ಹನೂರು: ತಾಲ್ಲೂಕಿನ ರಾಮಾಪುರ ಪೊಲೀಸ್ ಠಾಣೆಯಲ್ಲಿ ಕಾಡುಗಳ್ಳ ವೀರಪ್ಪನ್ ವಿರುದ್ಧ ಹೋರಾಡಿ ಮಡಿದ ಐವರು ಪೊಲೀಸರ ಸ್ಮಾರಕ ನಿರ್ಮಿಸಲು ನಾಲ್ಕು ವರ್ಷಗಳ ಹಿಂದೆ ಪೊಲೀಸ್ ಮಹಾನಿರ್ದೇಶಕರು ಒಪ್ಪಿಗೆ ಸೂಚಿಸಿದ್ದರೂ ಇದುವರೆಗೂ ಸ್ಮಾರಕ ನಿರ್ಮಾಣ ಮಾಡಿಲ್ಲ.
ರಾಮಾಪುರ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ವೀರಪ್ಪನ್ ಹಾಗೂ ಆತನ ಸಹಚರರು 1992ರ ಮೇ 21ರ ಮಧ್ಯರಾತ್ರಿ ಗುಂಡಿನ ಮಳೆಗೆರೆದು ಹತ್ಯೆ ಮಾಡಿ ಠಾಣೆಯಲ್ಲಿದ್ದ ಶಸ್ತ್ರಾಸ್ತ್ರ ಹೊತ್ತೊಯ್ದಿದ್ದರು. ಈ ಗುಂಡಿನ ಕಾಳಗದಲ್ಲಿ ಇಳಂಗೋವನ್, ಗೋವಿಂದರಾಜು, ಸಿದ್ದರಾಜು, ರಾಚಪ್ಪ, ಪ್ರೇಮ್ ಕುಮಾರ್ ಎಂಬ ಪೊಲೀಸರು ಬಲಿಯಾಗಿದ್ದರು.
ರಾಮಾಪುರದ ಹಳೆಯ ಪೊಲೀಸ್ ಠಾಣೆಯ ಶಿಥಿಲ ಕಟ್ಟಡವು ಈಗಲೂ ವೀರಪ್ಪನ್‌ನ ಕ್ರೌರ್ಯದ ದಿನಗಳನ್ನು ನೆನಪಿಸುತ್ತಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್‌ರವರು 2020ರ ಫೆ.11ರಂದು ರಾಮಾಪುರ ಠಾಣೆಗೆ ಭೇಟಿ ನೀಡಿ ಹತ್ಯೆಯಾಗಿದ್ದ ಪೊಲೀಸರನ್ನು ನೆನೆದು ಮರುಗಿದ್ದರು. ಇದಲ್ಲದೆ ವೀರಪ್ಪನ್ ವಿರುದ್ಧ ಹೋರಾಡಿ ಮಡಿದ ಆ ಪೊಲೀಸರ ನೆನಪು ಜೀವಂತವಾಗಿರಬೇಕು ಎಂಬ ಕಾರಣಕ್ಕೆ ಠಾಣೆಯ ಆವರಣದಲ್ಲಿ ಐದು ಮಂದಿ ಪೊಲೀಸರ ನೆನಪಿನ ಸ್ಮಾರಕ ನಿರ್ಮಿಸಲು ಜಿಲ್ಲಾಡಳಿತಕ್ಕೂ ಅವರು ಸೂಚನೆ ನೀಡಿದ್ದರು.
ಅಲ್ಲದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಅವರಿಗೆ ಸುರೇಶ್ ಕುಮಾರ್‌ರವರು ಹುತಾತ್ಮ ಪೊಲೀಸರ ಬಗ್ಗೆ ಪತ್ರ ಬರೆದು, ಸ್ಮಾರಕ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ತಿಳಿಸಿದ್ದರು. ಅವರು ಪತ್ರ ಬರೆದು ನಾಲ್ಕು ವರ್ಷಗಳು ಕಳೆದಿದ್ದರೂ ಈವರೆಗೂ ಸ್ಮಾರಕ ನಿರ್ಮಾಣ ಮಾಡದೇ ಇರುವುದು ವೀರಪ್ಪನ್ ದಾಳಿಗೆ ಪ್ರಾಣ ತ್ಯಾಗ ಮಾಡಿದವರ ಕುಟುಂಬಸ್ಥರಿಗೆ ನೋವನ್ನುಂಟು ಮಾಡಿದೆ.
ಪಿ.ಶ್ರೀನಿವಾಸ್ ರವರಿಗೆ ನೆನಪಿನ ಸಾರಕ: 1991ರ ನವೆಂಬರ್‌ನಲ್ಲಿ ವೀರಪ್ಪನನ್ನು ಮನವೊಲಿಸಲು ಹೋಗಿದ್ದ ಡಿಸಿಎಫ್ ಪಿ.ಶ್ರೀನಿವಾಸ್ ರವರ ತಲೆಯನ್ನು ವೀರಪ್ಪನ್ ಕತ್ತರಿಸಿದ್ದನು. ಇವರ ನೆನಪಿಗಾಗಿ ಸ್ಥಾರಕ ನಿರ್ಮಾಣ
ಮಾಡಲಾಗಿದೆ.
1992ರ ಆಗಸ್ಟ್ 14ರಂದು ಮೀಣ್ಯಂ ಬಳಿಯ ಬೂದಿಕೆರೆ ಹಳ್ಳದಲ್ಲಿ ವೀರಪ್ಪನ್ ಸೆರೆ ಕಾರ್ಯಾಚರಣೆಗೆ ಹೋದ ಎಸ್ ಪಿ ಹರಿಕೃಷ್ಣ, ಎಸ್‌ಐ ಶಕೀಲ್ ಅಹಮದ್, ಎಎಸ್‌ಐ ಬೆನಗೂಂಡ, ಪೊಲೀಸರಾದ ಅಪ್ಪಚ್ಚು, ಕಾಳಪ್ಪ, ಸುಂದರ ಅವರನ್ನು ಹತ್ಯೆ ಮಾಡಿದ್ದನು. ಇವರ ನೆನಪಿಗಾಗಿಯೂ ದಿನ್ನಳ್ಳಿ-ಮೀಣ್ಯಂ ಮಾರ್ಗ ಮಧ್ಯದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಆದರೆ ರಾಮಾಪುರ ಪೊಲೀಸ್ ಠಾಣೆ ಮುಂಭಾಗ ಸ್ಮಾರಕ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾಗಿಲ್ಲ. ಈಗಲಾದರೂ ವೀರಪ್ಪನ್ ದಾಳಿಯಲ್ಲಿ ಬಲಿಯಾದ ಐವರು ಪೊಲೀಸರಿಗೆ ಸ್ಮಾರಕ ನಿರ್ಮಾಣ ಮಾಡುವಂತೆ ಘಟನೆಯಲ್ಲಿ ಮೃತಪಟ್ಟ ಪೊಲೀಸರ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಸ್ಮಾರಕ ಮಾಡಲು ಎಡಿಜಿಪಿರವರು ಒಪ್ಪಿಗೆ ಸೂಚಿಸಿದ್ದರು. ಯಾವ ಕಾರಣದಿಂದ ಸ್ಮಾರಕ ನಿರ್ಮಾಣ ಮಾಡಲು ತೊಂದರೆಯಾಗಿದೆ ಎಂಬುದು ತಿಳಿದಿಲ್ಲ. ಸಂಬಂಧಪಟ್ಟವರ ಜೊತೆ ಚರ್ಚಿಸಿ ಸ್ಮಾರಕ ನಿರ್ಮಾಣ ಮಾಡಲು ಚರ್ಚೆ ನಡೆಸುತ್ತೇನೆ.
-ಎಸ್.ಸುರೇಶ್ ಕುಮಾರ್, ಮಾಜಿ ಸಚಿವರು
ರಾಮಾಪುರ ಪೊಲೀಸ್ ಠಾಣೆ ಮುಂಭಾಗ ಸ್ಮಾರಕ ನಿರ್ಮಾಣ ಮಾಡುವ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ.
-ಪದ್ದಿನಿ ಸಾಹು, ಎಸ್ ಪಿ
ಕರ್ತವ್ಯದ ವೇಳೆ ವೀರ ಮರಣ ಹೊಂದಿದ ನಮ್ಮ ತಂದೆಯವರ ಸ್ಮಾರಕ ನಿರ್ಮಾಣವಾಗುತ್ತದೆ ಎಂದು ಭಾವಿಸಿದ್ದೆವು. ಆದರೆ ಇದುವರೆಗೂ ಸ್ಮಾರಕ ನಿರ್ಮಾಣವಾಗದೇ ಇರುವುದು ನೋವನ್ನುಂಟು ಮಾಡಿದೆ.
-ನಂದೀಶ್, ಮೃತ ಪೊಲೀಸ್ ಪೇದೆ ರಾಚಪ್ಪನವರ ಪುತ್ರ
ಬೆಂಗಳೂರು: ನಾನು ನನ್ನ ವಾಚ್ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಎಲ್ಲಾ ನೀಡಿದ್ದೇನೆ. ನಾನು ಈ ವಿಚಾರದಲ್ಲಿ…
ಮೈಸೂರು: ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.…
ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಆರೋಪಿಯಾಗಿ ಜೈಲಿನಲ್ಲಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಜಾಮೀನು ಸಿಕ್ಕಿ…
ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್‍ಗಳಷ್ಟು…
ಮಂಡ್ಯ: ಲ್ಯಾಬ್ ಟು ಲ್ಯಾಂಡ್ ಆದರೆ ಮಾತ್ರ ರೈತರಿಗೆ ಸಂಪೂರ್ಣ ಅನುಕೂಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಕುರಿತು…