ಕೆ.ಬಿ.ರಮೇಶನಾಯಕ
ದೇಶದಲ್ಲೇ ಹಲವು ಏಳು-ಬೀಳುಗಳು, ಸ್ಥಿತ್ಯಂತರವನ್ನು ಕಂಡ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಮುಖ್ಯಮಂತ್ರಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ್ದ ಡಿ.ದೇವರಾಜ ಅರಸು ನಂತರ, ಸಿದ್ದರಾಮಯ್ಯ ಅತಿ ಹೆಚ್ಚಿನ ದಿನಗಳು ಆಡಳಿತ ನಡೆಸಿದ ರಾಜ್ಯದ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸು ಅವರು ದೀರ್ಘಾವಧಿ ಸಿಎಂ ಆಗಿ ಅಧಿಕಾರ ನಡೆಸಿದ ನಂತರ ಇದೇ ಜಿಲ್ಲೆಯ ಮತ್ತೊಬ್ಬ ಅಹಿಂದ ನಾಯಕ ಸಿದ್ದರಾಮಯ್ಯ ಅವರು ದೀರ್ಘಾವಧಿ ಸಿಎಂ ಆಗಿ ದಾಖಲೆ ಬರೆದಿದ್ದಾರೆ. ಈ ಮೂಲಕ ನಾಡಿಗೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಮೈಸೂರು ಜಿಲ್ಲೆಯ ಖ್ಯಾತಿಯೂ ವಿಶೇಷ ಸಂಗತಿಯಾಗಿ ಉಳಿಯಲಿದೆ.
ಡಿ.ದೇವರಾಜ ಅರಸು ಅವರು ಎರಡು ಅವಧಿಗೆ ಸಿಎಂ ಆಗಿ ೨,೭೯೨ ದಿನಗಳ ಕಾಲ ಆಡಳಿತ ನಡೆಸಿದ್ದರು. ಸಿದ್ದರಾಮಯ್ಯ ಅವರು ಜ.೬ಕ್ಕೆ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅರಸು ಮನೆತನಕ್ಕೆ ಸೇರಿದ ಡಿ.ದೇವರಾಜ ಅರಸರು ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ೧೯೭೨ರ ಮಾರ್ಚ್ ೨೦ರಂದು ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದರು.
ಅಂದು ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಕರ್ನಾಟಕದಲ್ಲಿ ೨೦ ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತರುವ ಜತೆಗೆ, ಮಲಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿಷೇಧ, ಉಳುವವನೇ ಭೂ ಒಡೆಯ ಕಾಯ್ದೆ ಜಾರಿ ಮುಂತಾದ ಕ್ರಾಂತಿಕಾರಕ ಯೋಜನೆಗಳನ್ನು ಕೊಡುವ ಮೂಲಕ ನಾಡಿನ ಜನರ ಮನದಲ್ಲಿ ಶಾಶ್ವತವಾಗಿ ಉಳಿದರು. ಇದರ ಫಲವಾಗಿಯೇ ೧೯೭೮ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದ್ದರಿಂದ ಫೆಬ್ರವರಿ ೨೮ರಂದು ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ ೧೯೮೦ರ ಜನವರಿ ತಿಂಗಳ ೧೨ರವರೆಗೆ ಅಧಿಕಾರದಲ್ಲಿದ್ದರು. ಈ ಎರಡೂ ಅವಧಿಗಳಿಂದ ಒಟ್ಟು ೨,೭೯೨ ದಿನಗಳ ಕಾಲ ಅರಸರು ಮುಖ್ಯಮಂತ್ರಿ ಪದವಿ ಅಲಂಕರಿಸಿದ್ದ ಕೀರ್ತಿ ಹೊಂದಿದ್ದರು.
ಇವರ ನಂತರ ಕರ್ನಾಟಕದಲ್ಲಿ ಮತ್ತೊಬ್ಬ ಅಹಿಂದ ವರ್ಗದ ನಾಯಕ ಎನ್ನುವ ಖ್ಯಾತಿ ಹೊಂದಿರುವ ಸಿದ್ದರಾಮಯ್ಯ ಅವರು ೨೦೧೩ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಿಚ್ಚಳ ಬಹುಮತ ಸಾಧಿಸಿದ್ದರಿಂದ ಮೇ ೧೩ರಂದು ಮೊದಲ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ೫ ವರ್ಷ ನಾಲ್ಕು ದಿನಗಳು ಆಡಳಿತ ನಡೆಸಿದರು. ನಂತರ, ೨೦೧೮ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾಭವಗೊಂಡರೂ ಬಾದಾಮಿ ಕ್ಷೇತ್ರದಿಂದ ಆಯ್ಕೆಯಾದರು. ಆದರೆ, ಸರ್ಕಾರ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದರಿಂದ ವಿಧಾನಸಭೆ ಪ್ರತಿಪಕ್ಷದ ನಾಯಕರಾದರು. ೨೦೨೩ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗಳಿಸಿದ್ದರಿಂದ ೨೦೨೩ರ ಮೇ ೨೦ರಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಜ.೬ಕ್ಕೆ ೨,೭೯೨ ದಿನಗಳನ್ನು ಸರಿಗಟ್ಟಿದ್ದಾರೆ. ಈ ಮೂಲಕ ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮತ್ತೊಬ್ಬ ಶೋಷಿತ ಸಮುದಾಯದ ನಾಯಕ ಅರಸು ಆಡಳಿತದ ಸುದೀರ್ಘ ದಿನಗಳನ್ನು ದಾಟಿ ದಾಖಲೆ ಬರೆದಿರುವುದು ಗಮನಾರ್ಹವಾಗಿದೆ.
ನಾಲ್ಕು ದಶಕಗಳ ಕಾಲದ ಸುದೀರ್ಘ ಅಧಿಕಾರ ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿ ಗ್ರಾಮದ ಸಿದ್ದರಾಮಯ್ಯ ನಾಲ್ಕು ದಶಕಗಳಿಂದ ರಾಜಕೀಯ ಕ್ಷೇತ್ರದ ಸುದೀರ್ಘ ಅನುಭವ ಹೊಂದಿದ ಕೀರ್ತಿಗೂ ಪಾತ್ರರಾಗಿದ್ದಾರೆ. ೧೯೮೩ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ನಂತರ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ರಾಮ ಕೃಷ್ಣ ಹೆಗಡೆ ಸಂಪುಟದಲ್ಲಿ ರೇಷ್ಮೆ, ಪಶುಸಂಗೋಪನಾ ಸಚಿವರಾಗಿ, ಎಸ್. ಆರ್.ಬೊಮ್ಮಾಯಿ ಅವರ ಸರ್ಕಾರದಲ್ಲಿ ಸಚಿವರಾಗಿ, ಎಚ್.ಡಿ.ದೇವೇಗೌಡ ಅವರು ಸಿಎಂ ಆಗಿದ್ದಾಗ ಹಣಕಾಸು ಸಚಿವರಾಗಿದ್ದರು. ಜೆ.ಎಚ್.ಪಟೇಲ್ ಅವರು ಸಿಎಂ ಆಗಿದ್ದಾಗ ಉಪಮುಖ್ಯಮಂತ್ರಿಯಾಗಿದ್ದರು. ಸಿಎಂ ಸ್ಥಾನ ಸಿಗದಿದ್ದ ಹಿನ್ನೆಲೆಯಲ್ಲಿ ಸಿಡಿದು ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ೨೦೦೮ರಲ್ಲಿ ವರುಣ ಕ್ಷೇತ್ರದಿಂದ ಆಯ್ಕೆಯಾಗಿ ೨೦೦೯ರಲ್ಲಿ ಪ್ರತಿಪಕ್ಷ ನಾಯಕರಾದರು. ೨೦೧೩ರಲ್ಲಿ ಸಿಎಂ ಆಗಿದ್ದರೆ, ೨೦೧೮ರಿಂದ ೨೦೨೩ರವರೆಗೆ ಮತ್ತೆ ಪ್ರತಿಪಕ್ಷ ನಾಯಕನಾಗಿದ್ದರು. ೨೦೨೩ರಲ್ಲಿ ಎರಡನೇ ಬಾರಿಗೆ ಸಿಎಂ ಆಗಿರುವ ಸಿಎಂ ಅವರು ಅತಿ ಹೆಚ್ಚು ದಿನಗಳ ಕಾಲ ಸಿಎಂ ಆಗಿರುವ ದಾಖಲೆ ಜತೆಗೆ,ಅತಿ ಹೆಚ್ಚು ದಿನಗಳ ಪ್ರತಿಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಂಜನಗೂಡು : ಅಪ್ರಾಪ್ತೆಯ ಹಿಂದೆ ಬಿದ್ದು ಪ್ರೀತಿಗೆ ಒತ್ತಾಯಿಸಿ ಮದುವೆ ಆಗುವಂತೆ ಪೀಡಿಸಿ ಮಾನಸಿಕ ಕಿರುಕುಳ ನೀಡಿದ ಹಿನ್ನಲೆ ವಿಧ್ಯಾರ್ಥಿನಿ…
ಮೈಸೂರು : ನಾನು ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ರಾಷ್ಟ್ರ ಮಟ್ಟಕ್ಕೆ ಹೋಗಲಿಲ್ಲ ಅಂದ್ರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಆಗುತ್ತಾ?…
ಮೈಸೂರು : ರಾಜ್ಯದಲ್ಲಿ ಸರಿಯಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳು ಹೇಗೆಲ್ಲಾ ಅನುಷ್ಠಾನ…
ಮೈಸೂರು : ರಂಗಾಯಣದ ಮಹತ್ವಾಕಾಂಕ್ಷೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ‘ಬಾಬಾ ಸಾಹೇಬ್-ಸಮತೆಯೆಡೆಗೆ ನಡಿಗೆ’ ಆಶಯದಡಿ ಜ.11 ರಿಂದ…
ಮೈಸೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ನಿನ್ನೆ(ಜ.6) ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಸಂಸದ ಪ್ರತಾಪ್…
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸುತ್ತಿಗೆ ಹಿಡಿದುಕೊಂಡು ಕೂತಿದೆ. ಯಾವಾಗ ಹೊಡೆಯುತ್ತದೆಯೋ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು…