Andolana originals

ಸ್ವಚ್ಛತೆಗೆ ಮೈಸೂರಿನ ಮಾರ್ಗದರ್ಶನ!

ಕೆ.ಬಿ.ರಮೇಶನಾಯಕ

ರಾಯಚೂರು, ಮಸ್ಕಿ ತಂಡಗಳಿಗೆ ತರಬೇತಿ; ಸ್ವಚ್ಛ ಶೆಹರ್ ಯೋಜನೆಯಡಿ ಒಡಂಬಡಿಕೆ

ಮೈಸೂರು: ಸ್ವಚ್ಛತೆಯಲ್ಲಿ ಹಲವು ಬಾರಿ ದೇಶದ ಗಮನ ಸೆಳೆದಿರುವ ಅರಮನೆಗಳ ನಗರಿ ಮೈಸೂರು ಇದೀಗ ಸ್ವಚ್ಛತೆಯ ವಿಚಾರದಲ್ಲಿ ಮಾರ್ಗ ದರ್ಶಕ ಜವಾಬ್ದಾರಿಯನ್ನೂ ವಹಿಸಿಕೊಂಡು ರಾಜ್ಯದ ಗಮನ ಸೆಳೆದಿದ್ದು, ಈ ಬಾರಿ ರಾಯಚೂರು ನಗರ ಹಾಗೂ ಮಸ್ಕಿ ಪಟ್ಟಣವು ಸ್ವಚ್ಛ ಸರ್ವೇಕ್ಷಣೆಯಲ್ಲಿಮೈಸೂರಿನ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತಿರುವುದು ಗಮನಾರ್ಹವಾಗಿದೆ.

ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರಿನ ಮಾದರಿಯಲ್ಲಿಯೇ ರಾಯಚೂರು ಮಹಾನಗರ ಪಾಲಿಕೆ ಹಾಗೂ ಮಸ್ಕಿ ಪಟ್ಟಣ ಪಂಚಾಯಿತಿಗಮನ ಸೆಳೆಯುವ ಉದ್ದೇಶ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸ್ವಚ್ಛ ಶೆಹರ್ ಯೋಜನೆಯಡಿ ಈ ನಗರ, ಪಟ್ಟಣವು ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.

ಇದರಿಂದಾಗಿ ಈ ಬಾರಿ ಮೈಸೂರು ಸ್ವಚ್ಛ ನಗರಿಯಲ್ಲಿ ಮೈಸೂರಿನ ಕೀರ್ತಿ ಹೊಂದಲು ಆದ್ಯತೆ ಕೊಡುವುದರ ಜತೆಗೆ, ಮಾರ್ಗದರ್ಶನ ನೀಡುವ ಎರಡೂ ನಗರಗಳಿಗೆ ಪಾಠ ಮಾಡಲಿದೆ.

ಏನಿದು ಒಡಂಬಡಿಕೆ?: ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆ ತೋರಲು ಕೇವಲ ನಗರವನ್ನು ಶುಚಿಯಾಗಿಟ್ಟುಕೊಂಡರೆ ಮಾತ್ರ ಸಾಲದು. ಇದರ ಜತೆಗೆ ಕೇಂದ್ರ ಸರ್ಕಾರ ನೀಡುವ ನಿರ್ದೇಶನದ ಪ್ರಕಾರ ಹಲವಾರು ಮಾನದಂಡಗಳನ್ನು ಪೂರೈಸಬೇಕು. ಅಲ್ಲದೆ, ಹಲವು ದಾಖಲೆಗಳನ್ನುಸಿದ್ಧಪಡಿಸಬೇಕು ಹಾಗೂ ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸಬೇಕು. ಈ ವಿಚಾರದಲ್ಲಿ ಅಪಾರ ಅನುಭವ ಹೊಂದಿರುವ ಮೈಸೂರು ನಗರದ ಮಾರ್ಗದರ್ಶನವನ್ನು ರಾಯಚೂರು ನಗರ ಹಾಗೂ ಮಸ್ಕಿ ಪಡೆಯಲು ಪ್ರಾರಂಭಿಸಿದೆ.

ಒಡಂಬಡಿಕೆಯ ಭಾಗವಾಗಿ ಮೈಸೂರು ತನ್ನ ಉತ್ತಮ ಸ್ವಚ್ಛತಾ ಪದ್ಧತಿಗಳು, ತಾಂತ್ರಿಕ ಮಾರ್ಗದರ್ಶನ, ತ್ಯಾಜ್ಯ ನಿರ್ವಹಣಾ ವಿಧಾನಗಳು ಹಾಗೂ ಐಇಸಿ ಚಟುವಟಿಕೆಗಳ ಅನುಭವವನ್ನು ರಾಯಚೂರು ಮತ್ತು ಮಸ್ಕಿಯೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದೆ. ಈ ಮೂಲಕ ಈ ನಗರಗಳ ಸ್ವಚ್ಛತಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ.

ಮೈಸೂರಿನಲ್ಲಿ ತರಬೇತಿ: ಯೋಜನೆಯ ಭಾಗವಾಗಿ ಇತ್ತೀಚೆಗೆ ರಾಯಚೂರು ಮಹಾನಗರ ಪಾಲಿಕೆಯ ತಂಡ ನಗರಕ್ಕೆ ಭೇಟಿ ನೀಡಿ ಎರಡು ದಿನಗಳ ತರಬೇತಿ ಪಡೆಯಿತು. ಈ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ, ಸ್ವಚ್ಛ ಸರ್ವೇಕ್ಷಣ ಸರ್ವೇಯಲ್ಲಿ ನಿರ್ವಹಿಸಬೇಕಾದ ವಿಷಯಗಳ ಚರ್ಚಿಸಲಾಯಿತು.

ಸ್ವಚ್ಛ ಸರ್ವೇಕ್ಷಣೆಗೆ ಸಜ್ಜು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆಗೆ ಪ್ರತಿ ವರ್ಷ ಭಿನ್ನವಾದ ಪರಿಕಲ್ಪನೆ ನೀಡಿ ಅಂಕಗಳನ್ನು ನಿಗದಿಪಡಿಸಲಾಗುತ್ತದೆ.ಅಂಕಗಳನ್ನು ಈ ನೂತನ ಪರಿಕಲ್ಪನೆಗೆ ಪೂರಕವಾಗಿ  ಬದಲಾವಣೆ ಮಾಡಲಾಗುತ್ತದೆ. ಹಾಗಾಗಿ ಪ್ರತಿ ಬಾರಿ ನಗರವನ್ನು ಶುಚಿಯಾಗಿಡುವ ದೈನಂದಿನ ಕಾರ್ಯದ ಜತೆಗೆ ಕೇಂದ್ರ ಸರ್ಕಾರ ನೀಡುವ ನೂತನ ಪರಿಕಲ್ಪನೆಗೆ ಪೂರಕವಾಗಿ ನಗರವನ್ನು ಸ್ವಚ್ಛತೆಯಲ್ಲಿ ಸಜ್ಜುಗೊಳಿಸಬೇಕಾಗುತ್ತದೆ.

ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯ ಅಂಕಗಳನ್ನು ೯,೫೦೦ ನಿಂದ ೧೨,೫೦೦ಕ್ಕೆ ಏರಿಕೆ ಮಾಡಿ ಹಲವಾರು ಮಾರ್ಪಾಡುಗಳನ್ನು ಮಾಡಲಾಗಿತ್ತು. ಈ ಮಾರ್ಪಾಡಿಗೆ ತಕ್ಕಹಾಗೆ ನಗರವನ್ನು ಸಜ್ಜುಗೊಳಿಸಲಾಗಿತ್ತು. ಇದರ ಪರಿಣಾಮ ಕಳೆದ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ಯನ್ನು ಮೈಸೂರು ನಗರ ಪಡೆದುಕೊಂಡಿತ್ತು. ಈ ಪ್ರಶಸ್ತಿಯನ್ನು ಪಡೆದ ದೇಶದ ಕೆಲವೇ ಕೆಲವು ನಗರಗಳ ಪೈಕಿ ಮೈಸೂರು ಕೂಡ ಒಂದಾಗಿದೆ. ಕಳೆದ ಬಾರಿ ರೆಡ್ಯೂಸ್ (ಕಡಿಮೆ ಮಾಡು), ರೀಯೂಸ್ (ಮರುಬಳಕೆ) ಮತ್ತು ರೀಸೈಕಲ್ (ಪುನರ್ಬಳಕೆ) ಪರಿಕಲ್ಪನೆಯಡಿ ಸ್ವಚ್ಛ ಸರ್ವೇಕ್ಷಣೆ ನಡೆದಿತ್ತು. ಈ ಬಾರಿ ೨೦೨೫ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯ ಟೂಲ್‌ಕಿಟ್ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಆ ಟೂಲ್ ಕಿಟ್‌ನಲ್ಲಿ ನೀಡುವ ಥೀಮ್ ಅಡಿಯಲ್ಲಿ ನಗರವನ್ನು ಸಜ್ಜುಗೊಳಿಸುವ ಅವಶ್ಯವಿದೆ.

ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ: ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ೨೦೧೫, ೨೦೧೬ರಲ್ಲಿ ದೇಶದ ನಂ.೧ ಸ್ವಚ್ಛ ನಗರಿಯಾಗಿ ಹೊರ ಹೊಮ್ಮಿತ್ತು. ಆ ನಂತರ ೨೦೧೭ರಲ್ಲಿ ೫ನೇ ಸ್ಥಾನ, ೨೦೧೮ರಲ್ಲಿ ೮, ೨೦೧೯ರಲ್ಲಿ ೩, ೨೦೨೦ರಲ್ಲಿ ೫, ೨೦೨೧ರಲ್ಲಿ ೧೧, ೨೦೨೨ರಲ್ಲಿ ೮, ೨೦೨೩ರಲ್ಲಿ ೨೭ನೇ ಸ್ಥಾನ ಪಡೆದಿತ್ತು. ೨೦೨೪ರಲ್ಲಿ ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ ಪಡೆದ ನಗರಗಳನ್ನು ರ‍್ಯಾಂಕಿಂಗ್‌ನಿಂದ ಹೊರಗಿಡಲಾಗಿತ್ತು. ‘ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ’ಯು ರ‍್ಯಾಂಕಿಂಗ್‌ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಇದರ ಜತೆಗೆ ನಗರವು ಸ್ವಚ್ಛತೆಯಲ್ಲಿ ಹಲವಾರು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ.

” ಸ್ವಚ್ಛ ಶೆಹರ್ ಯೋಜನೆಯಡಿ ರಾಯಚೂರು ಮಹಾನಗರ ಪಾಲಿಕೆ ಹಾಗೂ ಮಸ್ಕಿ ಪಟ್ಟ  ಪಂಚಾಯಿತಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಈ ನಗರಗಳನ್ನು ಸ್ವಚ್ಛ ಸರ್ವೇಕ್ಷಣೆಗೆ ಸಜ್ಜುಗೊಳಿಸುವ ವಿಚಾರದಲ್ಲಿ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ.ಸ್ವಚ್ಛತೆಯಲ್ಲಿ ನಾವು ಅನುಸರಿಸುತ್ತಿರುವ ಪದ್ಧತಿಗಳ ಕುರಿತು ಅವರಿಗೆ ಮಾಹಿತಿ ನೀಡಲಾಗುತ್ತಿದೆ. ಸ್ವಚ್ಛ ಸರ್ವೇಕ್ಷಣೆಗೆ ತಾಂತ್ರಿಕವಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.”

ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ.

 

 

ಆಂದೋಲನ ಡೆಸ್ಕ್

Recent Posts

ಕೆ.ಜೆ.ಜಾರ್ಜ್‌ ರಾಜೀನಾಮೆ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಸ್ತಕ್ಷೇಪಕ್ಕೆ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಿದ್ದರು ಎಂಬ…

2 hours ago

ವಿಕಲಚೇತನರಿಗಾಗಿಯೇ ಬೃಹತ್‌ ಉದ್ಯೋಗ ಮೇಳ ಆಯೋಜನೆ: ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

ಬೆಂಗಳೂರು: ವಿಕಲಚೇತನರಿಗಾಗಿಯೇ ಮುಂದಿನ ಮೂರು ತಿಂಗಳಲ್ಲಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ್…

2 hours ago

ಕೊಡಗಿನಲ್ಲಿ ಮುಂದುವರೆದ ಆನೆ–ಮಾನವ ಸಂಘರ್ಷ: ಕಾಡಾನೆ ದಾಳಿಗೆ ವ್ಯಕ್ತಿ ದಾರುಣ ಸಾವು

ಕೊಡಗು: ಜಿಲ್ಲೆಯಲ್ಲಿ ಆನೆ–ಮಾನವ ಸಂಘರ್ಷ ಮತ್ತೆ ಜೀವ ಬಲಿ ಪಡೆದಿದೆ. ಸಿದ್ದಾಪುರ ಸಮೀಪದ ಗೌರಿ ಬೆಟ್ಟ ಬಳಿ ಕಾಡಾನೆ ದಾಳಿಗೆ…

2 hours ago

ವಿಮಾನ ದುರಂತದಲ್ಲಿ ಅಜಿತ್‌ ಪವಾರ್‌ ಸಾವು ಪ್ರಕರಣ: ದುರಂತದ ಸಂಪೂರ್ಣ ತನಿಖೆಯಾಗಲಿದೆ ಎಂದ ಯದುವೀರ್‌ ಒಡೆಯರ್‌

ಮಡಿಕೇರಿ: ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಕತೆ ಕಟ್ಟುತ್ತಿದ್ದಾರೆ ಎಂದು…

2 hours ago

ಶಾಲಾ ವಾಹನವನ್ನು ಅಟ್ಟಿಸಿಕೊಂಡು ಬಂದ ಒಂಟಿ ಸಲಗ: ಭಯಭೀತರಾದ ವಿದ್ಯಾರ್ಥಿಗಳು

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆ ವ್ಯಾಪ್ತಿಯಲ್ಲಿ ಬೆಳಿಗ್ಗೆ ಶಾಲಾ ಬಸ್ಸನ್ನು ಒಂಟಿ ಸಲಗ ಅಟ್ಟಿಸಿಕೊಂಡು ಬಂದ ಘಟನೆ…

3 hours ago

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ: ಮಹದೇಶ್ವರ ಬೆಟ್ಟಕ್ಕೆ ಹೋಗದಂತೆ ಇಮ್ಮಡಿ ಮಹದೇವಸ್ವಾಮಿಗೆ ನಿರ್ಬಂಧ

ಚಾಮರಾಜನಗರ: ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತು…

3 hours ago