ಡಾ.ಪಿ.ಎನ್.ಹೇಮಲತ, ಮೈಸೂರು
ಮುತ್ತೆತ್ತರಾಯನ ಜಾತ್ರೆಯಲ್ಲಿ ಸರ್ವಜನಾಂಗಗಳ ಸಮಾಗಮ
‘ಮುತ್ತತ್ತಿ’ಯು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲ ಗೂರು ಹೋಬಳಿಯಲ್ಲಿರುವ ಪುಟ್ಟ ಗ್ರಾಮವಾಗಿದೆ. ಇಲ್ಲಿ ‘ಮುತ್ತೆತ್ತ ರಾಯ’ನೆಂದು ಪ್ರಸಿದ್ಧನಾದ ಹನುಮಂತರಾಯನ ದೇವಸ್ಥಾನವಿದ್ದು, ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಅಲ್ಲದೇ ಧಾರ್ಮಿಕ ಸಾಮರಸ್ಯದ ತಾಣವಾಗಿ ರೂಪುಗೊಂಡಿದೆ.
ಪ್ರತಿ ವರ್ಷವೂ ಶ್ರಾವಣ ಮಾಸದಲ್ಲಿ ಮುತ್ತತ್ತಿಯಲ್ಲಿ ನಡೆಯುವ “ಮುತ್ತೆತ್ತರಾಯನ ಜಾತ್ರಾ ಮಹೋತ್ಸವ”ವು ಸರ್ವಜನಾಂಗಗಳ ಸಮಾಗಮದಲ್ಲಿ ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ನಡೆಯುವುದು ವಿಶೇಷವಾದ ಸಂಗತಿ. ಒಂದು ಜಾತಿ, ಒಂದು ಧರ್ಮ, ಒಂದು ಭಾಷೆ ಅಥವಾ ಒಂದು ಪ್ರದೇಶದ ಜನರು ಮಾತ್ರವಲ್ಲದೇ ವಿವಿಧ ಜಾತಿ, ಮತ, ಧರ್ಮ, ಭಾಷೆ, ಪ್ರದೇಶಗಳ ಜನರು ಸಾಮೂಹಿಕವಾಗಿ ಸಾಮರಸ್ಯದಿಂದ ಪಾಲ್ಗೊಳ್ಳುವ ಮೂಲಕ ಹನುಮಂತರಾಯನ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ನಾಲ್ಕೈದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಸೇವಾರ್ಥದಾರರಾಗಿ ಒಂದೇ ಸಮುದಾಯದವರು ಮಾತ್ರವೇ ಇರುವುದಿಲ್ಲ. ಹೂವಿನ ಅಲಂಕರಣ, ಹಾಲ್ಹರವಿ ಸೇವೆ, ಹುಲಿವಾಹನ ಉತ್ಸವ, ಪಲ್ಲಕ್ಕಿ ಉತ್ಸವ ಮೊದಲಾದವನ್ನು ವಿವಿಧ ಸಮುದಾಯದವರು ವಹಿಸಿಕೊಂಡು ‘ವಿವಿಧತೆಯಲ್ಲಿ ಏಕತೆ’ಯನ್ನು ಪ್ರತಿಬಿಂಬಿಸುವ ‘ಸಾಮಾಜಿಕ ಸಾಮರಸ್ಯ’ದ ಪೂಜಾ ಕೈಂಕರ್ಯವನ್ನು ನಡೆಸುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
‘ಆಹಾರ ಸಾಮರಸ್ಯ’ವನ್ನು ಸಾಧಿಸಿರುವ ‘ಬ್ಯಾಟಗಾರ ಮುತ್ತಪ್ಪನ ಪ್ರಸಂಗ’ವು ಮನೋಜ್ಞವಾದುದು. ಅರಣ್ಯ ಸೀಮೆಯಿಂದ ಆವೃತ್ತವಾದ ಮುತ್ತತ್ತಿ ಪ್ರದೇಶದ ಬಹುಪಾಲು ಜನಸಮುದಾಯಗಳ ಆಹಾರ ಸಂಪಾದನೆಯಲ್ಲಿ ಬೇಟೆಯೂ ಒಂದು ಕ್ರಮ. ಬೇಟೆಗಾರರು ಮುತ್ತಪ್ಪನಲ್ಲಿ ಮೊರೆಯಿಡುತ್ತಾ, ‘ನಮಗೆ ಒಳ್ಳೆಯ ಬೇಟೆಯು ದೊರೆಯುವಂತಾದರೆ, ಬೇಟೆಯ ಬಹುಭಾಗವನ್ನು ನಿನ್ನ ಸೇವೆಗಾಗಿ ಮೀಸಲಿಡಲಾಗುವುದು, ಬಹುಜನರಿಗೆ ಮಾಂಸಾಹಾರದ ಅನ್ನ ಸಂತರ್ಪಣೆ ಮಾಡಲಾಗುವುದು’ ಎಂದು ಬೇಡಿಕೊಳ್ಳುತ್ತಿದ್ದರಂತೆ. ಅವರ ಕೋರಿಕೆಯಂತೆ ಒಳ್ಳೆಯ ಬೇಟೆ ದೊರೆತರೆ, ಅದರಲ್ಲಿ ಮೀಸಲು ಭಾಗವನ್ನು ಮುತ್ತತ್ತಿರಾಯನಿಗೆ ಅರ್ಪಿಸಿ, ಭಕ್ತಾದಿಗಳಿಗೆ ಭೋಜನ ಸೇವೆ ಮಾಡುತ್ತಿದ್ದರಂತೆ.
ಇಂದಿಗೂ ಮುತ್ತತ್ತಿಯಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಎಂಬ ಭೇದವಿಲ್ಲದೆ ನೈವೇದ್ಯ ಮತ್ತು ಅನ್ನ ಸಂತರ್ಪಣೆ ನಡೆಯುವುದನ್ನು ಕಾಣಬಹುದು. ಮುತ್ತೆತ್ತರಾಯನಿಗೆ ಇರುವ ಹಲವಾರು ನಾಮಾವಳಿಗಳಲ್ಲಿ ‘ಬ್ಯಾಟಗಾರ ಮುತ್ತಪ್ಪ’ ಹೆಸರೂ ಪ್ರಸಿದ್ಧವಾಗಿದೆ. ಮುತ್ತೆತ್ತರಾಯನ ಜಾತ್ರಾ ಮಹೋತ್ಸವದಲ್ಲಿ ಸಾಧ್ಯವಾಗಿ ರುವ ‘ಧಾರ್ಮಿಕ ಸಾಮರಸ್ಯ’ಕ್ಕೆ ಸಂಬಂಧಿಸಿದ ಮಹತ್ವದ ಸಂಗತಿಯೆಂದರೆ ಶೈವ ಮತ್ತು ವೈಷ್ಣವ ಮತಗಳ ಸಾಮರಸ್ಯ. ಶಿಷ್ಟ ಪರಂಪರೆಯಲ್ಲಿ ಕಾಣದ ಈ ಮತೀಯ ಸಾಮರಸ್ಯ ವನ್ನು ಜಾನಪದ ಲೋಕದ ಮಂಟೇಸ್ವಾಮಿ ಮಹಾಕಾವ್ಯದಲ್ಲಿ ಕಾಣುವುದು ವಿಶೇಷ. ಜಾನಪದ ವಿದ್ವಾಂಸರಾದ ದಿ.ಡಾ.ಜಿ.ಶಂ.ಪರಮ ಶಿವಯ್ಯ ಅವರು ದಾಖಲಿಸಿರುವಂತೆ, “ಮಂಟೇಸ್ವಾಮಿ ಸಂಪ್ರದಾಯದಲ್ಲಿ ಶೈವ-ವೈಷ್ಣವಗಳ ಸಂಗಮವಿದ್ದಂತೆ ತೋರುತ್ತದೆ. ನೀಲಗಾರರು ಹಿಡಿಯುವುದು ತಂಬೂರಿ. ಇದು ದಾಸ ಪರಂಪರೆಯ ಸಂಕೇತ. ಸಿದ್ಧಪ್ಪಾಜಿಯವರಿಗೆ ಮುತ್ತತ್ತಿರಾಯನಿಂದ ಬಳುವಳಿಯಾಗಿ ಈ ತಂಬೂರಿ ಬಂದಿತು. ಮುತ್ತತ್ತಿರಾಯ ಆಂಜನೇಯ, ಪರಮ ವೈಷ್ಣವ…” (ಶ್ರೀ ಮಂಟೇಸ್ವಾಮಿ ಕಾವ್ಯ) ಮುತ್ತತ್ತಿರಾಯನು ತನ್ನ ಮಹಾಗುರುವೆಂದು ಭಾವಿಸಿದ ಪರ ಮೇಶ್ವರ/ಭೈರವೇಶ್ವರರ ಆರಾಧನೆ ಮುತ್ತತ್ತಿಯಲ್ಲಿದೆ.
ಇಂದಿಗೂ ೫ ದಿನಗಳ ಕಾಲ ನಡೆಯುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಕೊನೆಯ ದಿನ ಮುತ್ತೆತ್ತರಾಯನ ಸೇವೆ ಅಥವಾ ಕಡೆಬಾಗಿಲ ಸೇವೆ ನಡೆಯುತ್ತದೆ. ಈ ಮೂಲಕ ಶೈವ ಮೂಲದ ಮಂಟೇ ಸ್ವಾಮಿ-ಸಿದ್ದಪ್ಪಾಜಿ- ರಾಚಪ್ಪಾಜಿ ಒಕ್ಕಲಿನವರು ವೈಷ್ಣವ ಮೂಲದ ಮುತ್ತತ್ತಿರಾಯನ ಸೇವೆಯನ್ನು ಶ್ರದ್ಧಾಭಕ್ತಿಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇದು ಕನ್ನಡ ನೆಲದಲ್ಲಿ ಶೈವ ಹಾಗೂ ವೈಷ್ಣವ ಮತಗಳ ನಡುವೆ ಸುಮಾರು ಸಾವಿರ ವರ್ಷಗಳಿಂದ ಕಾಪಿಟ್ಟುಕೊಂಡು ಬಂದಿರುವ ಮತೀಯ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.
” ಜಾತಿ-ಮತ-ಮತಿ-ಧರ್ಮಗಳ ಅಸ್ಮಿತೆಗಳ ತಿಕ್ಕಾಟಗಳು ತಾರಕಕ್ಕೇರಿ ಮನುಷ್ಯ ಮನುಷ್ಯನಿಗೆ ಅಪಾಯಕಾರಿ ಆಗುತ್ತಿರುವ ಸಂದರ್ಭದಲ್ಲಿ, ಜಾನಪದ ಮಹಾಕಾವ್ಯ ವಿಚಾರದಲ್ಲಿ ಮಾತ್ರವಲ್ಲದೇ, ನೀಲಗಾರರು ಹಾಗೂ ಮುತ್ತತ್ತಿರಾಯನ ಒಕ್ಕಲಾದ ದಾಸಯ್ಯಗಳ ಸಂಸ್ಕೃತಿ-ಆಚಾರಗಳಲ್ಲಿ ಶೈವ-ವೈಷ್ಣವ ಮತ-ಮತಿಗಳ ಸಾಮರಸ್ಯವು ಜೀವಂತವಾಗಿ ಕಂಡುಬರುವುದು ಮಾನವತೆಗೆ ಮಾರ್ಗದರ್ಶಿಯಾಗಿದೆ.”
ಮೈಸೂರು : ವರ್ಷದ ಮೊದಲ ಹಬ್ಬ ಸುಗ್ಗಿ ಸಂಕ್ರಾತಿ ಹಿನ್ನೆಲೆ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ…
ಹನೂರು : ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತನೋರ್ವ ಗಂಭೀರವಾಗಿ ಕೈಗೊಂಡಿರುವ…
ಹನೂರು : ನೆಮ್ಮದಿಯಾಗಿ ವಾಸಿಸಲು ಸ್ವಂತ ಸೂರಿಲ್ಲ, ಜೀವನೋಪಯಕ್ಕಾಗಿ ವೃದ್ಯಾಪ್ಯ ವೇತನವಿಲ್ಲ. ವಿಳಾಸಕ್ಕಾಗಿ ಆಧಾರ್ ಕಾರ್ಡ್ ಇಲ್ಲ. ತುತ್ತು ಅನ್ನಕ್ಕಾಗಿ…
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ 1, 3 ಹಾಗೂ 5 ದಿನಗಳ ಅನ್‌ಲಿಮಿಟೆಡ್ ಕ್ಯೂಆರ್ ಕೋಡ್ ಪಾಸ್ ಸೇವೆ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಸಂಚಕಾರ ತಂದೊಡ್ಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಆಕ್ರಮ ನಿವೇಶನ ಹಂಚಿಕೆ…
ಮಂಡ್ಯ: ಜಲಜೀವನ್ ಮಿಷನ್ ಯೋಜನೆಯಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಮತ್ತು ಕಾಮಗಾರಿಗಳ ಪ್ರಸ್ತುತ ಸ್ಥಿತಿ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾ…