Andolana originals

ದಕ್ಷಿಣ ಶಿಕ್ಷಕರ ಕ್ಷೇತ್ರ: ಗೆಲುವಿಗೆ ‘ಮೈತ್ರಿ’ ಒಗ್ಗಟ್ಟಿನ ಮಂತ್ರ

ಮೈಸೂರು: ಮೇಲ್ಮನೆಯಲ್ಲಿ ಬಹುಮತ ಉಳಿಸಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಜಂಟಿ ಸಮರಕ್ಕಿಳಿದಿರುವ ಜಾದಳ-ಬಿಜೆಪಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಣಿಸಲು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದು, ನಾಲ್ಕು ಜಿಲ್ಲೆಗಳ ಹಾಲಿ-ಮಾಜಿ ಶಾಸಕರಿಗೆ ಚುನಾವಣಾ ಜವಾಬ್ದಾರಿ ಹೊರಿಸಿವೆ. ಶಿಕ್ಷಕರ ವಲಯದಲ್ಲಿ ತಮ್ಮದೇ ಆದ ಹಿಡಿತ, ವೈಯಕ್ತಿಕ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ಬಲ ಇರುವುದರಿಂದ ಈ ಚುನಾವಣೆಯಲ್ಲಿ ಮೈತ್ರಿಕೂಟದ ನಾಯಕರು ಗೆಲುವಿಗಾಗಿ ಸಾಕಷ್ಟು ಬೆವರಿಳಿಸುವಂತಾಗಿದೆ.

ಹೀಗಾಗಿಯೇ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಉಭಯ ಪಕ್ಷಗಳ ನಾಯಕರೂ ಜಂಟಿಯಾಗಿ ಪ್ರಚಾರ ಮಾಡಿ ಗೆಲುವಿಗಾಗಿ ಸದ್ದಿಲ್ಲದೆ ನಾನಾ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದ ಮುನ್ನಾ ದಿನವಾದ ಜೂ.3ರಂದು ನಡೆಯಲಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಜಾ.ದಳ-ಬಿಜೆಪಿ ತೀವ್ರ ಪೈಪೋಟಿ ನೀಡುತ್ತಿರುವುದರಿಂದ ದಿನದಿಂದ ದಿನಕ್ಕೆ ಪ್ರಚಾರದ ಕಾವೇರುತ್ತಿದೆ. ಮತದಾರರ ಮನವೊಲಿಕೆಗೂ ಕಸರತ್ತು ನಡೆಯುತ್ತಿದೆ.

ಒಗ್ಗಟ್ಟಿನ ಜಂಟಿ ಹೋರಾಟ: ಕಾಂಗ್ರೆಸ್ ವಿರುದ್ಧ ಗೆಲುವು ಸಾಧಿಸಲು ಜಾ.ದಳ ಬಿಜೆಪಿ ನಾಯಕರು ಜಂಟಿಸಮರಕ್ಕಿಳಿದಿದ್ದಾರೆ. ವಿಶೇಷವಾಗಿ ಮೈಸೂರು, ಮಂಡ್ಯ ಜಿಲ್ಲೆಗಳ ಮತದಾರರನ್ನು ಗಣನೀಯವಾಗಿ ಸೆಳೆಯಲು ಬೇಕಾದ ರಣತಂತ್ರ ರಚಿಸಿದ್ದಾರೆ. ಜಾ.ದಳದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್, ಬಿಜೆಪಿಯ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಚಿವರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ. ಬಿಜೆಪಿ ಮತ್ತು ಜಾ.ದಳದ ಹಾಲಿ-ಮಾಜಿ ಶಾಸಕರು ಇರುವ ಕ್ಷೇತ್ರಗಳಲ್ಲಿ ಮತದಾರರನ್ನು ಭೇಟಿ ಮಾಡಲು ತಂಡಗಳನ್ನು ರಚನೆ ಮಾಡಿರುವುದಲ್ಲದೆ, ಮತಗಟ್ಟೆಗೆ ಕರೆತಂದು ಮತ ಚಲಾಯಿಸುವಂತಹ ಹೊಣೆಯನ್ನೂ ನೀಡಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಕೆ.ಆರ್.ಕ್ಷೇತ್ರ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾರರು ಜಾಸ್ತಿ ಇರುವುದರಿಂದ ಕಾರ್ಯತಂತ್ರ ಹೆಣೆದು ಮತದಾರರನ್ನು ನೇರವಾಗಿ ತಲುಪುವುದಕ್ಕೆ ತಯಾರಿ ಮಾಡಲಾಗಿದೆ. ವಿಶೇಷವಾಗಿ ಜಾ.ದಳಕ್ಕಿಂತಲೂ ಬಿಜೆಪಿಯ ಮುಖಂಡರು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೂಚನೆ ಮೇರೆಗೆ ಬಹಳ ಉತ್ಸಾಹದಿಂದ ಓಡಾಡುತ್ತಿದ್ದರೆ, ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ನಿರಂಜನಮೂರ್ತಿ ಸಾಥ್ ನೀಡುತ್ತಿದ್ದಾರೆ. ವೀರಶೈವ, ಬ್ರಾಹ್ಮಣ, ಒಕ್ಕಲಿಗ ಸಮುದಾಯಗಳ ಮತದಾರರನ್ನು ಜಾ.ದಳಕ್ಕೆ ಸೆಳೆಯುವ ಕೆಲಸ ಮಾಡುತ್ತಿದ್ದರೆ, ಮತ್ತೊಂದೆಡೆ ಮಂಡ್ಯ, ಹಾಸನ ಜಿಲ್ಲೆಗಳಲ್ಲೂ ಒಕ್ಕಲಿಗ ಮತದಾರರ ಮತಗಳು ಚದುರದಂತೆ ತಡೆಯಲು ಪ್ಲಾನ್ ಮಾಡಲಾಗುತ್ತಿದೆ.

ಮರಿತಿಬ್ಬೇಗೌಡರಿಗೆ ಸಿಎಂ, ಡಿಸಿಎಂ ಬಲ: ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಪ್ರಾಬಲ್ಯ ಉಳಿಸಿಕೊಂಡಿರುವ ಮರಿತಿಬ್ಬೇಗೌಡರಿಗೆ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್. ಸಿ.ಮಹದೇವಪ್ಪ ಸೇರಿದಂತೆ ಇತರೆ ಸಚಿವರ ಬಲವಿದೆ. 2000ರಲ್ಲಿ ಕಾಂಗ್ರೆಸ್, 2006ರಲ್ಲಿ ಪಕ್ಷೇತರ, 2012 ಮತ್ತು 2018ರಲ್ಲಿ ಜಾ.ದಳದಿಂದ ಸ್ಪರ್ಧಿಸಿ ಗೆಲುವು ಕಂಡಿರುವ ಮರಿತಿಬ್ಬೇಗೌಡರು ನಾಲ್ಕೂ ಜಿಲ್ಲೆಗಳ ನಾಡಿಮಿಡಿತವನ್ನು ಹೊಂದಿರುವುದಲ್ಲದೆ, ಶಿಕ್ಷಕರ ಜತೆಗೆ ನಿರಂತರ ಸಂಪರ್ಕ ಹೊಂದಿರುವುದರಿಂದ ಮಣಿಸುವುದು ಸುಲಭವಲ್ಲ ಎನ್ನುವುದು ಜಾ.ದಳ ನಾಯಕರನ್ನು ಕಾಡುತ್ತಿದೆ. ಒಕ್ಕಲಿಗ ಮತದಾರರ ಜತೆಗೆ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತದಾರರ ಕ್ರೋಢೀಕರಣಕ್ಕೆ ಕಾಂಗ್ರೆಸ್ ನಾಯಕರು ಕೈ ಹಾಕಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ಇನ್ನೂ ನಾಲ್ಕು ವರ್ಷಗಳವರೆಗೆ ಸರ್ಕಾರ ಇರುವುದರಿಂದ ಇತರೆ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಒತ್ತಡಹೇರಬಹುದೆಂಬ ಕಾರಣಕ್ಕಾಗಿ ಮರಿತಿಬ್ಬೇಗೌಡರನ್ನು ಗೆಲ್ಲಿಸಲು ಒಂದು ಟೀಮ್ ಆಂತರಿಕವಾಗಿ ಪ್ರಚಾರ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ.

ಮುಖ್ಯಮಂತ್ರಿಗೆ ಪ್ರತಿಷ್ಠೆಯ ಚುನಾವಣೆ!

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯು ಲೋಕಸಭಾ ಚುನಾವಣೆಯಷ್ಟೇ ಪ್ರಮುಖವಾಗಿದ್ದು, ಅದಕ್ಕಾಗಿ ಅನೇಕ ಮುಖಂಡರ ಜತೆ ಸಮಾಲೋಚನೆ ನಡೆಸಿ ಕೆಲಸ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅಭ್ಯರ್ಥಿ ಮರಿತಿಬ್ಬೇಗೌಡರ ಪರ ಪ್ರಚಾರ ಮಾಡುವುದರ ಜತೆಗೆ ಶಾಸಕರು ತಮ್ಮ ತಮ್ಮ ವ್ಯಾಪ್ತಿಯ ಮತದಾರರನ್ನು ಒಂದೆಡೆ ಸೇರಿಸಿ ಕಾಂಗ್ರೆಸ್ ಬೆಂಬಲಿಸುವಂತೆ ನೋಡಿಕೊಳ್ಳುವಂತೆ ಹೇಳಿದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್ ಸೋಲು ಕಾಣುತ್ತಾ ಬಂದಿರುವ ಕಾರಣ ಈ ಬಾರಿ ಗೆದ್ದು ಎದುರಾಳಿಗಳಿಗೆ ಮುಖಭಂಗವನ್ನುಂಟು ಮಾಡಬೇಕು ಎನ್ನುವ ಖಡಕ್ ಸಂದೇಶ ರವಾನಿಸಿದ್ದಾರೆ. ಇದರಿಂದ ಎಚ್ಚೆತ್ತಿರುವ ಸ್ಥಳೀಯರು ಮತದಾರರನ್ನು ಭೇಟಿ ಮಾಡಿ ಕಾಂಗ್ರೆಸ್ ಪರ ಮತ ಹಾಕುವಂತೆ ಮನವೊಲಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ

ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ ಈ ಅಮಾನವೀಯ ಕ್ರೂರ ಕೃತ್ಯಕ್ಕೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುತ್ತಿದೆ…

41 mins ago

ಓದುಗರ ಪತ್ರ: ರಸ್ತೆ ಕಾಮಗಾರಿ ಪೂರ್ಣಗೊಳಿಸಿ

ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ವಾರ್ಡ್ ೨೩ ರ ಹೊಸೂರು ಜನನಿಬಿಡ ಪ್ರದೇಶವಾಗಿದ್ದು, ಅಕ್ಕ ಪಕ್ಕದಲ್ಲಿ ಶಾಲೆ ಇದ್ದು, ಪೋಷಕರು ತಮ್ಮ…

1 hour ago

ಓದುಗರ ಪತ್ರ: ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಮೂಲ ಸೌಕರ್ಯ ಕಲ್ಪಿಸಿ

ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ (ಬಿಸಿಡಬ್ಲ್ಯೂಡಿ ೨೨೫೦)ಲ್ಲಿ ಶೌಚಾಲಯವು ಅಶುಚಿತ್ವದಿಂದ ಕೂಡಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ವಾರ್ಡನ್…

1 hour ago

ಅರಮನೆ ಮುಂಭಾಗ ಸಿಲಿಂಡರ್ ಸ್ಪೋಟ : ಮೃತ ವ್ಯಕ್ತಿ ಸಲೀಂ ವಿರುದ್ಧ ಎಫ್ಐಆರ್ ; ಗುರುತು ಪತ್ತೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ(ಡಿ.25) ಸಂಜೆ ಅರಮನೆ ಮುಂಭಾಗ ಬಲೂನ್​ಗೆ ಗ್ಯಾಸ್​ ತುಂಬುವಾಗ ಹೀಲಿಯಂ ಸಿಲಿಂಡರ್​ ಸ್ಫೋಟಗೊಂಡು…

1 hour ago

ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ

ಮೈಸೂರಿನ ಜಯನಗರದ ಇಸ್ಕಾನ್ ಕೃಷ್ಣ ದೇವಾಲಯ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಬಿದ್ದಿದೆ. ಕೆಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ…

1 hour ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಎಲ್ಲ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರುವಂತಾದರೆ!

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…

3 hours ago