ಕೆ.ಬಿ.ರಮೇಶ ನಾಯಕ
ಜಿಲ್ಲಾ ಪಂಚಾಯಿತಿಯಿಂದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ನಿರ್ಮಾಣಕ್ಕೆ ಸಿದ್ಧತೆ
ಮೈಸೂರು: ನಗರ ಪ್ರದೇಶಗಳಂತೆ ಹಳ್ಳಿಗಳಲ್ಲೂ ಸ್ವಚ್ಛತೆ, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕೆಂಬ ಕಾರಣಕ್ಕಾಗಿ ಸ್ವಚ್ಛ ಭಾರತ್ ಅಭಿಯಾನದಡಿ ಮೈಸೂರು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಮುಂದಾಗಿದೆ.
ನರೇಗಾ ಯೋಜನೆಯ ಅನುದಾನವನ್ನೇ ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿ ಮೈಸೂರು ಜಿಲ್ಲೆಯು ಮೊದಲನೇಸ್ಥಾನ ಹೊಂದುವ ಗುರಿ ಇಟ್ಟುಕೊಳ್ಳಲಾಗಿದೆ.
ವಿಲೇವಾರಿ ಕಟ್ಟಡ ನಿರ್ಮಾಣ ಮಾಡುವ ಜತೆಗೆ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೂ ಗಮನ ಕೊಡಲಾಗುತ್ತಿದೆ. ಈ ಯೋಜನೆ ಸಫಲವಾದರೆ ಮುಂದಿನ ನಾಲ್ಕೈದು ವರ್ಷಗಳಲ್ಲಿ ರಸ್ತೆ ಬದಿಯಲ್ಲಿ ಕಾಣುವ ತ್ಯಾಜ್ಯವನ್ನು ನಿರ್ಮೂಲನೆ ಮಾಡಬಹುದು ಎನ್ನುವ ಚಿಂತನೆ ಇದೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸ್ವಚ್ಛ ಭಾರತ ಅಭಿಯಾನದ ಮೂಲಕ ನಗರಪಾಲಿಕೆ ಗಳಿಗೆ ಪ್ರಶಸ್ತಿ ನೀಡಲು ಆರಂಭಿಸಿತು.
ನಂತರದ ದಿನಗಳಲ್ಲಿ ನಾಲ್ಕು ಹಂತಗಳ ಕೆಟಗರಿಯನ್ನು ಆಯ್ಕೆ ಮಾಡಿಕೊಂಡು ಜನಸಂಖ್ಯೆ ಆಧರಿಸಿ ಸ್ಥಳೀಯ ಸಂಸ್ಥೆಗಳಿಗೆ ಪುರಸ್ಕಾರ ನೀಡಲು ಮುಂದಾದ ನಂತರ ದೊಡ್ಡ ಪ್ರಮಾಣದಲ್ಲಿ ಸ್ವಚ್ಛತೆ ಕೆಲಸ ನಡೆಯುತ್ತಿರುವುದು ಕಂಡುಬಂದಿದೆ. ನಗರದಲ್ಲಿ ವಿದ್ಯಾರಣ್ಯಪುರಂ, ಕೆಸರೆ ಮತ್ತು ರಾಯನಕೆರೆ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳು ಇರಲಿಲ್ಲ. ಕಳೆದ ಒಂದು ವರ್ಷದಿಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುದಾನ ಬಳಸಿಕೊಂಡು ಗ್ರಾಮ ಪಂಚಾಯಿತಿ ಗೊಂದು ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿದ್ದು, ಇದೀಗ ಪ್ರತಿ ಗ್ರಾಪಂನಲ್ಲೂ ನಿರ್ಮಾಣಕ್ಕೆ ಯೋಜನೆ ರೂಪಿಸಿ ಜಿಲ್ಲಾ ಪಂಚಾಯಿತಿ ಮುಂದಡಿ ಇಟ್ಟಿದೆ
೨೫೬ ಗ್ರಾಮ ಪಂಚಾಯಿತಿಗಳಿಗೂ ವಿಲೇವಾರಿ ಘಟಕ: ಮೈಸೂರು ಜಿಲ್ಲೆಯಲ್ಲಿ ೨೫೬ ಗ್ರಾಮ ಪಂಚಾಯಿತಿಗಳಿದ್ದು, ಮೊದಲು ಜಿಪಂ, ತಾಪಂಹಾಗೂ ೧೫ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಂಡು ೯೮ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಲಾಗಿತ್ತು. ಉಳಿದ ೧೫೮ ಗ್ರಾಪಂಗಳಿಗೆ ಘಟಕಗಳು ಇರಲಿಲ್ಲ. ಮನ್ರೇಗಾ ಯೋಜನೆಯ ಅನುದಾನ ಬಳಸಿಕೊಂಡು ನಿರ್ಮಾಣ ಮಾಡಲು ಅವಕಾಶವಿದ್ದರೂ ಪಿಡಿಒಗಳು ಹಾಗೂ ಚುನಾಯಿತ ಪ್ರತಿನಿಽಗಳು ನಿರಾಸಕ್ತಿ ತೋರಿದ್ದರು. ಇದನ್ನು ಮನಗಂಡ ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ಅವರು ಕೋಲಾರ ಜಿಲ್ಲೆಯಲ್ಲಿ ಕೈಗೊಂಡ ಪ್ರಯೋಗವನ್ನು ಮೈಸೂರು ಜಿಲ್ಲೆಯಲ್ಲೂ ಅನುಷ್ಠಾನಕ್ಕೆ ತರುವ ಮೂಲಕ ಮೊದಲನೇ ಸ್ಥಾನಕ್ಕೆ ತರುವ ಯತ್ನಕ್ಕೆ ಮುಂದಾಗಿದ್ದಾರೆ. ೮೯ ಗ್ರಾಪಂಗಳಲ್ಲಿ ಹೊಸ ಶೆಡ್‌ಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಇವುಗಳ ಪೈಕಿ ೨೦ ಘಟಕಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದಂತೆ ೫೧ ಗ್ರಾಪಂಗಳಲ್ಲೂ ಪ್ರತ್ಯೇಕವಾದ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಮುಂದಾಗಿದೆ.
ವೈಯಕ್ತಿಕ ಗೃಹ ಶೌಚಾಲಯದಲ್ಲೂ ಪ್ರಗತಿ: ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ, ಸಾಲಿಗ್ರಾಮ, ಸರಗೂರು, ತಿ.ನರಸೀಪುರ ತಾಲ್ಲೂಕುಗಳಿಂದ ೪,೬೫,೩೪೬ ಕುಟುಂಬಗಳಿದ್ದು, ಇದರಲ್ಲಿ ೪,೦೨,೬೦೯ ಕುಟುಂಬಗಳು ಗೃಹ ಶೌಚಾಲಯವನ್ನು ಹೊಂದಿವೆ. ಮನ್ರೇಗಾ ಅನುದಾನದಲ್ಲಿ ೪೭,೪೧೩ ಕುಟುಂಬಗಳು ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದರೆ, ೧೫,೩೨೪ ಕುಟುಂಬಗಳು ನಿರ್ಮಿಸಿಕೊಳ್ಳಬೇಕಿದೆ. ಇದನ್ನು ಶೇ.೧೦೦ರಷ್ಟು ಪೂರ್ಣಗೊಳಿಸಲು ಬಾಕಿ ಇರುವ ೧೫,೨೭೬ ವೈಯಕ್ತಿಕ ಶೌಚಾಲಯ ನಿರ್ಮಾಣಗಳ ಪೈಕಿ ೧೧,೦೨೯ ಶೌಚಾಲಯಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಇನ್ನುಳಿದ ೪,೨೯೫ ಶೌಚಾಲಯಗಳ ನಿರ್ಮಾಣಕ್ಕೆ ಒಪ್ಪಿಗೆ ಸಿಗಬೇಕಿದೆ. ಈ ಕುಟುಂಬಗಳಿಗೆ ಜಾಗದ ಸಮಸ್ಯೆ ಇರುವುದರಿಂದ ಸಮುದಾಯ ಶೌಚಾಲಯ ಕಟ್ಟಡ ನಿರ್ಮಾಣ ಮಾಡಿ ಶೇ.೧೦೦ರಷ್ಟು ಸಾಧನೆ ಮಾಡುವ ಗುರಿ ಹೊಂದಲಾಗಿದೆ
ನೀಲಿ-ಹಸಿರು ಕಸದ ಬುಟ್ಟಿ ವಿತರಣೆ: ಪ್ರತಿ ಗ್ರಾಮ ಪಂಚಾಯಿತಿಗೂ ನಾಲ್ಕು ಚಕ್ರದ ಆಟೋ ಟಿಪ್ಪರ್‌ಗಳನ್ನು ನೀಡಲಾಗಿದ್ದು, ೪೯ ಕ್ಲಸ್ಟರ್ಗಳನ್ನು ಮಾಡಲಾಗಿದೆ. ಪ್ರತಿ ಕುಟುಂಬಕ್ಕೂ ಮತ್ತು ಸಾರ್ವಜನಿಕ ಅಗತ್ಯ ಸ್ಥಳಗಳಲ್ಲಿ ನೀಲಿ ಮತ್ತು ಹಸಿರು ಕಸದ ಬುಟ್ಟಿಗಳನ್ನು ವಿತರಿಸಲಾಗಿದೆ. ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ಟಿಪ್ಪರ್ ಸಿಬ್ಬಂದಿಗೆ ನೀಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್ ಮಾಹಿತಿ ನೀಡಿದ್ದಾರೆ.
” ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂಸ್ವಚ್ಛತೆಗೆ ಆದ್ಯತೆ ನೀಡಲು ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ಸಮಸ್ಯೆಯಾಗಬಾರದು. ತ್ಯಾಜ್ಯ ನಿರ್ವಹಣೆ ಘಟಕಗಳ ಹೊಣೆಯನ್ನು ಕೆಲವು ಕಡೆಗಳಲ್ಲಿ ಮಹಿಳಾ ಸಂಘಗಳಿಗೆ ವಹಿಸಲಾಗಿದೆ. ಮುಂದೆ ಆಯಾಯ ವ್ಯಾಪ್ತಿಯ ಸಂಘಗಳು ಮುಂದೆ ಬಂದರೆ ಅವರಿಗೆ ವಹಿಸಲಾಗುವುದು.”
–ಎಸ್.ಯುಕೇಶ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…
ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿಯ ಆತಂಕ ಮುಂದುವರಿದಿದ್ದು, ಹುಣಸೂರು ತಾಲ್ಲೂಕಿನ ಗುರುಪುರ ಸಮೀಪದ ಹೊಸೂರು ಗೇಟ್ ಬಳಿ ಹುಲಿ ದಾಳಿ…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ಒಂದು ವಿಶಿಷ್ಟ ದಾಖಲೆಗೆ ಪಾತ್ರರಾದರು. ಇದುವರೆಗೆ ಕರ್ನಾಟಕವನ್ನು ಸುದೀರ್ಘ…
ಏಪ್ರಿಲ್ ತಿಂಗಳ ಹೊತ್ತಿಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳದಲ್ಲಿನ, ಸಿಪಿಐ(ಎಂ)ನ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎ- ಸರ್ಕಾರ, ರಾಜಕೀಯ ಕಾರಣಗಳಿಗಾಗಿ…
ದೂರ ನಂಜುಂಡಸ್ವಾಮಿ ಕಳೆದ ವರ್ಷ ಉಂಟಾದ ನಷ್ಟದಿಂದ ಉತ್ಸಾಹ ತೋರದ ವ್ಯಾಪಾರಿಗಳು; ರೈತರಲ್ಲಿ ಆತಂಕ ದೂರ: ತೋಟಗಾರಿಕೆ ಬೆಳೆಗಳಲ್ಲಿ ಒಂದಾದ…
ಕೆ.ಬಿ.ರಮೇಶನಾಯಕ ಮೈಸೂರು: ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ನಡೆಸಿದ ದೀರ್ಘಾವಧಿ ಆಡಳಿತವನ್ನು ಹಿಂದಿಕ್ಕಿ ದಾಖಲೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು…