Andolana originals

ನಗರಸಭೆಗೆ ಗೆಜ್ಜಲಗೆರೆ-ಗೊರವನಹಳ್ಳಿ ಸೇರ್ಪಡೆಗೆ ವಿರೋಧ

ಹೇಮಂತ್‌ ಕುಮಾರ್‌ 

ಮಂಡ್ಯ: ಪುರಸಭೆಯಾಗಿದ್ದ ಮದ್ದೂರು ಟೌನ್ ಆಡಳಿತ ನಗರಸಭೆಯಾಗಿ ಪರಿವರ್ತನೆ ಗೊಂಡಿದೆ. ಈ ನಗರಸಭೆಗೆ ಅಕ್ಕಪಕ್ಕದ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಹಾಗೂ ಗೊರವನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆ ಮಾಡಿಯೇ ತೀರುತ್ತೇನೆಂದು ಹಠಕ್ಕೆ ಬಿದ್ದಿರುವ ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಹಾಗೂ ನಮ್ಮ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳ್ಳಲು ನಾವು ಬಿಡುವುದಿಲ್ಲ ಎನ್ನುವ ಗ್ರಾಮಸ್ಥರ ಪರ ಹೋರಾಟಗಾರರ ನಡುವಿನ ಹಗ್ಗ ಜಗ್ಗಾಟ ತೀವ್ರಗೊಂಡಿದೆ.

ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಮದ ಮುಖಂಡರು, ರೈತಸಂಘದ ಹೋರಾಟಗಾರರು, ಮಹಿಳೆಯರೂ ಸೇರಿದಂತೆ ಪ್ರತಿಭಟನಾ ನಿರತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಸದ್ಯದಲ್ಲೇ ಮೂರು ತಿಂಗಳು ಪುರ್ಣಗೊಳ್ಳಲಿದೆ. ಎರಡೂ ಗ್ರಾ.ಪಂಗಳ ಮುಂದೆ ಹೋರಾಟಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಹಗ್ಗ ಜಗ್ಗಾಟದ ನಡುವೆಯೇ ಹಠಾತ್ತನೆ ಎರಡನೇ ಶನಿವಾರ ದಂದು ಅಧಿಕಾರಿಗಳು ಪೊಲೀಸ್ ಸರ್ಪಗಾವಲಿ ನಲ್ಲಿ ಗೊರವನಹಳ್ಳಿ ಗ್ರಾಪಂಗೆ ಆಗಮಿಸಿದ್ದಾರೆ. ಬಂದವರೇ ನೇರ ಗ್ರಾಪಂ ಕಚೇರಿಗೆ ಹೋಗಿ ಕಡತಗಳನ್ನು ಹೊತ್ತು ತರುತ್ತಿದ್ದಾಗ ಆಕ್ರೋಶ ಗೊಂಡ ಹೋರಾಟಗಾರರು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು.

ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿ ತಮ್ಮ ಕಾರ್ಯ ಸಾಧಿಸಿಕೊಂಡು ಹೋಗಿದ್ದಾರೆ. ಅದಾಗುತ್ತಲೇ ಇತ್ತ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಗೆಜ್ಜಲಗೆರೆ ಗ್ರಾಪಂ ಮುಂದಿದ್ದ ಹೋರಾಟಗಾರರನ್ನು ಭೇಟಿಯಾದ ತಹಸಿ ಲ್ದಾರ್, ವೃತ್ತ ನಿರೀಕ್ಷಕರು ಅಲ್ಲಿನ ಸ್ಥಿತಿಗತಿಯನ್ನು ಅರಿತು, ಧರಣಿ ನಿರತರನ್ನು ಮಾತನಾಡಿಸಿ ಹಿಂತಿರುಗಿದ್ದಾರೆ.

ಪ್ರತಿರೋಧಕ್ಕೆ ಕಾರಣವೇನು?: ಗೆಜ್ಜಲಗೆರೆ ಮತ್ತು ಗೊರವನಹಳ್ಳಿ ಹೋರಾಟಗಾರರ ಪ್ರಕಾರ ನಮ್ಮ ಊರನ್ನು ಮದ್ದೂರು ನಗರಸಭೆಗೆ ಸೇರಿಸಿದರೆ ಗ್ರಾಮದ ಗ್ರಾಮೀಣ ಸ್ವರೂಪವೇ ದುರ್ಬಲಗೊಳ್ಳುತ್ತದೆ, ಆಸ್ತಿ, ಜಮೀನು ಮುಂತಾದ ತೆರಿಗೆಗಳು ಹೆಚ್ಚಾಗುತ್ತವೆ. ಗ್ರಾಮೀಣ ಪ್ರಯೋಜನಗಳು ಸಿಗುವುದಿಲ್ಲ. ಗ್ರಾಪಂಗೆ ಕೊಕ್ ಕೊಟ್ಟು, ಇಲ್ಲಿಗೆ ಬರುತ್ತಿದ್ದ ಆದಾಯವನ್ನು ಕಸಿದುಕೊಳ್ಳಲಾಗುತ್ತದೆ. ನಗರ ಸಭೆ ವ್ಯಾಪ್ತಿಗೆ ಬಂದರೆ ಬಹುತೇಕರು ಭೂಮಿ ಯನ್ನು ಮಾರಿಕೊಳ್ಳುತ್ತಾರೆ. ಆ ಮೂಲಕ ರೈತರ ಬದುಕು ಅತಂತ್ರವಾಗುತ್ತದೆ ಎಂಬ ಭಯದಿಂದ ಗ್ರಾಮಸ್ಥರು ವಿಲೀನವನ್ನು ವಿರೋಧಿಸುತ್ತಿದ್ದಾರೆ. ಹಾಗಾಗಿ ಪ್ರತಿಭಟನಾಕಾರರು ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿದ್ದಾರೆ ಮತ್ತು ಪ್ರತಿಭಟನೆಯು ೮೫ ದಿನಗಳನ್ನು ಪೂರೈಸಿದೆ.

ರಾಜಕೀಯ ಬೆಂಬಲ:ಈ ಎರಡೂ ಗ್ರಾಮ ಪಂಚಾಯಿತಿಗಳ ಮುಂದೆ ಧರಣಿ ನಡೆಸುತ್ತಿರುವ ಹೋರಾಟ ಗಾರರರಿಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೆಂಬಲ ನೀಡಿದ್ದು, ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿ ಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೂ ಮುನ್ನ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮುಂತಾದವರು ಪ್ರತಿಭಟನಾ ನಿರತರನ್ನು ಭೇಟಿಯಾಗಿ ಹೋರಾಟವನ್ನು ಬೆಂಬಲಿಸಿ, ಶಾಸಕ ಕೆ.ಎಂ. ಉದಯ್ ವಿರುದ್ಧ ವಾಗ್ದಾಳಿ ನಡೆಸಿ ಹೋಗಿದ್ದರು. ಇದು ರಾಜಕೀಯ ಜಟಾಪಟಿಗೂ ಕಾರಣ ವಾಗಿದೆ.

ಸರ್ಕಾರದ ನಿಲುವೇನು?:  ಮದ್ದೂರು ಪುರಸಭೆಯನ್ನು ನಗರಸಭೆಯಾಗಿಸಿ, ಕಾನೂನುಬದ್ಧ ವಿಲೀನ ಪ್ರಕ್ರಿಯೆಯು ಪೂರ್ಣಗೊಂಡಿದೆ ಮತ್ತು ಅದನ್ನು ಹಿಮ್ಮೆಟ್ಟಿಸುವುದು ಕಷ್ಟ ಎಂದು ಹೇಳಿ,ಪ್ರತಿಭಟನೆ ಯನ್ನು ಹಿಂತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಇತ್ತೀಚೆಗೆ ಪ್ರತಿಭಟನಾ ನಿರತರಿಗೆ ಮನವಿ ಮಾಡಿದ್ದರು. ಆದರೆ ಗ್ರಾಮಸ್ಥರು ಇದಕ್ಕೆ ಒಪ್ಪಿಲ್ಲ. ಚೆಂಡು ನ್ಯಾಯಾಲಯದಲ್ಲಿದೆ:

ಇಡೀ ಪ್ರಕರಣ ಈಗ ನ್ಯಾಯಾಲಯದಲ್ಲಿದ್ದು, ಹೋರಾಟಗಾರರೇ ಹೈಕೋರ್ಟ್‌ನಲ್ಲಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಪಂಚಾಯತ್ ರಾಜ್ ವಿಧೇಯಕವನ್ನೇ ಛಿದ್ರಗೊಳಿಸುವ ಇಂತಹ ಬೆಳವಣಿಗೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ. ಹಾಗಾಗಿ ಚೆಂಡು ಈಗ ನ್ಯಾಯಾಲಯದಲ್ಲಿದ್ದರೂ ಅಧಿಕಾರಿಗಳು ಖಾಕಿ ರಕ್ಷಣೆ ಯೊಂದಿಗೆ ಗ್ರಾಪಂ ಪ್ರವೇಶಿಸಿ ಕಡತಗಳನ್ನುತೆಗೆದು ಕೊಂಡು ಹೋಗಿರುವುದು ಅಚ್ಚರಿ ಮೂಡಿಸಿದೆ.

” ಕಳೆದ ೮೩ ದಿನಗಳಿಂದ ನಿರಂತರ ಹೋರಾಟ ಕೈಗೊಂಡು ಗೆಜ್ಜಲಗೆರೆ ಗ್ರಾಪಂನ್ನು ಮದ್ದೂರು ನಗರಸಭೆಗೆ ಸೇರಿಸುವುದು ಬೇಡ ಎಂದು ಅಹೋರಾತ್ರಿ ಧರಣಿ ನಡೆಸಿದ್ದೇವೆ. ಪ್ರಕರಣ ಈಗ ನ್ಯಾಯಾಲಯದಲ್ಲಿದೆ.ಹೀಗಿರುವಾಗ ಏಕಾಏಕಿ ಗೊರವನಹಳ್ಳಿ ಗ್ರಾಪಂಗೆ ನುಗ್ಗಿ ಕಡತ ತೆಗೆದುಕೊಂಡು ಹೋಗಿರುವುದು ಕಳವು ಮಾಡಿದಂತಿದೆ. ಆಸ್ತಿ ತೆರಿಗೆ, ಭೂಕಂದಾಯ, ಮನೆ ಕಂದಾಯ ಹೆಚ್ಚಾಗುತ್ತದೆ, ನಮ್ಮ ತೆರಿಗೆ ಹಣವನ್ನು ಮದ್ದೂರಿಗೆ ಬಳಸಬೇಕೆ? ೫ ಸಾವಿರ ಜನಸಂಖ್ಯೆಯಿರುವ ನಮ್ಮೂರಿನ ವ್ಯಾಪ್ತಿಯಲ್ಲಿ ೧,೫೦೦ ಎಕರೆ ನೀರಾವರಿ ಜಮೀನಿದೆ, ೧,೫೦೦ ಜಾನುವಾರುಗಳಿವೆ. ವರ್ಷಕ್ಕೆ ನಮ್ಮ ಗ್ರಾಪಂಗೆ ಬರುವ ೧.೫ ಕೋಟಿ ರೂ.ಆದಾಯ ಮದ್ದೂರಿಗೆ ಹೋಗಬೇಕೆ? ಗ್ರಾಮ ಹೋಗಿ ವಾರ್ಡ್ ಆಗುತ್ತೆ, ನರೇಗಾ ಹೋಗುತ್ತೆ, ಹಳ್ಳಿ ಸಂಸ್ಕೃತಿ ಹೋಗಿ, ಗ್ರಾಮಗಳ ರೈತರ ಭೂಮಿಯಲ್ಲಿ ರಿಯಲ್ ಎಸ್ಟೇಟ್ ಮಾಡಲು ಹೊರಟಿದ್ದಾರೇನು?”

– ಸುನಂದಾ ಜಯರಾಂ, ರೈತ ಹೋರಾಟಗಾರರು

” ಹಾದಿ ಬೀದೀಲಿ ಹೋಗೋರ ಹೇಳಿಕೆಗೆ ನಾನು ಉತ್ತರ ನೀಡಲ್ಲ. ಒಳ್ಳೆಯ ಕೆಲಸ ಮಾಡ್ತಾರೆ ಅಂತ ಜನ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ೫೦ ಸಾವಿರ ಜನ ನಗರಸಭೆ ಪರವಾಗಿದ್ದರೆ, ಒಂದೈವತ್ತು ಮಂದಿ ವಿರೋಧ ಮಾಡುತ್ತಾರೆ. ನನ್ನ ಉದ್ದೇಶ ಮದ್ದೂರನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವುದಷ್ಟೆ.”

-ಕೆ.ಎಂ.ಉದಯ್, ಶಾಸಕ

 

 

ಆಂದೋಲನ ಡೆಸ್ಕ್

Recent Posts

‘ಕೈಗೂಡಿದ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಕನಸು’

ನವೀನ್ ಡಿಸೋಜ ದೀರ್ಘಕಾಲದ ಬೇಡಿಕೆಗೆ ಸರ್ಕಾರದ ಸ್ಪಂದನೆ; ಕೊಡವರ ಶ್ರೇಯೋಭಿವೃದ್ಧಿಗೆ ಅನುಕೂಲ ಮಡಿಕೇರಿ:ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ…

1 min ago

ಮಧ್ಯಾಹ್ನದ ಬಿಸಿಯೂಟಕ್ಕೂ ತಟ್ಟಲಿದೆ ಗ್ಯಾಸ್ ಬಿಸಿ?

ಗಿರೀಶ್ ಹುಣಸೂರು ಸಿಲಿಂಡರ್ ರೀಫಿಲ್ಲಿಂಗ್‌ಗೆ ೨೫ ದಿನಗಳ ಅವಧಿ ನಿಗದಿ; ವಸತಿ ಶಾಲೆಗಳು, ಹಾಸ್ಟೆಲ್‌ಗಳಿಗೆ ಬಿಸಿ ತಟ್ಟುವ ಸಂಭವ ಮೈಸೂರು: ಮಧ್ಯಪ್ರಾಚ್ಯದಲ್ಲಿ…

11 mins ago

ಶತಮಾನದ ಶಾಲೆ; ಆರದ ಅಕ್ಷರ ದೀಪಮಾಲೆ

ಮಹಾದೇಶ್ ಎಂ ಗೌಡ ಹನೂರು: ಇದು ಶತೋತ್ತರ ದಶಮಾನೋತ್ಸವ ದಾಟಿ ಮುಂದೆ ಸಾಗಿರುವ ಶಾಲೆ. ಕಾಲ ಕಾಲಕ್ಕೆ ಅಭಿವೃದ್ಧಿಗೊಂಡು, ಪ್ರಸ್ತುತ…

16 mins ago

ʼದಳಪತಿʼ ವಿಜಯ್‌ ಸೆಳೆಯಲು ಬಿಜೆಪಿ ತಂತ್ರ : ಡಿಸಿಎಂ ಸ್ಥಾನದ ಜತೆಗೆ 80 ಸ್ಥಾನದ ಆಫರ್‌!

ಚೆನ್ನೈ : ತಮಿಳುನಾಡು ರಾಜಕಾರಣದಲ್ಲಿ ತಮ್ಮದೇ ಆದ ಕ್ರೇಜ್‌ ಸೃಷ್ಟಿಸಿಕೊಂಡಿರುವ ಟಿವಿಕೆ ಪಕ್ಷದ ಅಧ್ಯಕ್ಷ, ನಟ ʼದಳಪತಿʼ ವಿಜಯ್ ಅವರನ್ನು…

10 hours ago

ತಂಪೆರೆದ ಮಳೆ ; ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ಮಳೆ

ಮೈಸೂರು : ಜನರು ವಿಪರೀತ ಸೆಕೆಯಿಂದಾಗಿ ತತ್ತರಿಸಿ ಹೋಗಿರುವ ನಡುವೆ ಕೆಲ ಜಿಲ್ಲೆಗಳಲ್ಲಿ ಇಂದು(ಮಾರ್ಚ್.‌15) ಸಂಜೆ ಅಕಾಲಿಕವಾಗಿ ಮಳೆ ಸುರಿದು…

11 hours ago

ಮಂಡ್ಯ | ನಾಲೆ ಅಭಿವೃದ್ಧಿಗೆ 100 ಕೋಟಿ ಅನುದಾನ ; ಶಾಸಕ ರವಿಕುಮಾರ್‌

ಮಂಡ್ಯ : ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲಾಗಿದ್ದು, ಬಸರಾಳು ಭಾಗದ ಹೇಮಾವತಿ ನಾಲೆ ಅಭಿವೃದ್ಧಿಗೆ 350…

11 hours ago