Andolana originals

ಪೋಕ್ಸೋ ಕಾಯಿದೆ ದುರ್ಬಳಕೆ, ಚಿತಾವಣೆ ಪೋಕ್ಸೋ ಅಪರಾಧಕ್ಕೆ ಸಮ!

ಸ್ಟ್ಯಾನ್ಲಿ, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ

ಮಕ್ಕಳಿಗೆ ನೈತಿಕ ಪಾಠ ಮಾಡಬೇಕಾದ ಶಿಕ್ಷಕರು ಸೇರಿಕೊಂಡು ಮಕ್ಕಳಿಗೆ ಪ್ರಚೋದನೆ ನೀಡಿ ತಮ್ಮ ಮೇಲೆ ಶಿಕ್ಷಕರೋರ್ವರು ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಸುಳ್ಳು ದೂರು ನೀಡಿಸಿರುವುದು ನಿಜಕ್ಕೂ ಆಘಾತಕಾರಿಯಾದ ಸಂಗತಿ. ಇದು ನಮ್ಮ ಸಮಾಜದ ನೈತಿಕ ಅಧಃಪತನದ ಸಂಕೇತವೂ ಹೌದು. ಈ ದುಷ್ಕ ತ್ಯವನ್ನು ನಾಗರಿಕ ಸಮಾಜದಲ್ಲಿ ಖಂಡಿಸಲು ಪದಗಳೂ ನಿಲುಕಲಾರದು. ಈ ಕೃತ್ಯವನ್ನು ಊಹಿಸಿರುವ ಹಾಗೂ ಅನುಷ್ಠಾನಕ್ಕೆ ತಂದಿರುವ ಮೂವರು ಶಿಕ್ಷಕರಿಗೂ ಕಾನೂನಿನ ಕ್ರಮ ಜರುಗಿಸಿ ಶಿಕ್ಷೆ ಕೊಡಿಸಬೇಕಾಗಿದೆ. ಏಕೆಂದರೆ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ಶೋಷಣೆಗೆ ಶಿಕ್ಷಕನೋರ್ವ ತೆರಬೇಕಾದ ಬೆಲೆಯನ್ನು ಇವರೆಲ್ಲರೂ ಅರಿತವರೇ ಆಗಿದ್ದಾರೆ. ಆತನ ಮೇಲಾಗುವ ಕಾನೂನಾತ್ಮಕ ಕ್ರಮಗಳು, ತನಿಖೆ ಇಲ್ಲದೆ ದೊರಕುವ ಜೈಲುವಾಸ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಮಾನಸಿಕ ದುಷ್ಪರಿಣಾಮಗಳ ಬಗ್ಗೆ ಈ ಶಿಕ್ಷಕರಿಗೆ ಖಂಡಿತ ಅರಿವು ಇದ್ದೇ ಇರುತ್ತದೆ. ಅನೇಕ ಅಮಾಯಕರು ಇಂತಹ ಸುಳ್ಳು ಆರೋಪಗಳು ಬುಸುಗುಡಲು ಶುರುವಾದ ಕೂಡಲೇ ನೈತಿಕ ಅದಃಪತನವಾಗಿ, ಮಾನಸಿಕವಾಗಿ ಕುಗ್ಗಿ, ಸಮಾಜ ವನ್ನು, ಮನೆಯವರನ್ನು, ಪೊಲೀಸ್ ಹಾಗೂ ಕಾನೂನಿನ ವ್ಯವಸ್ಥೆಯನ್ನು ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗಿ ಬಿಡುತ್ತಾರೆ. ಪೊಲೀಸರು ಇಂತಹ ಪ್ರಕರಣದಲ್ಲಿ ಒಂದಿಷ್ಟು ತಾಳ್ಮೆ ವಹಿಸಿದರೂ, ಸಂಬಂಧಿಕರು ಹಾಗೂ ಕುಟುಂಬದ ಸದಸ್ಯರು ಒಮ್ಮೆಲೇ ಆರೋಪಿಗಳ ಮೇಲೆ ಸಿಡಿದೇಳುವುದು ಸಹಜವಾದ ವಿಚಾರವೇ. ಇಂತಹ ಪ್ರಕರಣ ಗಳಲ್ಲಿ ಆರೋಪಿಗಳಿಗೆ ಜಾಮೀನು ರಹಿತ ಬಂಧನ ಹಾಗೂ ಜೀವಾವಧಿಯವರೆಗೆ ಶಿಕ್ಷೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇವರ ಮನೆಯ ಸದಸ್ಯರು ಕೂಡ ಹೊರ ಪ್ರಪಂಚದಲ್ಲಿ ತಲೆಯೆತ್ತಿ ಓಡಾಡದಂತೆ ವಿಷಮ ಪರಿಸ್ಥಿತಿ ಎದುರಾಗುತ್ತದೆ.

ಇದು ಒಂದು ಕಡೆಯಾದರೆ, ಇನ್ನೊಂದೆಡೆ ಅಮಾಯಕ ಹೆಣ್ಣು ಮಕ್ಕಳಿಗೆ ಲೈಂಗಿಕ ವಿಚಾರಗಳನ್ನು ಹೇಳಿಕೊಟ್ಟು, ಯಾವ ಯಾವ ರೀತಿಯಲ್ಲಿ ಅವರ ದೇಹ ದುರುಪಯೋಗವಾಗಿದೆ, ಯಾವ ಯಾವ ಅಂಗಗಳನ್ನು ಆರೋಪಿ ಹೇಗೆ ಮುಟ್ಟಿರುತ್ತಾನೆ, ಸಂಭೋಗ ಅಂದರೆ ಏನು, ಆರೋಪಿ ಹೇಗೆ ಸಂಭೋಗಕ್ಕೆ ಆಹ್ವಾನಿಸಿದ್ದಾನೆ ಹಾಗೂ ಆ ಲೈಂಗಿಕ ಕೃತ್ಯವನ್ನು ಎಸೆಗಿರುತ್ತಾನೆ ಎಂಬುದನ್ನು ವಿವರವಾಗಿ ಹೇಳಿಸಿರುವುದರ ಮೂಲಕ ಮಕ್ಕಳ ನೈತಿಕತೆ ಕುಗ್ಗುವಂತೆ ಮಾಡಿಸಿ ಅವರ ಶೀಲದ ಮೇಲೆ ಅವರೇ ಮಸಿ ಬಳಿದುಕೊಳ್ಳುವ ಹಾಗೆ ಮಾಡುವುದು ಅತ್ಯಾಚಾರ ಎಸಗುವುದಕ್ಕೆ ಸಮವೇ ಆಗಿದೆ. ಹೊಸದಾಗಿ ಜಾರಿಗೆ ಬಂದಿರುವ BNS ಅಂದರೆ Bharatiya Nyaya Sanhita- ೨೦೨೩ರಲ್ಲಿ ಅಪ್ರಾಪ್ತ ಮಕ್ಕಳಿಗೆ ಸುಳ್ಳು ದೂರು ಕೊಡಲು ಪ್ರಚೋದನೆ ನೀಡುವುದು ಶಿಕ್ಷಾರ್ಹ ಅಪರಾಧ.

BNSನಲ್ಲಿ ಈ ಕೆಳಗಿನ ಸೆಕ್ಷನ್‌ಗಳು ಅನ್ವಯಿಸುತ್ತವೆ

೧ BNS ಸೆಕ್ಷನ್ ೨೧೭- ಸುಳ್ಳು ಮಾಹಿತಿ ನೀಡಿ ಅಧಿಕಾರಿಯನ್ನು ತಪ್ಪು ದಾರಿಗೆ ಎಳೆಯುವುದು

ಯಾರಾದರೂ ಒಬ್ಬ ಮುಗ್ಧ ವ್ಯಕ್ತಿಗೆ ಶಿಕ್ಷೆಯಾಗಬೇಕು ಎಂದು ಸುಳ್ಳು ಮಾಹಿತಿಯನ್ನು ಪೊಲೀಸರಿಗೆ ಅಥವಾ ಸರ್ಕಾರಿ ಅಧಿಕಾರಿಗೆ ನೀಡಿದರೆ ೧ ವರ್ಷದವರೆಗೆ ಜೈಲು ಅಥವಾ ದಂಡ ಅಥವಾ ಎರಡೂ ಒಟ್ಟಿಗೆ ವಿಧಿಸಬಹುದಾಗಿದೆ.

೨ BNS ಸೆಕ್ಷನ್ ೨೧೨ /೨೧೪ – ಯಾವುದೇ ವ್ಯಕ್ತಿಯ ಮೇಲೆ ತಪ್ಪಿಲ್ಲದಿದ್ದರೂ, ಅವನಿಗೆ ಶಿಕ್ಷೆಯಾಗಲಿ ಎಂದು ಸುಳ್ಳು ಆರೋಪ ಹೊರಿಸುವುದು ಸಾಬೀತಾದರೆ ೨ ವರ್ಷದಿಂದ ೭ ವರ್ಷಗಳವರೆಗೆ ಜೈಲು ಶಿಕ್ಷೆ ಖಂಡಿತ.

೩ BNS ಸೆಕ್ಷನ್ ೨೨೭ – ೨೨೮ – ಸುಳ್ಳು ಸಾಕ್ಷ್ಯ ಸೃಷ್ಟಿಸುವುದು ಮಕ್ಕಳಿಗೆ ಸುಳ್ಳು ಹೇಳಿಕೊಟ್ಟು, ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸುವುದು ಅತ್ಯಂತ ಗಂಭೀರ ಅಪರಾಧ. ಇದಕ್ಕೆ ೩ರಿಂದ ೭ ವರ್ಷಗಳವರೆಗೆ ಜೈಲು ಮತ್ತು ದಂಡ ಕಾಯುತ್ತಿರುತ್ತದೆ. ಒಂದು ವೇಳೆ ಆ ಸುಳ್ಳು ಸಾಕ್ಷ್ಯದಿಂದ ಮುಗ್ಧ ಶಿಕ್ಷಕನಿಗೆ ೭ ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾಗುವಂತಿದ್ದರೆ, ಸುಳ್ಳು ಸೃಷ್ಟಿಸಿದವರಿಗೆ ೭ ವರ್ಷದಿಂದ ಜೀವಾವಽ ಶಿಕ್ಷೆಯವರೆಗೆ ಆಗಬಹುದು.

೪ BNSಸೆಕ್ಷನ್ ೩೫೬-ಮಾನನಷ್ಟ (Defamation)* ಸುಳ್ಳು ಲೈಂಗಿಕ ಆರೋಪದಿಂದ ಶಿಕ್ಷಕನ ಮಾನಹಾನಿಯಾದರೆ ೨ ವರ್ಷದವರೆಗೆ ಜೈಲು ಮತ್ತು ದಂಡ ವಿಧಿಸಬಹುದು.

೫ ಅತ್ಯಂತ ಮುಖ್ಯವಾಗಿ ಆಘೆಖ ಸೆಕ್ಷನ್ ೫೪-೫೭-ಕುಮ್ಮಕ್ಕು (Abetment) ಪ್ರಕಾರ ಮಕ್ಕಳನ್ನು ಬಳಸಿಕೊಂಡು ಅಪರಾಧ ಮಾಡಿಸಿದರೆ, ಅಪರಾಧ ಮಾಡಿದವನಿಗೆ ಎಷ್ಟು ಶಿಕ್ಷೆ ಆಗುತ್ತದೆಯೋ, ಅದೇ ಶಿಕ್ಷೆ ಕುಮ್ಮಕ್ಕು ನೀಡಿದವನಿಗೂ ಆಗುತ್ತದೆ. ಸರಳವಾಗಿ ಹೇಳುವುದಾದರೆ POCSO ಕಾಯ್ದೆ ಮಕ್ಕಳನ್ನು ರಕ್ಷಿಸಲು ಇದೆ, ಆದರೆ ಅದನ್ನು ದುರುಪಯೋಗಪಡಿಸಿಕೊಂಡು ಮುಗ್ಧರ ಮೇಲೆ ಸುಳ್ಳು ಕೇಸ್ ಹಾಕಿಸಲು ಮಕ್ಕಳನ್ನು ಬಳಸಿಕೊಂಡರೆ, ಪ್ರಚೋದನೆ ನೀಡಿದ ವಯಸ್ಕರಿಗೆ POCSO ಸೆಕ್ಷನ್ ೨೨ + BNS ಸೆಕ್ಷನ್ ೨೧೨, ೨೨೮, ೫೪ರ ಅಡಿಯಲ್ಲಿ ೨ರಿಂದ ೭ ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ಪಾಠ ಹೇಳಿಕೊಟ್ಟ ಗುರುವಿನ ವಿರುದ್ಧ ಸುಳ್ಳು ಪೋಕ್ಸೋ ಪ್ರಕರಣ ದಾಖಲಿಸಲು ಮೈಸೂರು ತಾಲ್ಲೂಕಿನ ಸರ್ಕಾರಿ ಶಾಲೆಯೊಂದರ ಮೂವರು ಶಿಕ್ಷಕರು ಚಿತಾವಣೆ ಮಾಡಿರುವುದು, ಹಾಗೂ ಅದಕ್ಕಾಗಿ ಮುಗ್ಧ ಮಕ್ಕಳ ಮನಸ್ಸು ಹಾಳುಗೆಡವಿ, ಅವರ ಶೀಲದ ಬಗ್ಗೆ ಅವರೇ ಅಪಚಾರ ತಂದುಕೊಳ್ಳುವ ಹಾಗೆ ಮಾಡಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು ನನ್ನ ಮನಸ್ಸು ಕದಡಿ ಹೋಗಿದೆ. ಈ ಕೃತ್ಯವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಒಬ್ಬ ಮುಗ್ಧ ಶಿಕ್ಷಕನ ಭವಿಷ್ಯ ಮತ್ತು ಗೌರವಕ್ಕೆ ಧಕ್ಕೆಯುಂಟು ಮಾಡುವ ಹಾಗೂ ಪೋಕ್ಸೋ (POCSO) ನಂತಹ ಪವಿತ್ರ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನವಾಗಿದೆ. ಅನಕ್ಷರಸ್ಥರು ಕೂಡ ಇಂತಹ ದುಷ್ಕ ತ್ಯವನ್ನು ಊಹಿಸಲಾರರು. ಇನ್ನೇನು ನಿವೃತ್ತಿಯ ಅಂಚಿನಲ್ಲಿರುವ ಆ ಶಿಕ್ಷಕರ ಪರವಾಗಿ ನನ್ನ ಅನುಭೂತಿ ಇದೆ.

” ಈ ಕೃತ್ಯದಲ್ಲಿ ಜಾಮೀನು ರಹಿತ ಬಂಧನ ಖಂಡಿತ ಅನಿವಾರ್ಯ! ಅವರಿಗೆ ಹಾಗೂ ಅವರ ಕುಟುಂಬಕ್ಕೆ ಈ ಚಿತಾವಣೆಯಿಂದ ಈಗಾಗಲೇ ಏನಾದರೂ ನಷ್ಟ ಸಂಭವಿಸಿದ್ದರೆ! ಹಾಗೆ ಆಗದಿರಲಿ.\ ಈ ಪ್ರಕರಣದಲ್ಲಿ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಪೊಲೀಸ್, ಶಿಕ್ಷಣ ಇಲಾಖೆ ಅತ್ಯಂತ ವಿವೇಚನಾಪೂರ್ವ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಬೇಕಾಗಿದೆ.”

 

 

 

ಆಂದೋಲನ ಡೆಸ್ಕ್

Recent Posts

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

8 mins ago

ರಾಜಕೀಯ ಧ್ರುವೀಕರಣಕ್ಕೆ ಈಗ ಸಿಗುತ್ತಿದೆ ವೇಗ

ರಾಜ್ಯ ರಾಜಕಾರಣ ಕುತೂಹಲಕಾರಿ ತಿರುವು ಪಡೆಯುತ್ತಿದೆ. ನಾಲ್ಕು ತಿಂಗಳ ಹಿಂದೆ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದೇ ಇದಕ್ಕೆ ಕಾರಣ. ಅಂದ…

19 mins ago

ಮಳೆಯಿಲ್ಲದೇ ಒಣಗುತ್ತಿದೆ ನಾಟಿ ಮಾಡಿದ ಪೈರು

ಲಕ್ಷ್ಮೀಕಾಂತ್ ಕೊಮಾರಪ್ಪ ವಾಡಿಕೆಯಂತೆ ಸುರಿಯದ ಮಳೆ; ಆತಂಕಗೊಂಡಿರುವ ರೈತರು ಸೋಮವಾರಪೇಟೆ: ಮಳೆ ಕೈಕೊಟ್ಟ ಪರಿಣಾಮ ಭತ್ತದ ಬೆಳೆಗೆ ನೀರಿನ ಕೊರತೆ…

26 mins ago

ಹೆದ್ದಾರಿ ಅಗಲೀಕರಣ ಕಾಮಗಾರಿ; ಸವಾರರಿಗೆ ದೂಳಿನ ಕಿರಿಕಿರಿ

ಮಹೇಂದ್ರ ಹಸಗೂಲಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾರ್ವಜನಿಕರ ಆಗ್ರಹ  ಗುಂಡ್ಲುಪೇಟೆ: ಮೈಸೂರು- ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ…

31 mins ago

ಪಾಳು ಕೊಂಪೆಯಂತಾದ ಕರ್ಜನ್ ಪಾರ್ಕ್!

ದಿನೇಶ್ ಕುಮಾರ್ ಎಚ್.ಎಸ್. ಅಶುಚಿತ್ವ ಮರೆಮಾಚಲು ಹಗಲು ಹೊತ್ತಿನಲ್ಲಿಯೇ ಪಾರ್ಕ್ ಬಂದ್; ಸಾರ್ವಜನಿಕರ ಆಕ್ರೋಶ ಮತ್ತೊಂದೆಡೆ ನಳನಳಿಸುತ್ತಿದೆ ಜಿಲ್ಲಾ ಪಂಚಾಯಿತಿ…

36 mins ago

ಹನೂರು | ಅರಣ್ಯದಲ್ಲಿ 292 ಗಾಂಜಾ ಗಿಡಗಳು ಪತ್ತೆ ; 213 ಕೆಜಿ ಗಾಂಜಾ ವಶ

ಹನೂರು : ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ದೊಡ್ಡಸಂಪಿಗೆ ಅರಣ್ಯ ಪ್ರದೇಶದ ಕೂಳಿಹಟ್ಟಿ ಭಾಗದ ಬೆಳ್ಳಾಜಿ…

13 hours ago