ತಿ.ನರಸೀಪುರದ ಹಳೇ ಸಂತೇಮಾಳದಲ್ಲಿ ಭರದಿಂದ ಸಾಗಿದ ಸಿದ್ಧತೆ ಕಾರ್ಯ
ಎಂ.ನಾರಾಯಣ್
ತಿ.ನರಸೀಪುರ: ಪಟ್ಟಣದ ಹಳೇ ಸಂತೇಮಾಳದಲ್ಲಿ ಮಾ.೨೫ರ ಮಂಗಳವಾರ ಶ್ರೀ ದೊಡ್ಡಮ್ಮತಾಯಿ, ಶ್ರೀ ಚಿಕ್ಕಮ್ಮತಾಯಿ ಅಮ್ಮನವರ ದೊಡ್ಡ ಹಬ್ಬ ವಿಶೇಷವಾಗಿ ನಡೆಯಲಿದ್ದು, ದೇವಾಲಯದ ಆಸುಪಾಸಿನ ಬಯಲು ಪ್ರದೇಶದಲ್ಲಿ ಹಬ್ಬ ಆಯೋಜನೆಗೊಳ್ಳುವ ಹಿನ್ನೆಲೆಯಲ್ಲಿ ಸಿದ್ಧತೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಶ್ರೀ ದೊಡ್ಡಮ್ಮತಾಯಿ, ಶ್ರೀ ಚಿಕ್ಕಮ್ಮತಾಯಿ ಅಮ್ಮನವರ ದೊಡ್ಡಹಬ್ಬ ವಿಶೇಷವಾಗಿ ನಡೆಯುತ್ತದೆ. ಗೋಪಾಲಪುರ ಹಾಗೂ ಹಳೇ ಪಟ್ಟಣದ ನಿವಾಸಿಗಳು ತಮ್ಮ ಊರನ್ನು ತೊರೆದು ಹಳೇ ಸಂತೇಮಾಳದ ಸುತ್ತಲಿನ ಬಯಲು ಪ್ರದೇಶದಲ್ಲಿ ಬಿಡಾರ ಹೂಡುತ್ತಾರೆ. ಅಲ್ಲಿಯೇ ಹಬ್ಬದ ಪ್ರಯುಕ್ತ ಅಡುಗೆಯನ್ನು ತಯಾರಿಸಿ, ದೇವಿಯರಿಗೆ ಎಡೆ ಇಡುತ್ತಾರೆ. ಬಂದ ನೆಂಟರಿಷ್ಟರನ್ನು ಆಹ್ವಾನಿಸಿ ಆತಿಥ್ಯವನ್ನು ನೀಡುತ್ತಾರೆ.
ನಂಬಿ ಆರಾಧಿಸುವ ಭಕ್ತರಿಗೆ ರೋಗರುಜಿನಗಳು ಬಾರದಂತೆ, ಪ್ರವಾಹವನ್ನು ತಡೆದು, ಕುಲಸ್ಥರ ನೆಲೆಯನ್ನು ರಕ್ಷಿಸಲು ಊರಿಗೆ ಕಾವಲಾಗಿ ನೆಲೆ ನಿಂತವರೇ ಶ್ರೀ ದೊಡ್ಡಮ್ಮತಾಯಿ, ಶ್ರೀ ಚಿಕ್ಕಮ್ಮತಾಯಿ ದೇವಿಯರು ಎಂಬ ನಂಬಿಕೆ ಇದೆ. ಕಾವೇರಿ ನದಿ ತೀರದಲ್ಲಿ ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆಗೊಂಡಿರುವ ದೇವಿಯರು ಸಾವಿರಾರು ಕುಲಸ್ಥರನ್ನು ಹೊಂದಿದ್ದು, ಈ ಭಾಗದ ನೆಚ್ಚಿನ ಆರಾಧ್ಯ ದೇವತೆಗಳಾಗಿದ್ದಾರೆ. ಪ್ರವಾಹ ಕಾಲದಲ್ಲಿ ವಾಸದ ನೆಲೆಗಳನ್ನು ರಕ್ಷಿಸಲು ಹಾಗೂ ವಾಂತಿ, ಭೇದಿ, ಕಾಲರಾದಂತಹ ಸಾಂಕ್ರಾಮಿಕ ರೋಗಗಳಿಂದ ಜನರನ್ನು ಕಾಪಾಡುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ.
ದೇವಾಲಯಗಳ ನೆಲೆಬೀಡಾಗಿರುವ ಹಳೇ ಸಂತೇಮಾಳದಲ್ಲಿ ಮೂರ್ನಾಲ್ಕು ದಶಕಗಳಿಂದ ಪುಟ್ಟದೊಂದು ಗುಡಿಯಲ್ಲಿ ನೆಲೆಗೊಂಡಿರುವ ಶ್ರೀ ದೊಡ್ಡಮ್ಮತಾಯಿ, ಶ್ರೀ ಚಿಕ್ಕಮ್ಮತಾಯಿ ಅಮ್ಮನವರ ದೇವಾಲಯವನ್ನು ಭಕ್ತರು ಹಾಗೂ ಕುಲಸ್ಥರು ದೇಣಿಗೆ ಸಂಗ್ರಹಿಸಿ ನಿರ್ಮಾಣ ಮಾಡಿದ್ದಾರೆ. ಪ್ರತಿ ಮಂಗಳವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಪೂಜೆ ನಡೆಯುತ್ತದೆ. ಶುಕ್ರವಾರ ದೇವಿಯರಿಯರಿಗೆ ಎಣ್ಣೆ ದೀಪ ಹಚ್ಚಲಾಗುತ್ತದೆ. ಅಮಾವಾಸ್ಯೆ, ಹುಣ್ಣಿಮೆ ಹಾಗೂ ಹಬ್ಬದ ವಿಶೇಷ ದಿನಗಳಲ್ಲಿ ಪೂಜೆಗೆ ದೇವಾಲಯದ ಬಾಗಿಲು ತೆರೆದಿರುತ್ತದೆ. ಈ ದೇವಿಯರ ದರ್ಶನದಿಂದ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ಅಪಾರವಾದ ನಂಬಿಕೆ ಜನರಲ್ಲಿದೆ.
ದೇವಿಯರಿಗೆ ಸಿಹಿ, ಖಾರದ ಎಡೆ
ಹಬ್ಬದ ದಿನದಂದು ದೇವಾಲಯದಲ್ಲಿ ಇಡಲಾಗುವ ಸಿಹಿ ಮತ್ತು ಖಾರದ ಎಡೆಯನ್ನು ಊರಿನ ಆಚೆ ನಿಗದಿಪಡಿಸಿರುವ ಸ್ಥಳದಲ್ಲಿ ಅರ್ಚಕರು ಹಾಗೂ ಕುಲಸ್ಥರು ರಾತ್ರಿ ೧೦ ಗಂಟೆಗೆ ಇಟ್ಟು ತಿರುಗಿ ನೋಡದೆ ಬರುತ್ತಾರೆ. ಬೆಳಿಗ್ಗೆಯಾಗುವುದರೂಳಗೆ ಆ ಎಡೆ ಅಲ್ಲಿ ಇರುವುದಿಲ್ಲ. ಇದು ಹಬ್ಬದಲ್ಲಿ ಒಂದು ವಿಶೇಷ ಕೂಡ. ಮಾರಿಕಾಂಬೆ ದೇವಿಯರಿಗೆ ಮೇಕೆಯನ್ನು ಬಲಿಕೊಟ್ಟು, ಗೋಪಾಲಪುರ ಹಾಗೂ ಹಳೇ ಟೌನಿನಲ್ಲಿ ಪೀಡೆ ಮರಿ ಎಳೆಯುವುದು ವಾಡಿಕೆಯಾಗಿದೆ ಎಂದು ಯಜಮಾನರುಗಳಾದ ಶಾಂತರಾಜು, ಸತೀಶ್, ಪುರುಷಕಾರಿ ಮಹದೇವ, ಮಹದೇವಪ್ಪ, ಗೋಪಾಲಪುರ ರಾಜಣ್ಣ, ತಬಲ ಮೂರ್ತಿ, ಅರ್ಚಕ ದೇವರಾಜು ತಿಳಿಸಿದ್ದಾರೆ.
ಕೃಷಿ ಫಸಲು ನಾಶ ಮಾಡಿ, ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ…
ಜೆರುಸಲೆಂ : ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕ ಇರಾನ್‌ನಿಂದ ಇಸ್ರೇಲ್ ಮೇಲೆ ಈವರೆಗೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ…
ಬೆಂಗಳೂರು : ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇಕಡಾ 3 ರಿಂದ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಪೆಟ್ರೋಲಿಯಂ, ವಿದ್ಯುತ್ ಮತ್ತು ರಸಗೊಬ್ಬರ ವಲಯಗಳ ಪರಿಶೀಲನೆಗಾಗಿ ಪ್ರಧಾನಿ ನರೇಂದ್ರ…
ಬೆಂಗಳೂರು : 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ ಅರ್ಜಿ ಆಹ್ವಾನಿಸಿದೆ. ಕಾನೂನು ಪದವಿ ಸೇರಿದಂತೆ ವಿವಿಧ…
ಕೆ.ಆರ್.ಪೇಟೆ : ಗೃಹ ಬಳಕೆ ಸಿಲಿಂಡರ್ ಸಿಗುವುದಿಲ್ಲ ಎಂದು ಏಕಾಏಕಿ ನೂರಾರು ಗ್ರಾಹಕರು ಗ್ಯಾಸ್ ಏಜೆನ್ಸಿ ಬಳಿ ಜಮಾಯಿಸಿದ ಪರಿಣಾಮ…