Andolana originals

ನೆಫ್ರೋ ಯುರಾಲಜಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ

ಕೆ.ಬಿ.ರಮೇಶನಾಯಕ

ಮೈಸೂರಿನ ಕುಂಬಾರಕೊಪ್ಪಲು ಬಳಿ ತಲೆ ಎತ್ತಲಿರುವ ಸ್ವಂತ ಕಟ್ಟಡ

೧೧೭.೭೧ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ

೧೦೦ ಹಾಸಿಗೆಗಳ ಸಾಮರ್ಥ್ಯದ ಜಿ ಪ್ಲಸ್ ೬ ಅಂತಸ್ತಿನ ಕಟ್ಟಡ

ಮೈಸೂರು, ಚಾ.ನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳ ಜನಕ್ಕೆ ಅನುಕೂಲ

ಮೈಸೂರು: ಬಡವರ ಪಾಲಿನ ದೊಡ್ಡಾಸ್ಪತ್ರೆ ಎಂದೇ ಜನಜನಿತವಾಗಿರುವ ಕೆ.ಆರ್.ಆಸ್ಪತ್ರೆ ಮೇಲಿನ ಒತ್ತಡ ತಗ್ಗಿಸಲು ನಗರದ ಕೆಆರ್‌ಎಸ್ ರಸ್ತೆಯಲ್ಲಿ ಸೂಪರ್ ಸ್ಪೆಷಾಲಿಟಿ, ಜಿಲ್ಲಾ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ ರಾಜ್ಯ ಸರ್ಕಾರ, ಕುಂಬಾರಕೊಪ್ಪಲು ರಸ್ತೆಗೆ ಹೊಂದಿ ಕೊಂಡಂತಿರುವ ಒಂದು ಎಕರೆ ಪ್ರದೇಶದಲ್ಲಿ ೧೧೭.೭೧ ಕೋಟಿ ರೂ. ವೆಚ್ಚದಲ್ಲಿ ನೆಫ್ರೋ  ಯುರಾಲಜಿ ಆಸ್ಪತ್ರೆಯನ್ನು ನಿರ್ಮಿಸಲು ಸಿದ್ಧತೆ ನಡೆಸಿದೆ.

ಅತ್ಯಾಧುನಿಕ ಸೇವೆಗಳನ್ನು ಒಳಗೊಂಡ ೧೦೦ ಹಾಸಿಗೆಗಳ ಸಾಮರ್ಥ್ಯದ ಜಿ ಪ್ಲಸ್ ೬ ಅಂತಸ್ತಿನ ಕಟ್ಟಡದ ಆಸ್ಪತ್ರೆಯು ತಲೆ ಎತ್ತಲಿದೆ. ಇದರಿಂದಾಗಿ ಮುಂದಿನ ಒಂದು ವರ್ಷದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಚಿಕಿತ್ಸೆ ಪಡೆಯುವುದು ಕಡಿಮೆಯಾಗಲಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆ- ಯುರಾಲಜಿ ಸಂಸ್ಥೆಯು ಸ್ವಾಯತ್ತ ಸಂಸ್ಥೆಯಾಗಿದೆ. ಇದು ಮೂತ್ರಪಿಂಡ ಹಾಗೂ ಮೂತ್ರಕೋಶ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಏಕೈಕ ಸಂಸ್ಥೆಯಾಗಿತ್ತು.

ಸಿದ್ದರಾಮಯ್ಯ ಅವರು ಮೊದಲನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ, ಸಂಸ್ಥೆಯ ಮುಖ್ಯಘಟಕಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ರೋಗಿಗಳ ಒತ್ತಡ ಗಮನಿಸಿ ಮೈಸೂರಿನಲ್ಲಿ ಎರಡನೇ ಘಟಕವನ್ನು ಪ್ರಾರಂಭಿಸಲು ಸೂಚಿಸಿದ್ದರು. ಅದರಂತೆ, ೨೦೧೮ರಲ್ಲಿ ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ಐಪಿಡಿ-ಒಪಿಡಿ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ೬೦ ಹಾಸಿಗೆಗಳ ಸಾಮರ್ಥ್ಯವುಳ್ಳ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒಳಗೊಂಡಂತೆ ಘಟಕವನ್ನು ರೋಗಿಗಳಿಗೆ ಸಮರ್ಪಣೆ ಮಾಡಿದ್ದರು. ಆದರೆ, ಈ ಘಟಕಕ್ಕೆ ಪ್ರತ್ಯೇಕವಾದ ಕಟ್ಟಡವನ್ನು ನಿರ್ಮಾಣ ಮಾಡಬೇಕೆಂಬ ಕೂಗು ಎದ್ದಿತ್ತು.

ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಈ ಘಟಕಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಸಿದ್ದರಾಮಯ್ಯ ಅವರು ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ಹಿಂಭಾಗದಲ್ಲಿ ಕುಂಬಾರಕೊಪ್ಪಲು ರಸ್ತೆಗೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಸ್ವಂತ ಕಟ್ಟಡಕ್ಕಾಗಿ ೨೦೨೪-೨೫ರಲ್ಲಿ ಒಂದು ಎಕರೆ ಜಾಗವನ್ನು ಮಂಜೂರು ಮಾಡಿದ್ದಲ್ಲದೆ, ೧೦೦ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಉನ್ನತೀಕರಿಸಲು ೧೧೭.೭೧ ಕೋಟಿ ರೂ. ಅನುದಾನ ಬಿಡುಗಡೆಗೆ ಒಪ್ಪಿದ್ದರು. ಅದರಂತೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ದೊರೆತು ಕಾಮಗಾರಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

ಹೈಟೆಕ್ ಮಾದರಿ ಚಿಕಿತ್ಸಾ ಸೌಲಭ್ಯ: ನೂತನ ವಿನ್ಯಾಸದ ಕಟ್ಟಡದಲ್ಲಿ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಮಾದರಿಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವುದು ಈ ಆಸ್ಪತ್ರೆಯ ಮೊದಲ ಗುರಿಯಾಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ಅತ್ಯಾಧುನಿಕ ಸೇವೆ ನೀಡಲು ೧೦೦ ಹಾಸಿಗೆಗಳ ಸಾಮರ್ಥ್ಯದ ಜಿ ಪ್ಲಸ್ ೬ ಅಂತಸ್ತಿನ ಆಸ್ಪತ್ರೆಯು ನಿರ್ಮಾಣಗೊಳ್ಳಲಿದೆ. ಇದರಲ್ಲಿ ೫೦ ಹಾಸಿಗೆಗಳ ಸಾಮರ್ಥ್ಯದ ಡಯಾಲಿಸಿಸ್ ಘಟಕ, ೨೦ ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ, ನಾಲ್ಕು ಕೊಠಡಿಗಳ ಮಾಡ್ಯುಲರ್ ಶಸಚಿಕಿತ್ಸಾ ಘಟಕ, ಏಕಕಾಲದಲ್ಲಿ ನೂರು ಜನರು ಆಸೀನರಾಗುವಂತಹ ವಿಶೇಷ ಸೌಲಭ್ಯವುಳ್ಳ ಸಭಾಂಗಣ, ಡಿಜಿಟಲ್ ಲೈಬ್ರರಿ, ಕಟ್ಟಡದ ಹೊರಗಡೆ ವಿಶಾಲವಾದ ವಾಹನ ನಿಲ್ದಾಣ ಮತ್ತು ರೋಗಿಗಳ ವಿಶ್ರಾಂತಿಧಾಮ ಹೊಂದಿರುತ್ತದೆ.

೬,೪೩೧ ಮಂದಿಗೆ ಶಸ್ತ್ರಚಿಕಿತ್ಸೆ:  ೨೦೧೮ರಲ್ಲಿ ಮೈಸೂರಿನಲ್ಲಿ ಆರಂಭವಾದ ನೆಫ್ರೋ ಯುರಾಲಜಿ ಸಂಸ್ಥೆಯ ಘಟಕದಲ್ಲಿ ಈವರೆಗೆ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಮೂತ್ರಕೋಶ ಕಾಯಿಲೆಗೆ ಚಿಕಿತ್ಸೆಯನ್ನು ನೀಡಲಾಗಿದೆ. ೨೦೧೮ ರಿಂದ ೨೦೨೫ರ ಜುಲೈ ತನಕ ೯೧ ಸಾವಿರ ಮಂದಿಗೆ ಡಯಾಲಿಸಿಸ್ ಚಿಕಿತ್ಸೆ, ಹೊರ ರೋಗಿಗಳಾಗಿ ೮೯ ಸಾವಿರ, ಒಳರೋಗಿಗಳಾಗಿ ೭,೩೩೬ ಮಂದಿ ಚಿಕಿತ್ಸೆ ಪಡೆದಿದ್ದರೆ, ೬,೪೩೧ ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಿರುವುದು ಗಮನಾರ್ಹ.

” ಮೈಸೂರಿನಲ್ಲೇ ಪ್ರತ್ಯೇಕವಾದ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಾದ ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಗಳ ಬಡ ರೋಗಿಗಳಿಗೆ ಅನುಕೂಲವಾಗುವಂತೆ ಚಿಕಿತ್ಸೆ ಕೊಡಲು ಸಹಕಾರಿಯಾಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್, ಶಸಚಿಕಿತ್ಸೆಗೆ ದುಬಾರಿ ಖರ್ಚು ಮಾಡುವುದು ತಗ್ಗಲಿದೆ.”

ಡಾ.ಜೆ.ಬಿ.ನರೇಂದ್ರ, ಮುಖ್ಯಸ್ಥ, ನೆಫ್ರೋ ಯುರಾಲಜಿ ಸಂಸ್ಥೆ

ಆಂದೋಲನ ಡೆಸ್ಕ್

Recent Posts

ಕೇರಳ ಸಿಎಂ, ಕೆ.ಸಿ.ವೇಣುಗೋಪಾಲ್‌ ಜೊತೆ ವೇದಿಕೆ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಕೇರಳ: ಬೆಂಗಳೂರಿನ ಕೋಗಿಲು ಕ್ರಾಸ್ ಬಳಿಯ ಅಕ್ರಮ ಒತ್ತುವರಿ ತೆರವು ಸಂಬಂಧಪಟ್ಟಂತೆ ಅನಪೇಕ್ಷಣೀಯವಾದಂತಹ ಹೇಳಿಕೆ ನೀಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ…

26 mins ago

ಹೊಸ ವರ್ಷಾಚರಣೆ: ಮೈಸೂರಿಗೆ ಲಗ್ಗೆಯಿಟ್ಟ ಪ್ರವಾಸಿಗರು

ಮೈಸೂರು: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕೌಂಟ್‌ಡೌನ್‌ ಶುರುವಾಗಿದ್ದು, ನ್ಯೂ ಇಯರ್‌ ಆಚರಿಸಲು ಪ್ರವಾಸಿಗರು ಮೈಸೂರಿಗೆ ಲಗ್ಗೆಯಿಟ್ಟಿದ್ದಾರೆ. ಜಗತ್ಪ್ರಸಿದ್ಧ ಮೈಸೂರು ಅರಮನೆಗೆ…

41 mins ago

ವಾಲ್ಮೀಕಿ ನಿಗಮ ಹಗರಣ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ

ಬಳ್ಳಾರಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ಸಿಬಿಐ ಶಾಕ್‌ ನೀಡಿದ್ದು, ಬಳ್ಳಾರಿಯಲ್ಲಿ ವಿಶ್ವನಾಥ್‌…

59 mins ago

ಪೈರಸಿ ವಿರುದ್ಧ ನಟ ಜಗ್ಗೇಶ್‌ ಸಮರ: ಓರ್ವನ ಬಂಧನ

ಬೆಂಗಳೂರು: ಪೈರಸಿ ವಿರುದ್ಧ ನವರಸ ನಾಯಕ ಜಗ್ಗೇಶ್‌ ಸಮರ ಸಾರಿದ್ದು, ಕೋಣ ಸಿನಿಯಾ ಪೈರಸಿ ವಿರುದ್ಧ ಚಂದ್ರಾ ಲೇಔಟ್‌ ಪೊಲೀಸ್‌…

2 hours ago

ಹೊಸ ವರ್ಷ ಆಚರಣೆಗೆ ಮಂಡ್ಯ ಜಿಲ್ಲೆ ಸಜ್ಜು: ಕಾವೇರಿ ತೀರದಲ್ಲಿ ನಿಷೇಧಾಜ್ಞೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಹೊಸ ವರ್ಷ ಆಚರಣೆಗೆ ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ಪೊಲೀಸ್‌ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪ್ರಮುಖವಾಗಿ…

2 hours ago

ವೈವಿಧ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು: ಸಿಎಂ ಸಿದ್ದರಾಮಯ್ಯ

ಕೇರಳ(ತಿರುವನಂತಪುರ): ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ…

3 hours ago