ನಗುವೆಂಬ ಸಂಜೀವಿನಿ
ಡಾ.ಶುಭಶ್ರೀ ಪ್ರಸಾದ್
ನಕ್ಕುಬಿಡು ಚೆನ್ನೆ ಹೂ ಬಿರಿದ ಹಾಗೆ ನಕ್ಕರೆ ನೀ ಚೆಲ್ವೆ ಹಾಲ್ಜೇನು ಸುರಿದ ಹಾಗೆ ನಗು ನೀ ಓ ಪ್ರಿಯೆ ನಕ್ಷತ್ರ ಧರೆಗಿಳಿದ ಹಾಗೆ ನಕ್ಕರಂತು ನೀ ಮಧುರೆ ನನಗೋ ಮದಿರೆ ಮತ್ತಿನ ಹಾಗೆ ಇದು ನಗುವಿನ ಬಗ್ಗೆಯೋ ಅಥವಾ ಇನಿಯಳ ಬಗ್ಗೆಯೋ? ಮರೆತೆಲ್ಲವ ಹಗುರಾಗಿ ಒಮ್ಮೆ ನಕ್ಕುಬಿಡಿ – ನಗು ಎಂದಿಗೂ ಚೈತನ್ಯದಾಯಿ. ಭಾಷೆಯಿರದ ಭಾಷೆ ಒಂದು ಸುಂದರ ನಗು. ದೇಶ ಭಾಷೆಯ ಗಡಿಯನ್ನು ಮೀರಿದ ಮಧುರ ಸಂವಹನ ನಗು.
ಯಾರಿಗೆ ಕಷ್ಟ ಸುಖ ಇಲ್ಲ ಹೇಳಿ. ಆದರೆ ನೋವು ಸಂಕಟಗಳು ನೀರ ಮೇಲಣ ಗುಳ್ಳೆಯಂತೆ ಪಟ್ ಎಂದು ಒಡೆದು ಹೋಗುವುದು ನಗುವಿನಿಂದ ಮಾತ್ರ.
ನಗು ಎಂದರೇನು ಸಾಮಾನ್ಯವೇ? ಓಹೋ ಇಲ್ಲವೇ ಇಲ್ಲ. ಅದು ದೇವರು ಮನುಷ್ಯರಿಗೆ ಮಾತ್ರ ಕೊಟ್ಟಿರುವ ವರ. ವಾಸ್ತವವಾಗಿ, ೨೦೦೯ರ ಅಧ್ಯಯನವು ನಗುವಿನ ಮೊದಲ ಚಿಹ್ನೆಗಳನ್ನು ಕನಿಷ್ಠ ೧೦ರಿಂದ ೧೬ ಮಿಲಿಯನ್ ವರ್ಷಗಳ ಹಿಂದೆ ಪತ್ತೆ ಹಚ್ಚಿದೆ.
ಎಲ್ಲವನ್ನೂ ನೇರ ಮಾಡುವ ಒಂದೇ ಒಂದು ವಕ್ರ ರೇಖೆ ನಗುವೇನೇ. ನಗುವೊಂದು ಹಾಗೆ ಎಲ್ಲವನ್ನೂ ಸರಿ ಮಾಡುವುದಾದರೆ ಅದನ್ನೇಕೆ ನಾವು ಸಾಕಿದ ನಾಯಿಮರಿಯ ಹಾಗೆ ಮೆತ್ತನೆಯ ಬಟ್ಟೆಯೊಳಗೆ ಸುತ್ತಿ ಬಚ್ಚಿಡಬೇಕು? ನಾವೇ ಸಾಕಿದರೂ ಬೆಕ್ಕಿನ ಮರಿ ಆಗಾಗ ಚಂಗನೆ ಹಾರಿ ನೆಗೆದು ಅಕ್ಕಪಕ್ಕದ ಮನೆಗಳಿಗೆಲ್ಲಾ ಹೀಗೆ ಹೋಗಿ ಹಾಗೆ ಬಂದು ತಿರುಗಾಡುವ ಹಾಗೆ ಸ್ವಾತಂತ್ರ್ಯ ಕೊಡೋಣ.
ಕೆಲವರ ನಗು ಸಾದಾ ದೋಸೆಯ ಹಾಗಿರುತ್ತದೆ! ಮತ್ತೆ ಕೆಲವರದ್ದು ಸೆಟ್ ದೋಸೆಯ ಹಾಗೆ ಮೆದು. ಮತ್ತೂ ಕೆಲವರದ್ದು ತುಪ್ಪದ ದೋಸೆಯ ತರಹ ಮತ್ತೆ ಬೇಕೆನುವಂತೆ. ಇನ್ನೂ ಕೆಲವರ ನಗುವಂತೂ ಮಸ್ತ್ ಮಸಾಲೆ ದೋಸೆಯ ಹಾಗೆ, ಆಗಾಗ ಮತ್ತೆ ಮತ್ತೆ ನೆನೆನೆನೆದು ತಿನ್ನಬೇಕೆಂದು ಬಯಸುವ ಹಾಗೆ. ಕೆಲವರ ನಗೆಯಂತೂ ಸೀದು ಕರಕಲಾದ ದೋಸೆಯ ಹಾಗೆ. ಮತ್ತೆ ಕೆಲವರದ್ದು ಮೊನ್ನೆ ಮಾಡಿಟ್ಟು ತಿನ್ನದೇ ಹಾಗೆಯೇ ಇಟ್ಟ ಗಬ್ಬೆಂದು ನಾರುವ ತಿಂಡಿಯಂತೆ. ಮತ್ತೆ ಕೆಲವರದ್ದಂತೂ ಉದ್ದು ಮೆಂತೆ ಹಾಕಿರದ ಬರಿಯ ಅಕ್ಕಿಯ ಒರಟು ದೋಸೆ, ಹೆಚ್ಚಾಗಿ ಬೆಂದು ತಿಂದರೆ ನಾಲಗೆ, ಒಸಡು, ಅಂಗಳುಗಳನ್ನು ಚುಚ್ಚಿ ನೋಯಿಸುವ ಹಾಗೆ.
ನಗು ಅರಳುವ ಹೂವಿನ ಹಾಗೆ, ಪರಿಮಳವ ಬೀರಿದರೆ ಅದೆಷ್ಟು ಚೆನ್ನು. ಕಪ್ಪನೆಯ ಮೋಡದಂಚಿನಿಂದ ಫಳ್ಳನೆ ಮಿಂಚು ಹೊಳೆವ ಹಾಗೆ ಮೊಗದಲ್ಲಿ ನಗೆ ಚಿಮ್ಮಿದರೆ ನೊಂದ ಮನಸ್ಸುಗಳು ಮಳೆ ಸುರಿಸಿ ಹಗುರಾದ ಮುಗಿಲಿನಂತೆ ಹಾಯಾಗುತ್ತವೆ.
ಇಷ್ಟೆಲ್ಲಾ ಗೊತ್ತಿದ್ದೂ, ನಾನು ಫೋಟೋಗಳಿಗೆ ನಗುವುದಿಲ್ಲ. ನೇರದಲ್ಲಿ ಸದಾ ನಗುಮುಖದ ನೀನು ಫೋಟೋಗಳಿಗೇಕೆ ಬಿಮ್ಮನೆ ಬಿಗಿದುಕೊಂಡಿರುತ್ತೀಯೇ ಎಂದು ಹಲವರು ಕೇಳಿರುವುದುಂಟು. ನಕ್ಕರೆ ಸೊಟ್ಟ ಹಲ್ಲುಗಳು ಕೆಟ್ಟದಾಗಿ ಕಾಣುತ್ತವೆ ಎಂಬುದು ನನ್ನ ಕೀಳರಿಮೆ. ಎಷ್ಟೋ ಜನರ ಚಂದದ ನಗುವನ್ನು ಕಂಡು ಓ ನನ್ನ ಹಲ್ಲು ಹೀಗಿದ್ದರೆ, ನನ್ನ ನಗು ಇಷ್ಟು ಚಂದ ಇದ್ದಿದ್ದರೆ, ಎಷ್ಟು ಚಂದ ಕಾಣುತ್ತಿದ್ದೆ ಎಂದು ಈವರೆಗೆ ಲಕ್ಷ ಬಾರಿಯಾದರೂ ಅಂದುಕೊಂಡಿರಬಹುದು. ಚಂದ ನಗುವವರನ್ನು ನಾ ತಿರುಗಿ ತಿರುಗಿ ನೋಡುತ್ತಲೇ ಇರುತ್ತೇನೆ. ಮನುಷ್ಯರ ಸ್ವಭಾವವೇ ಇಷ್ಟಲ್ಲವೇ? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ.
ಆದರೆ ನಿಜ ಹೇಳಬೇಕೆಂದರೆ ನಗು ತುಟಿ ಹಾಗೂ ಹಲ್ಲಿನ ಮೇಲೆ ಅವಲಂಬಿತವಾಗಿರುವುದಲ್ಲ; ಅದು ಭಾವನೆಯನ್ನು ಅವಲಂಬಿಸಿರುತ್ತದೆ. ನಗುವೊಂದು ರಸಪಾಕ ಅಳುವೊಂದು ರಸಪಾಕ ನಗುವಾತ್ಮ ಪರಿಮಳವ ಪಸರಿಸುವ ಕುಸುಮ !! ದುಗುಡವಾತ್ಮವ ಕಡೆದು ಸತ್ವವೆತ್ತುವಮಂತು ಬಗೆದೆರಡನುಂ ಭುಜಿಸು ಮಂಕುತಿಮ್ಮ !!
ಈ ರಸಪಾಕ ನಗು ಫ್ರೀ ಔಷಧಿ. ಬರಿಯ ಉಚಿತ ಔಷಧಿ ಮಾತ್ರವಲ್ಲ, ಮನದ ಕಾಯಿಲೆಗೆ ಅತ್ಯುತ್ತಮ ಔಷಧವೂ. ನಗುವೆಂಬುದು ಮಾನವ ಜೀವಿಗೆ ಅನನ್ಯವಾದ, ಶಕ್ತಿಶಾಲಿಯಾದ ಕೊಡುಗೆ ಹಾಗೂ ಸಾರ್ವಕಾಲಿಕ ಭಾಷೆ. ‘ರೆಕ್ಕೆ ಇದ್ದರೆ ಸಾಕೇ? ಹಕ್ಕಿಗೆ ಬೇಕು ಬಾನು, ಬಯಲಲಿ ತೇಲುತ ತಾನು ಮ್ಯಾಲೆ ಹಾರೋಕೆ’ ಅನ್ನೋದು ಕವಿ ಸಾಲು. ನಗುವಿಗೂ ಬೇಕು ರೆಕ್ಕೆ, ಬಾನು, ಬಯಲು ತೇಲಿ ಮ್ಯಾಲೆ ಹಾರೋಕೆ ಮತ್ತು ಬ್ಯಾಲೆ ಆಡೋಕೆ.
ನಗುವದೇಕೆ ಅಷ್ಟು ಮುಖ್ಯ?:
ನಕ್ಕರೆ ಎತ್ತರಕ್ಕೇರಿದ ಒತ್ತಡ ದುಡುಮ್ಮನೆ ಕೆಳಗಿಯುತ್ತದೆ. ನಕ್ಕಾಗ ಬಿಡುಗಡೆಯಾಗುವ ಎಂಡೋರ್ಫಿನ್ಸ್ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ನಗು ನೋವು ನಿವಾರಕ, ನಿದಿರೆ ಕಾರಕ, ಕಲ್ಪನಾ ಶಕ್ತಿ ವೃದ್ಧಿಕಾರಕ, ಒಂದು ಕಿರುನಗು ಪ್ರೇಮದ ಒರತೆಯನ್ನು ಚಿಮ್ಮಿಸಬಹುದು. ಸ್ನೇಹವಾಗಲೀ, ಪ್ರೇಮವಾಗಲೀ ಆರಂಭವಾಗುವುದೇ ನಗುವಿನಿಂದ. ಮನೆಗೆ ಬಂದವರಿಗೆ ಮೊದಲು ಕಾಫಿ ಕೊಟ್ಟು ಉಪಚರಿಸುವ ಹಾಗೆ ಮೊದಲು ಒಂದು ನಗೆ ನೀಡಿದರೆ ಸ್ನೇಹ ಹುಟ್ಟುವುದು, ಬಾಂಧವ್ಯ ವೃದ್ಧಿಸುವುದು.
ನಕ್ಕರದೇ ಸ್ವರ್ಗ ಎನ್ನುವ ಮಾತು ಅರಿತರೆ ಸಾಕು ನೋವಿನಿಂದ ಮುಕ್ತಿ. ಜೊತೆಗೆ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಕಲೆಯನ್ನು, ಕ್ರಿಯಾಶೀಲತೆಯನ್ನು, ಪಾಸಿಟಿವ್ ಯೋಚನೆಯನ್ನು ವೃದ್ಧಿಸುತ್ತದೆ ಎನ್ನುವುದಾದರೆ ಬಳಸಿಕೊಳ್ಳಬಾರದೇಕೆ? Laughter is the beginning of prayer.‘ಎನ್ನುತ್ತಾನೆ Reinhold Niebuhr ಇದರೊಟ್ಟಿಗೆ ನಗು ಸಾಂಕ್ರಾಮಿಕ ತಾನೇ? ಮತ್ತೇಕೆ ತಡ ನಾವೂ ನಕ್ಕು ಬೇರೆಯವರನ್ನೂ ನಗಿಸಿಬಿಡೋದು ತಾನೇ? ಇಂದು ನಗೆಕೂಟಗಳು ನಮ್ಮೆಲ್ಲಾ ಒತ್ತಡಗಳಿಂದ ಹೊರತರಲು ಶ್ರಮಿಸುತ್ತಿವೆ. ನಗೆಯೋಗ ಒಂದು ಉದ್ಯೋಗವಾಗಿ ಪರಿವರ್ತನೆಗೊಳ್ಳುತ್ತಿದೆ.
ಅರೆ, ನಗುವೆಂದರೆ ಒಂದೇ ಬಗೆಯೇ? ಅಡುಗೆಯ ವೈವಿಧ್ಯದಂತೆಯೇ ನಗುವಿನಲ್ಲೂ ವೈವಿಧ್ಯತೆಯಿದೆ. ಮುಗುಳ್ನಗು, ಶಿಷ್ಟಾಚಾರದ ನಗು, ಕಿರುನಗು, ವಿಲನ್‌ನ ಕ್ರೂರ ನಗು, ಅಟ್ಟಹಾಸದ ನಗು, ಹೊಟ್ಟೆ ಉಬ್ಬರಿಸುವ ನಗು, ನಗೆಯ ಮೊಗವಾಡ ಹೊತ್ತ ಕಟುಕ ನಗು, ಹೂ ನಗು, ಮುಗ್ಧ ನಗು, ಸ್ನಿಗ್ಧ ನಗು, ಅಸೂಯೆಯ ನಗು, ಕಾರುಣ್ಯದ ನಗು, ಗತ್ತಿನ ನಗು, ಕಣ್ಣಂಚಿನ ನಗು, ಕಣ್ಣೀರ್‌ನಗು, ಕಳ್ಳ ನಗು, ಕೆರಳಿಸುವ ನಗು, ನರಳಿಸುವ ನಗು, ಕೆಣಕುವ ನಗು, ನಕಲಿ ನಗು… ಹೀಗೆ ತುಂಬಾ ತುಂಬಾ.
ನಗು ಎಂದಾಗ ಜಾರಿ ಬಿದ್ದ ದುರ್ಯೋಧನನನ್ನು ನೋಡಿ ನಕ್ಕ ದ್ರೌಪದಿಯ ನಗು ನೆನಪಿಗೆ ಬಾರದೇ ಹೋದರೆ ಹೇಗೆ? ಆ ಒಂದು ನಗೆಯೇ ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ನಾಂದಿಯಾಗಿ ರಕ್ತದ ಕೋಡಿ ಹರಿದು ಲಕ್ಷಾಂತರ ಜೀವಗಳು ಮಣ್ಣನ್ನು ಸೇರಿದ್ದು. ನಗೆ ಬೀರುವಾಗ ತುಸು ಎಚ್ಚರ ಬೇಡವೇ?
ಸಂದರ್ಭಾನುಸಾರ ಅನೇಕ ಬಗೆಯ ನಗುವನ್ನು ನೋಡುತ್ತಾ ಇರುತ್ತೇವೆ. ಸುರಿವ ಮಳೆಯಲ್ಲಿ ತೊಯ್ದು ಕುಣಿವಾಗ ಆಗುವ ಆನಂದದ ನಗು, ಸೋಷಿಯಲ್ ಆಬ್ಲಿಗೇಷನ್‌ಗಾಗಿ ನಗುವ ನಗು (ಸೋಷಿಯಲ್ ಆಬ್ಲಿಗೇಷನ್ ಎಂದಾಗ ಅದು ವಾಲಂಟರಿ ನಗು, ಅದೇ ಹೃದಯದ ಬಡಿತದ ಹಾಗೆ ಇನ್ವಾಲಂಟರಿಯಾದ ನಗು ಸ್ವಚ್ಛ ನಗೆ) ಪ್ರಕೃತಿಯ ಸೌಂದರ್ಯವನ್ನು ಕಂಡಾಗ ಮೂಡುವ ಸಂತೋಷದ ಕಿರುನಗು, ಮರಳಿನಲ್ಲಿ ಕಪ್ಪೆಗೂಡನ್ನು ಕಟ್ಟಿ ಕಾಲನ್ನು ಮರಳು ಸುರುಸುರುಗುಟ್ಟಿಸುವಾಗ ಎದೆಯಲ್ಲಿ ಮೂಡುವ ನಗು, ಸಂಗೀತಗಾರರು ನೃತ್ಯಪಟುಗಳು ಭಾವಾಭಿನಯಕ್ಕಾಗಿ ನಗುವ ವಿಭಿನ್ನ ಭಾವದ ನಗು, ಯಶಸ್ಸು ಮೂಡಿಸುವ ಗೆಲುವಿನ ನಗು, ಗುರುಗಳು ತಮ್ಮ ಶಿಷ್ಯರು ತಮಗಿಂತ ಹೆಚ್ಚಾಗಿ ಸಾಧಿಸಿದಾಗ ಮೂಡುವ ಆನಂದದ ಕಣ್ಣೀರಿನ ನಗು, ಅಂತೆಯೇ ತಾಯ್ತಂದೆಯರು ಮಕ್ಕಳ ಯಶಸ್ಸಿಗೆ ಸುರಿಸುವ ಆನಂದಬಾಷ್ಪದ ನಗು, ನವಿಲು ಕಪ್ಪು ಮೋಡಕ್ಕೆ ಮನಸೋತು ನರ್ತಿಸುತ್ತಾ ನಲಿವ ನಗು, ಆಗಸದಿಂ ಸುರಿವ ಮಳೆಯ ಪ್ರೀತಿಗೆ ಗಿಡ ಮರಗಳು ತಲೆದೂಗಿ ಸೂಸುವ ಒಲವ ನಗು, ಸುಯ್ಯನೆ ಪರಿಮಳವ ಹೊತ್ತು ಜಗಕೆಲ್ಲ ಬೀರುವ ಬೀಸು ಗಾಳಿಯ ನಗು, ಹೂಗಳ ಮಕರಂದವ ಹೀರಿ ಆನಂದದಿಂದ ಝೇಂಕರಿಸುವ ದುಂಬಿಯ ನಗು, ಸೋನೆ ಮಳೆ ಹಿತವಾಗಿ ಚರ್ಮವ ಸೋಕುವಾಗ ನಗುವ ಹೃದಯದ ನಗು, ಪ್ರಿಯಕರ/ಪ್ರಿಯತಮೆಯ ಕಂಡಾಗ ಚಿಲ್ಲನೆ ಹೊಮ್ಮುವ ಮೋಹಕ ನಗು, ಹಾಲ್ಗೆನ್ನೆಯ ಕಂದಮ್ಮ ಅರಳಿದ ಕಣ್ಣು, ಕೆನ್ನೆ, ಗಲ್ಲ, ತುಟಿಗಳಿಂದ ಅರಳಿಸುವ ಪರಿಶುದ್ಧ ಮುಗ್ಧ ಹೂನಗು, ಆಪ್ತ ಬಂಧುಗಳನ್ನು/ಆತ್ಮೀಯ ಸ್ನೇಹಿತರನ್ನು ಕಂಡಾಗ ಬೀರುವ ಹೃದಯದ ನಗು, ಹಾಸ್ಯ ಘಟನೆಗಳೋ/ಹಾಸ್ಯದ ಹರಟೆಯೋ/ಹಾಸ್ಯ ತುಂಬಿದ ಸಿನಿಮಾಗಳನ್ನೋ ನೋಡುವಾಗ ಹೊಟ್ಟೆ ತುಂಬ ಮೂಡುವ ನಗು, ನಗು ಆರೋಗ್ಯಕರ ಎಂದು ಸುಮ್ಮ ಸುಮ್ಮನೆ ಹೆ ಹ್ಹೇ ಎಂದು ನಗುವ ಬಲವಂತದ ನಗು, ರೋಗಿಗೆ ಹಣ್ಣು ಕೊಡುವಾಗ ಕ್ಯಾಮೆರಾ ನೋಡಿ ನಗುವ ಆ ನಗು, ಹೆಸರಿಗಾಗಿಯಲ್ಲದೆ ತುಂಬು ಮನದಿ ಸಹಾಯಹಸ್ತ ಚಾಚುವವರ ಸಾರ್ಥಕ್ಯದ ನಗು, ಶ್ರೀಮಂತರು ಭಿಕ್ಷುಕರತ್ತ ಎಸೆವವರಂತೆ ಕೊಟ್ಟಾಗ ಕಾಣುವ ಅಹಮ್ಮಿನ ನಗು, ಕರುಣೆಯಿಂದ ಕೈಯೆತ್ತಿ ಕೊಡುವವರಲ್ಲಿ ದೇವರನ್ನು ಕಾಣುವ ತೃಪ್ತಿ , ಋಣ ಮಿಶ್ರಿತ ನಗು, ಬದುಕಿನಲ್ಲಿ ಕೆಳಗೆ ಬಿದ್ದವರ ಕಂಡಾಗ ಮೂಡುವ ಅಪಹಾಸ್ಯದ ನಗು, ಮತ್ತೆ ಕೆಲವರು ನಿಜದಿ ಜಾರಿ ಬಿದ್ದಾಗ ಉದ್ದೇಶವಲ್ಲದೆಯೂ ಹಾಗೇ ಉರುಳುರುಳಿ ಮೂಡುವ ಸುರುಳಿ ನಗು, ಹೂವಿನವರೋ/ ತರಕಾರಿಯವರೋ/ ಹಣ್ಣಿನವರೋ ಹಳತನ್ನು/ಕೊಳೆತುದನ್ನು ಸಾಗುಹಾಕಿದಾಗ ನಗುವ ಮೋಸದ ನಗು, ರಾಜಕಾರಣಿಗಳು ಮತದಾರರಿಗೆ ಉರುಳಿಸುವ ದೇಶಾವರಿ ನಗು, ಕಚಗುಳಿ ಕೊಟ್ಟಾಗ ಹರಿವ ಕುಲುಕುಲು ನಗು, ಹರಿದ ನೋಟನ್ನು ಮೆಲ್ಲನೆ ಮಧ್ಯೆ ಸೇರಿಸಿ ಸದ್ಯ ನಮ್ಮಿಂದ ಹೋಯಿತಲ್ಲಾ ಎಂದು ಒಳಗೇ ಬೀರಿಕೊಳ್ಳುವ ಅಳುಕಿಲ್ಲದ ಅಪಹೆಮ್ಮೆಯ ನಗು, ಸಾಲವನು ಕೊಂಬಾಗ ಸಮಾಧಾನದ ನಗು, ಸಾಲವನು ತೀರಿಸಿ ಋಣಮುಕ್ತರಾದಾಗ ನಿರಾಳದ ನಗು…. ಇಹುದಿನ್ನೂ ಇನ್ನೂ ಬಗೆ ಬಗೆಯ ನಗೆ. ವಿಕ್ಟರ್ ಬೋರ್ಗ್ ಹೇಳುವ ಹಾಗೆ ‘”Laughter is the shortest distance between two peopleದುಃಖವಾದಾಗ ಅಳುವುದು, ಸಂತೋಷವಾದಾಗ ನಗುವುದು ಮನುಷ್ಯರ ಸಹಜ ಸ್ವಭಾವ. ಇದಕ್ಕಿಂತ ವಿರುದ್ಧವಾಗಿ ಅಚ್ಚರಿಯ ಕೆಲವು ಘಟನೆಗಳೂ ನಡೆಯುತ್ತವೆ. ವಿಶ್ವ ಚೆಸ್ ಚಾಂಪಿಯ್‌ಶಿಪ್‌ನಲ್ಲಿ ಸೋತ ಚೀನಾದ ಡಿಂಗ್ ಲಿರೆನ್ ನಗೆ ಬೀರಿದರು. ಗೆದ್ದ ಭಾರತದ ಡಿ. ಗುಕೇಶ್ ಕಣ್ಣೀರ್ಗರೆದರು.
ಸೋತಾಗ ನಗುವುದು ದೊಡ್ಡ ಸವಾಲು ಮತ್ತು ಅದು ತನ್ನನ್ನು ತಾನು ಗೆದ್ದುಕೊಂಡ ಯಶಸ್ಸಿನ ಸಂಕೇತ. ಕೆಲವೊಮ್ಮೆ ನಗುವುದೋ ಅಳುವುದೋ ನೀನೇ ಹೇಳು ಎಂದು ದ್ವಂದ್ವದಲ್ಲಿ ಸಿಲುಕುವುದೂ ಉಂಟು. ದುಃಖದ ಅಳುವಿನ ನಡುವೆ ತಿಳಿಯಾಗಿ ನಗುವೊಂದು ತುಟಿಯನಾವರಿಸೆ ಮಳೆಯ ನಡುವೆ ಬಿಸಿಲು ಚಿಮ್ಮಿದಾಗ ಮೂಡುವ ಕಾಮನಬಿಲ್ಲಿನ ಹಾಗೆ ಮನಮೋಹಕ.
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ? ನಗುವ ಕೇಳುತ ನಗುವುದತಿಶಯದ ಧರ್ಮ? ನಗುವ ನಗಿಸುವ ನಗಿಸಿ ನಗುತ ಬಾಳುವ ವರವ? ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ ನಗುವಿಗಿಂತ ಮಿಗಿಲಾದ ಮೇಕಪ್ ಈ ವಿಶ್ವದಲ್ಲಿಯೇ ಇಲ್ಲ. ಧರಿಸಿ ನಗುವೆಂಬ ದಿರಿಸ ನಗುತ ಬಾಳುವ ಪರಿ ಮಿಗಿಲು.
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…