ನವೀನ್ ಡಿಸೋಜ
ಬೆಟ್ಟಗಳ ತುದಿಯಲ್ಲಿ ಕಾಮಗಾರಿ ಕೈಗೊಂಡರೆ ಗುಡ್ಡ ಕುಸಿಯುವ ಸಾಧ್ಯತೆ; ಆದಾಯಗಳಿಕೆಯ ಉದ್ದೇಶ; ಅನಾಹುತದ ಆತಂಕ
ಮಡಿಕೇರಿ:ನಗರದ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದ್ದು, ಸಾರ್ವಜನಿಕ ವಲಯದಲ್ಲಿ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ರಾಜಾಸೀಟ್ ಉದ್ಯಾನವನ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣವಾಗಿದೆ. ತನ್ನ ಪ್ರಾಕೃತಿಕ ಸೌಂದರ್ಯ ಮತ್ತು ಐತಿಹಾಸಿಕ ಹಿನ್ನೆಲೆಯಿಂದ ಜನರನ್ನು ಆಕರ್ಷಿಸುವ ರಾಜಾಸೀಟ್‌ಗೆ ಕೊಡಗಿಗೆ ಬರುವ ಎಲ್ಲ ಪ್ರವಾಸಿಗರೂ ಭೇಟಿ ನೀಡುತ್ತಾರೆ. ಸುಂದರ ಸೂರ್ಯಾಸ್ತಮಾನ ವನ್ನು ವೀಕ್ಷಿಸಲು ಪ್ರತಿ ದಿನ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ರಾಜಾಸೀಟ್‌ಗೆ ಭೇಟಿ ನೀಡುತ್ತಾರೆ.
ರಾಜಾಸೀಟ್ ಉದ್ಯಾನವನ್ನು ಈಗಾಗಲೇ ಗ್ರೇಟರ್ ರಾಜಾಸೀಟ್ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗಿದ್ದು,ವ್ಯೂ ಪಾಯಿಂಟ್, ವಾಕಿಂಗ್ ಪಾತ್‌ಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಜಿಪ್ ಲೈನ್, ರಾಕೆಟ್ ಎಜೆಕ್ಟರ್ ಮುಂತಾದ ಅಡ್ವೆಂಚರ್ ಆಕ್ಟಿವಿಟಿಗೂ ಅವಕಾಶ ನೀಡಲಾಗಿದೆ. ಇದೀಗ ಅಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೂ ತೋಟಗಾರಿಕಾ ಇಲಾಖೆ ಮುಂದಾಗಿದ್ದು, ಖಾಸಗಿ ಸಂಸ್ಥೆಗಳಿಂದ ಟೆಂಡರ್ ಕರೆದಿರುವ ಮಾಹಿತಿ ಹೊರಬಿದ್ದಿದೆ.
ರಾಜಾಸೀಟ್ ಕೇವಲ ಮೋಜಿನ ತಾಣವಲ್ಲ. ಇದೊಂದು ಐತಿಹಾಸಿಕ ತಾಣವಾಗಿದ್ದು, ಹಿಂದೆ ಕೊಡಗಿನ ರಾಜರುಇಲ್ಲಿ ಬಂದು ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದ ಇತಿಹಾಸವಿದೆ. ಇದಲ್ಲದೆ ಅಲ್ಲಿಯೇ ರಾಜರು ಕುಳಿತುಕೊಳ್ಳುತ್ತಿದ್ದ ಗೋಪುರವಿದ್ದು, ಇದನ್ನು ಸ್ಮಾರಕವಾಗಿ ಸಂರಕ್ಷಿಸಲಾಗಿದೆ. ಹೀಗಿರುವಾಗಿ ಇದನ್ನು ಆದಾಯ ಗಳಿಕೆಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂಬುದು ಹಲವರ ವಾದವಾಗಿದೆ.
ಗುಡ್ಡದ ಮೇಲಿರುವ ರಾಜಾಸೀಟ್ ಉದ್ಯಾನದ ಬೆಟ್ಟಗಳ ತುದಿಯಲ್ಲಿ ಗ್ಲಾಸ್ ಬ್ರಿಡ್ಜ್ ಕಾಮಗಾರಿ ನಡೆಸುವುದು ಅಪಾಯಕಾರಿಯಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ರಾಜಾಸೀಟ್‌ನ ಪಕ್ಕದ ಇಂದಿರಾ ನಗರದಲ್ಲಿ ಭಾರೀ ಭೂಕುಸಿತಗಳು ಸಂಭವಿಸಿವೆ. ಇದೇ ಸಾಲಿನಲ್ಲಿರುವ ರಾಜಾಸೀಟ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡರೆ ಇಲ್ಲಿಯೂ ಅದೇ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ಸ್ಥಳೀಯರದ್ದಾಗಿದೆ.
ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಬಲಿಷ್ಠ ಪಿಲ್ಲರ್‌ಗಳನ್ನು ಅಳವಡಿಸಲು ಬೆಟ್ಟವನ್ನು ಆಳವಾಗಿ ಕೊರೆಯಬೇಕಾಗುತ್ತದೆ. ಇದರಿಂದ ಇಡೀ ಬೆಟ್ಟಕ್ಕೆ ಅಪಾಯ ಉಂಟಾಗಬಹುದು ಎಂಬುದು ವಿರೋಧಕ್ಕೆ ಪ್ರಮುಖ ಕಾರಣವಾಗಿದೆ.
ಇತ್ತೀಚೆಗೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಬಿಜೆಪಿ ಪ್ರಮುಖರು, ಗ್ಲಾಸ್ ಬ್ರಿಡ್ಜ್ ನಿರ್ಮಾಣವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಸ್ಥಳೀಯರ ಗಮನಕ್ಕೆ ತಾರದೇ ಇಂತಹ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರೂ ಈ ಯೋಜನೆಯನ್ನು ವಿರೋಧಿಸಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆದಿರುವುದಾಗಿಯೂ ತಿಳಿಸಿದ್ದಾರೆ. ಸಂಸದ ಯದುವೀರ್ ಒಡೆಯರ್ ಕೂಡ ಈ ಯೋಜನೆಯನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.
” ರಾಜಾಸೀಟ್ ಬೆಟ್ಟದಲ್ಲಿ ಸ್ಕೈವಾಕ್ ಗ್ಲಾಸ್ಟ್ ಬ್ರಿಡ್ಜ್ ನಿರ್ಮಾಣ ಮಾಡುವುದು ಸರಿಯಲ್ಲ. ರಾಜಾಸೀಟ್ ಐತಿಹಾಸಿಕ ತಾಣವಾಗಿದ್ದು, ಅದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರದ್ದಾ ಗಿದೆ. ಅಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ವಾಯು ವಿಹಾರದಂತಹ ಚಟುವಟಿಕೆಗೆ ಅನುಕೂಲ ಮಾಡಿಕೊಡ ಬೇಕೇ ವಿನಾ ಇಂತಹ ಯೋಜನೆಗಳನ್ನು ತರಬಾರದು. ಈಗಾಗಲೇ ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗಿದೆ.”
-ಎಂ.ಸಿ. ನಾಣಯ್ಯ, ಮಾಜಿ ಸಚಿವ
” ರಾಜಾಸೀಟ್‌ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಿಸುವ ಪ್ರಯತ್ನಗಳಿಗೆ ಸ್ಥಳೀಯರ ವಿರೋಧ ಇದೆ. ಸ್ಥಳೀಯರ ಅಭಿಪ್ರಾಯವನ್ನು ಗೌರವಿಸಬೇಕು. ಹೀಗಾಗಿ ಈ ಯೋಜನೆಗೆ ನನ್ನ ಸಂಪೂರ್ಣ ವಿರೋಧವಿದೆ. ಪರಿಸರದ ತಾಣಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಅತ್ಯವಶ್ಯವಾಗಿದೆ. ಗ್ಲಾಸ್ ಬ್ರಿಡ್ಜ್ ವಿರೋಧದ ಹೋರಾಟಕ್ಕೆ ನನ್ನ ಬೆಂಬಲವಿದೆ.”
-ಯದುವೀರ್ ಒಡೆಯರ್, ಸಂಸದ
” ಕೊಡಗು ಜಿಲ್ಲೆಯಲ್ಲಿ ಗ್ಲಾಸ್ ಬ್ರಿಡ್ಜ್‌ನಂತಹ ಯೋಜನೆಗಳ ಅವಶ್ಯಕತೆ ಇಲ್ಲ. ಇಲ್ಲಿನ ಪರಿಸರವನ್ನು ಉಳಿಸುವ ಕೆಲಸವಾಗಬೇಕು. ಈಗಾಗಲೇ ನಗರೀಕರಣದಿಂದ ಪರಿಸರ ನಾಶವಾಗುತ್ತಿದ್ದು, ವನ್ಯಮೃಗಗಳ ಹಾವಳಿಯೂ ಹೆಚ್ಚುತ್ತಿದೆ. ಯಾವುದೇ ಸರ್ಕಾರ ಇದ್ದರೂ ಪರಿಸರ ಉಳಿಸುವ ಕೆಲಸ ಮಾಡಬೇಕೇ ಹೊರತು ಇಂತಹ ಯೋಜನೆಯನ್ನು ಜಾರಿಗೊಳಿಸಬಾರದು. ಇದಕ್ಕೆ ಬಳಸುವ ಕೋಟ್ಯಂತರ ರೂ. ಹಣವನ್ನು ಕಾಡಾನೆ ಕಾರಿಡಾರ್‌ನಂತಹ ಯೋಜನೆಗೆ ಬಳಸಿದರೆ ಅನುಕೂಲವಾಗಲಿದೆ.”
-ಕರ್ನಲ್ ಸಿ.ಪಿ. ಮುತ್ತಣ್ಣ, ಪರಿಸರವಾದಿ
” ಗ್ಲಾಸ್ ಬ್ರಿಡ್ಜ್‌ನಂತಹ ಯೋಜನೆಗೆ ಪಿಲ್ಲರ್ ಅಳವಡಿಕೆಗೆ ಆಳವಾಗಿ ಅಗೆಯಬೇಕಾಗುತ್ತದೆ. ಈಗಾಗಲೇ ರಾಜಾಸೀಟ್ ಸಮೀಪದಲ್ಲೇ ಮಣ್ಣು ಕುಸಿದಿದೆ. ಕೆಳಭಾಗ ಹಾಗೂ ಸಮೀಪದಲ್ಲೇ ವಾಸದ ಮನೆಗಳೂ ಇವೆ. ಇದೀಗ ಮತ್ತೆ ಇಲ್ಲಿ ಅಭಿವೃದ್ಧಿ ಕಾರ್ಯ ಮಾಡುವುದರಿಂದ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ.”
-ಮನೋಜ್, ಸ್ಥಳೀಯರು
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…
ಎಚ್.ಡಿ.ಕೋಟೆ: ಬಸ್ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ…
ಮಂಡ್ಯ: ವಿಸಿ ಫಾರ್ಮ್‌ನ ಕೃಷಿ ಮೇಳದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.…
ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಶಾಸಕರೇ ಅವಿಶ್ವಾಸ ನಿರ್ಣಯ ಮಂಡಿಸಿದರೂ ಅಚ್ಚರಿ ಇಲ್ಲ ಎಂದು…
ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗುರುಪುರದ ಬಳಿಯ ಜಮೀನೊಂದರಲ್ಲಿ ಓಡಾಡುತ್ತಿದ್ದ ಒಂದು ವರ್ಷದ ಹುಲಿ ಮರಿಯನ್ನು ಅರಣ್ಯಾಧಿಕಾರಿಗಳು ಸೆರೆ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ. ಆ ಮೂಲಕ ನಮಗೆ…