Andolana originals

‘ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಆರಂಭಕ್ಕೆ ಮುಡಾ ಸಜ್ಜು ’

ಕೆ.ಬಿ.ರಮೇಶನಾಯಕ

ಶೀಘ್ರದಲ್ಲೇ ಡಿಪಿಆರ್ ತಯಾರಿಸಲು ಜಾಗತಿಕ ಮಟ್ಟದ ಟೆಂಡರ್ ಪ್ರಕ್ರಿಯೆ

ಪ್ರಸಕ್ತ ಸಾಲಿನಲ್ಲಿ ಡಿಪಿಆರ್‌ಗೆ ೭.೭೫ ಕೋಟಿ ರೂ.ಅನುದಾನ ಕಾಯ್ದಿರಿಸುವಿಕೆ

ಹಳೆಯ ಚಾರ್ಮ್‌ಗೆ ಮರಳುತ್ತಿರುವ ಅಧಿಕಾರಿಗಳ ಪಡೆ 

ಮೈಸೂರು: ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ಹೊರ ಪರಿಧಿ ರಸ್ತೆಯನ್ನು ನಿರ್ಮಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಜ್ಜಾಗಿದೆ. ಪ್ರಸಕ್ತ ಸಾಲಿನಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ೭.೭೫ ಕೋಟಿ ರೂಪಾಯಿ ಕಾಯ್ದಿರಿಸಲಾಗಿದ್ದು, ಶೀಘ್ರದಲ್ಲೇ ಜಾಗತಿಕ ಮಟ್ಟದ ಟೆಂಡರ್ ಕರೆಯಲು ಪ್ರಕ್ರಿಯೆ ಆರಂಭಿಸಲಿದೆ.

೨೦೨೩ರಲ್ಲಿ ಡಿಪಿಆರ್ ತಯಾರಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿತ್ತಾದರೂ ಒಂದು ಏಜೆನ್ಸಿ ಮಾತ್ರ ಪಾಲ್ಗೊಂಡಿದ್ದರಿಂದ ಮರು ಟೆಂಡರ್‌ಗೆ ಸರ್ಕಾರ ಸೂಚನೆ ನೀಡಿತ್ತು. ಆದರೆ, ನಂತರದ ದಿನಗಳಲ್ಲಿ ನಾನಾ ಬೆಳವಣಿಗೆಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಮೈಸೂರು ನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಮೈಸೂರು ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಮಹತ್ವದ ಡಿಪಿಆರ್ ತಯಾರಿಸಲು ಮುಡಾ ತನ್ನ ಬಜೆಟ್‌ನಲ್ಲಿ ಈ ಬಾರಿ ಹಣ ಕಾಯ್ದಿರಿಸಿರುವುದು ಆಶಾಭಾವನೆ ಮೂಡಿಸಿದೆ.

೨೫ ವರ್ಷಗಳ ಹಿಂದೆ ರೂಪಿಸಲಾದ ಹೊರ ವರ್ತುಲ ರಸ್ತೆ ಮೈಸೂರಿನ ಅಭಿವೃದ್ಧಿ ಮತ್ತು ಬೆಳವಣಿಗೆಗೆ ದಾರಿ ಮಾಡಿಕೊಟ್ಟಿತು. ಮೈಸೂರಿನ ಮುಂದಿನ ಮೂರ‍್ನಾಲ್ಕು ದಶಕಗಳ ಪ್ರಗತಿಯ ನಿಟ್ಟಿನಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಮತ್ತೊಮ್ಮೆ ವೇಗ ಸಿಗುತ್ತಿದೆ. ಒಂದು ವರ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರ ನಿವೇಶನದ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದ್ದ ಮುಡಾ ನಿಧಾನವಾಗಿ ಅದರಿಂದ ಹೊರ ಬರಲು ಪ್ರಯತ್ನಿಸುತ್ತಿದೆ. ಮೈಸೂರು ಕೇಂದ್ರ ಭಾಗದಿಂದ ಸುತ್ತಲಿನ ಸುಮಾರು ೧೫ರಿಂದ ೨೫ ಕಿ.ಮೀ. ವ್ಯಾಪ್ತಿಯಲ್ಲಿ ಪೆರಿ-ರಲ್ ರಿಂಗ್ ರಸ್ತೆ ನಿರ್ಮಿಸುವ ಚಟುವಟಿಕೆಗಳು ದಶಕದಿಂದಲೂ ನಡೆದಿವೆ. ಈಗ ಅದಕ್ಕೆ ಮತ್ತೆ ಜೀವ ಬಂದಿದೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾಗ ಈ ಯೋಜನೆ ಆರಂಭಿಸಬೇಕು ಎನ್ನುವುದು ಮುಡಾ ಅಧಿ ಕಾರಿಗಳ ಬಯಕೆಯಾಗಿದೆ.

ಭವಿಷ್ಯದಲ್ಲಿ ಮೈಸೂರಿನತ್ತ ಕಣ್ಣು: ಮೈಸೂರು ನಗರದ ಸುತ್ತಲೂ ಈಗಾಗಲೇ ೪ ರಿಂದ ೬ ನಾಗರಿಕ ಕೈಗಾರಿಕಾ ವಲಯಗಳು ಸ್ಥಾಪನೆಗೊಂಡು ಕಾರ್ಯ ನಿರ್ವಹಿಸುತ್ತಿವೆ. ನಂಜನಗೂಡು ಸಮೀಪ  ಸೆಮಿಕಂಡಕ್ಟರ್ ಯೋಜನೆಯನ್ನು ಕೈಗೊಳ್ಳಲು ಅನುಮೋದನೆಯಾಗಿರುವುದರಿಂದ ಭವಿಷ್ಯದಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮೈಸೂರು ವಿಮಾನ ನಿಲ್ದಾಣವನ್ನೂ ಮೇಲ್ದರ್ಜೆಗೆ ಏರಿಸುವ ಯೋಜನೆಯೂ ಇದೆ. ಈ ಮಹಾಯೋಜನೆ ೨೦೩೧ರಲ್ಲಿ ಮೈಸೂರು -ಚೆನ್ನೈ ಬುಲೆಟ್ ಟ್ರೈನ್ ಮತ್ತು ಮೈಸೂರು-ಮಂಗಳೂರು ರಸ್ತೆಯನ್ನು ಉನ್ನತೀಕರಿಸುವ ಯೋಜನೆಗಳನ್ನು ಒಳಗೊಂಡಿದೆ. ಇದರಿಂದ ಮೈಸೂರು ನಗರವೂ ವೇಗವಾಗಿ ಬೆಳವಣಿಗೆಯಾಗ ಲಿದ್ದು, ಸಂಚಾರ ದಟ್ಟಣೆ ಕೂಡ ಅಧಿಕವಾಗಲಿದೆ.

ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರು ನಗರಕ್ಕೆ ವಾರ್ಷಿಕವಾಗಿ ಸುಮಾರು ೪೦ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ದೇಶ-ವಿದೇಶಗಳಿಂದ ಆಗಮಿಸುತ್ತಾರೆ. ನಗರದ ಸುತ್ತಲೂ ಹಾಲಿ ಇರುವ ಹೊರ ವರ್ತುಲ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಪ್ರಸ್ತುತ ಮೈಸೂರು ನಗರದಲ್ಲಿ ಸುಮಾರು ೮ ಲಕ್ಷ ವಾಹನಗಳು ನೋಂದಣಿಯಾಗಿವೆ. ಇದಲ್ಲದೇ ಹೊರ ಜಿಲ್ಲೆಗಳ ನೋಂದಣಿ ವಾಹನಗಳ ಸಂಚಾರವೂ ಅಧಿಕವಾಗಿದೆ. ಮೈಸೂರಿನ ಬೆಳವಣಿಗೆಗೆ ಪೂರಕವಾಗಿ ೨ನೇ ರಿಂಗ್ ರಸ್ತೆಯನ್ನು ರೂಪಿಸಲು ಹಲವು ವರ್ಷಗಳಿಂದ ಪ್ರಯತ್ನಗಳು ನಡೆದಿವೆ ಎಂದು ಹೇಳಲಾಗಿದೆ.

ಅರಣ್ಯ ಪ್ರದೇಶದಿಂದ ಮುಕ್ತ: 

ಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆಯು ಅರಣ್ಯ ಪ್ರದೇಶದಿಂದ ಮುಕ್ತವಾಗಿದ್ದು, ಪ್ರಸಕ್ತ ೧೦೫.೩೧ ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಇದು ೪೫ ಮೀ. ಅಗಲದ ರಸ್ತೆಯಾಗಿರುತ್ತದೆ. ಇದರಲ್ಲಿ ೩+೩ ಮುಖ್ಯ ಲೇನ್‌ಗಳು ಹಾಗೂ ೦೨ ಸರ್ವಿಸ್ ಲೈನ್‌ಗಳು ಇರಲಿವೆ. ಹೊರ ಪರಿಽ ರಸ್ತೆಯನ್ನು ನಿರ್ಮಿಸಲು ಡಿಪಿಆರ್ ತಯಾರಿಸಲು ೨೦೨೫-೨೬ನೇ ಸಾಲಿನಲ್ಲಿ ೭.೭೫ ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದು ಮುಡಾ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಮೈಸೂರಿನಲ್ಲಿ ಹೊರವರ್ತುಲ ರಸ್ತೆ ಈಗಾಗಲೇ ಬಳಕೆಯಲ್ಲಿದೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಇದನ್ನು ಬಳಕೆಗೆ ಒದಗಿಸಲಾಗಿತ್ತು. ಅಪೂರ್ಣವಾಗಿದ್ದ ಕೆಲಸವನ್ನು ದಶಕದ ಹಿಂದೆ ಮುಗಿಸಲಾಗಿದೆ. ಇದಲ್ಲದೇ ಮುಡಾದಿಂದಲೇ ಪೆರಿ-ರಲ್ ರಿಂಗ್ ರಸ್ತೆ ರೂಪಿಸುವ ಕುರಿತು ೭-೮ ವರ್ಷಗಳ ಹಿಂದೆಯೇ ಚರ್ಚೆಗಳು ನಡೆದು ಜಾಗವನ್ನು ಗುರುತಿಸಲಾಗಿತ್ತು. ಆದರೆ, ಯೋಜನೆ ಕುಂಟುತ್ತಾ ಸಾಗಿತ್ತು. ಈಗ ಮತ್ತೆ ಯೋಜನೆ ಅನುಷ್ಠಾನಕ್ಕೆ ಮುಡಾ ಮುಂದಾಗಿರುವುದರಿಂದ ಭೂಸ್ವಾಽನದ ಜತೆಗೆ ರಸ್ತೆ ನಿರ್ಮಾಣಕ್ಕೆ ಕೋಟಿಗಟ್ಟಲೇ ಅನುದಾನ ಬೇಕಿದೆ. ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಆರಂಭಿಸುವ ಚಿಂತನೆ ಇರುವ ಕಾರಣ ಡಿಪಿಆರ್ ತಯಾರಾದ ಮೇಲೆ ಯೋಜನೆ ಬಗ್ಗೆ ನಿಖರ ತೀರ್ಮಾನವಾಗುವ ಸಾಧ್ಯತೆ ಇದೆ.

” ಮೈಸೂರಿನ ಮುಂದಿನ ನಾಲ್ಕೈದು ದಶಕಗಳ ಅಭಿವೃದ್ಧಿಯನ್ನು ಗಮನ ದಲ್ಲಿಟ್ಟುಕೊಂಡು ಹೊರ ಪರಿಧಿ ರಸ್ತೆ ನಿರ್ಮಾಣವಾದರೆ ಮತ್ತಷ್ಟು ಕೈಗಾರಿಕೆಗಳು ಸ್ಥಾಪನೆಯಾಗಲು ಮತ್ತು ಸಂಚಾರದ ದಟ್ಟಣೆ ತಗ್ಗಿಸಲು ಅನುಕೂಲವಾಗಲಿದೆ. ಈಗಾಗಲೇ ಡಿಪಿಆರ್ ತಯಾರಿಸಲು ಅನುದಾನ ಕಾಯ್ದಿರಿಸಲಾಗಿದೆ. ಸರ್ಕಾರದ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಶುರು ಮಾಡುತ್ತೇವೆ.”

-ಎ.ಎನ್.ರಘುನಂದನ್, ಆಯುಕ್ತರು, ಮುಡಾ.

ಆಂದೋಲನ ಡೆಸ್ಕ್

Recent Posts

ಅಕ್ರಮವಾಗಿ ಶ್ರೀಗಂಧ ಶೇಖರಣೆ ಮಾಡಿದ್ದ ಆರೋಪಿ ಬಂಧನ

ಮೈಸೂರು: ಅಕ್ರಮವಾಗಿ ಶ್ರೀಗಂಧ ಶೇಖರಣೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮೈಸೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಕೆಸರೆಯಲ್ಲಿ ಈ ಘಟನೆ…

5 mins ago

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಂದು 60 ಇಂಡಿಗೋ ವಿಮಾನಗಳ ಹಾರಾಟ ರದ್ದು

ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಂದು ಕೂಡ 60 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ…

29 mins ago

ಓದುಗರ ಪತ್ರ:  ನಂಜನಗೂಡಿನ ಪ್ರಮುಖ ವೃತ್ತಕ್ಕೆ ಬಿ.ವಿ.ಪಂಡಿತರ ಹೆಸರಿಡಿ

ನಂಜನಗೂಡಿನ ಸದ್ವೈದ್ಯ ಶಾಲಾ ಸಂಸ್ಥಾಪಕರಾಗಿದ್ದ ಬಿ.ವಿ.ಪಂಡಿತರು ಆಯುರ್ವೇದ ಉತ್ಪನ್ನಗಳನ್ನು ರೂಪಿಸಿದ ಹಿರಿಮೆ ಹೊಂದಿದ್ದಾರೆ. ದಂತಧಾವನ ಚೂರ್ಣ (ನಂಜನಗೂಡು ಹಲ್ಲು ಪುಡಿ)…

41 mins ago

ಓದುಗರ ಪತ್ರ:  ಭೈರಪ್ಪ ಸ್ಮಾರಕ, ತಿಮ್ಮಕ್ಕ ವಸ್ತು ಸಂಗ್ರಹಾಲಯ ಸ್ವಾಗತಾರ್ಹ

ಮೈಸೂರಿನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕ ನಿರ್ಮಾಣ ಹಾಗೂ ಬೇಲೂರಿನಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ವಸ್ತು ಸಂಗ್ರಹಾಲಯ…

47 mins ago

ಓದುಗರ ಪತ್ರ:  ಗೋಪಾಲಸ್ವಾಮಿ ಬೆಟ್ಟದ ಬಸ್ ಪ್ರಯಾಣ ದರ ಇಳಿಕೆ ಮಾಡಿ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ…

50 mins ago

ಓದುಗರ ಪತ್ರ: ಮಸೂದೆ ಅಂಗೀಕಾರಕ್ಕಷ್ಟೇ ವಿಧಾನಸಭೆ ಅಧಿವೇಶನ ಸೀಮಿತವಾಗದಿರಲಿ

ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸದನದಲ್ಲಿ ಯಾವುದೇ ವಿಷಯ, ಜನರ ಸಮಸ್ಯೆ, ಮಸೂದೆಗಳ ಬಗ್ಗೆ ರಚನಾತ್ಮಕ ಚರ್ಚೆ…

53 mins ago