ಎಚ್.ಎಸ್.ದಿನೇಶ್‌ಕುಮಾರ್
ಪಾಳಿಯಲ್ಲಿ ಗಸ್ತು ಹೆಚ್ಚಿಸಲು ಅಧಿಕಾರಿಗಳಿಗೆ ಪೊಲೀಸ್ ಆಯುಕ್ತರ ಖಡಕ್ ಸಂದೇಶ
ಅಪರಾಧಗಳಿಗೆ ಕಡಿವಾಣ, ಪುಂಡ ಪೋಕರಿಗಳ ಹಾವಳಿ ನಿಯಂತ್ರಣಕ್ಕೆ ತೀವ್ರ ನಿಗಾ
ಮೈಸೂರು: ನಗರದಲ್ಲಿ ನಡೆದ ಇತ್ತೀಚಿನ ಕೆಲವು ಘಟನೆಗಳಿಂದ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪೊಲೀಸ್ ಇಲಾಖೆ ತೀವ್ರ ಗಮನಹರಿಸಿದ್ದು, ನಗರದಾದ್ಯಂತ ಪುಂಡ ಪೋಕರಿಗಳ ಹಾವಳಿಯನ್ನು ನಿಯಂತ್ರಿಸಲು ಹಾಗೂ ಸಮಾಜ ಘಾತಕ ಶಕ್ತಿಗಳ ಮೇಲೆ ತೀವ್ರ ನಿಗಾ ವಹಿಸಲು ಮುಂದಾಗಿದೆ.
ಕಳೆದ ವಾರ ನಗರ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳ ಸಭೆ ನಡೆಸಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಬಡಾವಣೆಗಳಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸುವಂತೆ ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳು ವಂತೆ ಖಡಕ್ ಸೂಚನೆ ನೀಡಿದ್ದಾರೆ.
ಆಯುಕ್ತರ ಈ ಆದೇಶದಿಂದ ಎಚ್ಚೆತ್ತಿರುವ ಪೊಲೀಸ್ ಅಧಿಕಾರಿಗಳು, ಠಾಣೆಯ ವ್ಯಾಪ್ತಿಯಲ್ಲಿ ಗಸ್ತನ್ನು ತೀವ್ರಗೊಳಿಸಿದ್ದಾರೆ.
ಅದರಲ್ಲಿಯೂ ಸಂಜೆ ವೇಳೆ ಬಡಾವಣೆಗಳ ಬಸ್ ತಂಗುದಾಣ, ವೃತ್ತಗಳು, ಮಳಿಗೆ, ಸೇತುವೆಗಳ ಬಳಿ ತೆರಳುತ್ತಿರುವ ಪೊಲೀಸರು ವಿನಾಕಾರಣ ಹರಟೆ ಹೊಡೆಯುವ ಯುವಕರ ಗುಂಪನ್ನು ಪ್ರಶ್ನಿಸುತ್ತಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಲಾಠಿ ರುಚಿ ತೋರಿಸಿ ಸ್ಥಳದಿಂದ ಕಾಲ್ಕೀಳು ವಂತೆ ಮಾಡುತ್ತಿದ್ದಾರೆ. ರಾಜ್ಯದ ಎರಡನೇ ಅತಿ ದೊಡ್ಡ ನಗರ ಎಂಬ ಖ್ಯಾತಿಯನ್ನು ಪಡೆದಿರುವ ಮೈಸೂರು ನಗರ ಹೆಸರಿಗೆ ತಕ್ಕಂತೆ ಜನ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗತೊಡಗಿದೆ. ಉದ್ಯೋಗವನ್ನು ಅರಸಿ ದೇಶದ ಅನೇಕ ರಾಜ್ಯಗಳಿಂದ ಹಾಗೂ ರಾಜ್ಯದ ಅನೇಕ ಜಿಲ್ಲೆಗಳಿಂದ ಜನರು ಮೈಸೂರಿಗೆ ವಲಸೆ ಬರುತ್ತಿದ್ದಾರೆ. ಹೀಗಾಗಿ ಹತ್ತು ವರ್ಷಗಳ ಹಿಂದೆ ೬ ರಿಂದ ೭ ಲಕ್ಷ ಜನಸಂಖ್ಯೆ ಹೊಂದಿದ್ದ ಮೈಸೂರು ನಗರದ ಜನಸಂಖ್ಯೆ ಇಂದು ೧೫ ಲಕ್ಷಕ್ಕೆ ಬಂದು ನಿಂತಿದೆ.
ಹೀಗಾಗಿ ನಗರ ವ್ಯಾಪ್ತಿಯಲ್ಲಿ ಅಪರಾಧಗಳ ಸಂಖ್ಯೆ ಕೂಡ ಹೆಚ್ಚಳವಾಗುವುದು ಸಾಮಾನ್ಯ ಸಂಗತಿ. ಈ ಹಿನ್ನೆಲೆಯಲ್ಲಿ ಅಪರಾಧಗಳ ಕಡಿವಾಣಕ್ಕೆ ನಗರ ಪೊಲೀಸ್ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರ ರಕ್ಷಣೆಗೆ ವಿಶೇಷ ಗಮನ ನೀಡಿದೆ.
ಬೆಳಿಗ್ಗೆ ೬ ಗಂಟೆಯಿಂದಲೇ ಆಯಾ ಠಾಣೆಗಳ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳು ಗಸ್ತನ್ನು ಆರಂಭಿಸುತ್ತಿದ್ದಾರೆ. ಪಾಳಿ ಆಧಾರದ ಮೇಲೆ ರಾತ್ರಿ ೧೧ ಗಂಟೆಯವರೆಗೂ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರದ ಕೃಷ್ಣರಾಜ, ಲಕ್ಷ್ಮೀಪುರಂ, ಅಶೋಕಪುರಂ, ಕುವೆಂಪುನಗರ, ವಿವಿ ಪುರಂ, ಮೇಟಗಳ್ಳಿ, ನಜರ್‌ಬಾದ್, ದೇವರಾಜ, ಸರಸ್ವತಿಪುರಂ, ವಿಜಯನಗರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಡನೆ ಗಸ್ತು ತಿರುಗಿ ಸಾರ್ವಜನಿಕರಿಗೆ ತೊಂದರೆ ನೀಡುವ ಪುಂಡರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ. ಜೂಜು ಅಡ್ಡೆ ಮೇಲೆ ದಾಳಿ: ಇದರ ಜೊತೆಗೆ ನಗರದ ಕೆಲವು ಪ್ರದೇಶಗಳ ಖಾಲಿ ನಿವೇಶನ, ಮರಗಳ ತೋಪು, ಲಾರಿ ನಿಲ್ದಾಣ ಮುಂತಾದೆಡೆ ಜೂಜಾಟ ನಡೆಯುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕುರಿತು ಎಚ್ಚರ ವಹಿಸುವಂತೆ ಆಯುಕ್ತರು ಅಽಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಅಽಕಾರಿಗಳೂ ಜೂಜು ಅಡ್ಡೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಗುಡ್ ಮಾರ್ನಿಂಗ್ ಬೀಟ್: ಇದು ಪ್ರತೀ ದಿನ ಬೆಳಿಗ್ಗೆ ೬ ಗಂಟೆಗೆ ಆರಂಭವಾಗುವ ಪೊಲೀಸ್ ಬೀಟ್. ನಗರದ ಜನನಿಬಿಡ ಸ್ಥಳಗಳು, ವಾಯುವಿಹಾರಿಗಳು ಹೆಚ್ಚಿರುವ ಸ್ಥಳಗಳಲ್ಲಿ ನಿಯೋಜನೆಗೊಳ್ಳುವ ಪೊಲೀಸರು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿ ಕೊಳ್ಳುತ್ತಿದ್ದಾರೆ. ವಿಶೇಷವಾಗಿ ಸರಗಳ್ಳರನ್ನು ಗುರಿಯಾಗಿರಿಸಿಕೊಂಡು ಆರಂಭಿಸಿರುವ ಗುಡ್‌ಮಾರ್ನಿಗ್ ಬೀಟ್ ಯಶಸ್ವಿಯಾಗಿ ನಡೆಯುತ್ತಿದೆ.
ಎಸಿಪಿಗಳಿಂದಲೂ ನಗರ ಪ್ರದಕ್ಷಿಣೆ: ಜನರ ಸುರಕ್ಷತೆಗೆ ಒತ್ತು ನೀಡಿರುವ ಪೊಲೀಸ್ ಆಯುಕ್ತರು, ಠಾಣಾಽಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆಗೆ ಸಹಾಯಕ ಪೊಲೀಸ್ ಆಯುಕ್ತರನ್ನೂ ನಗರ ಪ್ರದಕ್ಷಿಣೆ ಮಾಡುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಪುಂಡರು ಹಾಗೂ ದುಷ್ಕರ್ಮಿಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಎಸಿಪಿಗಳೂ ಮಾಡುತ್ತಿದ್ದಾರೆ.
” ಸಾರ್ವಜನಿಕರ ರಕ್ಷಣೆ ನಮ್ಮ ಹೊಣೆ ಎಂಬುದು ನಮ್ಮ ಧ್ಯೇಯ. ಹೀಗಾಗಿ ಜನರ ರಕ್ಷಣೆಗೆ ಬೇಕಾದ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ. ಕಳೆದ ೧೫ ದಿನಗಳಿಂದ ಆಯಾ ಠಾಣಾ ವ್ಯಾಪ್ತಿಯಲ್ಲಿ ಗಸ್ತನ್ನು ಹೆಚ್ಚಿಸಲಾಗಿದೆ. ಎಸಿಪಿಗಳು ಹಾಗೂ ಕೆಳ ಮಟ್ಟದ ಅಧಿಕಾರಿ ಗಳು ಕೂಡ ಗಸ್ತು ಮಾಡುವ ಮೂಲಕ ದುಷ್ಕರ್ಮಿಗಳಿಗೆ ಎಚ್ಚರಿಕೆ ನೀಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಯಾರಿಂದಲಾದರೂ ತೊಂದರೆಯಾದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ ಪೊಲೀಸರ ಸಹಾಯ ಪಡೆದುಕೊಳ್ಳಬಹುದು.”
-ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತರು.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…