ಕೆ.ಬಿ.ರಮೇಶನಾಯಕ
ಮೈಸೂರು: ಹಲವು ಅವ್ಯವಹಾರಗಳಿಂದಾಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿ ಯಾಗಿದ್ದ ಹಿಂದಿನ ಮುಡಾ, ಎಂಡಿಎ ಆಗಿ ಪರಿವರ್ತನೆಯಾದ ಬಳಿಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಭರ್ಜರಿಯಾಗಿ ಪ್ಲಾನ್ ಮಾಡಿದ್ದು, ನಾನಾ ಮೂಲಗಳಿಂದ ಒಂದು ಸಾವಿರ ಕೋಟಿ ರೂ. ಆದಾಯ ಗಳಿಸುವ ಯೋಜನೆ ರೂಪಿಸಿದೆ.
ಎಂಡಿಎ ಅಧಿಕಾರಿಗಳು ರೂಪಿಸಿರುವ ಪ್ಲಾನ್ ಸಫಲವಾದರೆ ಮುಂದಿನ ದಿನಗಳಲ್ಲಿ ಹತ್ತಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅಡ್ಡಿಯಾಗಿರುವ ಹಣದ ಸಮಸ್ಯೆಯನ್ನು ನಿವಾರಿಸಲು ಸುಲಭವಾಗಲಿದೆ. ಆಯಕಟ್ಟಿನ ಜಾಗದಲ್ಲಿರುವ ನಿವೇಶನಗಳನ್ನು ಆನ್ ಲೈನ್ ಮೂಲಕ ಹರಾಜು ನಡೆಸಲು ಅಧಿಸೂಚನೆ ಹೊರಡಿಸಿದೆ.
ಭವಿಷ್ಯದಲ್ಲಿ ಬಹುಮಹಡಿ ವಸತಿ ಸಮುಚ್ಚಯ ಸಂಕೀರ್ಣ, ಪೆರಿಫೆರಲ್ ರಿಂಗ್ ರಸ್ತೆ, ಹೊಸ ಬಡಾವಣೆ ಗಳ ರಚನೆ ಸೇರಿದಂತೆ ಮಹತ್ವದ ಯೋಜನೆಗಳನ್ನು ಕೈಗೊಳ್ಳಲು ಪ್ರಾರಂಭಿಕ ಹಣದ ಅಗತ್ಯವಿರುವ ಕಾರಣ ತನ್ನಲ್ಲಿರುವ ನಿವೇಶನಗಳನ್ನು ಬಳಸಿಕೊಂಡು ಆದಾಯ ಕಂಡುಕೊಳ್ಳಲು ಕೈ ಹಾಕಿದೆ.
ಈ ಹಿಂದೆ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ(ಮುಡಾ) ಅಭಿವೃದ್ಧಿಪಡಿಸಿ, ಇದೀಗ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಬಡಾವಣೆಗಳೂ ಸೇರಿದಂತೆ ಸುಮಾರು ೭೦೦ ಬಡಾವ ಣೆಗಳನ್ನು ಈಗಾಗಲೇ ಮೈಸೂರು ಮಹಾನಗರಪಾಲಿಕೆ, ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ಬೋಗಾದಿ, ಕಡಕೊಳ, ರಮ್ಮನಹಳ್ಳಿ ಪಂಚಾಯಿತಿಯೂ ಸೇರಿದಂತೆ ವಿವಿಧ ಗ್ರಾಪಂಗಳಿಗೆ ಹಸ್ತಾಂತರಿಸಲಾಗಿದೆ. ಇದರ ಪರಿಣಾಮವಾಗಿ ಆಸ್ತಿ ತೆರಿಗೆ, ನಕ್ಷೆ ಅನುಮೋದನೆ ಶುಲ್ಕ, ಖಾತಾ ನೋಂದಣಿ ಮತ್ತು ವರ್ಗಾವಣೆ ಶುಲ್ಕ, ದಾಖಲೆಗಳ ಪ್ರಮಾಣಿತ ನಕಲು, ಭೂಸ್ವಾಧಿನ ಪ್ರಮಾಣಪತ್ರ, ಎನ್‌ಒಸಿ ಸೇರಿದಂತೆ ಪ್ರಮುಖ ದಾಖಲೆಗಳ ವಿತರಣೆಯ ಶುಲ್ಕದಿಂದ ಬರುತ್ತಿದ್ದ ಆದಾಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಇದಲ್ಲದೆ, ಖಾತೆ ಮಾಡುವುದನ್ನು ಎಂಡಿಎದಿಂದ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದ್ದರಿಂದ ಮತ್ತಷ್ಟು ಆದಾಯ ಕಡಿಮೆಯಾಗಿದೆ. ಇದರಿಂದ ಅಧಿಕಾರಿಗಳು, ಸಿಬ್ಬಂದಿ ಮತ್ತು ಹೊರ ಗುತ್ತಿಗೆ ಸಿಬ್ಬಂದಿ ವೇತನ, ನಿವೃತ್ತಿ ವೇತನ, ವಾಹನಗಳ ನಿರ್ವಹಣೆ ಮತ್ತು ಕಚೇರಿ ವ್ಯವಹಾರಗಳಂತಹ ನಿತ್ಯದ ಖರ್ಚು-ವೆಚ್ಚಗಳನ್ನು ನಿರ್ವಹಿಸುವುದು ಈಗ ಪ್ರಾಧಿಕಾರಕ್ಕೆ ಕಷ್ಟಕರವಾಗಿದೆ. ಇದನ್ನು ಮನಗಂಡಿರುವ ಎಂಡಿಎ ಆಯುಕ್ತ ಕೆ.ಆರ್. ರಕ್ಷಿತ್ ಅವರು ತನ್ನ ಆರ್ಥಿಕ ಮೂಲ ಸದೃಢಗೊಳಿಸಲು ಮಾರ್ಗೋಪಾಯಗಳನ್ನು ರೂಪಿಸುತ್ತಿದ್ದು, ಆರ್ಥಿಕ ಕೊರತೆಯನ್ನು ನೀಗಿಸಲು ಸದ್ದಿಲ್ಲದೆ ಸಂಪನ್ಮೂಲ ಕ್ರೋಢೀಕರಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.
೧೫೦ ಎಕರೆ ಖಾಲಿ ಜಾಗ ಗುರುತು: ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯ ಬಡಾವಣೆ ಎನಿಸಿರುವ ವಿಜಯನಗರ(ಮೊದಲನೇ ಹಂತದಿಂದ ನಾಲ್ಕನೇ ಹಂತ), ವಿಜಯಶ್ರೀಪುರ, ದಟ್ಟಗಳ್ಳಿ, ಶ್ರೀರಾಂಪುರ, ಜೆ.ಪಿ.ನಗರ, ದೇವನೂರು, ರಾಜೀವ್ ನಗರ, ಲಲಿತಾದ್ರಿನಗರ ಮತ್ತು ಹೆಬ್ಬಾಳು ಪ್ರದೇಶಗಳಲ್ಲಿ ಸುಮಾರು ೧೫೦ ಎಕರೆ ಖಾಲಿ ಜಾಗವನ್ನು ಗುರುತಿಸಿದ್ದಾರೆ. ಇಲ್ಲಿ ೨೦೩೦, ೩೦೪೦, ೪೦೬೦ ಹಾಗೂ ೫೦೮೦ ಅಡಿ ಅಳತೆಯ ನಿವೇಶನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಸಾಮಾನ್ಯ ಹಂಚಿಕೆ ವಿಧಾನಕ್ಕೆ ಬದಲಾಗಿ ಈ ನಿವೇಶನಗಳನ್ನು ಬಹಿರಂಗ ಹರಾಜು ಮೂಲಕ ಮಾರಾಟ ಮಾಡಲು ಎಂಡಿಎ ನಿರ್ಧರಿಸಿದೆ. ಇದರಿಂದ ಹೆಚ್ಚಿನ ಆದಾಯ ಗಳಿಸುವುದರ ಜೊತೆಗೆ ನಗರದಲ್ಲಿರುವ ಎಂಡಿಎ ಭೂಮಿಗಳ ಅಕ್ರಮ ದಂಧೆ, ಒತ್ತುವರಿ ತಡೆಗಟ್ಟಬಹುದು ಎನ್ನುವ ಆಲೋಚನೆಯಾಗಿದೆ.
ಇ-ಹರಾಜಿನಲ್ಲಿ ನಿವೇಶನ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಜತೆಗೆ, ಮೈಸೂರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಬಯಸುವ ಹೊರ ಗಿನ ಉದ್ಯಮಿಗಳು ಹರಾಜಿನಲ್ಲಿ ಭಾಗವಹಿಸಿದರೆ ಮತ್ತಷ್ಟು ಹೆಚ್ಚು ಬೆಲೆ ಕೂಗಲು ಕಾರಣವಾಗುತ್ತದೆ ಎನ್ನಲಾಗಿದೆ. ಹಳೇ ಬಡಾವಣೆಗಳಲ್ಲಿ ಅಭಿವೃದ್ಧಿಪಡಿಸ ಲಾಗುವ ನಿವೇಶನಗಳನ್ನು ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಲು ನಗರಾಭಿವೃದ್ಧಿ ಇಲಾಖೆಯ ಮೂಲಕ ಮುಖ್ಯಮಂತ್ರಿ ಅವರ ಅನು ಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹರಾಜು ಪ್ರಕ್ರಿಯೆಯಿಂದ ರೂ.೧,೦೦೦ ಕೋಟಿಗೂ ಅಧಿಕ ಆದಾಯ ನಿರೀಕ್ಷಿಸಲಾಗಿದೆ.
” ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಎಂಡಿಎ ಆಸ್ತಿ ರಕ್ಷಣೆ ಮಾಡುವ ಜತೆಗೆ, ಹೊಸ ಕಾರ್ಯಕ್ರಮಗಳನ್ನು ರೂಪಿಸಲು ಆದ್ಯತೆ ನೀಡಲಾಗಿದೆ. ಸಿಎ ನಿವೇಶನಗಳ ಹರಾಜು ಪ್ರಕ್ರಿಯೆ ಶುರು ಮಾಡಲಾಗಿದ್ದು, ಆನ್‌ಲೈನ್ ಮೂಲಕವೇ ಹರಾಜು ನಡೆಯಲಿದೆ.”
-ಕೆ.ಆರ್,ರಕ್ಷಿತ್, ಆಯುಕ್ತರು, ಎಂಡಿಎ
೨,೦೦೦ ಎಕರೆಯಲ್ಲಿ ಹೊಸ ಬಡಾವಣೆಗೆ ಚಿಂತನೆ:
ಇಲವಾಲ ಹೋಬಳಿಯ ಬೊಮ್ಮೇನಹಳ್ಳಿ ಸಮೀಪ ೨,೦೦೦ ಎಕರೆ ಪ್ರದೇಶದಲ್ಲಿ ಹೊಸ ವಸತಿ ಬಡಾವಣೆ ಅಭಿವೃದ್ಧಿಪಡಿಸಲು ಎಂಡಿಎ ಚಿಂತನೆ ನಡೆಸಿದೆ. ಈ ಬಡಾವಣೆಯಲ್ಲಿ ಅರ್ಜಿದಾರರಿಗೆ ಕೈಗೆಟುಕುವ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿದೆ. ಎಂಡಿಎ ಆಯುಕ್ತರೇ ನೇರವಾಗಿ ರೈತರೊಂದಿಗೆ ಚರ್ಚಿಸಿ ೫೦:೫೦ ಅನುಪಾತಕ್ಕೆ ಒಪ್ಪಿಗೆ ಕೊಡುವಂತೆ ಕೋರಿದ್ದಾರೆ. ಅಭಿವೃದ್ಧಿಪಡಿಸಿದ ನಿವೇಶನ ಹಂಚಿಕೆ ಮಾಡುವುದರಿಂದ ಅನೇಕರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ರೈತರು ಒಪ್ಪಿಗೆ ಕೊಟ್ಟಷ್ಟು ಜಮೀನಿನಲ್ಲಿ ಬಡಾವಣೆ ರಚಿಸಿ ಹಂಚಿಕೆ ಮಾಡುವ ಮೂಲಕ ಉಳಿದ ರೈತರ ಮನವೊಲಿಸಿ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಉಡುತೊರೆ ಹಳ್ಳ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದ ಬೂದುಬಾಳು ಪುಣ್ಯ…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಸಿಬಿ ನಾರ್ಕೋಟಿಕ್ಸ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ…
ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶತ್ರು ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಮೇರಿಕಾದ ಬಳಿ ಮುಗಿಯದ ಶಸ್ತ್ರಾಸ್ತ್ರಗಳ ಬೃಹತ್…
ತವರಿನಲ್ಲೇ ಕಣ್ಣೀರಿಡುತ್ತಿರುವ ಜೀವನದಿ; ಸ್ವಚ್ಛತೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟದ ಎಚ್ಚರಿಕೆ ಕೃಷ್ಣ ಸಿದ್ದಾಪುರ ಸಿದ್ದಾಪುರ: ಕೋಟ್ಯಾಂತರ ಜನರ ಜೀವನಾಡಿಯಾಗಿರುವ…
ಬೆಂಗಳೂರು: ಇಂದು ನಭೋ ಮಂಡಲ ಚಂದ್ರಗ್ರಹಣದ ಕೌತುಕಕ್ಕೆ ಸಾಕ್ಷಿಯಾಗಲಿದೆ. ಈ ರಕ್ತ ಚಂದ್ರಗ್ರಹಣ ಇಂದು ಮಧ್ಯಾಹ್ನ ಆರಂಭವಾಗಿ ಸಂಜೆ ವೇಳೆಗೆ…