Andolana originals

ಮೈಸೂರು: ರೈಲು ನಿಲ್ದಾಣದಲ್ಲಿ ‘ಮಾರ್ಗದರ್ಶಕ್’ ವ್ಯವಸ್ಥೆ

ಕೆ.ಪಿ.ಮದನ್

ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆ 

ಮೈಸೂರು: ಸರ್… ಇಲ್ಲಿ ರೈಲು ನಿಲ್ದಾಣದ ಟಿಕೆಟ್ ಕೌಂಟರ್‌ಗೆ ಯಾವ ಕಡೆ ಹೋಗ್ಬೇಕು? ವ್ಹೀಲ್ ಚೇರ್ ಇರುವ ಜಾಗ ಯಾವುದು? ಇದು ಮೂರನೇ ಪ್ಲಾಟ್ ಫಾರ್ಮ್ ಹೌದಾ? ಇಲ್ಲಿ ಕುಡಿಯುವ ನೀರು ಎಲ್ಲಿ ಸಿಗುತ್ತೆ?… ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಯಾರನ್ನೋ ಕಾಯುವಂತೆಯೇ ಇಲ್ಲ.

ಪ್ರಯಾಣಿಕರ ಅಂಗೈನಲ್ಲೇ ಇದಕ್ಕೆಲ್ಲಾ ಉತ್ತರ ದೊರೆಯಲಿದೆ! ರೈಲು ನಿಲ್ದಾಣದಲ್ಲಿ ಹಲವಾರು ಪ್ರಶ್ನೆಗಳಿಗೆ ಯಾರನ್ನು ಉತ್ತರ ಕೇಳಬೇಕು ಅಂತ ಗೊತ್ತಾಗುವುದಿಲ್ಲ. ಅಲ್ಲದೆ, ಸಹ ಪ್ರಯಾಣಿಕರು ಅಥವಾ ನಿಲ್ದಾಣದಲ್ಲಿರುವ ಅನಧಿಕೃತ ವ್ಯಕ್ತಿಗಳು ನೀಡಬಹುದಾದ ಉತ್ತರ ಸರಿ ಇದೆಯೋ, ಇಲ್ಲವೋ ಎಂಬಂತಹ ಗೊಂದಲಗಳಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿರುವ ‘ಮಾರ್ಗದರ್ಶಕ್’ ಕ್ಯೂಆರ್ ಕೋಡ್ ತೆರೆ ಎಳೆದಿದೆ.

ಸಾರ್ವಜನಿಕರ ಅನುಕೂಲತೆ ಮತ್ತು ಸ್ಮಾರ್ಟ್ ನಿಲ್ದಾಣದ ಯೋಜನೆಗೆ ಬೆಂಬಲ ನೀಡುವ ಉದ್ದೇಶದಿಂದ, ನೈಋತ್ಯರೈಲ್ವೆಯ ಮೈಸೂರು ವಿಭಾಗವು ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ನಕ್ಷೆ ಮತ್ತು ಸಂಚಾರ ವ್ಯವಸ್ಥೆಯಾದ ‘ಮಾರ್ಗದರ್ಶಕ್’ನ್ನು ಮೈಸೂರು ರೈಲು ನಿಲ್ದಾಣದಲ್ಲಿ ಪ್ರಾರಂಭಿಸಿದೆ. ‘ಮಾರ್ಗದರ್ಶಕ್’ನ್ನು ಪ್ರಯಾಣಿಕರು ಗೂಗಲ್ ಮ್ಯಾಪ್ ರೀತಿಯಲ್ಲಿ ಬಳಸಬಹುದು. ರೈಲ್ವೆ ನಿಲ್ದಾಣದ ಮೂರು ಭಾಗಗಳಲ್ಲಿ ಕ್ಯೂಆರ್ ಕೋಡ್‌ನ್ನು ಅಳವಡಿಕೆ ಮಾಡಲಾಗಿದ್ದು, ತಂತ್ರಜ್ಞಾನದ ಜಗತ್ತಿನಲ್ಲಿ ಮಾರ್ಗದರ್ಶಕ್ ಡಿಜಿಟಲ್ ನ್ಯಾವಿಗೇಷನ್ ಪ್ರಯಾಣಿಕರಿಗೆ ಹೆಚ್ಚು ಸಹಾಯಕವಾಗಿದೆ.

ಇದರಿಂದಾಗಿ ಸುಲಭವಾಗಿ ಮಾಹಿತಿ ತಿಳಿಯಬಹುದು ಹಾಗೂ ಯಾರನ್ನೂ ಕೇಳುವ ಅಗತ್ಯವಿಲ್ಲ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು. ನಿಲ್ದಾಣದಲ್ಲಿ ಇರುವ ಪ್ಲಾಟ್‌ಫಾರ್ಮ್‌ಗಳು, ಮೆಟ್ಟಿಲು ಸೇವೆಗಳು, ಕುಡಿಯುವ ನೀರಿನ ಘಟಕಗಳು, ನಿರೀಕ್ಷಣಾ ಕೊಠಡಿಗಳು, ಆಹಾರ ಮಳಿಗೆಗಳು ಮುಂತಾದ ಸ್ಥಳಗಳ ದಿಕ್ಕುಗಳನ್ನು ತಿಳಿಯಲು ಸುಲಭವಾಗಿದೆ.

ಎಲ್ಲ ಅಧಿಕೃತ ಭಾಷೆಗಳಲ್ಲಿ ಮಾಹಿತಿ: ದೇಶದಲ್ಲಿ ಅಧಿಕೃತವಾಗಿರುವ ಎಲ್ಲ ಭಾಷೆಗಳಲ್ಲಿ ಇಲ್ಲಿ ಮಾಹಿತಿ ಸಿಗುತ್ತದೆ. ನಿಲ್ದಾಣದಾದ್ಯಂತ ಇರಿಸಿರುವ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿಕೊಂಡರೆ ಮೊಬೈಲ್‌ನಲ್ಲಿ ನಕ್ಷೆ ನೋಡಬಹುದು. ಇದರಿಂದ ಒಂದೇ ಕಡೆ ಜನ ನುಗ್ಗುವುದನ್ನು ತಡೆದು ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು ಸಹಕಾರಿಯಾಗಿದೆ. ಹೊರ ರಾಜ್ಯಗಳಿಂದ ಆಗಮಿಸುವ ಜನರಿಗೆ ಮಾಹಿತಿಯನ್ನು ಪಡೆಯಲು ಸುಲಭವಾಗುತ್ತದೆ. ಅಲ್ಲದೇ ಮಾಹಿತಿ ವಿಚಾರವಾಗಿ ಯಾವುದೇ ಗೊಂದಲಗಳು ಇಲ್ಲದೆ ರೈಲ್ವೆ ನಿಲ್ದಾಣದ ಸೌಲಭ್ಯಗಳನ್ನು ಕುರಿತು ಮಾಹಿತಿಯನ್ನು ಅಂಗೈನಲ್ಲೇ ಪಡೆದುಕೊಳ್ಳಬಹುದು.

ಮೈಸೂರಿನ ರೈಲು ನಿಲ್ದಾಣದಲ್ಲಿನ ಡಿಜಿಟಲ್ ವ್ಯವಸ್ಥೆಯು ಪ್ರಯಾಣಿಕರಿಗೆ ಮೂಲಸೌಕರ್ಯವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ. ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ಅನುಕೂಲಕರವಾಗಿಸುತ್ತದೆ. ಒಟ್ಟಿನಲ್ಲಿ ಪ್ರಯಾಣಿಕರ ಇರಿಸು ಮುರಿಸು ತಪ್ಪಿಸಿ, ಅವರಿಗೆ ಅನುಕೂಲಕರವಾದ ರೀತಿಯಲ್ಲಿ ಮಾರ್ಗದರ್ಶಕ್ ಕ್ಯೂಆರ್ ಕೋಡ್ ಉಪಯೋಗವಾಗುತ್ತಿದೆ.

” ಮೈಸೂರಿನ ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಮಾರ್ಗದರ್ಶಕ್ ಡಿಜಿಟಲ್ ವ್ಯವಸ್ಥೆಯು ಪ್ರಯಾಣಿಕರ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಈ ವ್ಯವಸ್ಥೆಯು ರೈಲು ನಿಲ್ದಾಣದಲ್ಲಿ ಜನದಟ್ಟಣೆಯನ್ನು ಸುಧಾರಿಸುತ್ತದೆ.”

-ಗಿರೀಶ್ ಧರ್ಮರಾಜ್ ಕಲಗೊಂಡ, ರೈಲ್ವೆ ವಿಭಾಗೀಯ ವಾಣಿಜ್ಯ ಅಧಿಕಾರಿ

” ಮೈಸೂರು ರೈಲು ನಿಲ್ದಾಣದಲ್ಲಿ ‘ಮಾರ್ಗದರ್ಶಕ್’ ಎಂಬ ಕ್ಯೂಆರ್ ಕೋಡ್ ಆಧಾರಿತ ನ್ಯಾವಿಗೇಶನ್ ವ್ಯವಸ್ಥೆ ಪ್ರಾರಂಭವಾಗಿರುವುದು ಸ್ವಾಗತಾರ್ಹ. ಈ ಮೂಲಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ಲಾಟ್‌ಫಾರ್ಮ್, ಟಿಕೆಟ್ ಕೌಂಟರ್, ಬೋಗಿ ಸ್ಥಳ, ಪ್ರವೇಶ-ನಿರ್ಗಮನ ದಿಕ್ಕುಗಳನ್ನು ಸುಲಭವಾಗಿ ಅರ್ಥವಾಗಿಸಲು ಸಿದ್ಧಪಡಿಸಿರುವುದು ಉತ್ತಮ ಕೆಲಸ. ಇಂತಹ ಯೋಜನೆ ಇತರ ರೈಲು ನಿಲ್ದಾಣಗಳಲ್ಲೂ ಜಾರಿಯಾಗಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.”

 -ಅಭಿ, ಪ್ರಯಾಣಿಕ 

ಆಂದೋಲನ ಡೆಸ್ಕ್

Recent Posts

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ

ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ : ಸಿಎಂ ಸಿದ್ದರಾಮಯ್ಯ ಆಕ್ರೋಶ ಬೆಂಗಳೂರು : ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ…

8 hours ago

3 ಮಸೂದೆಗಳಿಗೆ ರಾಜ್ಯಪಾಲರ ನಕಾರ

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ ವಾಪಸ್ ದ್ವೇಷ ಭಾಷಣ, ಅಪರಾಧಗಳ ಪ್ರತಿಬಂಧಕ ಮಸೂದೆಯೂ ಹಿಂದಕ್ಕೆ ಬೆಂಗಳೂರು :…

8 hours ago

ಮೈಸೂರು | ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆಗೆ ಸಿದ್ಧತೆ

ಎರಡು ದಶಕಗಳ ಕೂಗು,ಬೇಡಿಕೆ ಈಡೇರಿಕೆ ಮೈಸೂರು : ಮೈಸೂರಿನ ಲಕ್ಷಾಂತರ ಜನರ ಎರಡು ದಶಕದ ಕನಸು, ಬೇಡಿಕೆ ನನಸಾಗುವ ಕಾಲ…

8 hours ago

ಮುಂದಿನ ಚುನಾವಣೆಯಲ್ಲಿ NDA 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೆ : ನಿಖಿಲ್ ಕುಮಾರಸ್ವಾಮಿ ಭರವಸೆ

ಬೆಂಗಳೂರು : ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ…

13 hours ago

ಪ್ರತ್ಯೇಕವಾಗಿದ್ದ ದಂಪತಿ ನಡುವೆ ಕಿರಿಕ್ ; ಪತ್ನಿ ಕೊಲೆಯಲ್ಲಿ ಅಂತ್ಯ

ನಂಜನಗೂಡು : ಎರಡು ವರ್ಷಗಳಿಂದ ಪತ್ನಿಯಿಂದ ದೂರವಾಗಿದ್ದ ಪತಿ ರಾತ್ರೋರಾತ್ರಿ ದಿಢೀರನೆ ಪ್ರತ್ಯಕ್ಷವಾಗಿ ಪತ್ನಿಯನ್ನು ಕೊಂದಿರುವ ಘಟನೆ ನಂಜನಗೂಡು ತಾಲೂಕಿನ…

13 hours ago

ಸಿಎಂ ಕ್ಷೇತ್ರದಲ್ಲಿನ ಸಮಸ್ಯೆ ಬಗೆಹರಿಸಿ : ಅಧಿಕಾರಿಗಳಿಗೆ ಯತೀಂದ್ರ ಸೂಚನೆ

ನಂಜನಗೂಡು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಆದಷ್ಟು ಬೇಗ ಸಮಸ್ಯೆಗಳಿಗೆ ಸ್ಪಂದಿಸುವ…

13 hours ago