ಕೆ.ಬಿ.ರಮೇಶನಾಯಕ
ಮುಡಾ ಅಕ್ರಮಗಳ ಕುರಿತು ೬ ಸಂಪುಟಗಳಲ್ಲಿ ಸಲ್ಲಿಸಿದ್ದ ವರದಿ
೩೦೦ ನಿವೇಶನಗಳು ಬದಲಿ ನಿವೇಶನಗಳಾಗಿ ಹಂಚಿಕೆ
೫೦:೫೦ ಅನುಪಾತದಡಿ ಹಂಚಿಕೆಯಾಗಿದ್ದ ನಿವೇಶನಗಳ ವಾಪಸ್ಸಾತಿ ಕ್ರಮಕ್ಕೆ ಹಿಂದೇಟು
ಪ್ರಭಾವಿಗಳ ಒತ್ತಡಕ್ಕೆ ಮಣಿಯಿತೇ ಸರ್ಕಾರ?
ಮೈಸೂರು: ಕರ್ನಾಟಕವಲ್ಲದೆ ಇಡೀ ದೇಶಾದ್ಯಂತ ಗಮನ ಸೆಳೆದಿದ್ದ ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗದ ವರದಿ ಸಲ್ಲಿಕೆಯಾಗಿ ಐದು ತಿಂಗಳು ಕಳೆದಿದ್ದು, ಎಲ್ಲ ವರದಿಗಳಂತೆ ದೇಸಾಯಿ ಆಯೋಗದ ವರದಿಯೂ ತೆರೆಗೆ ಸರಿಯಲಿದೆಯೇ ಎನ್ನುವ ಅನುಮಾನ ಮೂಡಿದೆ.
ಮುಡಾ ಅಕ್ರಮಗಳ ಕುರಿತಂತೆ ಆರು ಸಂಪುಟಗಳಲ್ಲಿ ಸಲ್ಲಿಕೆಯಾಗಿರುವ ವರದಿಯ ಆಧಾರದ ಮೇಲೆ ಅಕ್ರಮ ಎಸಗಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಜತೆಗೆ ೫೦:೫೦ ಅನುಪಾತದಡಿ ಹಂಚಿಕೆಯಾಗಿದ್ದ ನಿವೇಶನಗಳ ವಾಪಸ್ಸಾತಿ ಕ್ರಮಕ್ಕೆ ಹಿಂದೇಟು ಹಾಕುತ್ತಿರುವುದಕ್ಕೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೇ ಅಡ್ಡಗಾಲು ಹಾಕಿದ್ದಾರೆಂದು ಹೇಳಲಾಗಿದೆ. ಹೀಗಾಗಿ, ೫೦:೫೦ ಅನುಪಾತದಡಿ ಅಕ್ರಮವಾಗಿ ನಿವೇಶನ ಪಡೆದವರು ನಿಶ್ಚಿಂತೆಯಿಂದ ಇರಲು ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ದೇವನೂರು ಎರಡನೇ ಹಂತದ ಬದಲಿಗೆ ವಿಜಯ ನಗರ ಮೂರನೇ ಹಂತದಲ್ಲಿ ೧೪ ನಿವೇಶನಗಳನ್ನು ಮಂಜೂರು ಮಾಡಿದ ವಿಚಾರ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಈ ವಿಚಾರವನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿಯವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಹದಿನಾಲ್ಕು ನಿವೇಶನಗಳನ್ನು ವಾಪಸ್ ಮಾಡಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ೨೦೦೬ರಿಂದ ೨೦೨೪ರ ಜುಲೈ ೧೫ರೊಳಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದ್ದ ಭೂಸ್ವಾಧೀನ, ಬಡಾವಣೆಗಳ ನಿರ್ಮಾಣ, ನಿವೇಶನ ಹಂಚಿಕೆ, ಪರಿಹಾರ ವಿತರಣೆ, ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಮಗ್ರವಾದ ವರದಿ ನೀಡುವಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಆಯೋಗವನ್ನು ರಚನೆ ಮಾಡಿ ಆದೇಶ ಹೊರಡಿಸಿದ್ದರು.
ಈ ಸಮಿತಿಯು ಬೆಂಗಳೂರಿನಲ್ಲೇ ಕಚೇರಿ ಆರಂಭಿಸುವ ಮೂಲಕ ವಿಚಾರಣೆ ನಡೆಸಿತ್ತು. ಹಾಲಿ ಆಯುಕ್ತರು, ಮಾಜಿ ಆಯುಕ್ತರು, ವಿಶೇಷ ಭೂ ಸ್ವಾಧೀನಾಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳು, ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸುವ ಜತೆಗೆ, ಒಂದು ಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆಗಳ ಜೆರಾಕ್ಸ್ ಪ್ರತಿ ಪಡೆದುಕೊಂಡು ಪರಿಶೀಲನೆ ನಡೆಸಿತ್ತು. ಈ ವೇಳೆ ಅನೇಕಾರು ಅಂಶಗಳನ್ನು ಪತ್ತೆ ಮಾಡಿದ್ದ ಆಯೋಗವು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ನಂತರ, ಆಗಸ್ಟ್ ೧ರಂದು ಆಯೋಗವು ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರದಿಯನ್ನು ಸಲ್ಲಿಸಿದ್ದು, ಇದರಲ್ಲಿ ಹದಿನಾಲ್ಕು ನಿವೇಶನಗಳ ಮಂಜೂರಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿಯವರ ಪಾತ್ರವಿಲ್ಲವೆಂದು ಕ್ಲೀನ್‌ಚಿಟ್ ನೀಡಿತ್ತು. ನಂತರ,ಸೆ.೪ರಂದು ಈ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸುವ ಮೂಲಕ ಸಿಎಂಗೆ ಕ್ಲೀನ್‌ಚಿಟ್ ಕೊಟ್ಟಿರುವ ಅಂಶದ ವರದಿಯನ್ನು ಪ್ರಸ್ತಾಪಿಸಿ ಅಂಗೀಕರಿಸಿತ್ತು. ಇದಲ್ಲದೆ, ದೇಸಾಯಿ ಆಯೋಗ ನೀಡಿರುವ ಶಿಫಾರಸ್ಸುಗಳನ್ನು ಜಾರಿಗೆ ತರುವ ಬಗ್ಗೆ ಒಂದಂಶದ ನಿರ್ಣಯ ಕೈಗೊಂಡಿದ್ದ ಸಚಿವ ಸಂಪುಟದ ತೀರ್ಮಾನದಂತೆ ಇದುವರೆಗೂ ಯಾವುದೇ ಬೆಳವಣಿಗೆ ನಡೆಯದೆ ಇರುವುದು ವರದಿಯನ್ನು ಹಳ್ಳಹಿಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
೬ ಸಂಪುಟಗಳ ವರದಿ ನಿಗೂಢ: ದೇಸಾಯಿ ಆಯೋಗ ನೀಡಿರುವ ಆರು ಸಂಪುಟಗಳ ವರದಿಯಲ್ಲಿ ಹಲವಾರು ಅಂಶಗಳು ನಿಗೂಢವಾಗಿದ್ದು,ಸರ್ಕಾರ ಈ ವರದಿಯ ಆಧಾರದ ಮೇಲೆ ಕ್ರಮಕೈಗೊಳ್ಳಲು ಹಿಂದೇಟು ಹಾಕಿದೆ. ಕಾನೂನುಬಾಹಿರವಾಗಿ ೫೦:೫೦ ಅನುಪಾತದಲ್ಲಿ ಹಂಚಿಕೆಯಾಗಿರುವ ನಿವೇಶನಗಳನ್ನು ರದ್ದುಪಡಿಸಿ ವಾಪಸ್ ಪಡೆಯುವಂತೆ ನೀಡಿರುವ ಅಂಶವನ್ನು ಪರಿಗಣಿಸಿಲ್ಲ. ಈ ವಿಚಾರವನ್ನು ಕೈಗೆತ್ತಿಕೊಳ್ಳದಂತೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೇ ತಡೆಯೊಡ್ಡಿದ್ದಾರೆ ಎಂದು ಮೂಲಗಳು ಹೇಳಿವೆ.
ಮೂಲಗಳ ಪ್ರಕಾರ ೩೦೦ ನಿವೇಶನಗಳನ್ನು ಬದಲಿ ನಿವೇಶನಗಳನ್ನಾಗಿ ಹಂಚಿಕೆ ಮಾಡಿದ್ದು,ಇದರಲ್ಲಿ ರಾಜಕಾರಣಿಗಳು, ಅಧಿಕಾರಿಗಳ ಆಪ್ತ ವಲಯದಲ್ಲಿ ಇರುವವರಿಗೆ ಹಂಚಿಕೆ ಮಾಡಿರುವುದರಿಂದಲೇ ವರದಿ ಬಗ್ಗೆ ಮೌನವಹಿಸಲು ಕಾರಣ ಎನ್ನಲಾಗಿದೆ. ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಬಂಧಿಸಿರುವುದನ್ನು ಹೊರತುಪಡಿಸಿದರೆ ಉಳಿದಂತೆ ಯಾವುದೇ ಅಧಿಕಾರಿಗಳ ಮೇಲೆ ಕ್ರಮಜರುಗಿಸಲು ಸರ್ಕಾರ ಮುಂದಾಗಿಲ್ಲ. ಅಕ್ರಮವಾಗಿ ಹಂಚಿಕೆ ಯಾಗಿರುವ ನಿವೇಶನಗಳನ್ನು ವಾಪಸ್ ಪಡೆಯಲೂ ಮುಂದಾಗದೆ ಕಾಲಹರಣ ಮಾಡುತ್ತಿರುವುದರಿಂದ ವರದಿ ದೂಳು ಹಿಡಿಯುವುದು ಗ್ಯಾರಂಟಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…
ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…
ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…
ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…
ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…