Andolana originals

ರಾಮೇನಹಳ್ಳಿ ಬೆಟ್ಟದಲ್ಲಿಓಂಕಾರೇಶ್ವರ ಜಾತ್ರೆ ಸಡಗರ

ದಾ.ರಾ.ಮಹೇಶ್

ಫೆ.೨೭ರಿಂದ ಮಾ.೨ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ

ವೀರನಹೊಸಹಳ್ಳಿ: ರಾಮೇನಹಳ್ಳಿ ಬೆಟ್ಟದಲ್ಲಿ ಓಂಕಾರೇಶ್ವರ ಜಾತ್ರಾ ಮಹೋತ್ಸವ ಫೆ.೨೭ರಿಂದ ಮಾ.೨ರವರೆಗೆ ನಡೆಯಲಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ.

ಶತಮಾನಗಳ ಐತಿಹ್ಯವುಳ್ಳ ಹುಣಸೂರು ತಾಲ್ಲೂಕಿನ ರಾಮೇನಹಳ್ಳಿ ಬೆಟ್ಟದ ಮೇಲಿನ ಚೋಳರ ಕಾಲದ ಓಂಕಾರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.೨೭ರಿಂದ ಮಾ.೨ರವರೆಗೆ ನಡೆಯಲಿದೆ.

ಲಕ್ಷ್ಮಣತೀರ್ಥ ನದಿ ದಂಡೆಯ ಬೆಟ್ಟದ ಮೇಲಿನ ದೇವಾಲಯದಲ್ಲಿ ಅನಾದಿ ಕಾಲದಿಂದಲೂ ಪ್ರತಿ ಶಿವರಾತ್ರಿ ಹಬ್ಬದಂದು ಇಡೀ ರಾತ್ರಿ ಜಾಗರಣೆ, ಮರುದಿನ ಬೆಳಿಗ್ಗೆ ಬೆಟ್ಟದ ಬುಡದಲ್ಲಿ ರಥೋತ್ಸವ ನಡೆಯಲಿದೆ.

ಇತ್ತೀಚೆಗಷ್ಟೆ ದಾನಿಗಳ ನೆರವಿನಿಂದ ಒಂದೂವರೆ ಕೋಟಿ ರೂ. ವೆಚ್ಚದ ಭವ್ಯ ದೇಗುಲ ನಿರ್ಮಾಣಗೊಂಡಿದೆ. ದೇಗುಲದ ಮುಂಭಾಗದಲ್ಲಿ ಬಂಡೆಕಲ್ಲುಗಳಿಂದಲೇ ತಡೆಗೋಡೆ ನಿರ್ಮಿಸಿದ್ದು, ಇದರ ಮೇಲೆ ವಿಶಾಲ ಆವರಣ ಸುಂದರವಾಗಿ ಕಾಣುತ್ತಿದೆ. ಕುಡಿಯುವ ನೀರು, ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ.

೫೦೦ ಮೆಟ್ಟಿಲುಗಳು: ೪೨೬ ಎಕರೆ ವಿಸ್ತೀರ್ಣ ಹೊಂದಿರುವ ಬೆಟ್ಟವು ದೊಡ್ಡಬಂಡೆ ಕಲ್ಲುಗಳಿಂದ ಆವೃತವಾಗಿದ್ದು, ೫೦೦ ಮೆಟ್ಟಿಲುಗಳಿವೆ. ಹರಕೆ ಹೊತ್ತವರು ಮತ್ತು ದಾನಿಗಳ ನೆರವಿನಿಂದ ಚಪ್ಪಡಿ ಕಲ್ಲು ಹಾಸಿನ ಮೆಟ್ಟಿಲು ನಿರ್ಮಿಸಲಾಗಿದೆ. ಪಕ್ಕದಲ್ಲಿ ದೇವಸ್ಥಾನದವರೆಗೂ ಸುಸಜ್ಜಿತ ರಸ್ತೆ ನಿರ್ಮಾಣವಾಗಿದೆ.

ಜಾತ್ರೆಯ ಹಿಗ್ಗು: ಊರ ಜನರೆಲ್ಲಾ ಹೊಸ ಬಟ್ಟೆ ಧರಿಸುತ್ತಾರೆ. ವಾರ ಕಾಲ ಮಾಂಸದ ಅಡುಗೆ ಮಾಡುವಂತಿಲ್ಲ. ಜನರು ಜಾತಿ ಭೇದ ಮರೆತು ಒಗ್ಗೂಡುತ್ತಾರೆ. ಗ್ರಾಮಸ್ಥರು ಪ್ರತಿ ವರ್ಷ ಮನೆಗೆ ಸುಣ್ಣ-ಬಣ್ಣ ಹಚ್ಚುತ್ತಾರೆ. ಮಡಕೆ ತೆಗೆಯುತ್ತಾರೆ. ಶಿವರಾತ್ರಿಯಂದು ಸುತ್ತಮುತ್ತಲ ಗ್ರಾಮಸ್ಥರು ಬೆಟ್ಟದ ಮೇಲೆ ವಿಶೇಷ ಪೂಜೆ ಸಲ್ಲಿಸಿ, ಕಳಶ ಸ್ಥಾಪಿಸಿ ಬೆಳಗಿನ ಜಾವದವರೆಗೂ ಜಾಗರಣೆ ಮಾಡುತ್ತಾರೆ. ಮರುದಿನ ರಥೋತ್ಸವ, ಅದೇ ದಿನ ಹರಕೆ ಹೊತ್ತವರು, ಗ್ರಾಮಸ್ಥರು ಲಕ್ಷ್ಮಣತೀರ್ಥ ನದಿಯಲ್ಲಿ ಮಿಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಮುಡಿ ಕೊಟ್ಟು ಬಾಯಿ ಬೀಗ, ಉರುಳು ಸೇವೆ ಸಲ್ಲಿಸುತ್ತಾರೆ. ದನಗಳ ಕಾಯಿಲೆಗೆ ಹರಕೆ ಹೊತ್ತವರು ಹರಕೆ ತೀರಿಸುತ್ತಾರೆ.

ಪಾರಟೋತ್ಸವದಂದು ಬೆಟ್ಟದ ಕೆಳಗಿರುವ ದೇವರ ಮಂಟಪಕ್ಕೆ ಉತ್ಸವ ಮೂರ್ತಿಯನ್ನು ಹೊತ್ತು ತಂದು ತೊಟ್ಟಿಲಲ್ಲಿರಿಸಿ ತೂಗುತ್ತಾರೆ. ರಥೋತ್ಸವದಂದು ಬೆಟ್ಟದ ಕೆಳಗಿನ ವಿಶಾಲ ಪ್ರದೇಶದಲ್ಲಿ ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರಿಗೆ ಸಮಿತಿ ವತಿಯಿಂದ ಅನ್ನದಾಸೋಹ ವ್ಯವಸ್ಥೆ ಇರಲಿದೆ. ಹಲವಾರು ವರ್ಷಗಳಿಂದ ನಡೆಯುವ ಜಾನುವಾರುಗಳ ಜಾತ್ರೆಯು ಕಳೆ ಕಟ್ಟುತ್ತ ಬಂದಿದೆ. ಉತ್ತಮ ರಾಸುಗಳಿಗೆ ಬಹುಮಾನ ನೀಡುವ ಪದ್ಧತಿಯೂ ಇದೆ.

ಯಾವ ದಿನ, ಏನೇನು?: 

ಫೆ.೨೬ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸ್ವಾಮಿಗೆ ನಾನಾ ಕಳಶ ಪೂಜೆ ಹಾಗೂ ರಾತ್ರಿ ೯.೦೫ರಿಂದ ಬೆಳಿಗ್ಗೆ ೬.೩೦ರವರೆಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಜಾಗರಣೋತ್ಸವ ನಡೆಯಲಿದೆ. -.೨೭ರಂದು ಬೆಳಿಗ್ಗೆ ೯ರಿಂದ ೯.೩೦ರವರೆಗೆ ಓಂಕಾರೇಶ್ವರ ಸ್ವಾಮಿ ರಥೋತ್ಸವ ಹಾಗೂ ಭಕ್ತಾದಿಗಳಿಂದ ಬಾಯಿಬೀಗ, ತಲೆ ಮುಡಿ ಹರಕೆ ಕಾರ್ಯ, ಸಂಜೆ ೫.೩೦ಕ್ಕೆ ರಥವನ್ನು ಸ್ವಸ್ಥಾನಕ್ಕೆ ತರುವುದು. ಮಧ್ಯಾಹ್ನದಿಂದ ಸಂಜೆ ೬ರವರೆಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಮಾ.೧ರಂದು ಸಂಜೆ ೪.೩೦ಕ್ಕೆ ಪಾರಟೋತ್ಸವ, ಮಾ. ೨ರ ಸಂಜೆ ೪.೩೦ರಿಂದ ೮.೩೦ರವರೆಗೆ ರಾಮೇನಳ್ಳಿಯಲ್ಲಿ ಸ್ವಾಮಿಯ ಮೆರವಣಿಗೆ ನಂತರ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಮಾ.೨ರವರೆಗೆ ದನಗಳ ಜಾತ್ರೆ ಸಹ ಇರಲಿದೆ ಎಂದು ಸಮಿತಿ ಅಧ್ಯಕ್ಷ ಶಿವಾನಂದ ತಿಳಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್‌ ಟ್ರೋಫಿಗೆ ಚಾಲನೆ

ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ…

1 hour ago

ಹಲವು ಹೊಸ ದಾಖಲೆಗಳಿಗೆ ಷರಾ ಬರೆದ 2025

ಗಿರೀಶ್‌ ಹುಣಸೂರು  ೨೦೨೫ನೇ ಸಾಲಿನಲ್ಲಿ ದೇಶ, ರಾಜ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ೧೮…

1 hour ago

ಸಫಾರಿ ನಿರ್ಬಂಧ: ಮೈಸೂರಿನತ್ತ ಪ್ರವಾಸಿಗರ ದಂಡು

ಕೆ.ಬಿ.ರಮೇಶನಾಯಕ ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್,…

1 hour ago

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

9 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

14 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

14 hours ago