ಕೆಲಸ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು
ಮೈಸೂರು: ಅಂತೂ ಸಂಪೂರ್ಣವಾಗಿ ಅಲ್ಲದಿದ್ದರೂ ಖಾತಾ, ಕಂದಾಯ ನಿಗದಿ, ನಕ್ಷೆ ಮಂಜೂರು… ಹೀಗೆ ಸಾರ್ವಜನಿಕರ ದೈನಂದಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗದ ರೀತಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸ್ಥಗಿತಗೊಂಡಿದ್ದ ಕೆಲಸವನ್ನು ಪುನರಾರಂಭಿಸಿದೆ.
ನಗರಾಭಿವೃದ್ಧಿ ಇಲಾಖೆಯು ಈ ಸಂಬಂಧ ಪ್ರಾಧಿಕಾರದ ಕೆಲಸಗಳನ್ನು ಆರಂಭಿಸುವಂತೆ ಪತ್ರ ಮುಖೇನ ತಿಳಿಸಿದೆ. ಕಳೆದ ವಾರ ಮುಡಾ ಆಯುಕ್ತ ರಘುನಂದನ್ ಅವರು ಸರ್ಕಾರಕ್ಕೆ ಪತ್ರ ಬರೆದು ದಿನ ನಿತ್ಯದ ಕೆಲಸಗಳಿಗೆ ಅನುವು ಮಾಡಿಕೊಡ ಬೇಕು ಎಂದು ಕೋರಿದ್ದರು.
ಮುಡಾ ಅಧ್ಯಕ್ಷ ಕೆ.ಮರೀಗೌಡ ಅವರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾ ಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರೊಂದಿಗೆ ಮಾತನಾಡಿ, ಮುಡಾ ಕೆಲಸಗಳು ಸ್ಥಗಿತಗೊಂಡಿ ರುವ ಹಾಗೂ ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ವಿವರಿಸಿದ್ದರು.
ಮುಡಾ ನಿಯಮಬಾಹಿರವಾಗಿ ಶೇ.50:50ರ ಅನುಪಾತದಡಿ, ಪ್ರೋತ್ಸಾಹದಾಯಕ ಹಾಗೂ ಬದಲಿ ನಿವೇಶನಗಳನ್ನು ಮನಸೋ ಇಚ್ಛೆ ಹಂಚಿಕೆ ಮಾಡಿ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟ ಉಂಟು ಮಾಡಿರುವ ಪ್ರಕರಣದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿದೆ ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಮುಡಾ ನಿದ್ರಾವಸ್ಥೆಯಲ್ಲಿ ಇತ್ತು.
ಸರ್ಕಾರದ ಸೂಚನೆ ಮೇರೆಗೆ ಕಾಮಗಾರಿಗಳ ಕಾರ್ಯಾದೇಶ ಸೇರಿದಂತೆ ಮುಡಾದಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ಯಾವುದೇ ಕೆಲಸಗಳು ನಡೆಯುತ್ತಿರಲಿಲ್ಲ. ಮುಡಾ ಸಭೆ, ಕಡತಗಳಿಗೆ ಸಹಿ ಇನ್ನಿತರೆ ಎಲ್ಲಾ ಕಾರ್ಯ ಸ್ಥಗಿತಗೊಂಡಿರುವುದರಿಂದ ಆಯುಕ್ತರು, ಕಾರ್ಯ ದರ್ಶಿ, ನಗರ ಯೋಜಕ ಸದಸ್ಯ, ವಿಶೇಷ ಭೂ ಸ್ವಾಧೀನಾಧಿಕಾರಿ, ವಿಶೇಷ ತಹಸಿಲ್ದಾರ್‌ಗಳು, ಸೂಪರಿಂಟೆಂಡೆಂಟ್ ಎಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಮುಖ್ಯ ಲೆಕ್ಕಾಧಿಕಾರಿಗಳು, ಸಿಬ್ಬಂದಿ ಯಾವುದೇ ಕೆಲಸವಿಲ್ಲದೇ ಕಾಲ ಕಳೆದು ಹೋಗುತ್ತಿದ್ದರು.
ಮುಡಾದ ಎಲ್ಲ ಕೆಲಸಗಳೂ ಸ್ಥಗಿತಗೊಂಡಿರುವು ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು. ತನಿಖೆಗೂ, ಮುಡಾ ಸೇವೆಗಳಿಗೂ ಸಂಬಂಧವಿಲ್ಲದಿದ್ದರೂ ಸರ್ಕಾರ ಸಾರ್ವಜನಿಕರ ಹಿತವನ್ನು ಬಲಿ ಕೊಟ್ಟಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಲತಾ ಅವರು ಮುಡಾ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ. ನಗರಾ ಭಿವೃದ್ಧಿ ಕಾಯಿದೆ 1987ರ ಮಾರ್ಗಸೂಚಿಯಂತೆ ಯಾವುದೇ ನಿಯಮ, ನಿರ್ದೇಶನಗಳ ಉಲ್ಲಂಘನೆಯಾಗದಂತೆ ನಿಯಮಾನುಸಾರ ಕೆಲಸ ನಿರ್ವಹಿಸುವಂತೆ ಆ.3ರಂದು ಪತ್ರ ರವಾನಿಸಿದ್ದಾರೆ.
ಮುಡಾದಲ್ಲಿ ನಡೆಯುವ ಕೆಲಸಗಳೇನು?
ಕಂದಾಯ ಪಾವತಿ, ಕಟ್ಟಡ ವಿನ್ಯಾಸ ನಕ್ಷೆ, ಕಟ್ಟಡ ವಿನ್ಯಾಸ ನಕ್ಷೆ ಅನುಮೋದನೆ, ನ್ಯಾಯಾಲಯದ ಪ್ರಕರಣಗಳ ಕಡತಗಳು ಅನ್ಯಕ್ರಾಂತ ಅಭಿಪ್ರಾಯ ನೀಡುವುದು ಮಾಹಿತಿ ಹಕ್ಕು ಪ್ರಕರಣಗಳು
ಯಾವುದಕ್ಕೆ ಅವಕಾಶವಿಲ್ಲ?
ಪ್ರಾಧಿಕಾರದಿಂದ ಯಾವುದೇ ಸಭೆ ನಡೆಸುವಂತಿಲ್ಲ.
ಪ್ರಸ್ತುತ ಹಂತದಲ್ಲಿರುವ ಯಾವುದೇ ಕಡತಗಳ ತೀರ್ಮಾನ ಕೈಗೊಳ್ಳುವಂತಿಲ್ಲ •
ಪ್ರಾಧಿಕಾರದ ಸಭೆಯಲ್ಲಿ ಈ ಹಿಂದೆ ತೆಗೆದುಕೊಂಡ ಯಾವುದೇ ತೀರ್ಮಾನವನ್ನು ಅನುಷ್ಠಾನಗೊಳಿಸುವಂತಿಲ್ಲ.
ಸರ್ಕಾರದ ನಿರ್ದೇಶನವಿಲ್ಲದೆ ಯಾವುದೇ ನಿವೇಶನಗಳ ವಿಲೇವಾರಿ ಮಾಡುವಂತಿಲ್ಲ
ಖಾಸಗಿ ಬಡಾವಣೆಗಳ ನಿವೇಶನ ಬಿಡುಗಡೆ, ಅನುಮೋದನೆ ನೀಡುವಂತಿಲ್ಲ.
ಪ್ರಾಧಿಕಾರದ ದೈನಂದಿನ ಕೆಲಸ ಕಾರ್ಯ ನಡೆಸಲು ಅವಕಾಶ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೆವು. ವಿವಿಧ ಸೇವೆ ಕೋರಿ ಅರ್ಜಿ ಸಲ್ಲಿಸಿದ ಜನರು, ಕಚೇರಿಗೆ ಅಲೆಯುತ್ತಿದ್ದಾರೆ ಎಂಬುದನ್ನು ಮನವರಿಕೆ ಮಾಡಿದ್ದೆವು. ಇದೀಗ ದೈನಂದಿನ ಕೆಲಸಗಳಿಗೆ ಅಡ್ಡಿಯಾಗದಂತೆ ಕೆಲಸ ನಿರ್ವಹಿಸಲು ಇಲಾಖೆ ಸೂಚನೆ ನೀಡಿದೆ. ಅದರಂತೆ ಕೆಲಸ ನಿರ್ವಹಿಸಲಾಗುವುದು. ಮೇಲಾಧಿಕಾರಿಗಳಿಂದ ಮತ್ತೊಂದು ಆದೇಶದ ನಿರೀಕ್ಷೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಮುಡಾ ಎಂದಿನಂತೆ ಕೆಲಸ ನಿರ್ವಹಿಸಲಿದೆ.
ರಘುನಂದನ, ಮುಡಾ ಆಯುಕ್ತರು.
ನಿವೇಶನ ಹಂಚಿಕೆ ಕುರಿತು ತನಿಖೆ ನಡೆಯುತ್ತಿರುವ ಕಾರಣ ಮುಡಾದ ಕೆಲಸಗಳು ಸ್ಥಗಿತಗೊಂಡಿದ್ದವು. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಕೆಲ ಮಾರ್ಗಸೂಚಿಗಳನ್ನು ನೀಡಿ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದಾರೆ. ಅದರಂತೆ ಕೆಲಸ ನಿರ್ವಹಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಕೆ.ಮರೀಗೌಡ, ಮುಡಾ ಅಧ್ಯಕ್ಷ
ಮಳವಳ್ಳಿ : ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ-ದಂಡಿನ ಮಾರಮ್ಮ ಶಕ್ತಿ ದೇವತೆಗಳ ಸಿಡಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಜ.27ರಿಂದ…
ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಛಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಅವರು ಶುಕ್ರವಾರ ತಮ್ಮ…
ಬೆಂಗಳೂರು : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಹಾಕುಸಿತ ಮುಂದುವರಿದಿದೆ. ಶುಕ್ರವಾರ ಗ್ರಾಮ್‌ಗೆ 800 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ…
ಬೆಂಗಳೂರು : ಖ್ಯಾತ ಉದ್ಯಮಿ ಮತ್ತು ಕಾನ್ಛಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ…
ಮೈಸೂರು : ನಗರದಲ್ಲಿ ಕೋಟ್ಯಾಂತರ ರೂ. ಮೊತ್ತದ ಡ್ರಗ್ಸ್ ತಯಾರಿಕೆ ನಡೆಯುತ್ತಿದ್ದರೂ ಪತ್ತೆ ಹಚ್ಚುವಲ್ಲಿ ನಗರದ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ…
ಮುಂಬೈ : ಮಹಾರಾಷ್ಟ್ರದ ರಾಜಕೀಯದಲ್ಲಿ ಒಂದು ಐತಿಹಾಸಿಕ ಕ್ಷಣ. ಎನ್‌ಸಿಪಿ ನಾಯಕಿ ದಿ.ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್…