ಮೈಸೂರು: ಕೇಂದ್ರದ ಯುಪಿಎ ಸರ್ಕಾರ ೨೦೦೫ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯಡಿ ಗ್ರಾಮೀಣ ಕುಟುಂಬಗಳಲ್ಲಿ ಜೀವನೋಪಾಯಕ್ಕೆ ಭದ್ರತೆ ಒದಗಿಸಲು ಗ್ರಾಮೀಣ ಪ್ರದೇಶದ ಕುಟುಂಬದ ಕೌಶಲ್ಯರಹಿತ ವಯಸ್ಕ ಸದಸ್ಯರಿಗೆ ಕನಿಷ್ಠ ೧೦೦ ದಿನಗಳ ಉದ್ಯೋಗ ಒದಗಿಸುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನ್ರೇಗಾ) ಹೆಸರನ್ನು ಎನ್‌ಡಿಎ ಸರ್ಕಾರ ‘ವಿಕಸಿತ ಭಾರತ್-ಉದ್ಯೋಗ ಖಾತರಿ ಅಜೀವಿಕಾ ಮಿಷನ್(ಗ್ರಾಮೀಣ) ‘ವಿಬಿ ಜೀ ರಾಮ್ ಜೀ’ ಎಂದು ಬದಲಾವಣೆ ಮಾಡಲು ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ವಿವಿಧ ಕ್ಷೇತ್ರಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವರು ‘ಆಂದೋಲನ’ ದಿನಪತ್ರಿಕೆ ಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಮನ್ರೇಗಾ ಹೆಸರು ಬದಲಾವಣೆಗೆ ವಿವಿಧ ಕ್ಷೇತ್ರಗಳ ಮುಖಂಡರ ವಿರೋಧ; ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ
” ಮಹತ್ತರವಾದ ಮನ್ರೇಗಾ ಯೋಜನೆ ಬಡವರಿಗಾಗಿ ಇದ್ದದ್ದು. ಅದನ್ನು ಬದಲಾವಣೆ ಮಾಡುವುದಾದರೂ ಏಕೆ? ಬಿಜೆಪಿ ಮುಖಂಡರಿಗೆ ಮಹಾತ್ಮ ಗಾಂಧಿ, ನೆಹರು ಬಗ್ಗೆ ವೈರತ್ವ, ದ್ವೇಷ ಇದೆ. ಹಾಗಾಗಿ, ದ್ವೇಷ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಯೋಜನೆಯನ್ನು ದುರ್ಬಲಗೊಳಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ನಡೆ ಖಂಡನೀಯ. ಹೆಸರು ಬದಲಾಯಿಸಿದಲ್ಲಿ ಹೋರಾಟ ನಡೆಸಬೇಕಾಗುತ್ತದೆ.”
-ಬಿ.ಎಂ.ರಾಮು, ಜಿಪಂ ಮಾಜಿ ಅಧ್ಯಕ್ಷ
” ಗೋಡ್ಸೆ ಪೂಜೆ ಮಾಡುವವರು ಸಹಜವಾಗಿ ಗಾಂಧೀಜಿಯನ್ನು ದ್ವೇಷಿಸುತ್ತಾರೆ. ಇವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಒಡೆದಾಳುವ ಸಂಪ್ರದಾಯವನ್ನು ಬಿಜೆಪಿ ಮುಂದುವರಿಸಿದೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಮನ್ರೇಗಾ ಯೋಜನೆ ಜಾರಿಗೆ ತಂದಿತ್ತು. ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹೆಸರು ಮಾತ್ರ ಬದಲಾವಣೆ ಏಕೆ ಎಂಬುದೇ ಅರ್ಥವಾಗುತ್ತಿಲ್ಲ.”
-ಬಾಲಕೃಷ್ಣ ಸಂಗಾಪುರ, ಹೂಟಗಳ್ಳಿ ನಿವಾಸಿ
” ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಯೋಜನೆಗಳ ಹೆಸರುಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟ ಮಾಡಿದವರ ಹೆಸರನ್ನು ತೆಗೆಯುವ ಕೆಲಸವಾಗುತ್ತಿದೆ. ಇದು ತಪ್ಪು. ಅವರ ಸರ್ಕಾರ ಹೊಸ ಯೋಜನೆಗಳನ್ನು ತಂದು ಯಾವುದಾದರೂ ಹೆಸರಿಡಲು ಅಭ್ಯಂತರವಿಲ್ಲ. ಮೊದಲೇ ಇಟ್ಟ ಹೆಸರನ್ನು ಬದಲಾಯಿಸಬಾರದು.”
-ರಾಘವೇಂದ್ರ, ವಿಜಯನಗರ ನಿವಾಸಿ
” ಒಂದು ಯೋಜನೆಗೆ ಮಹಾತ್ಮ ಗಾಂಧಿ ಅವರ ಹೆಸರಿಟ್ಟ ಮೇಲೆ ಯಾರೇ ಆದರೂ ಸರಿಯೇ ಬದಲಾವಣೆ ಮಾಡಬಾರದು. ಇದು ತಪ್ಪು ಸಂದೇಶವನ್ನು ನೀಡುತ್ತದೆ. ಗಾಂಧೀಜಿ ಅವರು ನಮಗೆ ಸ್ವಾತಂತ್ರ್ಯ ತಂದು ಕೊಟ್ಟವರು. ಇಡೀ ವಿಶ್ವಕ್ಕೆ ಅವರ ಮೇಲೆ ಅಪಾರ ಗೌರವವಿದೆ. ಅದನ್ನು ಉಳಿಸುವ ಕೆಲಸವನ್ನು ಮಾತ್ರ ನಾವು ಮಾಡಬೇಕಿದೆ.”
-ಸಿ.ನಾರಾಯಣಗೌಡ, ಅಧ್ಯಕ್ಷರು, ಮೈಸೂರು ಹೋಟೆಲ್ ಮಾಲೀಕರ ಸಂಘ
” ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಥಮ ಭಾಷಣದಲ್ಲಿ ಮನ್ರೇಗಾ ಯೋಜನೆ ಕುರಿತು ಟೀಕೆ ಮಾಡಿದ್ದರು. ಮಹಾತ್ಮ ಗಾಂಧಿ ಹೆಸರಿನ ಬಗ್ಗೆ ಅವರಿಗೆ ಪ್ರೀತಿ, ಪ್ರೇಮ ಇಲ್ಲ. ಕಾರ್ಮಿಕ ವರ್ಗಕ್ಕೆ ಕೂಲಿ ಹಣ ಹೆಚ್ಚಾಗಲು ಈ ಯೋಜನೆ ಕಾರಣ. ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಇದೆ. ಇದರ ಬಗ್ಗೆ ಹೋರಾಟ ಮಾಡಲೇಬೇಕು.
-ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರು.
” ಇದು ನಿಜಕ್ಕೂ ಬೇಕಿರಲಿಲ್ಲ. ಮಹಾತ್ಮ ಗಾಂಧಿಜಿ ಅವರಿಗೆ ಅಗೌರವ ತೋರುವುದನ್ನು ಯಾರೂ ಮಾಡಬಾರದು. ಒಂದು ಯೋಜನೆಗೆ ಅವರ ಹೆಸರನ್ನು ಇಟ್ಟ ಮೇಲೆ ಯಾವ ಸರ್ಕಾರವೂ ಅದನ್ನು ಬದಲಾವಣೆ ಮಾಡಬಾರದು. ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೊಳಿಸಲಿ. ಅದಕ್ಕೆ ಯಾವುದಾದರೂ ಹೆಸರಿಡಲಿ. ಆದರೆ, ಗಾಂಧಿಜಿ ಅವರ ಹೆಸರನ್ನು ತೆಗೆದಿದ್ದು ತಪ್ಪು.
-ಕೆ.ಬಿ.ಲಿಂಗರಾಜು, ಅಧ್ಯಕ್ಷರು, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾರ್ಗ ಮಧ್ಯದಲ್ಲಿ ಶುಕ್ರವಾರ ತಡರಾತ್ರಿ ಚಿರತೆ ಕಾಣಿಸಿಕೊಂಡಿದ್ದು ಭಕ್ತರಲ್ಲಿ ಆತಂಕ…
ಕೃಷಿ ಚಳವಳಿಯ ಪ್ರಮುಖ ನಾಯಕರಾದ ರಾಕೇಶ್ ಟಿಕಾಯತ್ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ಮುಖಂಡರಾದ ಯುದ್ಧವೀರ್ ಸಿಂಗ್…
ಹತ್ತಿ ಬೆಳೆಗಾರರು ರಾಜ್ಯದಲ್ಲಿ ವಾರ್ಷಿಕ ಸುಮಾರು 200 ಕೋಟಿ ರೂ.ಗೂ ಅಧಿಕ ನಷ್ಟ ಅನುಭವಿಸುತ್ತಿದ್ದಾರೆ. ಬಿತ್ತನೆ ಬೀಜ ಮಾರಾಟ ಮಾಡುವ…
ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…
ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…