಲಿಸುವ ವಿಧಾನವೆಂದರೆ, ಒಳಗಿನ ಕಹಿ ವೈರುಧ್ಯಗಳನ್ನು ಮುಟ್ಟಿ ತೋರಿಸುವುದು; ತನ್ನ ಸಮುದಾಯದೊಳಗಿನ ದಮನಿತ ಸ್ತರ/ವರ್ಗಗಳಿಗೆ ಸಾಮಾಜಿಕ ಆರ್ಥಿಕ ನ್ಯಾಯ ದೊರಕಿಸಲು ನೆರವಾಗುವುದು; ಜನರ ನಿಜವಾದ ಎದುರಾಳಿಗಳ ಬಗ್ಗೆ ಎಚ್ಚರ ಕೊಡುವುದು. ಅವನ್ನು ಕುರಿತು ಸಮಾಜದಲ್ಲಿರುವ ಪೂರ್ವಗ್ರಹ ನಿವಾರಿಸುವುದು. ಪ್ರಭುತ್ವವನ್ನು ಸಂವೇದನಾಶೀಲಗೊಳಿಸುವುದು. ಈ ಹಿನ್ನೆಲೆಯಲ್ಲಿ ಅಸ್ಸಾದಿಯವರು ಲಿಂಗಾಯತ ಧರ್ಮದ ಸಮಿತಿಯಲ್ಲಿ ಕೆಲಸ ಮಾಡಿದರು. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಲೇಖಕರು ವಕೀಲರು ಪತ್ರಕರ್ತರು ಚಳವಳಿಗಾರರು ಸೇರಿಕೊಂಡು ‘ಮುಸ್ಲಿಂ ಚಿಂತಕರ ಚಾವಡಿ’ ಸಂಘಟನೆ ಕಟ್ಟಿದೆವು. ಅಸ್ಸಾದಿ ಅದರ ಪ್ರಥಮ ಅಧ್ಯಕ್ಷರು. ಅವರು ಮಾಡಿದ ಮೊದಲನೇ ಕಾರ್ಯಕ್ರಮ, ಭಾರತದ ಮುಸ್ಲಿಮರ ಸಾಮಾಜಿಕ ರಾಜಕೀಯ ಶೈಕ್ಷಣಿಕ ಅವಸ್ಥೆಯ ದಾಖಲೆಯಾಗಿರುವ ಸಾಚಾರ್ ವರದಿ ಮೇಲೆ ಚರ್ಚೆ ಏರ್ಪಡಿಸಿದ್ದು. ಮುಸ್ಲಿಮರಿಗೆ ತುರ್ತಾಗಿ ಬೇಕಿರುವುದು ಮಸೀದಿಗಳಲ್ಲ. ಘನತೆಯಿಂದ ಬದುಕುವ ಆರ್ಥಿಕ ಹಾಗೂ ಸಾಮಾಜಿಕ ಬದುಕು. ರಾಜಕೀಯ ಪ್ರಾತಿನಿಧ್ಯ ಎಂಬುದು ಅವರ ನಂಬಿಕೆಯಾಗಿತ್ತು. ಅವರಿಗೆ ಸಾಮಾಜಿಕ ಕ್ರಿಯಾಶೀಲತೆಗೆ ಮತ್ತು ಸಾಮುದಾಯಿಕ ಸಂಘಟನೆಗೆ ಸಂಶೋಧನೆಯ ಬಲದಿಂದ ಚಿಂತನೆಯ ಚೌಕಟ್ಟು ಕೊಡುವ ವಿಶಿಷ್ಟ ತರಬೇತಿಯಿತ್ತು. ಚಾರಿತ್ರಿಕ ಅರಿವಿನಿಂದ ಕೂಡಿರುವ ಈ ಚೌಕಟ್ಟಿಗೆ ವರ್ತಮಾನವನ್ನು ಬದಲಿಸುವ ಕಳಕಳಿಯಿತ್ತು. ಅವರ ಅಧ್ಯಯನಗಳು ಚರಿತ್ರೆ ಸಮಾಜವಿಜ್ಞಾನ ರಾಜಕೀಯಶಾಸ್ತ್ರ , ಮಾನವಶಾಸ್ತ್ರಗಳ ಬಹುಶಿಸ್ತೀಯ ತಿಳಿವಳಿಕೆಯಿಂದ ರೂಪುಗೊಂಡಿರುವುದು ಇದಕ್ಕೆ ಕಾರಣ.

ಅಸ್ಸಾದಿಯವರ ಬಹುಶಿಸ್ತೀಯ ಮತ್ತು ಜನಪರ ವಿದ್ವತ್ತಿನ ತಾರ್ಕಿಕ ಆಯಾಮವೇ ಅವರು ಪತ್ರಿಕೆಗಳಲ್ಲಿ ಲೇಖನ- ಅಂಕಣ ಬರೆಯುವುದಕ್ಕೆ ಕಾರಣವಾಗಿತ್ತು. ಸಾಹಿತ್ಯ ಹಿನ್ನೆಲೆಯ ವರಿಗೆ ಹೋಲಿಸಿದರೆ, ಸಮಾಜವಿಜ್ಞಾನದವರು ಕನ್ನಡದಲ್ಲಿ ತಮ್ಮ ತಿಳಿವಳಿಕೆಯನ್ನು ಪತ್ರಿಕೆಗಳಲ್ಲಿ ಹಂಚಿಕೊಳ್ಳುವುದು, ಟಿವಿ ಚರ್ಚೆಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಅಸ್ಸಾದಿಯವರು ಇದಕ್ಕೆ ಅಪವಾದವಾಗಿದ್ದರು. ಅವರ ಪತ್ರಿಕಾ ಲೇಖನಗಳು ಜನಪ್ರಿಯವಾಗಿದ್ದವು. ಅವರ ಅಂಕಣ ಬರೆಹಗಳಿಗೆ ಮಾಧ್ಯಮ ಅಕಾಡೆಮಿ ಬಹುಮಾನ ಸಂದಿತ್ತು. ಜೆಎನ್‌ಯು ಮತ್ತು ಶಿಕಾಗೊ ವಿಶ್ವವಿದ್ಯಾಲಯಗಳಲ್ಲಿ ಕಲಿತ, ಮಂಗಳೂರು, ಗೋವಾ, ಮೈಸೂರು ವಿಶ್ವವಿದ್ಯಾಲಯಗಳಲ್ಲಿ ನಾಲ್ಕು ದಶಕಗಳ ಕಾಲ ಸಹಸ್ರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ, ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ಕರ್ನಾಟಕ ಕುರಿತ ಜ್ಞಾನವನ್ನು ಹಂಚಿಕೊಂಡ, ರಾಜ್ಯಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ತಿಳವಳಿಕೆಯನ್ನು ನಾಡಿನ ಓದುಗರಿಗೆ ಅಂಕಣಗಳ ಮೂಲಕ ಒದಗಿಸಿದ ಅಸ್ಸಾದಿ, ಸೇವೆಯಿಂದ ನಿವೃತ್ತರಾದರೂ ಅವರ ತಿಳಿವಳಿಕೆ ಸಮಾನತೆಯ ಕರ್ನಾಟಕವನ್ನು ಕಟ್ಟಲು ಮುಂದೆಯೂ ನೆರವಾಗುವ ಅವಕಾಶವಿತ್ತು. ಆದರೆ ಸಾವು ಈ ಅವಕಾಶವನ್ನು ಕಿತ್ತುಕೊಂಡಿದೆ. ಅವರಂತಹ ದೊಡ್ಡ ವಿದ್ವಾಂಸರಿಗೆ ವಿಶ್ವವಿದ್ಯಾಲಯವನ್ನು ಮುನ್ನಡೆಸುವ ಅವಕಾಶವು ಲಭ್ಯವಾಗದೆ ಹೋಗಿದ್ದು, ನಮ್ಮ ಶೈಕ್ಷಣಿಕ ಮತ್ತು ರಾಜಕೀಯ ವ್ಯವಸ್ಥೆಯ ದೊಡ್ಡ ಕೊರತೆಯನ್ನು ಕಾಣಿಸಿಬಿಟ್ಟಿತು.

ಆಂದೋಲನ ಡೆಸ್ಕ್

Recent Posts

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

6 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

8 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

9 hours ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

9 hours ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

9 hours ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

9 hours ago