Andolana originals

ಅನುದಾನ ಕೊರತೆ; ಸೊರಗಿದ ಜಾನಪದ ಅಧ್ಯಯನ ಕೇಂದ್ರ

ಪ್ರಸಾದ್ ಲಕ್ಕೂರು

ಕೇಂದ್ರದ ಕಟ್ಟಡಕ್ಕೆಬಾಡಿಗೆ ಪಾವತಿಸಿಲ್ಲ; ದೂರ ಉಳಿದ ಯೋಜನಾ ಸಹಾಯಕರು

ಚಾಮರಾಜನಗರ: ಆಸಕ್ತರಿಗೆ ಜನಪದ ಕಲೆಗಳನ್ನು ಕಲಿಸುವುದು ಮತ್ತು ಅವುಗಳನ್ನು ದಾಖಲೀಕರಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದೊಂದಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾರಂಭವಾದ ಹಾವೇರಿಯ ಜಾನಪದ ವಿವಿಯ ಪ್ರಾದೇಶಿಕ ಜನಪದ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಅನುದಾನದ ಕೊರತೆಯಿಂದ ಸೊರಗಿದೆ. ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗದೆ ಕುಂಟುತ್ತ, ತೆವಳುತ್ತ ಸಾಗಿದೆ.

ಹಾವೇರಿಯ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ಜನಪದ ಕಲೆಗಳ ಬಗ್ಗೆ ಸಮೀಕ್ಷೆ ನಡೆಸಿತ್ತು. ಇಲ್ಲಿ ಅಧ್ಯಯನ ಕೇಂದ್ರದ ಸ್ಥಾಪನೆಯ ಅಗತ್ಯವಿದೆ ಎಂದು ತೀರ್ಮಾನಿಸಿ ೨೦೧೩ರಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಮಲೆ ಮಹದೇಶ್ವರ ಬೆಟ್ಟದಲ್ಲಿ ನೀಡಿರುವ ಬಾಡಿಗೆ ಕಟ್ಟಡದಲ್ಲಿ ಅಧ್ಯಯನ ಕೇಂದ್ರವನ್ನು ತೆರೆಯಲಾಯಿತು.

ಅಂದಿನಿಂದ ಈವರೆಗೆ ಆಸಕ್ತ ಕೆಲವರಿಗೆ ಜಾನಪದ ಕಲೆಗಳ ತರಬೇತಿ ನೀಡಲಾಗುತ್ತಿದೆ. ಸದ್ಯ ಕೇಂದ್ರದಲ್ಲಿ ಕಂಸಾಳೆ ನೃತ್ಯ ಮತ್ತು ಎಂಬ್ರಾಯಿಡರಿ ತರಬೇತಿಯನ್ನು ಮಾತ್ರ ನೀಡಲಾಗುತ್ತಿದೆ. ಆದರೆ, ಕೇಂದ್ರದ ಯೋಜನಾ ಸಹಾಯಕರಾದ ಬಸವರಾಜು ೬-೭ ತಿಂಗಳ ಸಂಬಳ ನೀಡಲಿಲ್ಲ ಎಂದು ಕೇಂದ್ರದಿಂದ ದೂರ ಉಳಿದಿದ್ದಾರೆ. ಜಾನಪದ ವಿವಿಯು ೭-೮ ತಿಂಗಳುಗಳಿಂದ ಕೇಂದ್ರದ ಕಟ್ಟಡಕ್ಕೆ ಬಾಡಿಗೆ ಪಾವತಿಸಿಲ್ಲ. ಅನುದಾನದ ಕೊರತೆಯಿಂದ ಸಂಬಳ, ಬಾಡಿಗೆ ನೀಡಲಾಗಿಲ್ಲ ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಬಿಳಿಗಿರಿರಂಗಸ್ವಾಮಿ ಮೌಖಿಕ ಕಾವ್ಯಗಳು, ಕಂಸಾಳೆ ನೃತ್ಯ, ಡೊಳ್ಳು ಕುಣಿತ, ಗೊರವರ ಕುಣಿತ, ನಂದಿಧ್ವಜ ಕುಣಿತ, ಲಂಬಾಣಿ, ಗಿರಿಜನರ ಗೊರುಕನ ನೃತ್ಯ, ಸೋಬಾನೆ ಪದ, ತಮಟೆವಾದನ, ಲಂಬಾಣಿ ನೃತ್ಯಗಳಿದ್ದು ಡಿಪ್ಲೊಮಾ ಕೋರ್ಸ್ ಆಗಿ ಕಲಿಸಬಹುದು. ಇವುಗಳನ್ನು ಮೈಗೂಡಿಸಿಕೊಂಡಿರುವ ನೂರಾರು ಕಲಾವಿದರಿದ್ದಾರೆ. ಇವರಿಂದ ಜನ ಪದ ಕಲೆಗಳನ್ನು ಕಲಿಯುವ ಆಸಕ್ತ ಯುವಕ ರಿಗೆ ಕಲಿಸುವ ಕೆಲಸ ನಡೆಯುತ್ತಿಲ್ಲ.

ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ: ಜಾನಪದ ವಿಶ್ವವಿದ್ಯಾಲಯವು ಬೆಟ್ಟದಲ್ಲಿರುವ ತನ್ನ ಪ್ರಾದೇಶಿಕ ಕೇಂದ್ರಕ್ಕೆ ಸ್ವಂತ ನೆಲೆ ಕಲ್ಪಿಸಲು ೨೦೧೬ರಲ್ಲಿ ೮೦ ಲಕ್ಷ ರೂ.ವೆಚ್ಚದಲ್ಲಿ ಮಲೆ ಮಹದೇಶ್ವರಬೆಟ್ಟದಿಂದ ಪಾಲಾರ್‌ಗೆ ತೆರಳುವ ಮುಖ್ಯರಸ್ತೆ ಬದಿಯಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಿಸಿತು. ಕಟ್ಟಡ ನಿರ್ಮಾಣ ಜವಾಬ್ದಾರಿಯನ್ನು ವಿಶ್ವವಿದ್ಯಾಲಯ ವಹಿಸಿಕೊಂಡಿತ್ತು. ಅನುದಾನ ಲಭ್ಯವಾಗದೆ ಕಾಮಗಾರಿ ಚಾವಣಿ ಹಂತದಲ್ಲಿಯೇ ಸ್ಥಗಿತಗೊಂಡು ೫ ವರ್ಷಗಳೇ ಕಳೆದಿವೆ.

ಕೇಂದ್ರದ ಕಾಮಗಾರಿ ಪೂರ್ಣಗೊಳ್ಳದೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರಕುತ್ತಿಲ್ಲ. ಕಲೆಗಳನ್ನು ಕಲಿಯಲು ಬಂದು ಹೋಗಲು ಬಸ್ ಸಂಚಾರದ ಸಮಸ್ಯೆಯೂ ಇದೆ. ಬೆಟ್ಟದಲ್ಲಿರುವ ಕೇಂದ್ರ ದೂರದಲ್ಲಿದೆ ಎಂಬ ಕಾರಣಕ್ಕೆ ಆಸಕ್ತರು ಕಲಿಕೆಗೆ ಮುಂದಾಗುತ್ತಿಲ್ಲ. ಅಧ್ಯಯನ ಕೇಂದ್ರ ಕಟ್ಟಡದ ಸಮೀಪದಲ್ಲಿಯೇ ಜಾನಪದ ವಸ್ತುಸಂಗ್ರಹಾಲಯ ನಿರ್ಮಿಸಲಾಗಿದೆ. ಆದರೆ ಅದು ಸಹ ಪೂರ್ಣಗೊಂಡಿಲ್ಲ. ಈ ಕಟ್ಟಡ ನಿರ್ಮಾಣಕ್ಕೆ ರಾಜ್ಯಸಭಾ ಸದಸ್ಯೆಯಾಗಿದ್ದ ಬಿ.ಜಯಶ್ರೀ ೨೦೧೫-೧೬ರಲ್ಲಿ ೧೮ ಲಕ್ಷ ರೂ. ಅನುದಾನ ನೀಡಿದ್ದರು.

” ಇತ್ತೀಚೆಗೆ ಬೆಟ್ಟದಲ್ಲಿ ಜನಪದ ವಿವಿಯ ಸಿಂಡಿಕೇಟ್ ಸಭೆಯನ್ನು ನಡೆಸಲಾಯಿತು. ಕೇಂದ್ರಕ್ಕೆ ಏನೇನು ಸೌಲಭ್ಯ ಬೇಕು, ಹೊಸ ಕಟ್ಟಡದ ಕಾಮಗಾರಿ ಮುಗಿಸಲು ಯಾವ ಕ್ರಮ ವಹಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಈ ಕುರಿತಾಗಿ ವರದಿ ನೀಡುವಂತೆ ವಿವಿಗೆ ಸೂಚಿಸಲಾಗಿದೆ.”

-ಮೋಹನ್, ಸಿಂಡಿಕೇಟ್ ಸದಸ್ಯ, ಜಾನಪದ ವಿವಿ, ಹಾವೇರಿ

” ಜಿಲ್ಲೆಯಲ್ಲಿ ಅನೇಕ ಜಾನಪದ ಕಲಾವಿದರು, ವಿದ್ವಾಂಸರು ಮತ್ತು ಸಂಶೋಧಕರು ಇದ್ದಾರೆ. ಅಲ್ಲದೆ ಜಿಲ್ಲೆಯು ಜನಪದ ಕಲೆಗಳ ನೆಲೆಯಾಗಿದೆ. ಕಲೆಗಳನ್ನು ಕಲಿಸಿ ಉಳಿಸಿ ಬೆಳೆಸಲು ಕೇಂದ್ರಕ್ಕೆ ಮೂಲ ಸೌಕರ್ಯ ಕಲ್ಪಿಸಿ ಪುನಶ್ಚೇತನಗೊಳಿಸಬೇಕು.”

-ಗುರುರಾಜ್ ಎಸ್.ತಮ್ಮಡಹಳ್ಳಿ, ಜನಪದ ಕಲಾವಿದರು.

” ಬೆಟ್ಟದಲ್ಲಿ ಜನಪದ ವಿವಿಯು ಆರಂಭಿಸಿರುವ ಅಧ್ಯಯನ ಕೇಂದ್ರದ ಕಟ್ಟಡ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ. ಇದನ್ನು ಪೂರ್ಣಗೊಳಿಸಲು ೨ ಕೋಟಿ ರೂ. ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲಾಗುವುದು. ಪವಾಡ ಪುರುಷ ಮಲೆ ಮಹದೇಶ್ವರರು ನೆಲೆಗೊಂಡಿರುವ ಅಧ್ಯಯನ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸುವುದಿಲ್ಲ. ಎಲ್ಲ ಸೌಲಭ್ಯಗಳನ್ನು ನೀಡಿ ಸಶಕ್ತಗೊಳಿಸಲಾಗುವುದು.”

-ಸಿ.ಟಿ.ಗುರುಪ್ರಸಾದ್, ಕುಲಸಚಿವ, ಜಾನಪದ ವಿವಿ

” ಜಿಲ್ಲೆಯ ಜನಪದ ವಿದ್ವಾಂಸರು, ಕಲಾವಿದರು ಜೊತೆಯಾಗಿ ಅಧ್ಯಯನ ಕೇಂದ್ರದ ಪುನಶ್ಚೇತನಕ್ಕೆ ಮುಂದಾಗಿ ಸಂಬಂಧಿಸಿದವರಿಗೆ ಮನವಿ ಸಲ್ಲಿಸಬೇಕು. ಸಾಧ್ಯವಾದರೆ ಕೇಂದ್ರವನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರ ಮಾಡಬೇಕು.”

-ಸಿ.ಎಂ.ನರಸಿಂಹಮೂರ್ತಿ, ಜನಪದ ಗಾಯಕರು, ಚಾ.ನಗರ

ಆಂದೋಲನ ಡೆಸ್ಕ್

Recent Posts

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

12 mins ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

48 mins ago

ಕಿಚ್ಚ ಸುದೀಪ್‌ ಮಾರ್ಕ್‌ ಟ್ರೈಲರ್‌ ಅದ್ಧೂರಿ ಬಿಡುಗಡೆ

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್‌ ಸಿನಿಮಾ ಟ್ರೈಲರ್‌ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್‌ ಕಾರ್ತಿಕೇಯ-ಸುದೀಪ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…

1 hour ago

ಉಡುಪಿಯಲ್ಲಿ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್:‌ ಶ್ರೀಕೃಷ್ಣ ಮಠದ ಗೀತೋತ್ಸವದಲ್ಲಿ ಭಾಗಿ

ಉಡುಪಿ: ಆಂಧ್ರಪ್ರದೇಶದ ಡಿಸಿಎಂ ಪವನ್‌ ಕಲ್ಯಾಣ್‌ ಉಡುಪಿಗೆ ಆಗಮಿಸಿದ್ದು, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇಂದು…

1 hour ago

ಮಲೆನಾಡಿನಲ್ಲಿ ಮುಂದುವರಿದ ಕಾಫಿ ಕಳವು ಪ್ರಕರಣ

ಹಾಸನ: ಕಾಫಿ ಬೆಳೆಗೆ ಉತ್ತಮ ಬೆಲೆ ಬಂದಿರುವ ಪರಿಣಾಮ ಮಲೆನಾಡು ಭಾಗದಲ್ಲಿ ಕಾಫಿ ಕಳವು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.…

2 hours ago

ಮದುವೆ ರದ್ದು: ಮೌನಮುರಿದ ಸ್ಮೃತಿ ಮಂದಾನ

ಮುಂಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಉಪನಾಯಕಿ ಸ್ಮೃತಿ ಮಂದಾನ ಹಾಗೂ ಸಂಗೀತ ಸಂಯೋಜಕ ಪಲಾಶ್‌ ಮುಚ್ಚಲ್‌ ಮದುವೆ ಮುಂದೂಡಿಕೆಯಾಗಿತ್ತು.…

2 hours ago