ಪ್ರಸಾದ್ ಲಕ್ಕೂರು
ವರ್ಷ ತುಂಬುವ ಮೊದಲೇ ಕುಸಿತ; ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿ ಸಮೀಪ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ (೯೪೮)ಯ ಬೈಪಾಸ್ ಮೇಲ್ಸೇತುವೆ ತಡೆಗೋಡೆ ಇತ್ತೀಚೆಗೆ ಕುಸಿದಿದೆ. ಮೇಲ್ಸೇತುವೆಯ ಕಾಮಗಾರಿ ಕಳಪೆಯಾದ್ದರಿಂದ ತಡೆಗೋಡೆ ಕುಸಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಮೇಲ್ಸೇತುವೆ ಕಾಮಗಾರಿ ಮುಗಿದು ಒಂದು ವರ್ಷ ಕೂಡ ಕಳೆದಿಲ್ಲ. ಆಗಲೇ ಕುಸಿದಿರುವುದು ವಾಹನಗಳ ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿಷೇಽಸಿದ್ದು, ಪಕ್ಕದ ಸರ್ವೀಸ್ ರಸ್ತೆಗಳ ಮೂಲಕ ವಾಹನ ಸಂಚಾರ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಮೇಲ್ಸೇತುವೆ ಕಾಮಗಾರಿಯನ್ನು ಕಾಲ ಕಾಲಕ್ಕೆ ಪರಿಶೀಲನೆ ಮಾಡಲಿಲ್ಲ. ಕಾಮಗಾರಿ ಗುಣಮಟ್ಟವನ್ನು ೩ ಹಂತಗಳಲ್ಲಿ ಸರಿಯಾಗಿ ನಡೆಸಲಿಲ್ಲ. ಆದ್ದರಿಂದ ಗುತ್ತಿಗೆದಾರ ಮನಬಂದಂತೆ ಕಾಮಗಾರಿ ನಡೆಸಿದ್ದಾನೆ ಎಂದು ಸಾರ್ವಜನಿಕರು, ವಾಹನಗಳ ಪ್ರಯಾಣಿಕರು, ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಈ ಕಾಮಗಾರಿಯ ಬಗ್ಗೆ ಸಂಸದರಾದ ಸುನಿಲ್ ಬೋಸ್ ಎಚ್ಚರ ವಹಿಸಬೇಕಿತ್ತು. ಜಿಲ್ಲೆಯ ಶಾಸಕರು ಕೂಡ ಗಮನಹರಿಸಿದ್ದರೆ ಇಷ್ಟು ಬೇಗ ತಡೆಗೋಡೆ ಕುಸಿಯುತ್ತಿರಲಿಲ್ಲ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
೧೦ ವರ್ಷಗಳ ಹಿಂದೆಯೇ ಚಾಮರಾಜನಗರ ಸಮೀಪ ಮರಿಯಾಲಹುಂಡಿ ಬಳಿ ರೈಲ್ವೆ ಹಳಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸಲಾಗಿದ್ದು ಚಾ.ನಗರದಿಂದ ನಂಜನಗೂಡು, ಮೈಸೂರಿಗೆ ಪ್ರತಿನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಈ ಮೇಲ್ಸೇತುವೆ ಗಟ್ಟಿಮುಟ್ಟಾಗಿದೆ. ಮೇಲ್ಸೇತುವೆ ಕಾಮಗಾರಿ ನಿರ್ವಹಿಸಿರುವ ಚಂಡೀಗಢ ಮೂಲದ ಗುತ್ತಿಗೆದಾರನ ವಿರುದ್ಧ ಕ್ರಮ ವಹಿಸಬೇಕು. ಬಹುಬೇಗ ಮೇಲ್ಸೇತುವೆ ದುರಸ್ತಿ ಮಾಡಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಎಚ್.ಡಿ.ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ ಈ ಹೆದ್ದಾರಿಯನ್ನು ಮಂಜೂರು ಮಾಡಿಸಿದ್ದರು. ಈ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಮಂಜೂರು ಮಾಡಿಸಿ ದ್ದಲ್ಲದೆ ಕಾಮಗಾರಿ ಪ್ರಾರಂಭದ ಹಿಂದೆ ಸಂಸದ ರಾಗಿದ್ದ ಆರ್.ಧ್ರುವನಾರಾಯಣ ಅವರ ಶ್ರಮವಿತ್ತು. ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್ ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ (೯೪೮)ಯು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲದಿಂದ ಚಾಮರಾಜನಗರ ತಾಲ್ಲೂಕಿನ ಪುಣಜನೂರು ತನಕ ೬೭ ಕಿ.ಮೀ. ಹಾದುಹೋಗಿದೆ. ಇದನ್ನು ವಿಸ್ತರಿಸಿ ಅಭಿವೃದ್ಧಿಪಡಿಸಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿಗೆ ೨೦೧೭ರ ಆಗಸ್ಟ್‌ನಲ್ಲಿ ಚಾಲನೆ ದೊರಕಿತಾದರೂ ೨೦೧೮ರ ಜನವರಿಯಲ್ಲಿ ಕಾಮಗಾರಿ ಪ್ರಾರಂಭವಾಯಿತು.
ಈ ಹೆದ್ದಾರಿಯು ಹಾದುಹೋಗುವ ಕೊಳ್ಳೇಗಾಲ, ಅಗರ, ಮಾಂಬಳ್ಳಿ, ಯಳಂದೂರು, ಸಂತೇಮರಹಳ್ಳಿ ಮತ್ತು ಚಾಮರಾಜನಗರ ಪಟ್ಟಣಗಳ ಆಸುಪಾಸಿನಲ್ಲಿ ಹೊಸ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಹೆದ್ದಾರಿ ಹಾಗೂ ಬೈಪಾಸ್ ನಿರ್ಮಾಣಕ್ಕೆ ಅಗತ್ಯವಾಗಿರುವ ಭೂಮಿಯನ್ನು ವಶಪಡಿಸಿಕೊಳ್ಳಲು ೯೫೪ ಕೋಟಿ ರೂ. ವೆಚ್ಚ ಮಾಡಲಾಗಿದೆ.
ಈ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅಂದಾಜು ವೆಚ್ಚ ೧೦೦೮ ಕೋಟಿ ರೂ.ಗಳಾಗಿದೆ. ಇದರ ಕಾಮಗಾರಿಯನ್ನು ಬೆಂಗಳೂರಿನ ಸದ್ಭವ್ ಎಂಬ ಸಂಸ್ಥೆಯು ಗುತ್ತಿಗೆಗೆ ಪಡೆದಿತ್ತು. ಯೋಜನೆಯ ನಿಯಮಾವಳಿ ಪ್ರಕಾರ ೨ ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಕೋವಿಡ್ ಕಾರಣದಿಂದ ಕಾಮಗಾರಿಗೆ ಹಿನ್ನಡೆಯಾಯಿತು.
ಈ ನಡುವೆ ಸದ್ಭವ್ ಸಂಸ್ಥೆಯ ಗುತ್ತಿಗೆದಾರ ಅಕಾಲಿಕವಾಗಿ ನಿಧನರಾದರು. ಬಳಿಕ ಹೆದ್ದಾರಿ ಅಭಿವೃದ್ದಿ ಕಾಮಗಾರಿ ವರ್ಷಗಟ್ಟಲೆ ಸ್ಥಗಿತವಾಗಿತ್ತು. ನಂತರ ಈ ಹೆದ್ದಾರಿಯ ಮುಂದುವರಿದ ಕಾಮಗಾರಿಯನ್ನು ಗುತ್ತಿಗೆದಾರ ಚಂಡೀಗಢದ ಸರ್ದಾರ್ ವಹಿಸಿಕೊಂಡಿದ್ದರು. ಹೆದ್ದಾರಿಯ ಬೈಪಾಸ್‌ಗಳಲ್ಲಿ ಸಿಗುವ ಚಾಮರಾಜನಗರದ ಗುಂಡ್ಲುಪೇಟೆ ರಸ್ತೆ, ನಂಜನಗೂಡು ರಸ್ತೆ, ಚಾ.ನಗರ ರೈಲು ಹಳಿ, ಉತ್ತಂಬಳ್ಳಿಯ ಸಮೀಪದ ಕೊಳ್ಳೇಗಾಲ- ಮೈಸೂರು ರಸ್ತೆ, ಹಳೆಯ ಹಂಪಾಪುರ ಬಳಿಯ ಕೊಳ್ಳೇಗಾಲ-ತಿ.ನರಸೀಪುರ ರಸ್ತೆಗಳಿಗೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಉತ್ತಂಬಳ್ಳಿ ಬಳಿಯ ಮೇಲ್ಸೇತುವೆ ತಡೆಗೋಡೆ ಕುಸಿದಿದೆ.
” ಬೈಪಾಸ್ ಮೇಲ್ಸೇತುವೆ ತಡೆಗೋಡೆ ಕುಸಿದಿರುವುದನ್ನು ಗಮನಿಸಲಾಗಿದೆ. ಪ್ರಾಧಿಕಾರದ ಇಂಜಿನಿಯರ್‌ಗಳು ಸ್ಥಳ ಪರಿಶೀಲಿಸಿದ್ದಾರೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಈ ಸಂಬಂಧ ನೋಟಿಸ್ ನೀಡಿ ಬೇಗ ದುರಸ್ತಿಗೆ ಕ್ರಮ ವಹಿಸಲಾಗುವುದು.”
-ವಿಶ್ವ, ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ
” ಅಭಿವೃದ್ಧಿ ಪ್ರಾಧಿಕಾರ ನಮ್ಮ ಜಮೀನಿನ ಪಕ್ಕದಲ್ಲಿರುವ ಜಕ್ಕಳ್ಳಿಗೆ ಸೇರಿದ ಕೋಟೆಕೆರೆಯ ಗೋಡು ಮಣ್ಣನ್ನು ಮೇಲ್ಸೇತುವೆಗೆ ಹಾಕಿದ್ದರು. ಗಟ್ಟಿಯಲ್ಲದ ಕೆರೆ ಮಣ್ಣು ಹಾಕಿದ್ದರಿಂದ ಕುಸಿದಿದೆ. ಬೇಗ ದುರಸ್ತಿ ಮಾಡಿಸಬೇಕು. ಕಾಮಗಾರಿ ಕಳಪೆಯಾದ್ದರಿಂದ ಟೋಲ್ ಸಂಗ್ರಹ ಮಾಡಕೂಡದು.”
-ಶೈಲೇಂದ್ರ, ರೈತ ಮುಖಂಡರು, ಕೊಳ್ಳೇಗಾಲ
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…