ನವೀನ್ ಡಿಸೋಜ
ಅನುದಾನ ಬಿಡುಗಡೆಯಾದರೂ ಆರಂಭವಾಗದ ಕಾಮಗಾರಿ
ಶೀಘ್ರ ಸೇತುವೆ ನಿರ್ಮಾಣಕ್ಕೆ ಒತ್ತಾಯ
ಮಡಿಕೇರಿ: ಕುಶಾಲನಗರ ತಾಲ್ಲೂಕಿನ ದುಬಾರೆ ತೂಗು ಸೇತುವೆ ನಿರ್ಮಾಣಕ್ಕೆ ಸರ್ಕಾರ ಹಣ ಮಂಜೂರು ಮಾಡಿದೆ ಎನ್ನಲಾಗುತ್ತಿದ್ದರೂ ಕಾಮಗಾರಿ ಆರಂಭವಾಗದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ, ಸ್ಥಳೀಯರು, ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ನಂಜರಾಯಪಟ್ಟಣ ಮಾರ್ಗವಾಗಿ ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುವವರು ಕಾವೇರಿ ನದಿಯನ್ನು ದಾಟಲೇಬೇಕು. ಏಪ್ರಿಲ್, ಮೇ ತಿಂಗಳ ಬೇಸಿಗೆ ಅವಧಿಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಅಲ್ಲಿರುವ ಒಂದೊಂದು ಕಲ್ಲಿನ ಮೇಲೆ ಕಾಲಿಟ್ಟುಕೊಂಡು ಆನೆ ಕ್ಯಾಂಪ್ ತಲುಪಬಹುದು. ಈ ಸಂದರ್ಭದಲ್ಲಿ ಎಚ್ಚರ ತಪ್ಪಿದರೆ ನೀರಿಗೆ ಬೀಳುವ ಅಪಾಯವೂ ಇದೆ. ಈ ಹಿಂದಿನ ವರ್ಷಗಳಲ್ಲಿ ಈ ರೀತಿ ನದಿ ದಾಟಲು ಹೋಗಿ ೧೨ಕ್ಕೂ ಹೆಚ್ಚು ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟ ನಿದರ್ಶನಗಳೂ ಇವೆ.
ಜೂನ್ ನಂತರ ಮಳೆಗಾಲದಲ್ಲಿ ಕಾವೇರಿ ನದಿ ತುಂಬಿ ಹರಿಯುವುದರಿಂದ ನದಿ ದಾಟಲು ಕಷ್ಟಪಡಬೇಕಾಗುತ್ತದೆ. ಈ ಸಂದರ್ಭದಲ್ಲಿಯಾಂತ್ರೀಕೃತ ದೋಣಿಗಳನ್ನು ಉಪ ಯೋಗಿಸಲಾಗುತ್ತದೆ. ದುಬಾರೆ ದ್ವೀಪದಲ್ಲಿರುವ ಗಿರಿಜನರ ಓಡಾಟಕ್ಕೆ, ಪ್ರವಾಸಿಗರನ್ನು ಕರೆದೊಯ್ಯಲು ಈ ದೋಣಿಗಳನ್ನು ಬಳಸಲಾಗುತ್ತದೆ.
ಒಂದು ದೋಣಿ ದಿನಕ್ಕೆ ಕನಿಷ್ಠ ೧೦ ಬಾರಿಯಾದರೂ ನದಿಯ ಎರಡೂ ದಂಡೆಗಳ ಮಧ್ಯೆ ಓಡಾಡುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ರಜಾ ದಿನಗಳಲ್ಲಂತೂ ದೋಣಿಗಳ ಟ್ರಿಪ್ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ. ಇದರಿಂದಾಗಿ ಇಲ್ಲಿಯ ಸೂಕ್ಷ್ಮ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಆಗುತ್ತಿವೆ. ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣವಾದರೆ ನದಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಸಂಪರ್ಕ ಸುಲಭವಾಗಲಿದೆ.
ದುಬಾರೆಗೆ ತೂಗು ಸೇತುವೆ ಬೇಕು ಎಂಬ ಸ್ಥಳೀಯರ ಬೇಡಿಕೆಯನ್ನು ಸರ್ಕಾರದ ಮುಂದೆ ಮಂಡಿಸಿದ್ದ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ಇದೇ ಉದ್ದೇಶಕ್ಕೆ ಸುಮಾರು ೮ ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಇನ್ನೂ ಕೂಡ ಈ ಸಂಬಂಧ ಆಡಳಿತಾತ್ಮಕ ಪ್ರಕ್ರಿಯೆಗಳೇ ಶುರುವಾಗಿಲ್ಲ.
ದುಬಾರೆ ಸಾಕಾನೆ ಶಿಬಿರ ಮತ್ತು ಇಲ್ಲಿಯ ಸುತ್ತಮುತ್ತಲಿನ ಪ್ರದೇಶ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಒಳನಾಡು ಜಲಸಾರಿಗೆ ಇಲಾಖೆ, ಕಾವೇರಿ ನೀರಾವರಿ ನಿಗಮ, ಪುರಾತತ್ವ ಇಲಾಖೆ ಹಾಗೂ ನಂಜರಾಯಪಟ್ಟಣ ಗ್ರಾ.ಪಂ. ಜತೆ ಸಂಬಂಧ ಹೊಂದಿರುವುದರಿಂದ ಈ ಇಲಾಖೆಗಳ ಅಧಿಕಾರಿಗಳ ಮಧ್ಯೆ ಮೊದಲು ಸಮನ್ವಯತೆ ಮೂಡಬೇಕಿದೆ. ಕಾಮಗಾರಿ ಆರಂಭಿಸುವ ಮೊದಲು ಸಮನ್ವಯತೆ ಮೂಡಿಸದಿದ್ದರೆ ಗೊಂದಲ ಉಂಟಾಗಬಹುದು.
ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಪತಂಜಲಿ ಭಾರಧ್ವಾಜ ವಿನ್ಯಾಸವೊಂದನ್ನು ರೂಪಿಸಿದ್ದರು. ಸೇತುವೆಯ ಉದ್ದ ೨೧೦ ಮೀ. ಅಗಲ ೧.೫ ಮೀ. ಇರಲಿದ್ದು, ಎರಡು ಕಂಬಗಳಅಧಾರದಲ್ಲಿ ನಿಲ್ಲಲಿರುವ ಈ ಸೇತುವೆ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರಲಿದೆ. ಹೆಚ್ಚು ಸ್ಥಿರತೆಗಾಗಿ ಸೇತುವೆಯ ಎರಡೂ ಬದಿಗಳಿಗಿಂತ ಮಧ್ಯ ಭಾಗ ಎತ್ತರ ಇರುತ್ತದೆ. ಈ ಸೇತುವೆಗೆ ಸುಮಾರು ೬ ಕೋಟಿ ರೂ. ಅಂದಾಜಿಸಲಾಗಿತ್ತು. ಆದರೆ, ಈ ವಿನ್ಯಾಸಕ್ಕೆ ಆಕ್ಷೇಪಣೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿನ್ಯಾಸವನ್ನು ಕೈಬಿಡಲಾಗಿದೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಇಲ್ಲಿನ ಜನರ ತೂಗು ಸೇತುವೆ ನಿರ್ಮಾಣದ ಹಲವು ವರ್ಷಗಳ ಕನಸು ಕನಸಾಗಿಯೇ ಉಳಿದಿದೆ. ಆದಷ್ಟು ಶೀಘ್ರದಲ್ಲಿ ತೂಗು ಸೇತುವೆ ನಿರ್ಮಿಸಬೇಕೆನ್ನುವುದು ಸ್ಥಳೀಯರ ಒತ್ತಾಯವಾಗಿದೆ.
” ದುಬಾರೆಯಲ್ಲಿ ತೂಗು ಸೇತುವೆನಿರ್ಮಾಣ ಕನಸಿನ ಕೂಸಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಟೆಂಡರ್ ಪ್ರಕ್ರಿಯೆಗಳು ಆರಂಭವಾಗಿಲ್ಲ. ಅನುದಾನ ಬಿಡುಗಡೆಯಾಗಿರುವ ಬಗ್ಗೆ ಲಿಖಿತ ಆದೇಶ ದೊರೆತಿಲ್ಲ. ಈಗ ಮರಳು ಮೂಟೆ ಹಾಕಿ ಅದರ ಮೇಲೆ ಓಡಾಡಬೇಕಾದಪರಿಸ್ಥಿತಿ ಇದೆ. ಪ್ರವಾಸಿಗರು ಬೀಳುವುದು ಸಾಮಾನ್ಯವಾಗಿದೆ. ತೂಗು ಸೇತುವೆ ನಿರ್ಮಾಣವಾದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ.”
-ಸಿ.ಎಲ್. ವಿಶ್ವ, ಗ್ರಾ.ಪಂ. ಅಧ್ಯಕ್ಷರು, ನಂಜರಾಯಪಟ್ಟಣ
” ದುಬಾರೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣಕ್ಕೆ ೮ ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ಟೆಂಡರ್ ಪ್ರಕ್ರಿಯೆ ಮಾತ್ರ ಬಾಕಿ ಇದ್ದು, ಇದೇ ವರ್ಷದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ.”
-ಡಾ. ಮಂಥರ್‌ಗೌಡ, ಶಾಸಕರು, ಮಡಿಕೇರಿ ಕ್ಷೇತ್ರ
ಸಾಲಿಗ್ರಾಮ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಚಂದ್ರು ಆರೋಪ ಸಾಲಿಗ್ರಾಮ: ದಲಿತ ಮತ್ತು ಹಿಂದುಳಿದ…
ಕೃಷ್ಣ ಸಿದ್ದಾಪುರ ಸಂತೆಮಾಳದಲ್ಲಿ ತರಕಾರಿ ಜೊತೆ ಸಾಂಕ್ರಾಮಿಕ ರೋಗವೂ ಉಚಿತ ಕ್ರಮಕೈಗೊಳ್ಳದ ಗ್ರಾ.ಪಂ. ವಿರುದ್ಧ ಸಾರ್ವಜನಿಕರ ಅಸಮಾಧಾನ ಸಿದ್ದಾಪುರ: ಸಾರ್ವಜನಿಕ…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಘನತೆಯ ಬದುಕು ಬಯಸುವ ಮನುಷ್ಯನ ಹಕ್ಕನ್ನು ಎತ್ತಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಬ್ರಿಟಿಷರ ಗುಲಾಮಗಿರಿಯಲ್ಲಿದ್ದ ಭಾರತಕ್ಕೆ…
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಘರ್ಷಣೆ ಸಂದರ್ಭದಲ್ಲಿ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತ…
ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿವಿ ಅಶೋಕಪುರಂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ೨,೦೦೦ ಇದ್ದ…