ಕೆ.ಬಿ.ರಮೇಶನಾಯಕ
ತಿ.ನರಸೀಪುರ, ಕೆಆರ್‌ಎಸ್ ಬೃಂದಾವನ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ತಲಾ ೫ ಎಕರೆ ಜಾಗಕ್ಕೆ ಪ್ರಸ್ತಾವನೆ
ಮೈಸೂರು: ಮುಂದಿನ ೩೦ರಿಂದ ೫೦ ವರ್ಷಗಳಲ್ಲಿ ಸಾರಿಗೆ ಬಸ್‌ಗಳು, ಪ್ರಯಾಣಿಕರ ಒತ್ತಡವನ್ನು ತಡೆಯುವುದಲ್ಲದೆ, ಪೆರಿ-ರಲ್ ವರ್ತುಲ ರಸ್ತೆ ನಿರ್ಮಾಣವಾದ ಬಳಿಕ ಭೂಮಿಯ ಬೆಲೆ ಮತ್ತಷ್ಟು ಗಗನಕ್ಕೇರುವ ಸಾಧ್ಯತೆ ಇರುವ ಕಾರಣ ಮೈಸೂರು ನಗರದಾಚೆಗೂ ಹೆಚ್ಚುವರಿಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೂರು ಬಸ್ ಡಿಪೋಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ತಿ.ನರಸೀಪುರ, ವರುಣ ಹಾಗೂ ಕೆಆರ್‌ಎಸ್ ಬೃಂದಾವನ ಗಾರ್ಡನ್ ಬಳಿ ಸೂಕ್ತ ಜಾಗ ಹುಡುಕುವ ಕಾರ್ಯ ನಡೆಯುತ್ತಿದ್ದು, ಜಾಗ ಅಂತಿಮವಾದರೆ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಯೋಜನೆ ಕಾರ್ಯಗತವಾದರೆ ಹೊರ ವಲಯದ ಬಡಾವಣೆಗಳು, ಗ್ರಾಮಗಳಿಗೆ ಆಯಾಯ ಡಿಪೋಗಳಿಂದ ನೇರ ಬಸ್ ಒದಗಿಸುವುದಕ್ಕೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಬಳಿಕ ವೇಗವಾಗಿ ಬೆಳೆಯುತ್ತಿರುವ ನಗರಿಗಳ ಪೈಕಿ ಅರಮನೆ ನಗರಿ ಮೈಸೂರು ಸಹ ಒಂದಾಗಿದೆ. ವರ್ಷದಿಂದ ವರ್ಷಕ್ಕೆ ಮೈಸೂರು ವಿಸ್ತಾರಗೊಳ್ಳುತ್ತಿದೆ. ಹೊರ ರಾಜ್ಯ, ದೇಶಗಳ ಪ್ರವಾಸಿಗರು ಸೇರಿದಂತೆ ಸಾಕಷ್ಟು ಜನರು ವರ್ಷಪೂರ್ತಿ ಮೈಸೂರಿಗೆ ಬರುವುದರಿಂದ ಬಸ್‌ಗಳ ಸಂಖ್ಯೆ ಮತ್ತು ಪ್ರಯಾಣಿಕರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲೂ ಶಕ್ತಿ ಯೋಜನೆ ಜಾರಿಯಾದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿ ಬಸ್ಗಳನ್ನು ಒದಗಿಸುವುದೇ ಒಂದು ಸವಾಲಾಗಿದೆ. ಹಾಗಾಗಿಯೇ, ರಾಜ್ಯ ಸರ್ಕಾರ ಶೀಘ್ರದಲ್ಲೇ ೧೦೦ ಎಲೆಕ್ಟ್ರಿಕಲ್ ಬಸ್‌ಗಳನ್ನು ಒದಗಿಸಲು ಮುಂದಾಗಿದೆ. ಬನ್ನಿಮಂಟಪದಲ್ಲಿ ೧೨೦ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಬೆಂಗಳೂರು-ನೀಲಗಿರಿ ರಸ್ತೆಯಲ್ಲಿರುವ ಸಬ್ ಅರ್ಬನ್ ಬಸ್ ನಿಲ್ದಾಣವನ್ನು ನಗರ ಬಸ್‌ಗಳ ನಿಲುಗಡೆ ತಾಣವಾಗಿ ಬಳಸಿಕೊಳ್ಳುವುದಕ್ಕೂ ಅವಕಾಶವಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್‌ಗಳನ್ನು ಖರೀದಿಸುವುದು, ನಿಲುಗಡೆ ಮಾಡಲು ಡಿಪೋಗಳ ಅವಶ್ಯಕತೆ ಇರುವುದರಿಂದ ಮೈಸೂರು ನಗರ ಸಾರಿಗೆ ವಿಭಾಗೀಯ ಅಧಿಕಾರಿಗಳು ಡಿಪೋ ನಿರ್ಮಾಣಕ್ಕೆ ಯೋಜನೆ ರೂಪಿಸಿರುವುದು ಗಮನಾರ್ಹವಾಗಿದೆ.
ಸೂಕ್ತ ಜಾಗಗಳ ಹುಡುಕಾಟ: ಮೈಸೂರು ಗ್ರಾಮಾಂತರ ಮತ್ತು ಮೈಸೂರು ನಗರ ವಿಭಾಗವನ್ನು ಒಂದು ಮಾಡಿದ್ದ ಸರ್ಕಾರ ಈಗ ಮತ್ತೇ ಬೇರ್ಪಡಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗವನ್ನಾಗಿ ಮಾಡಿದೆ. ಮೈಸೂರು ನಗರ ವ್ಯಾಪ್ತಿಗೆ ಬನ್ನಿಮಂಟಪದಲ್ಲಿ ಮೂರು ಡಿಪೊಗಳು, ನಂಜನಗೂಡು ಪಟ್ಟಣದಲ್ಲಿ ಒಂದು ಡಿಪೋ ಇದೆ. ಮುಂದೆ ತಿ.ನರಸೀಪುರದ ತಲಕಾಡು ಮಾರ್ಗದಲ್ಲಿ, ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮ, ಕೃಷ್ಣರಾಜಸಾಗರದ ಬೃಂದಾವನ ಸಮೀಪ ತಲಾ ಐದು ಎಕರೆ ಜಾಗವನ್ನು ಹುಡುಕಲಾಗುತ್ತಿದೆ.
ತಿ.ನರಸೀಪುರ ಪಟ್ಟಣದಲ್ಲಿ ಸರ್ಕಾರಿ ಭೂಮಿ ಇದ್ದು, ಸುತ್ತೂರು ಗ್ರಾಮದಲ್ಲಿ ಐದು ಎಕರೆ ಭೂಮಿ ಲಭ್ಯವಾಗದಿದ್ದರೆ ವರುಣ ಗ್ರಾಮದ ಬಳಿಯೇ ಜಾಗ ಗುರುತಿಸಿ ಮಂಜೂರು ಮಾಡುವಂತೆ ಹೇಳಲಾಗಿದೆ. ಅದೇ ರೀತಿ ಇಲವಾಲ, ಎಚ್.ಡಿ.ಕೋಟೆ, ಬನ್ನೂರು ಮಾರ್ಗಗಳಲ್ಲೂ ಸೂಕ್ತವಾದ ಜಾಗವನ್ನು ಗುರುತಿಸಿ ನಿಗಮಕ್ಕೆ ಮಂಜೂರು ಮಾಡಿಸಿಕೊಂಡು ಕಾಯ್ದಿರಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ
” ಮೈಸೂರಿನ ಹೊರ ವಲಯದಲ್ಲಿ ಮೂರು ಅಥವಾ ನಾಲ್ಕು ಡಿಪೋಗಳನ್ನು ನಿರ್ಮಾಣ ಮಾಡಬೇಕೆಂಬ ಯೋಜನೆ ಮಾಡಿಕೊಂಡು ಜಾಗ ಹುಡುಕಾಟದಲ್ಲಿ ತೊಡಗಿದ್ದೇವೆ. ಜಾಗ ಸಿಕ್ಕ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಮುಂದಿನ ವರ್ಷಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್‌ಗಳನ್ನು ಒದಗಿಸಬೇಕಾದರೆ ಡಿಪೋಗಳು ಕೂಡ ಅಗತ್ಯವಿದೆ.”
ಜಗದೀಶ್‌ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಮೈಸೂರು ನಗರ
ನೇರ ಬಸ್ ಸಂಪರ್ಕ:
ಮೈಸೂರು ನಗರದ ಹೊರವಲಯದ ಬಡಾವಣೆಗಳು, ಗ್ರಾಮಗಳಿಗೆ ನಗರ ಬಸ್ ನಿಲ್ದಾಣದಿಂದಲೇ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ಬಸ್ ಡಿಪೋಗಳು ನಿರ್ಮಾಣವಾದರೆ ಅಲ್ಲಿಂದಲೇ ಸಂಚರಿಸಲು ಸಹಕಾರಿಯಾಗಲಿದೆ. ಚಾಮುಂಡಿಬೆಟ್ಟ, ಹದಿನಾರು, ಜಯಪುರ, ರಮ್ಮನಹಳ್ಳಿ, ಸುತ್ತೂರು, ಹೊಸಕೋಟೆ ಮೊದಲಾದ ಭಾಗಗಳಿಗೆ ಮೈಸೂರಿನಿಂದಲೇ ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ, ಹೊರ ವಲಯದಲ್ಲೇ ಡಿಪೋ ನಿರ್ಮಾಣವಾದರೆ ತುಂಬಾ ಸಹಕಾರಿಯಾಗಲಿದೆ ಎನ್ನುವುದು ಅಧಿಕಾರಿಗಳ ನಿರೀಕ್ಷೆಯಾಗಿದೆ. ಒಂದೊಂದು ಡಿಪೋನಲ್ಲಿ ೭೦ ಬಸ್ಗಳ ನಿಲುಗಡೆ ಮಾಡುವುದು, ಅಧಿಕಾರಿಗಳು, ಸಿಬ್ಬಂದಿ, ಚಾಲಕರು, ನಿರ್ವಾಹಕರ ವಿಶ್ರಾಂತಿ ಗೃಹಗಳು, ಮೂಲ ಸೌಕರ್ಯವನ್ನು ಒದಗಿಸುವಂತೆ ಮಾಡಿದರೆ ಮುಂದಿನ ವರ್ಷಗಳಲ್ಲಿ ಎದುರಾಗುವ ಒತ್ತಡ ನಿವಾರಣೆಯಾಗಲಿದೆ. ಹೀಗಾಗಿಯೇ, ಅಽಕಾರಿಗಳು ದಸರಾ ಮುಗಿಯುತ್ತಿದ್ದಂತೆ ಹೊಸ ಡಿಪೋಗಳ ನಿರ್ಮಾಣಕ್ಕೆ ಬೇಕಾದ ಜಾಗ, ಹೊಸ ಬಸ್ಗಳ ಪ್ರಸ್ತಾವನೆಗೆ ತಯಾರಾಗುತ್ತಿರುವುದು ಕಂಡುಬಂದಿದೆ
ಶಿವಾಜಿ ಗಣೇಶನ್ ಅವರ ವಾರದ ಅಂಕಣ ನಶಿಸಿ ಹೋಗುತ್ತಿದ್ದ ಬೌದ್ಧ ಧರ್ಮ ಮರುಹುಟ್ಟು ಪಡೆದ ಪುಣ್ಯಭೂಮಿ ವಿಜಯದಶಮಿ ಬಂತೆಂದರೆ ದೇಶದಾದ್ಯಂತ…
ಎಸ್.ಎ.ಹುಸೇನ್ ಬಿಸಿಲು-ಮಳೆಯ ವಾತಾವರಣದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಳ; ಮುಂಜಾಗ್ರತೆ ವಹಿಸಲು ಆರೋಗ್ಯ ಇಲಾಖೆ ಮನವಿ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಸಿಲು…
ಮಹಾದೇಶ್ ಎಂ.ಗೌಡ ಸಿಗ್ನಲ್ ಅಳವಡಿಕೆಗೆ ಸಾರ್ವಜನಿಕರ ಒತ್ತಾಯ ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ…
ಸಿರಿ ಮೈಸೂರು ‘ಈ ಬಾರಿ ದಸರಾಗೆ ಆಹ್ವಾನಿಸಿ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವವರಿಗೆ ಸೀಟ್ ನಂಬರ್ ಸಹಿತ ವಿಐಪಿ ಪಾಸ್ ನೀಡಲಾಗಿತ್ತಂತೆ,…
ಅಕ್ಷತಾ ಕಂಬಳ ಆರಂಭದ ಹಿಂದಿನ ದಿನ ೧೫೦ ಜೋಡಿಗಳು ಪುತ್ತೂರಿನಿಂದ ಹೊರಟು ಕುಶಾಲನಗರದಲ್ಲಿ ವಿಶ್ರಮಿಸಿ ನಂತರ ಮೈಸೂರಿಗೆ ತಲುಪಬೇಕಿತ್ತು. ಹೊರಡುವ…