Andolana originals

ಪೊಲೀಸ್‌ ಅಪ್ಪ ತರುತ್ತಿದ್ದ ಪಟಾಕಿಯ ಪ್ಯಾಕೆಟ್ಟುಗಳು…

ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಸುಮಾರು ಐವತ್ತೈದು-ಅರವತ್ತು ವರ್ಷಗಳ ಹಿಂದಿನ ನೆನಪು. ನಮ್ಮ ಕುಟುಂಬವು ನನ್ನ ತಾಯಿಯ ಊರಾದ ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ನೆಲೆಸಿತ್ತು. ಹಳ್ಳಿಯಲ್ಲಿ ಹಬ್ಬವೆಂದರೆ ಮಕ್ಕಳಿಗಾಗುವ ಸಂಭ್ರಮ ಎಲ್ಲದಕ್ಕೂ ಮಿಗಿಲಾದದ್ದು. ಅದರಲ್ಲೂ ದೀಪಾವಳಿ ಎಂದರೆ ವಿಶೇಷ ಆಸಕ್ತಿ. ಪಟಾಕಿ ಹೊಡೆಯುವ ಹಬ್ಬ ಎಂದು. ನನ್ನ ತಂದೆ ಪೊಲೀಸ್ ಪೇದೆಯಾಗಿ ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಾಸ್ತವ್ಯ ದೊಡ್ಡರಾಯಪೇಟೆಯಲ್ಲಿಯೆ. ಹೋಗಿ ಬರುವುದಕ್ಕೆ ಒಂದು ಹಳೆಯ ಸೈಕಲ್ ಇತ್ತು. ನಾವು ಆರು ಮಕ್ಕಳು, ನಾನೇ ದೊಡ್ಡವನು. ವಿಶೇಷ ಸಂದರ್ಭಗಳಲ್ಲಿ ನನ್ನನ್ನು ಮುಂದುಗಡೆ ಹ್ಯಾಂಡಲ್ ಬಾರ್ ಮೇಲೆ ಕೂರಿಸಿಕೊಂಡು ನಗರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಹೆಚ್ಚಾಗಿ ಸಂಬಳದ ದಿನದಂದು ಮಸಾಲೆ ದೋಸೆ ತಿನ್ನಿಸುವುದಕ್ಕೆ. ದೀಪಾವಳಿ ಎಂದರೆ ಬೆಳಕಿನ ಹಬ್ಬ ತಾನೆ. ಊರಿನಲ್ಲಿ ಪ್ರತಿಯೊಬ್ಬರ ಹಟ್ಟಿಯ ಮುಂದೆಯೂ ಪಂಜು ಉರಿಸುತ್ತಿದ್ದರು. ಹೆಚ್ಚಾಗಿ ಸಣ್ಣ ಮಕ್ಕಳೇ ಅದನ್ನು ಹಿಡಿದು ಕೂರುತ್ತಿದ್ದರು. ಪಟಾಕಿ ಸಿಡಿಸುವ ಧಾವಂತ ಅಷ್ಟಾಗಿ ಕಾಣುತ್ತಿರಲಿಲ್ಲ.

ಸ್ವಲ್ಪ ಹಣವುಳ್ಳವರು ಅಲ್ಲಲ್ಲಿ ಸಿಡಿಸುತ್ತಿದ್ದರು. ಹೆಚ್ಚಾಗಿ ಸುರುಸುರು ಬತ್ತಿ, ಕೃಷ್ಣಚಕ್ರ, ಮತಾಪು, ಹೂವಿನ ಕುಂಡ, ಹೆಚ್ಚೆಂದರೆ ಕೈಯಲ್ಲಿ ಸಿಡಿಸುವ ಸಣ್ಣ ಪಟಾಕಿಗಳು. ಇಂಥವೇ ಸಣ್ಣಪುಟ್ಟ ಐಟಂಗಳನ್ನು ತಂದು ನನ್ನ ವಾರಗೆಯ ಗೆಳೆಯರು ಮನೆಗಳ ಮುಂದೆ ಪಟಾಕಿ ಹಬ್ಬ ಆಚರಿಸುತ್ತಿದ್ದರು. ಕೇರಿಯಲ್ಲಿ ಢಂ ಢಮಾರ್ ಎನಿಸುವ ದೊಡ್ಡ ಪಟಾಕಿಗಳನ್ನು ಸಿಡಿಸಿದ್ದು ಕಡಿಮೆಯೆ. ಕಾರಣ, ಅವು ದುಬಾರಿಯಾಗಿದ್ದವು. ನನ್ನ ವಿಷಯದಲ್ಲಿ ಅದು ಸ್ವಲ್ಪ ಬೇರೆಯೆ ಆಗಿತ್ತು. ಯಾಕೆಂದರೆ ನಾನು ಪೋಲಿಸರ ಮಗನಲ್ಲವೆ? ಹಬ್ಬದ ಹಿಂದಿನ ದಿನ ಅಣ್ಣ (ತಂದೆಯನ್ನು ಕರೆಯುತ್ತಿದ್ದದ್ದು ಹಾಗೆ) ನನ್ನನ್ನು ನಗರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ನಾನು ಒಂದು ಬ್ಯಾಗು ಹಿಡಿದುಕೊಂಡು ಜೊತೆಯಲ್ಲಿ ಹೊರಡುತ್ತಿದ್ದೆ. ಆಗ ಪೊಲೀಸ್ ದಿರಿಸು ಹೇಗಿತ್ತೆಂದರೆ ಕಾಲರ್ ಇಲ್ಲದ ತುಂಬು ತೋಳಿನ ಒಂದು ಕೋಟು, ಅದನ್ನು ಒಳಸರಿಸಿ ಮೇಲೆ ಧರಿಸುತ್ತಿದ್ದ ಚಡ್ಡಿ. ಅದಕ್ಕೆ ಗಂಡಭೇರುಂಡ ಲಾಂಛನವಿರುವ ಒಂದು ಬೆಲ್ಟ್ ಇರುತ್ತಿತ್ತು. ತಲೆಗೆ ಒಂದು ಪೇಟ (ಮೈಸೂರು ಅರಮನೆಯ ದರ್ಬಾರಿನಲ್ಲಿ ಹಾಕುತ್ತಾರಲ್ಲ ಅಂತಹದ್ದು). ಕಾಲಿಗೆ ಬೂಟು, ಮಂಡಿಯತನಕ ಕಾಲುಚೀಲ ಮತ್ತು ಕೈಯಲ್ಲಿ ಒಂದು ದೊಣ್ಣೆ. ಅಣ್ಣ ದೊಡ್ಡ ಮೀಸೆ ಬಿಟ್ಟಿದ್ದರು. ಅದನ್ನು ಎಣ್ಣೆ ಸವರಿ ನೀವಿಕೊಳ್ಳುತ್ತಿದ್ದುದನ್ನು ನೋಡುವುದೇ ರೋಮಾಂಚಕವೆನಿಸುತ್ತಿತ್ತು. ಅದು ಅವರಿಗೆ ಮೀಸೆ ಬಸವರಾಜಪ್ಪ ಎಂಬ ಅಡ್ಡ ಹೆಸರನ್ನು ನೀಡಿತ್ತು.

ಚಾಮರಾಜನಗರದಲ್ಲಿ ಚಾಮರಾಜೇಶ್ವರ ದೇವಸ್ಥಾನದ ಮುಂದುಗಡೆಯಿದ್ದ ವಿಶಾಲ ಮೈದಾನದಲ್ಲಿ ಪಟಾಕಿ ಅಂಗಡಿಗಳ ಸಾಲು ಇರುತ್ತಿದ್ದವು. ಅಣ್ಣ ಅವರಿಗೆ ಪರಿಚಯವಿದ್ದ ಅಂಗಡಿಗಳ ಮುಂದೆ ನಿಂತು ನೆಲಕ್ಕೆ ದೊಣ್ಣೆ ಬಡಿದರೆ ಸಾಕು, ಮಾಲೀಕ ಒಂದು ನಮಸ್ಕಾರದ ಜೊತೆಗೆ ಕೈಗೆ ಸಿಕ್ಕಿದ ಒಂದಷ್ಟು ಪಟಾಕಿಗಳನ್ನು ನನ್ನ ಬ್ಯಾಗಿಗೆ ಹಾಕುತ್ತಿದ್ದ. ಹೀಗೆ ಒಂದು ಎಂಟು-ಹತ್ತು ಅಂಗಡಿಗಳಿಗೆ ಹೋದರೆ ನನ್ನ ಕೈಚೀಲ ತುಂಬುತ್ತಿತ್ತು. ಅಷ್ಟಕ್ಕೆ ಅಣ್ಣ, ಸಾಕು ನಡೆಯೊ ಅನ್ನುತ್ತಿದ್ದರು. ಅಲ್ಲಿ ತೆರತೆರನಾದ ಪಟಾಕಿಗಳು; ಲಕ್ಷ್ಮೀ ಪಟಾಕಿ, ಆನೆ ಪಟಾಕಿ, ಗನ್ನು, ದೊಡ್ಡದಾದ ಹೂಕುಂಡಗಳು ಮತ್ತು ಹೇರಳವಾಗಿ ಸುರುಸುರು ಬತ್ತಿ, ಕೃಷ್ಣಚಕ್ರ, ಮತಾಪು, ರಾಕೆಟ್ಸ್ ಇತ್ಯಾದಿ ಇರುತ್ತಿದ್ದವು. ಅವುಗಳನ್ನು ಅವ್ವ ಮೂರು ಭಾಗ ಮಾಡಿ ಜೋಪಾನವಾಗಿ ಸುರಕ್ಷಿತ ಸ್ಥಳದಲ್ಲಿ ಎತ್ತಿಟ್ಟು ದಿನವೂ ಸಂಜೆ ಏಳು ಗಂಟೆಯ ಮೇಲೆ ನಮಗೆ ಕೊಡುತ್ತಿದ್ದಳು. ಚಿಕ್ಕವರಾದ ನನ್ನ ತಮ್ಮಂದಿರು ತಂಗಿಯರ ಉತ್ಸಾಹ ಹೇಳತೀರದು. ಬೆಳಿಗ್ಗೆ ಎದ್ದವರೆ ಸಂಜೆ ಯಾವಾಗ ಆಗುತ್ತದೆ ಎಂದು ಕಾಯುತ್ತಿದ್ದರು. ಆಗ ನಮ್ಮ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ. ನಾವು ಪಟಾಕಿ ಹಾರಿಸುವಾಗ ನಮ್ಮ ಸುತ್ತಲಿನ ಮನೆಯ ಹೈಕಳು ನಮ್ಮ ಹಟ್ಟಿಯ ಮುಂದೆ ಜಮಾಯಿಸುತ್ತಿದ್ದರು. ಯಾಕೆಂದರೆ ಇಷ್ಟು ದೊಡ್ಡ ದೊಡ್ಡ ಪಟಾಕಿಗಳನ್ನು ನೋಡುವ/ಸುಡುವ ಅವಕಾಶ ಅವರಿಗಿರಲಿಲ್ಲ. ಇದರ ಜೊತೆಗೆ ಆ ಮೂರು ದಿನಗಳಲ್ಲೂ ನಾವು ನಮ್ಮ ತಂದೆ ಡ್ಯೂಟಿ ಮುಗಿಸಿ ಊರಿಗೆ ಬರುವುದನ್ನೇ ಕಾಯುತ್ತಿದ್ದೆವು. ಯಾಕೆಂದರೆ ಅವರು ಬರುವಾಗ ಕೈಯಲ್ಲಿ ಒಂದು ಪ್ಯಾಕೆಟ್ ಹಿಡಿದುಕೊಂಡು ಬರುತ್ತಿದ್ದರು. ಅದರೊಳಗೆ ಪಟಾಕಿಗಳು ಇರುತ್ತಿದ್ದವು ಎಂದು ಬೇರೆ ಹೇಳಬೇಕಾಗಿಲ್ಲ.

ಅದು ನಮಗೆ ಬೋನಸ್ ಥರ ಸಿಗುತ್ತಿತ್ತು. ಎಲ್ಲಾ ಪಟಾಕಿಗಳನ್ನು ಹೊಡೆದು ಮುಗಿದಮೇಲೆ ಎರಡೂ ಕೈಗಳಲ್ಲಿನ ಮದ್ದಿನ ವಾಸನೆ ಮೂಗಿಗೆ ಬಡಿಯುತ್ತಿತ್ತು. ಬೆಳಿಗ್ಗೆ ಎದ್ದು ಅವ್ವ ನಮ್ಮನ್ನು ಬೈದುಕೊಂಡೇ ಹಟ್ಟಿ ಮುಂದೆ ಗುಡ್ಡೆಯಾಗಿ ಬೀಳುತ್ತಿದ್ದ ಕಸವನ್ನು ಬಳಿಯುತ್ತಿದ್ದಳು. ನಾನು ಕಾಲೇಜು ಸೇರಿಕೊಂಡ ಮೇಲೆ ದೀಪಾವಳಿ ಹಬ್ಬದ ಆಕರ್ಷಣೆ ಕಡಿಮೆಯಾಗತೊಡಗಿತು. ನನ್ನ ಮನಸ್ಸು ವೈಚಾರಿಕತೆಗೆ ತೆರೆದುಕೊಂಡ ಕಾರಣವಿರಬೇಕು ಎನಿಸುತ್ತದೆ. ನನ್ನ ಮಕ್ಕಳಿಗೂ ಕನಿಷ್ಠ ಮಟ್ಟದ ಪಟಾಕಿಗೆ ಅವಕಾಶವೀಯುತ್ತಿದ್ದೆ ಮತ್ತು ಸುಡುವಾಗ ಜೊತೆಯಲ್ಲಿಯೆ ಇರುತ್ತಿದ್ದೆ. ಅಷ್ಟು ಹೊತ್ತಿಗೆ ಜ್ಯೋತಿಬಾ ಫುಲೆ ಅವರ ಗುಲಾಮಗಿರಿ ಪುಸ್ತಕವನ್ನು ಓದಿಕೊಂಡಿದ್ದೆ. ಬಲಿ ಒಬ್ಬ ಶೂದ್ರ ಚಕ್ರವರ್ತಿ, ದಾನಶೂರ ಎಂಬುದು ತಿಳಿಯಿತು. ದೈತ್ಯಾಕಾರವಾಗಿ ಬೆಳೆದ ವಾಮನ ಕೇವಲ ಮೂರು ಹೆಜ್ಜೆಯಷ್ಟು ಭೂಮಿಯನ್ನು ದಾನವಾಗಿ ಕೇಳಿ, ಒಂದು ಪಾದವನ್ನು ಭೂಮಿಯ ಮೇಲಿಟ್ಟು ಇನ್ನೊಂದು ಪಾದವನ್ನು ಆಕಾಶದ ಮೇಲಿಟ್ಟು ಮತ್ತೊಂದು ಪಾದವನ್ನು ಎಲ್ಲಿ ಇಡಲಿ ಎಂದು ಕೇಳಬೇಕಾದರೆ ಅವರಿಬ್ಬರೂ ನಿಂತದ್ದಾದರೂ ಎಲ್ಲಿ? ಭುವಿಯ ಮೇಲಿನ ಹಳ್ಳಿಗಳನ್ನೆಲ್ಲಾ ತನ್ನ ಮೊದಲ ಕಾಲಡಿಯಲ್ಲಿ ಹೊಸಕಿ ಹಾಕಿರಬೇಕು. ಅಂತೆಯೆ ನಿಷ್ಪಾಪಿ ಜನರು ಜೀವ ಕಳೆದುಕೊಂಡಿರಬೇಕು! ಎರಡನೆಯ ಪಾದವನ್ನು ಆಕಾಶದ ಮೇಲಿಟ್ಟಾಗ ನಕ್ಷತ್ರಗಳು, ಗ್ಯಾಲಕ್ಷಿಗಳು ಒಂದಕ್ಕೊಂದು ಡಿಕ್ಕಿ ಹೊಡೆದಿರಬೇಕು. ಮೇಲಾಗಿ ಎರಡನೆಯ ಪಾದ ಆಕಾಶದಲ್ಲಿದ್ದರೆ ಅವನ ಮುಂಡವನ್ನಿಡಲು ಜಾಗವೆಲ್ಲಿತ್ತು? ಬಲಿರಾಜನ ಮೇಲೆ ಮೂರನೆಯ ಕಾಲಿರಿಸಿ ಪಾತಾಳಕ್ಕೆ ತುಳಿಯಲು ಅವನ ತಲೆ ಎಲ್ಲಿತ್ತು? ಎಂದೆಲ್ಲಾ ಫುಲೆ ಪ್ರಶ್ನಿಸುತ್ತಾರೆ. ಇದನ್ನೆಲ್ಲಾ ಯೋಚಿಸುತ್ತಾ ಕುಳಿತರೆ ತಲೆ ಗಿರಕಿ ಹೊಡೆಯುತ್ತದೆ. ಹಿಂದೂ ಹಬ್ಬಗಳನ್ನು ಆಚರಿಸಬೇಕಾದರೆ ಜನರಲ್ಲಿ ಮುಗ್ಧತೆ ಇರಬೇಕು. ವಿದ್ಯೆ ಮುಗ್ಧತೆಯನ್ನು ನಾಶಮಾಡುತ್ತದೆ, ವಿಚಾರವನ್ನು ಬಿತ್ತುತ್ತದೆ. ಅದಕ್ಕೆ ಇರಬೇಕು ದೇವನೂರು, ನನಗೆ ವಿದ್ಯೆ ಇಲ್ಲದಿದ್ದರೆ ಸುಖವಾಗಿರು ತ್ತಿದ್ದೆನೆನೊ? ಎಂದು ಉದ್ಗರಿಸಿದ್ದು.

ಇತ್ತೀಚಿನ ವರ್ಷಗಳಲ್ಲಿ ದೀಪಾವಳಿ ಎಂದರೆ ಭಯ ಮತ್ತು ವಿಷಾದ ಆವರಿಸಿಕೊಳ್ಳುತ್ತದೆ. ದೀಪಾವಳಿಯ ಮರುದಿನ ಕಣ್ಣು ಕಳೆದುಕೊಂಡ ಹದಿಹರೆಯದ ಮಕ್ಕಳು ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿಗೆ ಬಟ್ಟೆ ಸುತ್ತಿಕೊಂಡುಸಾಲಾಗಿ ಕುಳಿತಿರುವ ದೃಶ್ಯ ಭಯ ಹುಟ್ಟಿಸುತ್ತದೆ. ಸುಟ್ಟ ಗಾಯಗಳಿಂದ ದೇಶದ ನಾನಾ ಕಡೆ ಚಿಕಿತ್ಸೆ ಪಡೆಯುತ್ತಿರುವವರ ಅಂಕಿಅಂಶಗಳು ಪತ್ರಿಕೆಯಲ್ಲಿ ಬಿತ್ತರವಾದಾಗ ವಿಷಾದ ಮೂಡುತ್ತದೆ. ಹಾಗಾಗದಿರಲಿ ಎಂದು ಆಶಿಸುತ್ತಾ ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳನ್ನು ತಿಳಿಸುವೆ.

ಆಂದೋಲನ ಡೆಸ್ಕ್

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

6 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

6 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

7 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

7 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

7 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

8 hours ago