ಭತ್ತ ನಾಟಿ ಮಾಡಿದ ಡಿಸಿ, ಎಸ್ಪಿ, ನಿಶ್ಚಲಾನಂದನಾಥ ಶ್ರೀ
ಮಂಡ್ಯ: ಜಿಲ್ಲಾ ಅಧಿಕಾರಿ ತಲೆಗೆ ಟವಲ್ ಸುತ್ತಿಕೊಂಡು ಮಣೆ ಹೊಡೆದರೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ಹಲುಬೆ ಹೊಡೆದು ಭತ್ತದ ಪೈರು ಎಳೆದರು. ಯುವಕರೂ ನಾಚುವಂತೆ ಅರ್ಧ ಗಂಟೆಗೂ ಹೆಚ್ಚು ಕಾಲ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಭತ್ತ ನಾಟಿ ಮಾಡಿದರು.
ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ರೈತರ ಶಾಲೆಯಿಂದ ಆಯೋಜಿಸಿದ್ದ ‘ಮುಯ್ಯಾಳು ಸಂಸ್ಕೃತಿ ಉತ್ಸವ’ ಹೊಸತನಕ್ಕೆ ನಾಂದಿಹಾಡಿತು. ಅಲ್ಲದೆ ಸ್ವಾಮೀಜಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಐಟಿ ಉದ್ಯೋಗಿಗಳು ಇಡೀ ದಿನ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ಯುವಪೀಳಿಗೆಗೆ ಸ್ಛೂರ್ತಿ ತುಂಬಿತು.
ಕೃಷಿ ಚಟುವಟಿಕೆಗೆ ಕೂಲಿಯಾಳುಗಳ ಸಮಸ್ಯೆ ತಲೆದೋರಿದೆ. ಇದರಿಂದಾಗಿ ನಾಟಿ ಮಾಡಲು ರೈತರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಶಾಲೆಯಿಂದ ‘ನೆಲದ ನಂಟು’ ಶೀರ್ಷಿಕೆಯಡಿ ಭತ್ತ ನಾಟಿ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ವರ್ಷ ಪೂರ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ರೈತರಿಗೆ ಸಹಕಾರ ನೀಡುವ ಉದ್ದೇಶದಿಂದ ಮುಯ್ಯಾಳು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಽಕ್ಷಕ, ಸ್ವಾಮೀಜಿ ಹಾಗೂ ಕೃಷಿ ವಿಶ್ವವಿದ್ಯಾನಿಲಯದ ೫೦ ವಿದ್ಯಾರ್ಥಿಗಳು, ಕನ್ನಡ ಮನಸ್ಸುಗಳು ಕರ್ನಾಟಕ ತಂಡ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್, ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ಗ್ರಾಮಸ್ಥರು ನಾಟಿ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಯ್ಯಾಳು ಸಂಸ್ಕೃತಿ ಉತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು.
ಅದರಂತೆ ಪಕ್ಕಾ ಗ್ರಾಮೀಣ ಶೈಲಿಯ ಬಟ್ಟೆ ಧರಿಸಿ ನಾಟಿಯಲ್ಲಿ ಪಾಲ್ಗೊಂಡರು. ಸುಮಾರು ಮೂರು ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡುವ ಕಾರ್ಯ ಯಶಸ್ವಿಯಾಗಿ ನಡೆಯಿತು. ಆಗಮಿಸಿದ್ದವರಿಗೆ ಸೊಪ್ಪಿನ ಸಾರು, ಎರಡು ರೀತಿ ಪಲ್ಯ, ಪಾಯಸ, ಅನ್ನ ತಯಾರಿಸಲಾಗಿತ್ತು.
ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ : ರೈತರಿಗೆ ಕೃಷಿಯ ಬಗ್ಗೆ ಉಪನ್ಯಾಸ, ಮಾಹಿತಿ ನೀಡುವ ಸದುದ್ದೇಶದೊಂದಿಗೆ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ತೆರೆದಿರುವ ರೈತರ ಶಾಲೆ ಬಗ್ಗೆ ಗಣ್ಯರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯಿಂದ ನಡೆಸಲಾಗುತ್ತಿರುವ ವಿಭಿನ್ನ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗಲು ಸಲಹೆ ನೀಡಿದರು.
ಯಾಚೇನಹಳ್ಳಿ ರಾಮಕೃಷ್ಣ ಆಶ್ರಮದ ನಾದಾನಂದನಾಥ ಸ್ವಾಮೀಜಿ, ಟ್ರಸ್ಟ್‌ನ ಸತ್ಯಮೂರ್ತಿ, ಆರ್.ಜಗದೀಶ್, ಎಂ.ಎನ್. ನವೀನ್‌ಕುಮಾರ್, ಚಂದ್ರಶೇಖರ್, ಧರ್ಮರಾಜ್, ನಂದೀಶ್, ಎ.ಎಸ್.ಚಂದ್ರು, ಮಹೇಶ್, ಚೇತನ್, ಪ್ರದೀಪ್‌ಕುಮಾರ್, ಮಂಜು, ಎ.ಎಸ್.ಚಂದ್ರಶೇಖರ್ ಇತರರು ಭಾಗವಹಿಸಿದ್ದರು.
” ಎರಡು ತಿಂಗಳ ಹಿಂದೆ ಶಾಲೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದೆ. ಎಲ್ಲರೂ ಸಹಕಾರ ನೀಡಿದರೆ ಭವಿಷ್ಯದಲ್ಲಿ ದೇಶಕ್ಕೆ ರೈತರ ಶಾಲೆ ಮಾದರಿಯಾಗಲಿದೆ. ಏನೇ ಶುರುವಾದರೂ ಮಂಡ್ಯದಿಂದಲೇ ಆಗುತ್ತದೆ. ರೈತರ ಶಾಲೆ ದೇಶಕ್ಕೆ ಮಾದರಿಯಾಗಲಿ.”
-ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ
” ನಾನು ಕೂಡ ಕೃಷಿ ಕುಟುಂಬದಿಂದ ಬಂದವನು. ಕಬ್ಬು ಕಟಾವು ಮಾಡುವ, ಲಾರಿಗೆ ಕಬ್ಬು ತುಂಬುವ ಕೆಲಸ ಮಾಡಿದ್ದೇನೆ. ರೈತರ ಶಾಲೆ ಮಾದರಿಯಾಗಿದೆ. ಪ್ರತಿ ಗ್ರಾಮದಲ್ಲಿಯೂ ಇಂತಹ ಶಾಲೆ ಪ್ರಾರಂಭವಾಗಲಿ. ಇದರಿಂದ ರೈತರಿಗೆ ಉಪಯೋಗವಾಗಲಿದೆ. ರೈತರು ಚೆನ್ನಾಗಿ ದ್ದರೆ ಇಡೀ ದೇಶವೇ ಚೆನ್ನಾಗಿರುತ್ತದೆ.”
-ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
” ಮುಯ್ಯಾಳು ಸಂಸ್ಕೃತಿ ಉತ್ಸವ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಅಧಿಕಾರಿಗಳು, ಸ್ವಾಮೀಜಿಗಳು, ಐಟಿ ಉದ್ಯೋಗಿಗಳು ಉತ್ಸಾಹದಿಂದ ಪಾಲ್ಗೊಂಡರು. ವಿಶೇಷ ಪ್ರಯತ್ನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿರುವುದು ಖುಷಿ ತಂದಿದೆ. ಇದು ಇನ್ನಷ್ಟು ಚಟುವಟಿಕೆ ಆಯೋಜಿಸಲು ಪ್ರೋತ್ಸಾಹ ಸಿಕ್ಕಂತಾಗಿದೆ.”
– ಪ್ರೊ.ಸತ್ಯಮೂರ್ತಿ, ಮುಖ್ಯಸ್ಥರು, ರೈತರ ಶಾಲೆ
” ರೈತರ ಶಾಲೆ ದೇಶದಲ್ಲಿಯೇ ಮೊದಲು: ರೈತರಿಗಾಗಿ ತೆರೆದ ದೇಶದಲ್ಲಿಯೇ ಮೊದಲ ಶಾಲೆ ನಮ್ಮ ಜಿಲ್ಲೆಯಲ್ಲಿದೆ. ಇದು ಕರ್ನಾಟಕಕ್ಕೆ ಕೀರ್ತಿಯಂತಾಗಿದೆ. ಶಾಲೆಯಿಂದ ವಿಭಿನ್ನ ಚಟುವಟಿಕೆ ಮಾಡಲಾಗುತ್ತಿದೆ. ಅವುಗಳನ್ನು ಮುಂದುವರೆಸಿಕೊಂಡು ಹೋಗಬೇಕು.”
-ಡಾ.ಕುಮಾರ, ಜಿಲ್ಲಾಧಿಕಾರಿ
ಮಾದರಿಯಾದ ಐಟಿ ಉದ್ಯೋಗಿಗಳು: ‘ಮುಯ್ಯಾಳು ಸಂಸ್ಕೃತಿ ಉತ್ಸವ’ದಲ್ಲಿ ಭಾಗವಹಿಸಬೇಕೆಂದು ನೀಡಿದ ಆಹ್ವಾನಕ್ಕೆ ಪ್ರೀತಿಯಿಂದ ಆಗಮಿಸಿದ್ದ ೫೦ಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ಗ್ರಾಮದ ರಸ್ತೆ ಬದಿಯಲ್ಲಿ ೨೫೦ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಮಾದರಿಯಾದರು. ಜತೆಗೆ ನಾಟಿಯಲ್ಲಿ ಖುಷಿಯಿಂದ ಪಾಲ್ಗೊಂಡರು. ಸಂಜೆವರೆಗೂ ಜಮೀನಿನಲ್ಲಿ ಕೆಲಸ ಮಾಡಿ ನಂತರ ಬೆಂಗಳೂರಿಗೆ ಹಿಂದಿರುಗಿದರು.
ಥೈಲ್ಯಾಂಡ್‌ನ ಈಶಾನ್ಯದಲ್ಲಿ ಕ್ರೇನ್ ರೈಲಿನ ಮೇಲೆ ಬಿದ್ದು ಹಳಿತಪ್ಪಿದ ಪರಿಣಾಮ ಕನಿಷ್ಠ 22 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು…
ಹಾಸನ: ಅಂಗಡಿಯಲ್ಲಿ ವ್ಯಾಪಾರ ಮಾಡುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ. ಪ್ರವೀಣ್(45)…
ಮಂಡ್ಯ: ಮಹಾರಾಷ್ಟ್ರ ರಾಜ್ಯದ ಚಾಕೋರು ಜಿಲ್ಲೆಯ ಲಾತೂರ್‌ನ ಬಿಎಸ್ಎಫ್ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.…
ಬೆಂಗಳೂರು: ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ನಿನ್ನೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ…
ಪಟ್ಟಣಂತಿಟ್ಟ: ಶ್ರೀ ಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ವಾರ್ಷಿಕ ಮಕರ ಜ್ಯೋತಿ ಇಂದು ದರ್ಶನವಾಗಲಿದೆ. ಇಂದು ಸಂಜೆ ಮಕರ ಜ್ಯೋತ…
ನಂಜನಗೂಡು: ನಾಳೆಯಿಂದ ಜನವರಿ.20ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ ನಡೆಯಲಿದ್ದು, ಇಂದು ಮಹಾದಾಸೋಹಕ್ಕೆ ಅಧಿಕೃತ ಚಾಲನೆ ದೊರೆಯಿತು. ಮೈಸೂರು ಜಿಲ್ಲೆ ನಂಜನಗೂಡು…