Categories: Andolana originals

ದಿಲ್ಲಿಯ ಕುತ್ತಿಗೆ ಹಿಡಿದ ಮಾಲಿನ್ಯ

ತಣ್ಣನೆಯ ಮತ್ತು ಹಿತವಾದ ವಾತಾವರಣವಿರುವ ಕೇರಳದ ವಯನಾಡಿನಲ್ಲಿ ಮೂರು ವಾರ ತಮ್ಮ ಲೋಕಸಭೆ ಉಪ ಚುನಾವಣೆಯ ಪ್ರಚಾರ ಮುಗಿಸಿ ನಾಲ್ಕು ದಿನಗಳ ಹಿಂದೆ ದಿಲ್ಲಿಗೆ ಹಿಂತಿರುಗಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಹೇಳಿದ್ದು ‘ಗ್ಯಾಸ್ ಚೇಂಬರ್‌ಗೆ ಪ್ರವೇಶಿಸಿದಂತಾಗಿದೆ’ ಎಂದು.

ಇದು ಪ್ರಿಯಾಂಕಾ ಅವರೊಬ್ಬರ ಅನುಭವ ಮಾತ್ರವಲ್ಲ, ದಿಲ್ಲಿಯಲ್ಲಿ ನೆಲೆಸಿರುವ ಜನರು ಉಸಿರಾಡಲು ಯೋಗ್ಯವಾದ ಶುದ್ಧ ಗಾಳಿ ಇಲ್ಲದೆ ನಿತ್ಯವೂ ಅನುಭವಿಸುತ್ತಿರುವ ನರಕಸದೃಶ್ಯ. ಚಳಿಗಾಲ ಬಂತೆಂದರೆ ಖುಷಿಪಡುತ್ತಿದ್ದ ದೆಹಲಿಯ ಮಂದಿ ಈಗ ಉಸಿರಾಡಲು ಒಳ್ಳೆಯ ಗಾಳಿ ಇಲ್ಲದೆ ಒದ್ದಾಡುತ್ತಿದ್ದಾರೆ. ಈ ಕೆಟ್ಟ ವಾತಾವರಣ ಕಳೆದ ಐದಾರು ವರ್ಷಗಳಿಂದ ದಿಲ್ಲಿಯನ್ನು ಕಾಡುತ್ತಿರುವುದು ನಮ್ಮ ಪರಿಸರ ಎಷ್ಟು ಕಲುಷಿತಗೊಂಡಿದೆ ಎಂಬುದನ್ನು ತೋರಿಸುತ್ತದೆ. ದಿಲ್ಲಿ ವಿಪರೀತ ಹವಾಮಾನ ವೈಪರೀತ್ಯವನ್ನು ಕಾಣುವ ಸ್ಥಳ.

ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳು ಚಳಿಗಾಲದ ಅವಧಿ. ಡಿಸೆಂಬರ್ ಮತ್ತು ಜನವರಿಯಲ್ಲಿ ವಾತಾವರಣ ತೀವ್ರವಾಗಿ ಕುಸಿದು ಮೈ ಕೊರೆಯುವ ಚಳಿ ಆವರಿಸುತ್ತದೆ. ಈ ಎರಡೂ ತಿಂಗಳಲ್ಲಿ ಮಧ್ಯಾಹ್ನದ ಉಷ್ಣಾಂಶ ೯ರಿಂದ ೧೪ ಡಿಗ್ರಿ ಸೆಲ್ಸಿಯಸ್ ಇದ್ದರೆ ರಾತ್ರಿ ವಾತಾವರಣ ೫ರಿಂದ ಕೆಲವೊಮ್ಮೆ ಮೈನಸ್ ಡಿಗ್ರಿ ಸೆಲ್ಸಿಯಸ್‌ವರೆಗೂ ಹೋಗುತ್ತದೆ. ಕಳೆದ ವರ್ಷ ಅಂದರೆ ಜ. ೭, ೨೦೨೩ರಂದು ಕನಿಷ್ಠ ರಾತ್ರಿ ಉಷ್ಣಾಂಶ ೧. ೫ ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಹೊಸದಿಲ್ಲಿಗೆ ಇದೇನೂ ಹೊಸದಲ್ಲ. ಆದರೆ ಇತ್ತೀಚಿನ ವಾತಾವರಣ ಉಸಿರು ಉಳಿಸಿಕೊಳ್ಳುವುದೂ ಕಷ್ಟ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟು ಹೋಗಿದೆ. ಇದು ಆತಂಕಕಾರಿ ಬೆಳವಣಿಗೆ. ವಾಸ್ತವವಾಗಿ ಈ ಆರು ತಿಂಗಳ ಕಾಲ ಸುಡು ಬೇಸಿಗೆಯ ದಿನಗಳಲ್ಲಿ ಬೆಂದು ಬಸವಳಿಯುವ ದಿಲ್ಲಿಯ ಜನರು ಚಳಿಗಾಲ ಬಂತೆಂದರೆ ಖುಷಿಪಡುತ್ತಾರೆ. ದಿಲ್ಲಿಯಲ್ಲಿ ಮಳೆಗಾಲ ಎನ್ನುವುದು ಇರುವುದಿಲ್ಲ. ಅದು ಸಾಮಾನ್ಯವಾಗಿ ಜೂನ್ ನಿಂದ ಆಗಸ್ಟ್‌ವರೆಗೆ ಯಾವುದೇ ಗೊತ್ತು ಗುರಿ ಇಲ್ಲದೆ ಬಂದು ಹೋಗುತ್ತದೆ.

ಹಾಗಾಗಿ ಹೆಚ್ಚಾಗಿ ಚಳಿ ಮತ್ತು ಬೇಸಿಗೆಯ ದಿನಗಳೇ ಇಲ್ಲಿ ಹೆಚ್ಚು. ಈ ಹವಾ ಮಾನಕ್ಕೆ ತಕ್ಕಂತೆ ದೆಹಲಿ ಜನರ ಬದುಕು ಕೂಡ ಬದಲಾವಣೆ ಆಗುತ್ತಿರುತ್ತದೆ. ಅದು ವ್ಯಾಪಾರ ಇರಬಹುದು, ಉಡುಪು ಮತ್ತು ಆಹಾರ ಪದ್ಧತಿ ಇರಬಹುದು. ನವೆಂಬರ್‌ನಲ್ಲಿ ಉಣ್ಣೆಯ ಉಡುಪುಗಳಾದ ಸ್ವೆಟರ್, ಶಾಲುಗಳು ಮತ್ತು ಬೆಚ್ಚನೆಯ ವಸ್ತ್ರಗಳು ಮಾರುಕಟ್ಟೆಗೆ ದಾಳಿ ಇಡುತ್ತವೆ. ಜನರೂ ಚಳಿಗೆ ಮೈಯೊಡ್ಡಿ ಚಟುವಟಿಕೆಯಿಂದ ಓಡಾಡುತ್ತಾರೆ. ಮಾರುಕಟ್ಟೆಗಳು ಸ್ವೆಟರ್ ಮತ್ತು ಶಾಲುಗಳ ಖರೀದಿಯ ಭರಾಟೆಯಿಂದ ಗಿಜಿಗುಡುತ್ತವೆ. ಸ್ಥಳೀಯ ಜನರ ಓಡಾಟದ ಜೊತೆಗೆ ಬೇರೆ ರಾಜ್ಯಗಳಿಂದ ಪ್ರವಾಸ ಮತ್ತು ಕೆಲಸ ಕಾರ್ಯಗಳಿಗೆ ನಿತ್ಯವೂ ಬರುವ ಜನರು ಮಾರುಕಟ್ಟೆಗಳಲ್ಲಿ ಖರೀದಿಯಲ್ಲಿ ತೊಡಗುವುದರಿಂದ ದಿಲ್ಲಿ ವರ್ಣರಂಜಿತವಾಗಿ ಕಾಣುತ್ತದೆ. ಚಳಿಗಾಲ ಮುಗಿಯುತ್ತಿದ್ದಂತೆ ಉಣ್ಣೆ ಉಡುಪುಗಳು ಮಾರುಕಟ್ಟೆಯಿಂದ ಮಾಯವಾಗುತ್ತವೆ. ಬೇಸಿಗೆ ಬರುತ್ತಿದ್ದಂತೆ ಕಾಟನ್ ಉಡುಪುಗಳು ಮಾರುಕಟ್ಟೆಯಲ್ಲಿ ಬಿಕರಿಗೆ ಸಿದ್ಧವಾಗುತ್ತವೆ.

ಇದು ದಿಲ್ಲಿಯ ವಿಶೇಷ. ಗಂಡಸರು ಸ್ವೆಟರ್ ಜೊತೆಗೆ ಸೂಟುಗಳನ್ನು ಧರಿಸುವುದು ಸಾಮಾನ್ಯ. ಸರ್ಕಾರಿ ಕಚೇರಿಗಳಲ್ಲಿ ಅಟೆಂಡರ್‌ಗಳೂ ಕತ್ತು ಮುಚ್ಚುವ ಬಂದ್ ಕಾಲಾ ಸೂಟುಗಳನ್ನು ಹಾಕುವುದರಿಂದ ಯಾರು ಸಾಮಾನ್ಯ ನೌಕರ, ಯಾರು ಅಧಿಕಾರಿ ಎಂದು ಗುರುತು ಹಚ್ಚುವುದು ಕೆಲವು ಕಡೆ ಕಷ್ಟ. ಮಹಿಳೆಯರು ಬಣ್ಣ ಬಣ್ಣದ ಸ್ವೆಟರ್ ಮತ್ತು ಶಾಲುಗಳನ್ನು ಧರಿಸಿ ಓಡಾಡುತ್ತಾರೆ. ದಿಲ್ಲಿಯಂತಹ ಕಡೆಗಳಲ್ಲಿ ಮಹಿಳೆಯರು ತುಟಿಗಳಿಗೆ ಲಿಪ್‌ಸ್ಟಿಕ್ ಬಳಿದುಕೊಳ್ಳುವುದು ದಕ್ಷಿಣ ರಾಜ್ಯ ಗಳಿಗಿಂತ ಹೆಚ್ಚು. ಸರ್ಕಾರಿ ಕಚೇರಿಗಳ ಕ್ಯಾಂಟೀನುಗಳಲ್ಲಿ ಚಹ ಕುಡಿಯುವ ಮಹಿಳೆಯರ ಲಿಪ್‌ಸ್ಟಿಕ್ ಬಣ್ಣವು ಗಾಜಿನ ಲೋಟಗಳಿಗೆ ಅಂಟಿಕೊಳ್ಳುವುದು ಸಾಮಾನ್ಯ ಚಿತ್ರಣ. ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ, ಕೆಲವೊಮ್ಮೆ ಸರ್ಕಾರಿ ಕಚೇರಿಗಳಲ್ಲಿ ಸ್ವೆಟರ್ ಹೆಣೆಯುವ ದೃಶ್ಯವೂ ಸಾಮಾನ್ಯ ಎನ್ನುವಂತಿದ್ದು, ಚಳಿಗಾಲದ ದಿಲ್ಲಿಯ ಜನರ ಬದುಕು ವರ್ಣಾತೀತವಾಗಿ ನಡೆಯುತ್ತದೆ.

ಸ್ವಲ್ಪ ಸುಸ್ಥಿತಿಯಲ್ಲಿರುವ ಮನೆಗಳಲ್ಲಿ ಹೀಟರ್ ಬಳಕೆ ಸಾಮಾನ್ಯ. ಚಳಿಗಾಲದಲ್ಲಿ ಧರಿಸುವ ಸ್ವೆಟರುಗಳನ್ನು ತೆಗೆಯುವುದು ಹೋಳಿ ಹಬ್ಬದ ದಿನ. ಫೆಬ್ರವರಿಯಲ್ಲಿ ಚಳಿ ಕಡಿಮೆ ಆದರೂ ಸ್ವೆಟರನ್ನು ಧರಿಸಿಯೇ ಇರುತ್ತಾರೆ. ಇದು ದಿಲ್ಲಿಯ ಜನರ ಚಳಿಗಾಲದ ಆಕರ್ಷಕ ಬದುಕು. ಆದರೆ ಮನೆ ಮಠವಿಲ್ಲದೆ ಹಾದಿ ಬದಿಗಳಲ್ಲಿ ಬದುಕುವ ಮತ್ತು ಟೆಂಟ್‌ಗಳಲ್ಲಿ ವರ್ಷವಿಡೀ ಬದುಕುವ ಕಡು ಬಡವರ ಬವಣೆ ಹೇಳತೀರದು. ಸರಿಯಾದ ಹೊದಿಕೆಗಳಿಲ್ಲದೆ ತೀವ್ರವಾದ ಚಳಿಯನ್ನು ತಡೆಯಲಾರದೆ ಶೀತಗಾಳಿಯಿಂದ ಹಾಗೆಯೇ ಬೇಸಿಗೆಯ ದಿನಗಳಲ್ಲಿ ಬಿಸಿಗಾಳಿಯಿಂದ ಜೀವ ಕಳೆದುಕೊಳ್ಳುವವರು ಹೆಚ್ಚಾಗಿ ಬೀದಿ ಬದುಕಿನ ಜನರೇ. ಹಿಮಾಲಯದಿಂದ ಬರುವ ಶೀತಗಾಳಿ ಮತ್ತು ತಾರ್ ಮರುಭೂಮಿಯಿಂದ ಬೇಸಿಗೆಯ ದೂಳು ದಿಲ್ಲಿಯನ್ನು ಆವರಿಸಿಕೊಳ್ಳುತ್ತದೆ. ಇದು ದೆಹಲಿ ವಾತಾವರಣದ ವೈಪರೀತ್ಯದ ಮಹಿಮೆ. ಕಳೆದ ಐದಾರು ವರ್ಷಗಳಿಂದ ಈ ಆಕರ್ಷಕ ದಿನಗಳು ಮಾಯವಾಗಿ ಚಳಿಗಾಲದ ದಿನಗಳಲ್ಲಿ ‘ವಿಷಗಾಳಿ’ ದಿಲ್ಲಿಯನ್ನು ಆವರಿಸಿಕೊಳ್ಳುತ್ತಿದೆ.

ಅತಿಯಾದ ವಾಹನಗಳ ದಟ್ಟಣೆಯಿಂದ ಆಗುತ್ತಿರುವ ದುಷ್ಪರಿಣಾಮ, ಸಾವಿರಾರು ವಾಹನಗಳು ಟ್ರಾಫಿಕ್ ಜಾಮ್‌ನಿಂದ ನಿಂತಲ್ಲೇ ಹೊರ ಸೂಸುವ ಹೊಗೆಯಿಂದ ವಾತಾವರಣದಲ್ಲಿನ ಗಾಳಿ ಕಲುಷಿತವಾಗುತ್ತಿದೆ. ಇದರ ಪರಿಣಾಮ ಜನಜೀವನ ತುಂಬಾ ಕಳವಳಕಾರಿ ಸ್ಥಿತಿಯನ್ನು ತಲುಪುತ್ತಿದೆ. ಈ ದುಃಸ್ಥಿತಿಯಿಂದ ಪಾರಾಗಲು ದಿಲ್ಲಿ ಸರ್ಕಾರ ಜಿಆರ್‌ಎಪಿ-೩ (ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ -೩) ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ವಯ ಹಲವು ವಾಹನಗಳ ಸಂಚಾರದ ಮೇಲೆ ನಿರ್ಬಂಧವನ್ನು ಹೇರಿದೆ. ಸಾರ್ವಜನಿಕ ವಾಹನಗಳ ಸಂಚಾರವನ್ನು ಹೆಚ್ಚಿಸಿ ೧೦೬ ಕ್ಲಸ್ಟರ್ ಬಸ್ಸುಗಳ ಸೇವೆಯನ್ನು ಜಾರಿಗೆ ತಂದಿದೆ. ಎರಡು ವರ್ಷಗಳ ಹಿಂದೆ ಸಮ ಸಂಖ್ಯೆ ಮತ್ತು ಬೆಸ ಸಂಖ್ಯೆ ಹೆಸರಿನಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು. ಇಷ್ಟೇ ಅಲ್ಲದೆ ಈಗಿರುವ ಮೆಟ್ರೋ ಸಂಚಾರದಲ್ಲಿ ದಿನಕ್ಕೆ ೬೦ ಟ್ರಿಪ್‌ಗಳನ್ನು ಹೆಚ್ಚಿಸಲಾಗಿದೆ. ದಟ್ಟವಾದ ಮಂಜಿನಿಂದಾಗಿ ರಾತ್ರಿ ಮತ್ತು ಮುಂಜಾನೆ ವಾಹನಗಳು, ರೈಲು ಮತ್ತು ವಿಮಾನ ಸಂಚಾರ ಸಾಧ್ಯವಿಲ್ಲದಂತಾಗಿದೆ.

ಅನೇಕ ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗುತ್ತಿದೆ. ಕೆಲವೊಮ್ಮೆ ದಟ್ಟವಾದ ಮಂಜಿನಿಂದಾಗಿ ವಿಮಾನ ಸೇವೆ ವ್ಯತ್ಯಯವಾಗುತ್ತಿದ್ದು , ಅವುಗಳ ಮಾರ್ಗವನ್ನು ಬದಲಾಯಿಸಿ ಅಕ್ಕ ಪಕ್ಕದ ರಾಜ್ಯಗಳ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗುತ್ತಿದೆ. ಮಂಜು ಕಡಿಮೆ ಆಗಿ ದಾರಿ ಕಾಣುವಂತಾದಾಗ ದಿಲ್ಲಿ ವಿಮಾನಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತಿದೆ. ಈ ಪರಿಸ್ಥಿತಿ ಫೆಬ್ರವರಿ ಮೊದಲ ವಾರದ ವರೆಗೂ ಮುಂದುವರಿಯುವುದು ಸಾಮಾನ್ಯ. ಮತ್ತೊಂದು ಕಡೆ ವಿಶೇಷವಾಗಿ ದಿಲ್ಲಿಯ ಆಸುಪಾಸಿನಲ್ಲೇ ಹರಿಯುವ ಯಮುನಾ ನದಿ ಕಾರ್ಖಾನೆಗಳಿಂದ ಹೊರಬಿಡಲಾಗುವ ಕಲುಷಿತ ಮತ್ತು ರಾಸಾಯನಿಕ ತ್ಯಾಜ್ಯಗಳಿಂದ ನದಿಯನ್ನು ಸ್ವಚ್ಛಗೊಳಿಸಬೇಕು ಎಂಬುದು ಬರಿ ಮಾತಿನಲ್ಲಿ ಉಳಿದಿದೆ. ಎರಡು ತಿಂಗಳ ಹಿಂದೆ ಸುರಿದ ಮಳೆಯಿಂದ ದಿಲ್ಲಿ ನಗರ ಜಲಾವೃತಗೊಂಡಿತು. ಹಲವು ದಿನ ಜನಜೀವನ ಅಸ್ತವ್ಯಸ್ತಗೊಂಡಿತು. ಈ ಸ್ಥಿತಿ ಕೇವಲ ದೆಹಲಿ ಮಹಾನಗರ ಮಾತ್ರವಲ್ಲ ಅಹಮದಾಬಾದ್, ಮುಂಬೈ, ಬೆಂಗಳೂರು ಮತ್ತು ಚೆನ್ನೆ ನಂತಹ ನಗರಗಳಲ್ಲಿಯೂ ಇದೆ. ನಾವು ಪರಿಸರವನ್ನು ಹಾಳು ಮಾಡುತ್ತಿರುವುದರಿಂದ ಮಹಾನಗರಗಳ ಬದುಕು ಅಪಾಯಕಾರಿ ಸ್ಥಿತಿಯನ್ನು ತಲುಪುತ್ತಿರುವುದು ದುರಂತ. ಇದನ್ನೇ ‘ಬಿಗ್ ಸಿಟಿ ಬ್ಲೂಸ್’ ಎಂದು ಕರೆಯುವುದು.

ಚಳಿ ಮತ್ತು ಶೀತಗಾಳಿ ದಿಲ್ಲಿ ನಗರವನ್ನು ಆವರಿಸಿದ್ದರೆ ಆಕಾಶದ ಮೇಲ್ಮೈ ಯಲ್ಲಿ ದಟ್ಟವಾದ ಮಂಜು ಕವಿದಿದೆ. ಇದಕ್ಕೆ ಕಾರಣ ವಾಹನಗಳು ಉಗುಳುವ ವಿಷಕಾರಿ ಗಾಳಿ ಮತ್ತು ನೆರೆಯ ರಾಜ್ಯಗಳಾದ ಪಂಜಾಬ್ ಹಾಗೂ ಹರಿಯಾಣದ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಭತ್ತ ಮತ್ತು ಗೋಽ ಬೆಳೆಯನ್ನು ಕಟಾವು ಮಾಡಿದ ಬಳಿಕ ಗೇಣುದ್ದ ಬಿಡಲಾಗಿರುವ ಬೆಳೆಯ ಮೋಟುಗಳನ್ನು ಕಿತ್ತು ರಾಶಿಗಟ್ಟಲೆ ಸುಡುವುದು ದಿಲ್ಲಿಗೆ ಹೊಗೆಯ ಗಾಳಿ ಆವರಿಸಿಕೊಳ್ಳುವಂತೆ ಮಾಡಿದೆ. ಇದಕ್ಕಾಗಿ ರೈತರ ವಿರುದ್ಧ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತೆ ಅವರಿಗೆ ಪರಿಹಾರವನ್ನೂ ಕೊಡಲಾಗುತ್ತಿದೆ. ಆದರೆ ಅಸಹಾಯಕ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಅಳಿದುಳಿದ ಪೈರನ್ನು ಸುಡದೇ ಬೇರೆ ದಾರಿಯಿಲ್ಲ. ರೈತರು ಒಂದು ಬೆಳೆಯನ್ನು ಕಟಾವು ಮಾಡಿದ ಎರಡು ವಾರಗಳ ಬಳಿಕ ಮತ್ತೊಂದು ಬೆಳೆಯ ಬಿತ್ತನೆಗೆ ಸಿದ್ಧರಾಗಬೇಕಾಗುತ್ತದೆ. ಭತ್ತ ಮತ್ತು ಗೋಧಿಯ ಬೆಳೆಗಳ ಅವಧಿ ಈಗ ತಲಾ ಮೂರೂವರೆ ತಿಂಗಳಿಗೆ ಇಳಿದಿರುವುದರಿಂದ ರೈತರ ಪಾಡು ಅಸಹಾಯಕ ಸ್ಥಿತಿಯನ್ನು ಮುಟ್ಟಿದೆ. ಇದೆಲ್ಲದರ ಪರಿಣಾಮ ದಿಲ್ಲಿಯಲ್ಲೀಗ ಚಳಿ ಮತ್ತು ದಟ್ಟವಾದ ಮಂಜು ಕವಿದ ವಾತಾವರಣವಿದ್ದು, ಉಸಿರಾಡುವ ಗಾಳಿ ಕಲುಷಿತವಾಗಿದೆ.

ಗಾಳಿಯ ಗುಣಮಟ್ಟ ಕಡಿಮೆ ಆಗಿರುವುದರಿಂದ ಜನರಿಗೆ ಶುದ್ಧ ಆಮ್ಲಜನಕ ಸಿಗದೆ ಉಸಿರಾಟದ ತೊಂದರೆ ಅನುಭವಿಸುವಂತಹ ಸ್ಥಿತಿಗೆ ತಲುಪುತ್ತಿದೆ. ಈ ಪರಿಸ್ಥಿತಿಯಿಂದಾಗಿ ಮಕ್ಕಳು ಹೆಚ್ಚಾಗಿ ಉಸಿರಾಟದ ತೊಂದರೆ ಅನುಭವಿಸುವಂತಾಗಿದ್ದು, ೧ರಿಂದ ೫ನೇ ತರಗತಿವರೆಗಿನ ಶಾಲೆಗಳನ್ನು ಬಂದ್ ಮಾಡಿ, ಆನ್‌ಲೈನ್ ಮೂಲಕ ಪಾಠಗಳನ್ನು ಹೇಳಿಕೊಡಲಾಗುತ್ತಿದೆ. ಈ ಪರಿಸ್ಥಿತಿಯು ಕೋವಿಡ್ ದಿನಗಳನ್ನು ನೆನಪಿಸುತ್ತಿದೆ. ದಿಲ್ಲಿಯಲ್ಲಿ ಪರಿಸರ ವಿಜ್ಞಾನ ವ್ಯಾಸಂಗ ಮಾಡಿರುವ, ಪರಿಸರ ಮತ್ತು ವಿಜ್ಞಾನದ ಬಗೆಗೆ ಬರೆಯುವ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅವರು, ‘ದಿಲ್ಲಿಯ ಪರಿಸ್ಥಿತಿಯನ್ನು ಗಮನಿಸಿದರೆ ಅಲ್ಲಿ ಬದುಕುವುದು ಕಷ್ಟವಾಗುವ ದಿನಗಳಿಗೆ ತಲುಪುತ್ತಿದ್ದೇವೆ. ಈ ಕಲುಷಿತ ವಾತಾವರಣಕ್ಕೆ ವಾಹನಗಳು ಹೊರಸೂಸುವ ಕೆಟ್ಟ ಗಾಳಿ, ಕಲುಷಿತಗೊಂಡಿರುವ ಯಮುನಾ ನದಿ ಹಾಗೂ ಹರಿಯಾಣ ಮತ್ತು ಪಂಜಾಬ್ ರೈತರು ತಮ್ಮ ಬೆಳೆಯ ಕಟಾವಿನ ನಂತರ ಸುಡುವ ಹುಲ್ಲಿನಿಂದ ಬರುವ ದಟ್ಟವಾದ ಹೊಗೆ ದೆಹಲಿಯನ್ನು ಆವರಿಸುತ್ತಿದೆ. ಆದರೆ ರೈತರ ಈ ಕ್ರಮದಿಂದ ಶೇ. ೧೮ರಷ್ಟು ಮಾತ್ರ ಸಮಸ್ಯೆಯಾಗುತ್ತಿದೆ. ಇದಕ್ಕಿಂತ ಹೆಚ್ಚಾಗಿ ಸಮಸ್ಯೆ ತಲೆದೋರಿರುವುದು ವಾಹನಗಳ ಅತಿಯಾದ ಬಳಕೆ, ಹವಾನಿಯಂತ್ರಿತಗಳನ್ನು ಹೆಚ್ಚು ಉತ್ತೇಜಿಸುತ್ತಿರುವುದು. ಅಕ್ಕಪಕ್ಕದ ರಾಜ್ಯಗಳ ಕಲ್ಲಿದ್ದಲು ವಿದ್ಯುತ್ ಉತ್ಪಾದನಾ ಘಟಕಗಳಿಂದ ಆಗುತ್ತಿರುವ ಪರಿಸರದ ಮೇಲಿನ ಹಾನಿಯೇ ಮುಖ್ಯ ಕಾರಣ. ಇದರಿಂದಾಗಿ ಹೊಗೆ ಮತ್ತು ಧೂಳು ಹೊರಹೋಗುತ್ತಿಲ್ಲ. ಇದನ್ನು ಹೆಚ್ಚು ಹೈಡ್ರೋಜನ್ ಉತ್ಪಾದನೆಯಿಂದ ಮಾತ್ರ ನಿಯಂತ್ರಿಸಲು ಸಾಧ್ಯ. ಈ ದಿಕ್ಕಿನಲ್ಲಿ ನಮ್ಮ ವಿಜ್ಞಾನಿಗಳು ಹೆಚ್ಚು ಗಮನ ನೀಡಬೇಕು’ ಎನ್ನುತ್ತಾರೆ.

 

andolana

Recent Posts

ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಮೊಗಿಲಯ್ಯ ವಿಧಿವಶ

ಹೈದರಾಬಾದ್:‌ ಟಾಲಿವುಡ್‌ ಚಲನಚಿತ್ರ ಬಳಗಂ ಮೂಲಕ ಪ್ರಖ್ಯಾತಿ ಗಳಿಸಿದ್ದ ಜನಪ್ರಿಯ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.…

17 mins ago

ರಾಜಕೀಯ ಅಧಿಕಾರ ಹಿಡಿಯಲು ಅಂಬೇಡ್ಕರ್‌ ಹೆಸರು ಬಳಕೆ: ಸಿದ್ದರಾಮಯ್ಯ ವಿರುದ್ಧ ಆರ್‌.ಆಶೋಕ್‌ ವಾಗ್ದಾಳಿ

ಬೆಂಗಳೂರು: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಕುರಿತಂತೆ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಗೆ ರಾಜ್ಯದ ಮುಖ್ಯಮಂತ್ರಿ ಸಿಎಂ…

30 mins ago

ಕಾಶ್ಮೀರದಲ್ಲಿ ಭರ್ಜರಿ ಬೇಟೆಯಾಡಿದ ಭಾರತೀಯ ಸೇನೆ: ಐವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಬೇಹಿಬಾಗ್‌…

44 mins ago

ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು

ಮಡಿಕೇರಿ: ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆಯೊಂದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯ ಹಾರಂಗಿ ಜ್ಞಾನಗಂಗಾ ಶಾಲೆಯ…

1 hour ago

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ತಮಿಳು ನಟ ವಿಜಯ್‌ ಆಕ್ರೋಶ

ಚೆನ್ನೈ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.‌ಅಂಬೇಡ್ಕರ್‌ ಕುರಿತು ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆ ಕುರಿತು ತಮಿಳು…

1 hour ago

ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಸಿಹಿ ಸುದ್ದಿ ನೀಡಿದ ಕೆಎಸ್‌ಆರ್‌ಟಿಸಿ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಾಳೆಯಿಂದ ಆರಂಭವಾಗುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ…

2 hours ago